ನಿಷೇಧಿತ ಸ್ಥಳದಲ್ಲಿ ನಮಾಜ್;  ಇಬ್ಬರು ವಿದ್ಯಾರ್ಥಿಗಳ ವಿರುದ್ಧದ ಪ್ರಕರಣ ರದ್ದು
x

ಸ್ಥಳೀಯ ಆಡಳಿತ ನಿಷೇಧಿಸಿದ್ದ ಪ್ರದೇಶದಲ್ಲಿ ನಮಾಜ್ ಮಾಡಿದ ಆರೋಪ ಹೊತ್ತಿದ್ದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. 

ನಿಷೇಧಿತ ಸ್ಥಳದಲ್ಲಿ ನಮಾಜ್; ಇಬ್ಬರು ವಿದ್ಯಾರ್ಥಿಗಳ ವಿರುದ್ಧದ ಪ್ರಕರಣ ರದ್ದು

ಸಾಮಾಜಿಕ ವೈವಿಧ್ಯದ ಸಮಾಜದಲ್ಲಿ ಕೋಮು ಸೌಹಾರ್ದ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಸ್ಥಳೀಯ ಆಡಳಿತದ ಆದೇಶಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.


Click the Play button to hear this message in audio format

ಸ್ಥಳೀಯ ಆಡಳಿತ ನಿಷೇಧಿಸಿದ್ದ ಪ್ರದೇಶದಲ್ಲಿ ನಮಾಜ್ (ಪ್ರಾರ್ಥನೆ) ಮಾಡಿದ ಆರೋಪ ಹೊತ್ತಿದ್ದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಅವರ ಏಕಸದಸ್ಯ ಪೀಠ ಫೆಬ್ರವರಿ 17ರಂದು ಈ ಆದೇಶ ಹೊರಡಿಸಿದೆ.

ಅರ್ಜಿದಾರರ ವಿರುದ್ಧ ಅಕ್ರಮ ಸಭೆ (ಐಪಿಸಿ ಸೆಕ್ಷನ್ 143) ಮತ್ತು ಸರ್ಕಾರಿ ಅಧಿಕಾರಿಗಳ ಆದೇಶ ಉಲ್ಲಂಘನೆ (ಐಪಿಸಿ ಸೆಕ್ಷನ್ 188) ಅಡಿ ಎಫ್‌ಐಆರ್ ದಾಖಲಾಗಿತ್ತು. ಸಂತ್ ಕಬೀರ್ ನಗರದ ನ್ಯಾಯಾಲಯ 2019ರ ಮೇ ತಿಂಗಳಿನಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರಿಗೂ ಸಮನ್ಸ್ ಜಾರಿ ಮಾಡಿತ್ತು.

ಅರ್ಜಿದಾರರ ಪರ ವಕೀಲರು ವಾದಿಸಿದ ಪ್ರಕಾರ, ಆ ಇಬ್ಬರು ತಮ್ಮ ಧಾರ್ಮಿಕ ಆಚರಣೆಗಾಗಿ ನಮಾಜ್ ಮಾಡಿದ್ದರಷ್ಟೇ. ಅವರಿಗೆ ಹಿಂದಿನ ಯಾವುದೇ ಕ್ರಿಮಿನಲ್ ಇತಿಹಾಸ ಇರಲಿಲ್ಲ. ಇದಲ್ಲದೆ, ಅವರಲ್ಲಿ ಒಬ್ಬ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದರಿಂದ, "ಅತ್ಯಲ್ಪ ಅಪರಾಧ"ದ ವಿಚಾರಣೆ ಮುಂದುವರಿದರೆ ಅದು ಅವರ ಭವಿಷ್ಯಕ್ಕೆ ಹಾನಿಕರವಾಗುತ್ತದೆ ಎಂದು ಮನವಿ ಮಾಡಲಾಗಿತ್ತು. ಈ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ, ಕ್ರಿಮಿನಲ್ ಇತಿಹಾಸ ಇಲ್ಲದ ವ್ಯಕ್ತಿಗಳ ವಿರುದ್ಧ ದಂಡನಾತ್ಮಕ ಪ್ರಕ್ರಿಯೆ ನಡೆಸುವುದು ಸಮರ್ಥನೀಯವಲ್ಲ ಎಂದು ಸ್ಪಷ್ಟಪಡಿಸಿತು.

ಜಾತ್ಯತೀತ ರಾಷ್ಟ್ರದಲ್ಲಿ ಧಾರ್ಮಿಕ ಸ್ವಾತಂತ್ರ್ಯ

ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಾಲಯ ಮಹತ್ವದ ಅಂಶವೊಂದನ್ನು ಸ್ಪಷ್ಟಪಡಿಸಿತು. ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲ ಧರ್ಮಗಳ ನಾಗರಿಕರಿಗೂ ತಮ್ಮ ನಂಬಿಕೆ ಮತ್ತು ಆಚರಣೆಗಳನ್ನು ಅನುಸರಿಸುವ ಹಕ್ಕು ಇದೆ. ಆದರೆ, ಸಾಮಾಜಿಕ ವೈವಿಧ್ಯದ ಸಮಾಜದಲ್ಲಿ ಕೋಮು ಸೌಹಾರ್ದ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಸ್ಥಳೀಯ ಆಡಳಿತದ ಆದೇಶಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಮುಂದೆ ಸ್ಥಳೀಯ ಆಡಳಿತದ ನಿರ್ದೇಶನಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದೂ ಎಚ್ಚರಿಸಿ, ಕೇವಲ ಈ ಇಬ್ಬರು ಅರ್ಜಿದಾರರ ವಿಷಯದಲ್ಲಿ ಮಾತ್ರ ಪ್ರಕರಣ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Read More
Next Story