
ಅಪ್ರಾಪ್ತ ಬಾಲಕಿಯೊಬ್ಬಳ ಎದೆಯ ಭಾಗವನ್ನು ಸ್ಪರ್ಶಿಸುವುದು ಮತ್ತು ಆಕೆಯ ಉಡುಪು ಕಳಚಲು ಯತ್ನಿಸುವುದು 'ಅತ್ಯಾಚಾರದ ಪ್ರಯತ್ನ'ವಾಗುವುದಿಲ್ಲ ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಾತ್ಮಕ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಬಾಲಕಿ ಎದೆಯ ಭಾಗ ಸ್ಪರ್ಶಿಸುವುದು ಅತ್ಯಾಚಾರ ಯತ್ನವಲ್ಲ: ವಿವಾದಾತ್ಮಕ ತೀರ್ಪು ರದ್ದುಗೊಳಿಸಿದ ಸುಪ್ರೀಂ
ಪವನ್ ಮತ್ತು ಆಕಾಶ್ ಎಂಬ ಇಬ್ಬರು ಆರೋಪಿಗಳು 11 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಪೈಜಾಮದ ದಾರವನ್ನು ಕತ್ತರಿಸಿ, ಎದೆಯಾಭಾಗವನ್ನು ಸ್ಪರ್ಶಿಸಿ ಮೋರಿಯ ಅಡಿಗೆ ಎಳೆದೊಯ್ಯಲು ಯತ್ನಿಸಿದ್ದರು.
ಅಪ್ರಾಪ್ತ ಬಾಲಕಿಯೊಬ್ಬಳ ಎದೆಯ ಭಾಗವನ್ನು ಸ್ಪರ್ಶಿಸುವುದು ಮತ್ತು ಆಕೆಯ ಉಡುಪು ಕಳಚಲು ಯತ್ನಿಸುವುದು 'ಅತ್ಯಾಚಾರದ ಪ್ರಯತ್ನ'ವಾಗುವುದಿಲ್ಲ ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಾತ್ಮಕ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ಲೈಂಗಿಕ ದೌರ್ಜನ್ಯದಂತಹ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುವಾಗ ನ್ಯಾಯಾಧೀಶರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರಚಿಸಲು ತಜ್ಞರ ಸಮಿತಿಯೊಂದನ್ನು ನೇಮಿಸುವಂತೆ ಮಹತ್ವದ ನಿರ್ದೇಶನ ನೀಡಿದೆ.
ಈ ಹಿಂದೆ 2025ರ ಮಾರ್ಚ್ 17ರಂದು ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್, "ಬಾಲಕಿಯ ಎದೆಯನ್ನು ಮುಟ್ಟಿದ್ದು ಮತ್ತು ಎಳೆದೊಯ್ಯಲು ಯತ್ನಿಸಿದ್ದು ಅತ್ಯಾಚಾರದ ಪ್ರಯತ್ನವಲ್ಲ, ಬದಲಿಗೆ ಲೈಂಗಿಕ ದೌರ್ಜನ್ಯದ ಸಿದ್ಧತೆ ಮಾತ್ರ" ಎಂದು ಅಭಿಪ್ರಾಯಪಟ್ಟಿತ್ತು. ಈ ತರ್ಕವನ್ನು ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ತ್ರಿಸದಸ್ಯ ಪೀಠವು ಸೋಮವಾರ (ಫೆ.10) ಸಂಪೂರ್ಣವಾಗಿ ತಳ್ಳಿಹಾಕಿದೆ.
ಪ್ರಕರಣದ ಹಿನ್ನೆಲೆ ಏನು?
ಪವನ್ ಮತ್ತು ಆಕಾಶ್ ಎಂಬ ಇಬ್ಬರು ಆರೋಪಿಗಳು 11 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಪೈಜಾಮದ ದಾರವನ್ನು ಕತ್ತರಿಸಿ, ಎದೆಯಾಭಾಗವನ್ನು ಸ್ಪರ್ಶಿಸಿ ಮೋರಿಯ ಅಡಿಗೆ ಎಳೆದೊಯ್ಯಲು ಯತ್ನಿಸಿದ್ದರು. ದಾರಿಹೋಕರು ಬಂದಿದ್ದರಿಂದ ಆರೋಪಿಗಳು ಪರಾರಿಯಾಗಿದ್ದರು. ವಿಚಾರಣಾ ನ್ಯಾಯಾಲಯವು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಸೆಕ್ಷನ್ 18 (ಪ್ರಯತ್ನ) ಅಡಿಯಲ್ಲಿ ದೋಷಾರೋಪ ಹೊರಿಸಿತ್ತು. ಆದರೆ, ಅಲಹಾಬಾದ್ ಹೈಕೋರ್ಟ್ ಮಧ್ಯಪ್ರವೇಶಿಸಿ, "ಆರೋಪಿಗಳಿಗೆ ಅತ್ಯಾಚಾರ ಮಾಡುವ ಉದ್ದೇಶವಿರಲಿಲ್ಲ" ಎಂದು ಹೇಳಿ ಆರೋಪದ ತೀವ್ರತೆಯನ್ನು ಕಡಿಮೆ ಮಾಡಿತ್ತು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದ ಸುಪ್ರೀಂ ಪೀಠ, "ಆರೋಪಿಗಳ ಕೃತ್ಯವು ಕೇವಲ ಅಪರಾಧದ ಸಿದ್ಧತೆಯಲ್ಲ, ಅದು ಸ್ಪಷ್ಟವಾಗಿಯೇ ಅತ್ಯಾಚಾರದ ಪ್ರಯತ್ನವಾಗಿದೆ. ಪೋಕ್ಸೊ ಕಾಯ್ದೆಯಡಿ ಇದು ಗಂಭೀರವಾದ ಲೈಂಗಿಕ ದೌರ್ಜನ್ಯವಾಗಿದೆ," ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯಗಳು ಸಂತ್ರಸ್ತರ ಅಸಹಾಯಕತೆಯನ್ನು ಕಡೆಗಣಿಸಿದರೆ ಅಥವಾ ಸಂವೇದನೆ ಇಲ್ಲದೆ ವರ್ತಿಸಿದರೆ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ನ್ಯಾಯಾಧೀಶರಿಗೆ ಮಾರ್ಗಸೂಚಿ ಅಗತ್ಯ
ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಾಂಗ ವ್ಯವಸ್ಥೆಯು ಹೆಚ್ಚು ಮಾನವೀಯತೆ ಮತ್ತು ಸಂವೇದನೆಯಿಂದ ವರ್ತಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ನಿಟ್ಟಿನಲ್ಲಿ ನ್ಯಾಯಾಧೀಶರಿಗೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲು ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಗೆ ನಿರ್ದೇಶನ ನೀಡಿದೆ.
ಸರಳ ಭಾಷೆಯಲ್ಲಿ, ಸಂಕೀರ್ಣ ಪದಗಳ ಬಳಕೆಯಿಲ್ಲದೆ, ನ್ಯಾಯಾಧೀಶರಲ್ಲಿ ಸಹಾನುಭೂತಿ ಮತ್ತು ಸಂವೇದನೆಯನ್ನು ಬೆಳೆಸುವ ನಿಟ್ಟಿನಲ್ಲಿ ಕರಡು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಸೂಚಿಸಿದೆ. ಈ ಸಮಿತಿಯು ಮೂರು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕಿದೆ.

