
ರಾಷ್ಟ್ರೀಯ ಸ್ವಯಂ ಸೇವಕ ಸಂಘ
ಆರ್‌ಎಸ್‌ಎಸ್ ನಿಷೇಧಕ್ಕೆ ಶಿಫಾರಸು ಮಾಡಿದ ಅಮೆರಿಕದ ವರದಿಗೆ ಭಾರತದ 275 ಮಾಜಿ ಅಧಿಕಾರಿಗಳ ತೀವ್ರ ಖಂಡನೆ
ಇದೊಂದು ಸಂಪೂರ್ಣವಾಗಿ 'ದುರುದ್ದೇಶಪೂರಿತ' ವರದಿಯಾಗಿದ್ದು, ಬೌದ್ಧಿಕ ದಿವಾಳಿತನ ಹಾಗೂ ಬುದ್ಧಿಭ್ರಮಣೆಯ ತೀರ್ಮಾನಗಳಿಂದ ಕೂಡಿದೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ನಿಷೇಧಿಸುವಂತೆ ಶಿಫಾರಸು ಮಾಡಿರುವ 'ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತ ಅಮೆರಿಕದ ಆಯೋಗ'ದ ವರದಿಯನ್ನು ಭಾರತದ 275 ಮಂದಿ ಮಾಜಿ ನ್ಯಾಯಾಧೀಶರು, ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು ಹಾಗೂ ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಇದೊಂದು ಸಂಪೂರ್ಣವಾಗಿ 'ದುರುದ್ದೇಶಪೂರಿತ' ವರದಿಯಾಗಿದ್ದು, ಬೌದ್ಧಿಕ ದಿವಾಳಿತನ ಹಾಗೂ ಬುದ್ಧಿಭ್ರಮಣೆಯ ತೀರ್ಮಾನಗಳಿಂದ ಕೂಡಿದೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಜೊತೆ ಗುರುತಿಸಿಕೊಂಡವರ ಆಸ್ತಿ ಮುಟ್ಟುಗೋಲು ಹಾಗೂ ಸಂಚಾರದ ಮೇಲೆ ನಿರ್ಬಂಧ ಹೇರುವಂತೆ ಆಯೋಗ ನೀಡಿರುವ ಶಿಫಾರಸುಗಳು ಭಾರತದೊಂದಿಗಿನ ಸೌಹಾರ್ದತೆಯನ್ನು ಕೆಡಿಸುವ ಹುನ್ನಾರವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ವರದಿಗಾರರ ಕಟ್ಟುನಿಟ್ಟಿನ ಹಿನ್ನೆಲೆ ಪರಿಶೀಲನೆಗೆ ಆಗ್ರಹ
ಶನಿವಾರ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆಯಲ್ಲಿ, ಈ ಪಕ್ಷಪಾತಿ ಹಾಗೂ ಆಧಾರರಹಿತ ವರದಿಯನ್ನು ಸಿದ್ಧಪಡಿಸಿದ ಎಲ್ಲರ ಕಟ್ಟುನಿಟ್ಟಿನ ಹಿನ್ನೆಲೆ ಪರಿಶೀಲನೆ ನಡೆಸುವಂತೆ ಅಮೆರಿಕ ಸರ್ಕಾರವನ್ನು ಒತ್ತಾಯಿಸಲಾಗಿದೆ. ಯುಎಸ್‌ಸಿಐಆರ್‌ಎಫ್‌ನ ಎಲ್ಲಾ ಆರು ಮಂದಿ ಆಯುಕ್ತರನ್ನು ಸ್ವತಃ ಅಮೆರಿಕ ಸರ್ಕಾರವೇ ನೇಮಿಸಿದ್ದು, ಅಮೆರಿಕದ ತೆರಿಗೆದಾರರ ಹಣದಲ್ಲಿಯೇ ಇದು ಕಾರ್ಯನಿರ್ವಹಿಸುತ್ತಿದೆ. ಭಾರತದ ವಿರುದ್ಧ ದ್ವೇಷ ಸಾಧಿಸುವ ಹಾಗೂ ಗುಪ್ತ ಅಜೆಂಡಾ ಹೊಂದಿರುವ ಕೆಲವು ಶಕ್ತಿಗಳನ್ನು ಪೋಷಿಸಲು ಅಮೆರಿಕದ ಜನಸಾಮಾನ್ಯರ ಹಣ ಬಳಕೆಯಾಗುತ್ತಿರುವುದು ಈ ತನಿಖೆಯಿಂದ ಬಯಲಾಗಲಿದೆ ಎಂದು ಭಾರತೀಯ ಮಾಜಿ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಸಮರ್ಪಕ ಸಾಕ್ಷ್ಯಾಧಾರಗಳಿಲ್ಲದೆ, ಕೇವಲ ಊಹೆಗಳ ಆಧಾರದ ಮೇಲೆ ಭಾರತದ ಸರ್ಕಾರಿ ಸಂಸ್ಥೆಗಳು ಮತ್ತು ಆರ್‌ಎಸ್‌ಎಸ್‌ನಂತಹ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳನ್ನು ನಕಾರಾತ್ಮಕವಾಗಿ ಬಿಂಬಿಸುವ ಪ್ರವೃತ್ತಿಯನ್ನು ಆಯೋಗ ರೂಢಿಸಿಕೊಂಡಿದೆ ಎಂದು ಅವರು ಚಾಟಿ ಬೀಸಿದ್ದಾರೆ.
ಆರ್‌ಎಸ್‌ಎಸ್ ಸೇವಾ ಕಾರ್ಯಗಳ ಶ್ಲಾಘನೆ
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿನ ಸುಭದ್ರ ನ್ಯಾಯಾಂಗ ವ್ಯವಸ್ಥೆ ಮತ್ತು ಸಂಸದೀಯ ಕಣ್ಗಾವಲಿನ ಅಡಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಯು ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸಿ ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ ಎಂದು ಗಣ್ಯರು ಸ್ಪಷ್ಟಪಡಿಸಿದ್ದಾರೆ. 1925ರಲ್ಲಿ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಹುಟ್ಟಿಕೊಂಡ ಆರ್‌ಎಸ್‌ಎಸ್, ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಸಮಾಜ ಸೇವೆ ಮತ್ತು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದೆ. ತಳಮಟ್ಟದಲ್ಲಿ ಇಷ್ಟೊಂದು ವ್ಯಾಪಕವಾಗಿ ಕೆಲಸ ಮಾಡುತ್ತಿರುವ ಸಂಘಟನೆಯನ್ನು ಟೀಕಿಸುವ ಮುನ್ನ, ಆಧಾರರಹಿತ ಸಾಮಾನ್ಯೀಕರಣ ಮಾಡುವ ಬದಲು ಪರಿಶೀಲಿಸಬಹುದಾದ ಸಾಕ್ಷ್ಯಗಳನ್ನು ನೀಡಬೇಕು ಎಂದು ಅವರು ಸವಾಲು ಹಾಕಿದ್ದಾರೆ.
ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತ
ಜನಗಣತಿಯ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಅಧಿಕಾರಿಗಳು, ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಸ್ಥಿರವಾಗಿದೆ ಹಾಗೂ ಬೆಳವಣಿಗೆ ಕಂಡಿದೆ ಎಂದಿದ್ದಾರೆ. ವಿಭಜನೆಗೂ ಮುನ್ನ 1947ರಲ್ಲಿ ಪಾಕಿಸ್ತಾನದಲ್ಲಿ ಶೇ. 20.5 ರಷ್ಟಿದ್ದ ಹಿಂದೂಗಳ ಜನಸಂಖ್ಯೆ ಪ್ರಸ್ತುತ ಶೇ. 1.5 ರಿಂದ 2 ಕ್ಕೆ ಕುಸಿದಿದೆ. ಅದೇ ರೀತಿ ಬಾಂಗ್ಲಾದೇಶದಲ್ಲಿ (ಹಿಂದಿನ ಪೂರ್ವ ಪಾಕಿಸ್ತಾನ) 1951ರಲ್ಲಿ ಶೇ. 20-22 ರಷ್ಟಿದ್ದ ಹಿಂದೂಗಳು ಈಗ ಕೇವಲ ಶೇ. 7-8 ರಷ್ಟಿದ್ದಾರೆ. ಆದರೆ ಭಾರತದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಇಂತಹ ಯಾವುದೇ ವ್ಯವಸ್ಥಿತ ಕುಸಿತ ಕಂಡುಬಂದಿಲ್ಲ. ಇದು ಭಾರತದ ಸಮಗ್ರತೆ ಮತ್ತು ಅಲ್ಪಸಂಖ್ಯಾತರ ಸುರಕ್ಷತೆಯನ್ನು ಸಾಬೀತುಪಡಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಜಂಟಿ ಹೇಳಿಕೆಗೆ ಸಹಿ ಹಾಕಿರುವ ಪ್ರಮುಖ ಗಣ್ಯರು
ಈ ಐತಿಹಾಸಿಕ ಜಂಟಿ ಹೇಳಿಕೆಗೆ 25 ಮಂದಿ ನಿವೃತ್ತ ನ್ಯಾಯಾಧೀಶರು, 10 ರಾಯಭಾರಿಗಳು ಸೇರಿದಂತೆ 119 ನಿವೃತ್ತ ಅಧಿಕಾರಿಗಳು ಹಾಗೂ 131 ಸಶಸ್ತ್ರ ಪಡೆಗಳ ಅಧಿಕಾರಿಗಳು ಸೇರಿ ಒಟ್ಟು 275 ಮಂದಿ ಸಹಿ ಹಾಕಿದ್ದಾರೆ. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರುಗಳಾದ ಜಸ್ಟಿಸ್ ಆದರ್ಶ್ ಕುಮಾರ್ ಗೋಯೆಲ್, ಜಸ್ಟಿಸ್ ಹೇಮಂತ್ ಗುಪ್ತಾ, ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಒ.ಪಿ. ರಾವತ್, ಸುನಿಲ್ ಅರೋರಾ, ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಹಾಗೂ ಎನ್‌ಐಎ ಮಾಜಿ ನಿರ್ದೇಶಕ ಯೋಗೇಶ್ ಚಂದರ್ ಮೋದಿ ಅವರಂತಹ ಘಟಾನುಘಟಿಗಳು ಇದರಲ್ಲಿದ್ದಾರೆ. ಮಾಜಿ ರಾಯಭಾರಿ ಭಾಸ್ವತಿ ಮುಖರ್ಜಿ ಮತ್ತು ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಮದನ್ ಗೋಪಾಲ್ ಅವರು ಈ ಜಂಟಿ ಹೇಳಿಕೆಯ ನೇತೃತ್ವ ವಹಿಸಿದ್ದರು.

