
ಯಲಹಂಕ ಕೋಗಿಲು ಸಂತ್ರಸ್ತರಿಗೆ ಮನೆ ವಿತರಣೆ ಒಂದು ದಿನ ಮುಂದೂಡಿಕೆ
ಬಿಬಿಎಂಪಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಈ ವಸತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಫಲಾನುಭವಿಗಳ ದಾಖಲೆಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ.
ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾದ ಅರ್ಹ ಕುಟುಂಬಗಳಿಗೆ ಪರ್ಯಾಯ ಶಾಶ್ವತ ವಸತಿ ಕಲ್ಪಿಸುವ ಕಾರ್ಯಕ್ರಮ ಒಂದು ದಿನ ಮುಂದೂಡಿಕೆಯಾಗಿದೆ. ಈ ಮೊದಲು ಜನವರಿ 1ಕ್ಕೆ ನಿಗದಿಯಾಗಿದ್ದ ಮನೆ ಹಂಚಿಕೆ ಪ್ರಕ್ರಿಯೆಯು ಈಗ ಜನವರಿ 2ರಂದು ನಡೆಯಲಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಬಿಬಿಎಂಪಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಈ ವಸತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಫಲಾನುಭವಿಗಳ ದಾಖಲೆಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಚಿವರು, "ಕೋಗಿಲು ಬಡಾವಣೆಯ ಸಂತ್ರಸ್ತರಲ್ಲಿ ಕೇವಲ ಅರ್ಹರಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪಬೇಕು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಯಾವುದೇ ತರಾತುರಿ ಮಾಡದೆ, ಸಮಗ್ರವಾಗಿ ದಾಖಲೆಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ," ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ತಂಡವು ಜಂಟಿಯಾಗಿ ಸ್ಥಳ ತಪಾಸಣೆ ಹಾಗೂ ದಾಖಲೆಗಳ ಕ್ರೋಢೀಕರಣದಲ್ಲಿ ನಿರತವಾಗಿದೆ. ಅನರ್ಹರಿಗೆ ಮನೆಗಳು ಹಂಚಿಕೆಯಾಗುವುದನ್ನು ತಡೆಗಟ್ಟಲು ಈ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಪರಿಶೀಲನಾ ಕಾರ್ಯ ಪೂರ್ಣಗೊಂಡ ತಕ್ಷಣ ಜ. 2ರಂದು ಅರ್ಹ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

