ಧರ್ಮಸ್ಥಳ ಪ್ರಕರಣ|ಎಸ್‌ಐಟಿಗೆ ಸ್ವಾತಂತ್ರ್ಯ ನೀಡಲು ಹೋರಾಟಗಾರ್ತಿಯರ ಆಗ್ರಹ; ಸಿಎಂ ಭೇಟಿ ಮಾಡಿ ಮನವಿ
x

 ಸಿಎಂ ಭೇಟಿಯಾದ ಕೊಂದವರು ಯಾರು ಸಂಘಟನೆ

ಧರ್ಮಸ್ಥಳ ಪ್ರಕರಣ|ಎಸ್‌ಐಟಿಗೆ ಸ್ವಾತಂತ್ರ್ಯ ನೀಡಲು ಹೋರಾಟಗಾರ್ತಿಯರ ಆಗ್ರಹ; ಸಿಎಂ ಭೇಟಿ ಮಾಡಿ ಮನವಿ

ದೀರ್ಘಕಾಲದಿಂದ ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಮಹಿಳಾ ಸಂಘಟನೆಗಳು ಮತ್ತು ಹೋರಾಟಗಾರರು ಸೇರಿ ರಚಿಸಿರುವ ʼಕೊಂದವರು ಯಾರುʼ ಸಂಘಟನೆ ಪ್ರತಿನಿಧಿಗಳು ಮಂಗಳವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಿದರು.


Click the Play button to hear this message in audio format

ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆ ಕೈಗೊಂಡಿರುವ ಎಸ್‌ಐಟಿ ತನಿಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ 'ಕೊಂದವರು ಯಾರು?' ಆಂದೋಲನದ ನಿಯೋಗ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

ರಾಜ್ಯಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ವಿ. ಎಸ್. ಉಗ್ರಪ್ಪ ಸಮಿತಿ ನೀಡಿದ್ದ ವರದಿಯನ್ನು ತ್ವರಿತವಾಗಿ ಅನುಷ್ಠಾನ ಮಾಡಬೇಕು. ಧರ್ಮಸ್ಥಳದಲ್ಲಿ ಸೌಜನ್ಯ, ಪದ್ಮಲತಾ, ಯಮುನಾ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಆಂದೋಲನದ ಹೋರಾಟಗಾರ್ತಿಯರು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಸಂಘಟನೆಯ ಬೇಡಿಕೆಗಳೇನು?

ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಸ್ವಾತಂತ್ರ್ಯವನ್ನು ರಕ್ಷಿಸಬೇಕು. ಯಾವುದೇ ಬಾಹ್ಯ ಒತ್ತಡವಿಲ್ಲದೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಸೌಜನ್ಯ, ಪದ್ಮಲತಾ ಮತ್ತು ಯಮುನಾ, ನಾರಾಯಣರಂತಹ ಮುಕ್ತಾಯಗೊಂಡಿರುವ ಪ್ರಕರಣಗಳನ್ನು ಎಸ್‌ಐಟಿಯು ಮರು ತನಿಖೆಗೆ ಒಳಪಡಿಸಬೇಕು.

ಸೌಜನ್ಯ ಪ್ರಕರಣದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಸಾಕ್ಷಿಗಳಾದ ರವಿ ಪೂಜಾರಿ, ಗೋಪಾಲಕೃಷ್ಣ ಗೌಡ, ದಿನೇಶ್‌ ಗೌಡ, ವಾರಿಜ ಆಚಾರ್ಯ ಮತ್ತು ಹರೀಶ್‌ ಮಡಿವಾಳ ಅವರ ಪ್ರಕರಣಗಳನ್ನೂ ತನಿಖೆ ಮಾಡಬೇಕು. ಹೈಕೋರ್ಟ್‌ ತೀರ್ಪಿನ ಅನ್ವಯ, ಸೌಜನ್ಯ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳು ಮತ್ತು ತನಿಖಾಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಐಪಿಎಸ್ ಸೆಕ್ಷನ್ 166ಎ ಸೇರಿದಂತೆ ಕಠಿಣ ಕಾನೂನು ಕ್ರಮ ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಾಕ್ಷಿಗಳು ಮತ್ತು ದೂರುದಾರರು ಮುಂದೆ ಬರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಮಹಿಳಾ ಆಯೋಗದ ಮೂಲಕ ಸಾರ್ವಜನಿಕ ನೊಟೀಸ್‌ ನೀಡಿ, ರಕ್ಷಣೆ, ಸುರಕ್ಷತೆ ಒದಗಿಸಬೇಕು. ಸಾಕ್ಷಿದಾರರ ಮಾಹಿತಿ ಗೌಪ್ಯವಾಗಿಡಬೇಕು. ಸಂತ್ರಸ್ತರ ಕುಟುಂಬಗಳಿಗೆ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು. ಮಹಿಳೆಯರ ಮೇಲಿನ ಹಿಂಸೆ ತಡೆಗಟ್ಟಲು ರಚನೆಯಾದ ಉಗ್ರಪ್ಪ ಸಮಿತಿ ಮತ್ತು ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಗಳನ್ನು ಪರಿಣತರ ತಂಡದಿಂದ ಮರುಪರಿಶೀಲಿಸಿ, ಶಿಫಾರಸುಗಳನ್ನು ನಿಗದಿತ ಅವಧಿಯಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಲ್ಲಾ ಧರ್ಮಗಳ, ಧಾರ್ಮಿಕ ಸಂಸ್ಥೆಗಳಲ್ಲಿ 'ಲೈಂಗಿಕ ಕಿರುಕುಳ ತಡೆ ಕಾಯ್ದೆ' ಅಡಿ ಲೈಂಗಿಕ ಕಿರುಕುಳ ಪ್ರಕರಣಗಳನ್ನು ನಿರ್ವಹಿಸಲು ಸ್ವತಂತ್ರ ಆಂತರಿಕ ಸಮಿತಿ ಸ್ಥಾಪನೆ ಕಡ್ಡಾಯಗೊಳಿಸಬೇಕು. ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು, ಮಹಿಳಾ ಸಹಾಯ ಡೆಸ್ಕ್‌ಗಳಂತಹ ಸೂಕ್ತ ಭದ್ರತಾ ಕ್ರಮ ಜಾರಿಗೊಳಿಸಬೇಕು. ಮಹಿಳೆಯರ ಮೇಲಿನ ಹಿಂಸೆಯ ವಿರುದ್ಧ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು.

ಧರ್ಮಸ್ಥಳದ ಕುರಿತು ಎಸ್‌ಐಟಿ ರಚಿಸಿರುವುದು ಸರ್ಕಾರದ ದಿಟ್ಟ ಕ್ರಮವಾಗಿದೆ. ಆದರೆ ತನಿಖೆಯು ತಾರ್ಕಿಕ ಅಂತ್ಯ ಮುಟ್ಟಿ ನೊಂದವರಿಗೆ ನ್ಯಾಯ ಒದಗಿಸಬೇಕು. ಅಲ್ಲದೆ, ರಾಜ್ಯಾದ್ಯಂತ ಹೆಣ್ಣುಮಕ್ಕಳ ಘನತೆ ಮತ್ತು ಸುರಕ್ಷತೆಗಾಗಿ ಸರ್ಕಾರ ತಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದೆ.

Read More
Next Story