
ಖಾಸಗೀಕರಣದ ವಿರುದ್ಧ ಸಮರ: ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ 'ಜನ ಸಮಾವೇಶ'ದ ನಿರ್ಣಯ
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಗೆ ವಿರೋಧ, ಎನ್.ಇ.ಪಿ ಮತ್ತು ಖಾಸಗೀಕರಣಕ್ಕೆ ಧಿಕ್ಕಾರ, 'ದ್ವಿಭಾಷಾ ಸೂತ್ರ'ಕ್ಕೆ ಮನ್ನಣೆ ನೀಡುವ ನಿರ್ಣಯವನ್ನು ಜನ ಸಮಾವೇಶ ಕೈಗೊಂಡಿದೆ.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಸಾರ್ವಜನಿಕ ಶಿಕ್ಷಣವನ್ನು ಉಳಿಸಿಕೊಳ್ಳಲು ಬೆಂಗಳೂರಿನಲ್ಲಿ ನಡೆದ 'ಜನ ಸಮಾವೇಶ'ದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಣವು ಲಾಭದ ಸರಕಲ್ಲ, ಅದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿರುವ ಸಮಾವೇಶವು, ಸರ್ಕಾರದ ಕೆಲವು ನೀತಿಗಳ ವಿರುದ್ಧ ಬೃಹತ್ ಜನ ಚಳುವಳಿ ನಡೆಸುವ ಎಚ್ಚರಿಕೆ ನೀಡಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಗೆ ವಿರೋಧ, ಎನ್.ಇ.ಪಿ ಮತ್ತು ಖಾಸಗೀಕರಣಕ್ಕೆ ಧಿಕ್ಕಾರ, 'ದ್ವಿಭಾಷಾ ಸೂತ್ರ'ಕ್ಕೆ ಮನ್ನಣೆ ನೀಡುವ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಗೆ ವಿರೋಧ ಮತ್ತು ಪರ್ಯಾಯ ಮಾರ್ಗ
ಸರ್ಕಾರ ಜಾರಿಗೆ ತಂದಿರುವ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಯೋಜನೆಯನ್ನು ನಿರ್ಣಯದಲ್ಲಿ 'ಜನವಿರೋಧಿ' ಎಂದು ಕರೆಯಲಾಗಿದೆ. ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಕೆಲವೇ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಹತ್ತಿರದ ಚಿಕ್ಕ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ತಂತ್ರ ಇದರಲ್ಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಅಸ್ತಿತ್ವದಲ್ಲಿರುವ ಪ್ರತಿಯೊಂದು ಸರ್ಕಾರಿ ಶಾಲೆಯನ್ನೂ ಮೂಲಸೌಕರ್ಯ ಮತ್ತು ಶಿಕ್ಷಕರ ನೇಮಕಾತಿಯ ಮೂಲಕ ಬಲಪಡಿಸಬೇಕು ಎಂಬುದು ಇವರ ಪ್ರಮುಖ ಆಗ್ರಹವಾಗಿದೆ.
ಎನ್.ಇ.ಪಿ ಮತ್ತು ಖಾಸಗೀಕರಣಕ್ಕೆ ಧಿಕ್ಕಾರ
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಎಡಿಬಿ (ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್) ನೆರವಿನ ಯೋಜನೆಗಳನ್ನು 'ಕಾರ್ಪೊರೇಟ್ ಮತ್ತು ವಿದೇಶಿ ಪ್ರೇರಿತ' ಎಂದು ತಿರಸ್ಕರಿಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ವಿದೇಶಿ ಸಾಲ ಅಥವಾ ಖಾಸಗಿ ಹೂಡಿಕೆ ಬಂದರೆ, ಶಿಕ್ಷಣವು ಕ್ರಮೇಣ ಸೇವೆ ಎನ್ನುವ ಸ್ವರೂಪ ಕಳೆದುಕೊಂಡು 'ಮಾರಾಟದ ಸರಕು' ಆಗುತ್ತದೆ ಎಂಬ ವಾದವನ್ನು ಸಮಾವೇಶದಲ್ಲಿ ಮಂಡಿಸಲಾಯಿತು. ಹೀಗಾಗಿ ಶಿಕ್ಷಣವನ್ನು ಮೂಲಭೂತ ಹಕ್ಕಾಗಿಯೇ ಉಳಿಸಿಕೊಳ್ಳಲು ಈ ಯೋಜನೆಗಳನ್ನು ಹಿಂಪಡೆಯಲು ಒತ್ತಾಯಿಸಲಾಯಿತು.
'ದ್ವಿಭಾಷಾ ಸೂತ್ರ'ಕ್ಕೆ ಮನ್ನಣೆ
ಬೋಧನಾ ಮಾಧ್ಯಮವು ಕಡ್ಡಾಯವಾಗಿ ಮಾತೃಭಾಷೆ (ಕನ್ನಡ) ಆಗಿರಬೇಕು. ಆದರೆ, ಇಂಗ್ಲಿಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಸಮರ್ಪಕವಾಗಿ ಕಲಿಸಬೇಕು. ಇದು ಅತ್ಯಂತ ಪ್ರಾಯೋಗಿಕ ಬೇಡಿಕೆಯಾಗಿದೆ. ಪೋಷಕರು ಇಂಗ್ಲಿಷ್‌ಗಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದನ್ನು ತಡೆಯಲು, ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಇಂಗ್ಲಿಷ್ ಕಲಿಕೆ ಸಾಧ್ಯವಾಗಬೇಕು, ಆದರೆ ಕಲಿಕೆಯ ಮಾಧ್ಯಮ ಮಾತೃಭಾಷೆಯಲ್ಲೇ ಇರಬೇಕು ಎಂಬ ವೈಜ್ಞಾನಿಕ ನಿಲುವನ್ನು ಹೊಂದಲಾಗಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆವುಳ್ಳ ದ್ವಿಭಾಷಾ ಸೂತ್ರಕ್ಕೆ ಸಮಾವೇಶವು ಮನ್ನಣೆ ನೀಡಿದೆ.
ಸಾಮಾಜಿಕ ನ್ಯಾಯದ ಪ್ರಶ್ನೆ
ಸರ್ಕಾರಿ ಶಾಲೆಗಳು ಕೇವಲ ಕಟ್ಟಡಗಳಲ್ಲ, ಅವು ಬಡವರು, ದಲಿತರು ಮತ್ತು ಹೆಣ್ಣುಮಕ್ಕಳ ಪಾಲಿನ 'ಜೀವನಾಡಿ' ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕೆಂದರೆ ಅದು ಸರ್ಕಾರಿ ಶಾಲೆಗಳಿಂದ ಮಾತ್ರ ಸಾಧ್ಯ. ಈ ಶಾಲೆಗಳು ಮುಚ್ಚಿದರೆ ಸಮಾಜದ ಕೆಳಸ್ತರದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂಬ ಸಾಮಾಜಿಕ ಕಳಕಳಿ ಈ ಆಗ್ರಹದಲ್ಲಿದೆ.
ಬೃಹತ್ ಹೋರಾಟದ ಎಚ್ಚರಿಕೆ
ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ಪಣತೊಟ್ಟಿರುವ ಸಮಾವೇಶವು, "ಶಿಕ್ಷಣದ ಮಾರಾಟಗಾರರ" ವಿರುದ್ಧ ಒಗ್ಗೂಡುವಂತೆ ಪ್ರತಿಯೊಬ್ಬ ನಾಗರಿಕ, ಪೋಷಕ ಮತ್ತು ಶಿಕ್ಷಕರಿಗೆ ಕರೆ ನೀಡಿದೆ. 'ಖಾಸಗೀಕರಣದ ಸುನಾಮಿ'ಯನ್ನು ತಡೆಯಲು ರಾಜ್ಯಾದ್ಯಂತ ನಿರಂತರ ಹೋರಾಟ ರೂಪಿಸುವುದಾಗಿ ಘೋಷಿಸಿದೆ.
ಕೆಪಿಎಸ್ ಹೆಸರಿನಲ್ಲಿ 4000 ಶಾಲೆಗಳಿಗೆ ಬೀಗ ಹಾಕುವ ಹುನ್ನಾರ
ಸಮಾವೇಶದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರಾಜ್ಯ ಸರ್ಕಾರವು ಕೆಪಿಎಸ್ ಮತ್ತು ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸುಮಾರು 4000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ಕಾರದ ಈ ಹೊಣಗೇಡಿತನದಿಂದಾಗಿ ಕಡ್ಡಾಯ ಮತ್ತು ಉಚಿತ ಶಿಕ್ಷಣದ ಹಕ್ಕು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ ಪ್ರೊ. ಸಿದ್ದರಾಮಯ್ಯ, "ಒಂದು ಕಡೆ ಸುಸಜ್ಜಿತ ಶಾಲೆ ಎಂದು ತೋರಿಸಿ, ಸುತ್ತಮುತ್ತಲಿನ ಹತ್ತಾರು ಚಿಕ್ಕ ಶಾಲೆಗಳನ್ನು ಮುಚ್ಚುವ ತಂತ್ರ ಇದರಲ್ಲಿದೆ. ಕೆಪಿಎಸ್ ಶಾಲೆಗಳ ಸ್ಥಾಪನೆಯು ಸಮಾನ, ಕಡ್ಡಾಯ ಮತ್ತು ಉಚಿತ ಶಿಕ್ಷಣ ವ್ಯವಸ್ಥೆಯ ಮೂಲ ಆಶಯಕ್ಕೇ ವಿರುದ್ಧವಾಗಿದೆ. ಈ ಯೋಜನೆಯಿಂದ ಶೈಕ್ಷಣಿಕ ವಲಯದಲ್ಲಿ ಯಾವೆಲ್ಲಾ ಗಂಭೀರ ಸಮಸ್ಯೆಗಳು ಎದುರಾಗಲಿವೆ ಎಂಬುದರ ಕುರಿತು ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಮತ್ತು ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ವಿರುದ್ಧ ಕೇವಲ ಶಿಕ್ಷಕರಷ್ಟೇ ಅಲ್ಲದೆ, ಪೋಷಕರು, ಸಾಹಿತಿಗಳು ಮತ್ತು ಪ್ರಜ್ಞಾವಂತ ನಾಗರಿಕರು ಒಗ್ಗಟ್ಟಿನಿಂದ ಹೋರಾಟ ರೂಪಿಸಬೇಕಾದ ಅನಿವಾರ್ಯತೆ ಇದೆ. ಶಿಕ್ಷಣವನ್ನು ಲಾಭದಾಯಕ ಉದ್ದಿಮೆಯನ್ನಾಗಿ ನೋಡದೆ, ಅದನ್ನು ಸೇವೆಯಾಗಿ ಪರಿಗಣಿಸಬೇಕು ಎಂದು ಕರೆ ನೀಡಿದರು.
ಸಿಎಂ ಸ್ಪಷ್ಟನೆ ನೀಡಲು ಆಗ್ರಹ
ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಮಾತನಾಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈಗಾಗಲೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಇತ್ತ ಚನ್ನಪಟ್ಟಣದಲ್ಲಿ 'ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ' ಜಾರಿಗೆಗಾಗಿ ಏಳು ಹಿರಿಯ-ಕಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಶಾಲೆಗಳ ಮ್ಯಾಪಿಂಗ್ ನಡೆಸಿದ್ದಾರೆ.ಈ ವಿಚಾರದಲ್ಲಿ ಶಿಕ್ಷಣ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದು, ಸರ್ಕಾರ ಶಾಲೆಗಳ ಉಳಿವಿನ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವುದಿಲ್ಲ ಎಂದು ಹೇಳಿದೆ. ಆದರೆ ಈಗ ಅಮೆರಿಕಾದಲ್ಲಿರುವ ಮ್ಯಾಗ್ನೆಟ್ ಶಾಲೆಗಳನ್ನು ತೆರೆಯಲು ಹೊರಟಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿದ್ದು, ಕೇಂದ್ರ ಸರ್ಕಾರದ ನೀತಿ ಅನುಸರಿಸಲು ಹೊರಟಿದೆ. ಕಳೆದ ಹತ್ತೈದು ವರ್ಷದಲ್ಲಿ 3 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ದೂರಿದ ಅವರು, ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ'ಯು ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆಯಾಗಿದೆ. ಇದರಿಂದಾಗಿ ಹಳ್ಳಿಗಳಲ್ಲಿರುವ ಹೆಣ್ಣು ಮಕ್ಕಳು, ಬಡವರ ಮಕ್ಕಳು ಶಾಲೆಯಿಂದ ದೂರು ಉಳಿಯುವ ಆತಂಕ ಎದುರಾಗಿದೆ. ಸರ್ಕಾರದ ಈ ನಿರ್ಧಾರ ಸರ್ಕಾರಿ ಶಾಲೆಗಳನ್ನು ಆಂತಕಕ್ಕೀಡು ಮಾಡಿದೆ. ಮ್ಯಾಗ್ನೆಟ್ ಶಾಲಾ ಯೋಜನೆಯ ವಿರುದ್ಧ ಒಗ್ಗಟ್ಟಿನಿಂದ ಹೊರಟ ನಡೆಸಬೇಕಾಗಿದೆ. ಕೆಪಿಎಸ್ಸಿ ಶಾಲೆ ತೆರೆಯುುವ ಸರ್ಕಾರದ ನೀತಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ವಿರೋಧಿಯಾಗಿದೆ ಎಂದು ಕಿಡಿಕಾರಿದರು.

