
ವಿಷ್ಣುವರ್ಧನ್, ಬಿ. ಸರೋಜಾದೇವಿಗೆ 'ಕರ್ನಾಟಕ ರತ್ನ'; ಕುವೆಂಪುಗೆ 'ಭಾರತರತ್ನ'ಕ್ಕೆ ಶಿಫಾರಸು
'ಸಾಹಸ ಸಿಂಹ' ಎಂದೇ ಖ್ಯಾತರಾದ ಡಾ. ವಿಷ್ಣುವರ್ಧನ್ ಅವರಿಗೆ 'ಕರ್ನಾಟಕ ರತ್ನ' ನೀಡಬೇಕೆಂಬುದು ಅಭಿಮಾನಿಗಳು ಮತ್ತು ಚಿತ್ರರಂಗದ ಹಲವು ದಶಕಗಳ ಬೇಡಿಕೆಯಾಗಿತ್ತು.
ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ. ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಕರ್ನಾಟಕ ರತ್ನ' ನೀಡಲು ರಾಜ್ಯ ಸಚಿವ ಸಂಪುಟ ಗುರುವಾರ ರ್ಮಾನಿಸಿದೆ. ಅದೇ ರೀತಿ ರಾಷ್ಟ್ರಕವಿ ಕುವೆಂಪು ಅವರಿಗೆ ದೇಶದ ಪರಮೋನ್ನತ ಗೌರವವಾದ 'ಭಾರತರತ್ನ' ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಕೂಡ ನಿರ್ಣಯ ಕೈಗೊಂಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಈ ಮಹತ್ವದ ತೀರ್ಮಾನಗಳನ್ನು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಪ್ರಕಟಿಸಿದರು.
ದಶಕಗಳ ಸೇವೆಗೆ ಸಂದ ಗೌರವ
'ಸಾಹಸ ಸಿಂಹ' ಎಂದೇ ಖ್ಯಾತರಾದ ಡಾ. ವಿಷ್ಣುವರ್ಧನ್ ಅವರಿಗೆ 'ಕರ್ನಾಟಕ ರತ್ನ' ನೀಡಬೇಕೆಂಬುದು ಅಭಿಮಾನಿಗಳು ಮತ್ತು ಚಿತ್ರರಂಗದ ಹಲವು ದಶಕಗಳ ಬೇಡಿಕೆಯಾಗಿತ್ತು. ಈ ಕುರಿತು ಇತ್ತೀಚೆಗೆ ನಟಿಯರಾದ ಮಾಳವಿಕಾ, ಜಯಮಾಲಾ ಮತ್ತು ಶ್ರುತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸರ್ಕಾರವು ಈ ಬೇಡಿಕೆಯನ್ನು ಪುರಸ್ಕರಿಸಿ, ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಿದೆ.
'ಬಿ. ಸರೋಜಾದೇವಿ ಅವರು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿ, ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಇತ್ತೀಚಿಗೆ ನಿಧನ ಹೊಂದಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಗೌರವವನ್ನು ನೀಡಲು ತೀರ್ಮಾನಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ಮತ್ತು ಸ್ಥಳವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಹಿತಿ ನೀಡಿದೆ.
ರಾಷ್ಟ್ರಕವಿಗೆ 'ಭಾರತರತ್ನ' ಶಿಫಾರಸು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಡಗೀತೆ ರಚನಾಕಾರರಾದ ರಾಷ್ಟ್ರಕವಿ ಕುವೆಂಪು ಅವರಿಗೆ ದೇಶದ ಅತ್ಯುನ್ನತ ಗೌರವವಾದ 'ಭಾರತರತ್ನ' ನೀಡಬೇಕೆಂಬುದು ಕನ್ನಡಿಗರ ಬಹುಕಾಲದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸಂಪುಟವು ಕುವೆಂಪು ಅವರಿಗೆ ಮರಣೋತ್ತರವಾಗಿ 'ಭಾರತರತ್ನ' ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಶಿಫಾರಸು ಮಾಡಲು ಸರ್ವಾನುಮತದಿಂದ ನಿರ್ಧರಿಸಿದೆ.