Bride in the Hills | ಕುವೆಂಪು ಅವರ ʻಮಲೆಗಳಲ್ಲಿ ಮದುಮಗಳುʼ ಮತ್ತೆ ಇಂಗ್ಲಿಷ್‌ಗೆ
x

Bride in the Hills | ಕುವೆಂಪು ಅವರ ʻಮಲೆಗಳಲ್ಲಿ ಮದುಮಗಳುʼ ಮತ್ತೆ ಇಂಗ್ಲಿಷ್‌ಗೆ

ಕುವೆಂಪು ಅವರ ʻಮಲೆಗಳಲ್ಲಿ ಮದುಮಗಳುʼ ಕೃತಿಯ ಇಂಗ್ಲೀಷ್‌ ಅನುವಾದ Bride in the Hills ಇಂದು ಓದುಗರ ಕೈಸೇರಲಿದೆ. ದೇಶದ ಖ್ಯಾತ ಪ್ರಕಾಶನ ಸಂಸ್ಥೆಯಾದ ʻಪೆಂಗ್ವಿನ್‌ ರಾಂಡಮ್‌ ಹೌಸ್‌ʼ ಇಂಡಿಯಾ (Penguin Books An imprint of Penguin Random House) ತನ್ನ Modern Classics ಶ್ರೇಣಿಯಲ್ಲಿ ಈ ಕೃತಿಯನ್ನು ಪ್ರಕಟಿಸುತ್ತಿದೆ. ಈ ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಿರುವವರು, ಕನ್ನಡದವರೇ ಆದ ಸಾಹಿತಿ, ಪ್ರಾಧ್ಯಾಪಕಿ, ಪ್ರಶಸ್ತಿ ಪುರಸ್ಕೃತ ಅನುವಾದಕಿ ವನಮಾಲ ವಿಶ್ವನಾಥ.


“ಇಲ್ಲಿ ಯಾರೂ ಮುಖ್ಯರಲ್ಲ... ಯಾರೂ ಅಮುಖ್ಯರಲ್ಲ.. ಯಾವುದೂ ಯಃಕಶ್ಚಿತವಲ್ಲ!"

ಕನ್ನಡದ ಶ್ರೇಷ್ಠ ಕವಿ, ಜ್ಞಾನಪೀಠ ಪುರಸ್ಕೃತ ಸಾಹಿತಿ, ರಾಷ್ಟ್ರಕವಿ ಎಂದೇ ಜನರಿಂದ ಗೌರವಗಳಿಸಿರುವ ಕುವೆಂಪು ಅವರ ಕಾಲಮಾನದ ಕೃತಿ ʻಮಲೆಗಳಲ್ಲಿ ಮದುಮಗಳುʼ ಕಾದಂಬರಿಯ ಆರಂಭದ ಸಾಲುಗಳಿವು. ಮಲೆನಾಡಿನ ಒಂದು ಕಾಲಘಟ್ಟದ, ಮುಖ್ಯವಾಗಿ ಇಪ್ಪತ್ತನೇ ಶತಮಾನದ ಆರಂಭದ ದಿನಗಳ ಬದುಕನ್ನು ಕಟ್ಟಿಕೊಡುವ ಕೃತಿ ಇದು. ಇದು ಸಾಹಿತ್ಯ ಕೃತಿಗಳ ಒಂದು ರೀತಿಯ ಪ್ರಧಾನ ಧಾತುವಾದ ಕಥಾ ನಾಯಕ ಅಥವಾ ಕಥಾ ನಾಯಕಿಯ ಕಥಾನಕ ಹೊಂದಿರುವ ಕೃತಿಯಲ್ಲ. ಹಾಗಾಗೇ ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ, ಯಾವುದು ಯಕ:ಶ್ಚಿತವಲ್ಲ, ಎಂಬ ಸಾಲುಗಳೊಂದಿಗೆ ಕುವೆಂಪು ತಮ್ಮ ಕಥನವನ್ನು ಬಿಚ್ಚಿಡುತ್ತಾರೆ.

ಐದು ದಶಕದ ನಂತರ ಇಂಗ್ಲೀಷ್ ಗೆ

ಕುವೆಂಪು ಈ ಕಾದಂಬರಿಯನ್ನು ಬರೆದ ಐದು ದಶಕಗಳ ನಂತರ ಮತ್ತೆ ʻಮಲೆಗಳಲ್ಲಿ ಮದುಮಗಳುʼ ತಿರುತಿರುಗಿ ಕನ್ನಡ ಸಾಂಸ್ಕೃತಿಕ ಲೋಕವನ್ನು ಬೆರಗುಗೊಳಿಸುತ್ತಿದೆ. ಕುವೆಂಪು ಅವರ ಈ ಕೃತಿ ಕನ್ನಡ ಭಾಷೆಯ ವಿಸ್ಮಯಗಳಲ್ಲಿ ಒಂದು ಎಂದೇ ವಿಮರ್ಶಕರ ಒಕ್ಕೊರಲಿನ ತೀರ್ಮಾನ. ಹತ್ತೊಂಬತ್ತನೇ ಶತಮಾನದ ಕೊನೆಯ ಪಾದದ ಮಲೆನಾಡಿನ ಕಥೆ ಇದು. ನಿಸರ್ಗದ ನಿಗೂಢ ತಾಣದಲ್ಲಿ ಹುಲಿಕಲ್ಲು ಗುಡ್ಡದ ಸುತ್ತಮುತ್ತಲಿನ ಹಳ್ಳಿಗಳ ಜೀವ ಜಾಲದ ಬದುಕಿನ ವಿವರಗಳೇ ಮೂರ್ತಗೊಂಡಿರುವ ಅನನ್ಯ ಕಥನ ದು. ಆಧುನಿಕತೆಯ ಪ್ರವೇಶವು ಭಾರತೀಯ ಗ್ರಾಮ ಸಮಾಜದ ಬದುಕಿನಲ್ಲಿ ತಂದ ಸಾಮಾಜಿಕ ತಲ್ಲಣಗಳ ನಿರೂಪಣೆಯೇ ಈ ಬರಹದ ಜೀವಾಳ. ಇದು ಆರು ತಿಂಗಳು ನಡೆಯುವ ನಿರೂಪಣೆಯಾದರೂ, ಹಲವು ಪ್ರಯಾಣಗಳನ್ನು ಮೈದುಂಬಿಕೊಂಡಿರುವ ಕಾದಂಬರಿ.

ಮೊದಲು ಮಲೆಮಗಳ ರಂಗರೂಪ

ಈ ಕಾದಂಬರಿಯನ್ನ ರಂಗಭೂಮಿಗೆ ಮೊದಲು ಅಳವಡಿಸಿದ್ದು ಮೈಸೂರಿನ ರಂಗಾಯಣ. 2010ರಲ್ಲಿ. ಸುಮಾರು 700 ಪುಟದ ಈ ಕಾದಂಬರಿಯನ್ನು ರಂಗರೂಪಕ್ಕೆ ತಂದವರು ಕೆ. ವೈ, ನಾರಾಯಣಸ್ವಾಮಿ. ಒಂಭತ್ತು ವಿರಾಮಗಳ ಸುಮಾರು ಒಂಭತ್ತು ಗಂಟೆಯ ಈ ರಂಗಕೃತಿಯನ್ನು ನಿರ್ದೇಶಿಸಿದವರು ಸಿ. ಬಸವಲಿಂಗಯ್ಯ. ಅಂದಿನಿಂದ ಇಂದಿನವರೆಗೆ ಈ ರಂಗಕೃತಿ ನೂರಾರು ಪ್ರದರ್ಶನಗಳನ್ನು ಕಂಡಿದೆ. ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಕೂಡ ಈ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನಗೊಂಡು, ಪ್ರೇಕ್ಷಕರನ್ನು ತನ್ನೊಂದಿಗೆ ಮಲೆನಾಡಿಗೆ ಕರೆದೊಯ್ದಿದೆ.

ಹಾಗಾದರೆ, ಮತ್ತೇಕೆ ʻಮಲೆಗಳಲ್ಲಿ ಮದುಮಗಳುʼ ಪ್ರಸ್ತಾಪ? ಈ ಪ್ರಶ್ನೆಗೆ ಉತ್ತರ; ಶನಿವಾರ ʻಮಲೆಗಳಲ್ಲಿ ಮದುಮಗಳುʼ ಕೃತಿಯ ಇಂಗ್ಲಿಷ್‌ ಅನುವಾದ ಬಿಡುಗಡೆಯಾಗುತ್ತಿದೆ. ದೇಶದ ಖ್ಯಾತ ಪ್ರಕಾಶನ ಸಂಸ್ಥೆಯಾದ ʻಪೆಂಗ್ವಿನ್‌ ರಾಂಡಮ್‌ ಹೌಸ್‌ʼ ಇಂಡಿಯಾ (Penguin Books An imprint of Penguin Random House) ತನ್ನ Modern Classics ಶ್ರೇಣಿಯಲ್ಲಿ ಈ ಕೃತಿಯನ್ನು ಪ್ರಕಟಿಸುತ್ತಿದೆ. ಈ ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಿರುವವರು, ಕನ್ನಡದವರೇ ಆದ ಸಾಹಿತಿ, ಪ್ರಾಧ್ಯಾಪಕಿ, ಪ್ರಶಸ್ತಿ ಪುರಸ್ಕೃತ ಅನುವಾದಕಿ ವನಮಾಲ ವಿಶ್ವನಾಥ. ಇವರು ಆಧುನಿಕ ಕನ್ನಡದ ಲೇಖಕರಾದ ತೇಜಸ್ವಿ, ವೈದೇಹಿ, ಸಾರಾ ಅಬೂಬಕರ್‌, ಯು ಆರ್‌ ಅನಂತಮೂರ್ತಿ, ಲಂಕೇಶ್‌ ಅವರ ಕೃತಿಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಅಷ್ಟೇ ಅಲ್ಲದೆ ಕ್ಲಾಸಿಕ್‌ ಸಾಹಿತ್ಯ ಶ್ರೇಣಿಗೆ ಸೇರಿದ ವಚನ, ರಾಘವಾಂಕನ ಹರಿಶ್ಚಂದ್ರ ಕಾವ್ಯ (Murthy Classical Library The Life of Harishchandra Harvard University Press) ಮತ್ತು ಶಿವಕೋಟ್ಯಾಚಾರ್ಯ ಅವರ ʻವಡ್ಡಾರಾಧನೆʼ ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಿ, ಕನ್ನಡ ಕೃತಿಗಳ ಸಮುದ್ರ ಲಂಘನಕ್ಕೆ ಕಾರಣರಾಗಿದ್ದಾರೆ.

ಕುವೆಂಪು ಅವರ ʻಮಲೆಗಳಲ್ಲಿ ಮದುಮಗಳುʼ ಈಗ ಇಂಗ್ಲಿಷ್‌ ಭಾಷೆಯಲ್ಲಿ Bride in the Hills ಆಗಿ ಪ್ರಕಟಗೊಳ್ಳುತ್ತಿದೆ. ಕನ್ನಡದ ಖ್ಯಾತ ವಿಮರ್ಶಕ ಮತ್ತು ಭಾಷಾತಜ್ಞರಾದ ಡಾ. ಕೆ.ವಿ. ನಾರಾಯಣ ಅವರು ಈ ಕೃತಿಯನ್ನು ಶನಿವಾರ ಬೆಂಗಳೂರಿನ ನ್ಯಾಷನಲ್‌ ಕಾಲೇಜಿನ ಡಾ. ಎಚ್‌ ಎನ್‌ ಮಲ್ಟಿಮೀಡಿಯಾ ಹಾಲ್‌ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಎರಡು ವರ್ಷದ ಹಿಂದೆ ಮೊದಲ ಇಂಗ್ಲಿಷ್‌ ಅನುವಾದ

ಇಲ್ಲೊಂದು ವಿಷಯ ಸ್ಪಷ್ಟಪಡಿಸಬೇಕು; ಒಂದೆರಡು ವರ್ಷಗಳ ಹಿಂದೆ ಕುವೆಂಪು ಪ್ರತಿಷ್ಠಾನ ಈ ಕೃತಿಯ ಇಂಗ್ಲಿಷ್‌ ಅನುವಾದವನ್ನು ಪ್ರಕಟಿಸಿದೆ.The Bride in the Rainy Mountains ಕೃತಿಯನ್ನು ಅನುವಾದ ಮಾಡಿದವರು ಕೆ. ಎಂ. ಶ್ರೀನಿವಾಸ ಗೌಡ ಮತ್ತು ಜಿ.ಕೆ. ಶ್ರೀಕಂಠಮೂರ್ತಿ. ಈಗ ಮತ್ತೊಂದು ಅನುವಾದ ಇಂಗ್ಲಿಷ್ ನ ಸಾಹಿತ್ಯಾಸಕ್ತರಿಗೆ ಲಭ್ಯವಾಗುತ್ತಿದೆ.

ಈ ಅನುವಾದಿತ ಕೃತಿಯ ಬಗ್ಗೆ ಮಾತನಾಡುವ ಮುನ್ನ, ಮೂಲ ಕೃತಿಯ ಬಗ್ಗೆ ಒಂದಷ್ಟು ಸಂಗತಿ. ಕುವೆಂಪು ರಚಿಸಿದ್ದು ಎರಡೇ ಕಾದಂಬರಿ, ಮೊದಲನೇಯದು ʻಕಾನೂರು ಹೆಗ್ಗಡತಿʼ (ಇದನ್ನು ಆಧರಿಸಿ ಗಿರೀಶ್‌ ಕಾರ್ನಾಡ್‌ ಅವರು ಚಲನಚಿತ್ರ ನಿರ್ಮಿಸಿದ್ದಾರೆ ಹಾಗೆಯೇ ದೂರದರ್ಶನದಲ್ಲಿ ಹಿಂದಿ ಧಾರಾವಾಹಿಯಾಗಿ ಕೂಡ ಪ್ರದರ್ಶನಗೊಂಡಿದೆ) ಎರಡನೇಯದೇ ʻಮಲೆಗಳಲ್ಲಿ ಮದುಮಗಳುʼ. ಮಾನವೀಯ ಬದುಕು ಈ ಕಾದಂಬರಿಯ ಜೀವ ಮತ್ತು ಜೀವಾಳ. ಮಲೆನಾಡಿನ ರುದ್ರ ರಮಣೀಯ ಪ್ರಕೃತಿ, ಅಲ್ಲಿನ ಜಾತಿ ಮತ್ತು ವರ್ಣಶ್ರೇಣಿ ವ್ಯವಸ್ಥೆ, ಪುರುಷ ಪ್ರಧಾನ ಜಗತ್ತಿನ ಕಪ್ಪು ಛಾಯೆ, ಆಗ ತಾನೇ ಹೊಸ ಲೋಕದ ಹೊಸ ಪುಟಗಳು ತಿರುವುತ್ತಿದ್ದ ಕಾಲದ ಜನ ಜೀವನದ ನಡುವೆ, ಮಾನವ ಸಹಜವಾದ ಪ್ರೀತಿ, ಪ್ರೇಮ, ತಲ್ಲಣ, ದಾಂಪತ್ಯ ಜೀವನದ ಸಿಹಿ-ಕಹಿ, ಮಲೆನಾಡಿನ ಸಾಂಸ್ಕೃತಿಕ-ಸಾಂಪ್ರದಾಯಿಕ ಸಂಗತಿಗಳ ವೈವಿಧ್ಯತೆ, ಜೀವನದ ಚಿತ್ರವತ್ತಾದ ಲೋಕವನ್ನು ಓದುಗರ ಅಕ್ಷೋಹಿಣಿ ಕಲ್ಪನೆಗೆ ನೆರವಾಗುವ ಕಥನ-ಕುತೂಹಲಿ ರಾಗದಂಥ ಕೃತಿ ಇದು.

ಕ್ಲಾಸಿಕ್‌ ಆಗಿದ್ದೂ, ಕ್ಲಾಸಿಕ್‌ ಆಗದ…ಮದುಮಗಳು

ಒಂದರ್ಥದಲ್ಲಿ ಕ್ಲಾಸಿಕ್‌ ವರ್ಗಕ್ಕೇ ಸೇರಿಹೋಗುವ, ಆದರೆ, ಜನರನ್ನು ಕ್ಲಾಸಿಕ್‌ ಆಗದೆಯೇ ತಲುಪುವ ತಲಸ್ಪರ್ಷಿ ಅನುಭವದ ʻಮಲೆಗಳಲ್ಲಿ ಮದುಮಗಳುʼ ವರ್ತಮಾನದಲ್ಲಿದ್ದುಕೊಂಡೇ ಭೂತಕಾಲದಲ್ಲಿಯೂ ವಿಹರಿಸುತ್ತಾ, ಭವಿಷ್ಯದತ್ತ ಸಾಗುವ ಕೃತಿ. ಇದರ ಮೊದಲ ಸುಮಾರು 200 ಪುಟಗಳ ಕಥೆ ಒಂದೇ ದಿನದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದ್ದು. ಇಡೀ ಕಾದಂಬರಿ ಸುಮಾರು ಒಂದು ಮಳೆಗಾಲದಲ್ಲಿ ಆರಂಭವಾಗಿ ಮುಗಿಯುವ ಮೊದಲೇ ಮುಗಿದು ʼಇದು ಬರೀ ಬೆರಗಲ್ಲೋ ಅಣ್ಣಾʼ ಎನ್ನುಂತೆ ದಿಗ್ಭ್ರಮೆಗೊಳಿಸುತ್ತದೆ. ಕಾಲ-ದೇಶಗಳ ಗಡಿಯನ್ನು ದಾಟಿ ನಡೆಯುವ ಕಿಕ್ಕಿರಿದ ಘಟನೆಗಳ ಲೋಕವನ್ನು ಓದಿಯೇ ಅನುಭವಿಸಬೇಕು.

ಮಲೆನಾಡಿನ ʻಮಹಾಭಾರತʼ

“ಸುಮಾರು ಮೂವತ್ತು ವರ್ಷಗಳ ಹಿಂದೆ ʻಮಲೆಗಳಲ್ಲಿ ಮದುಮಗಳುʼ ಓದಿದಾಗಲೇ, ಕೃತಿಯ ಆಳ, ವಿಸ್ತಾರ ನನ್ನನ್ನು ಬೆರಗುಗೊಳಿಸಿತ್ತು. ಕಾದಂಬರಿಯ ವಿಸ್ತಾರವಾದ ಬಿತ್ತಿ ಯಾವುದನ್ನೂ ಬಿಡದೆ, ಎಲ್ಲವನ್ನು ಒಳಗೊಳ್ಳುವ ಪರಿ ನನ್ನನ್ನು ಅಚ್ಚರಿಗೊಳಿಸಿತ್ತು. ಖ್ಯಾತ ಲೇಖಕ, ಚಿಂತಕ ಕೆ.ವಿ. ಸುಬ್ಬಣ್ಣ ಹೇಳುವಂತೆ ಇದು ʻಮಲೆನಾಡಿನ ಮಹಾಭಾರತʼ ಎನ್ನಿಸುವಂಥ ಸಂಕೀರ್ಣತೆ ನಮ್ಮ ಮುಂದೆ ಚೈತನ್ಯದಿಂದ ಮಿಡಿಯುತ್ತಿರುವ ಬದುಕನ್ನು ಅನಾವರಣಗೊಳಿಸುತ್ತದೆ. ಇಂಥ ಕೃತಿಯೊಂದನ್ನು ನಾನು ಅನುವಾದ ಮಾಡಬಹುದು ಅಥವಾ ನಾನೇ ಮಾಡಿದರೂ ಮಾಡಬಹುದು ಎಂಬ ಕನಸು ಕೂಡಾ ಆಗ ಇರಲಿಲ್ಲ” ಎನ್ನುತ್ತಾರೆ ವನಮಾಲ ವಿಶ್ವನಾಥ.

ಇಂಥ ಕೃತಿಯನ್ನು ಅನುವಾದ ಮಾಡುವುದು ಒಂದು ಸಂಗತಿ. ಆದರೆ ಈ ಕೃತಿ ಇಂಗ್ಲೀಷ್‌ ನಲ್ಲಿ ಕನ್ನಡ ಬಾರದ, ಆದರೆ ಸಾಹಿತ್ಯವನ್ನು ಪ್ರೀತಿಸುವ ಆರಾಧಿಸುವ ಮನಸ್ಸುಗಳಿಗೆ ತಲುಪುವಂತೆ ಮಾಡುವುದು ಮತ್ತೊಂದು ಸಂಗತಿ. ಈ ಕೃತಿಯ ಅನುವಾದವನ್ನು Penguin Random House India ನಂತಹ ಪ್ರತಿಷ್ಠಿತ ಸಂಸ್ಥೆ ಕೃತಿ ಅನುವಾದ ಪ್ರಕಟಿಸಲು ಮುಂದಾಗಿರುವುದು ನನಗೆ ದಕ್ಕಿದ ಒಂದು ಅವಕಾಶ ಎಂದೇ ನನ್ನ ಭಾವನೆ” ಎನ್ನುತ್ತಾರೆ ವನಮಾಲ ವಿಶ್ವನಾಥ.

ಈ ಕೃತಿಯನ್ನು ಈಗಾಗಲೇ ಓದಿರುವ ಖ್ಯಾತ ಲೇಖಕ –ಕಾದಂಬರಿಕಾರ ಅಮಿತ್‌ ಚೌಧುರಿ ಅವರು “ a great homage to life; exuberaņt unsparing and free ́ ಎಂದು ಮುಕ್ತವಾಗಿ ಪ್ರಶಂಸಿದ್ದಾರೆ. ಈ ಪುಸ್ತಕಕ್ಕೆ ದೇವನೂರು ಮಹಾದೇವ ಅವರು ʻಮಲೆಗಳಲ್ಲಿ ಮದುಮಗಳುʼ ಕುರಿತು 2018ರಲ್ಲಿ ಮೈಸೂರಿನಲ್ಲಿ ʼಮಲೆಗಳಲ್ಲಿ ಮದುಮಗಳುʼ ಗೆ ಐವತ್ತು ವರ್ಷ ತುಂಬಿದಾಗ ನಡೆದ ವಿಚಾರ ಸಂಕಿರಣವೊಂದರಲ್ಲಿ ಆಡಿದ ಮಾತುಗಳನ್ನು ಬಳಸಿಕೊಂಡಿರುವ ವನಮಾಲ ವಿಶ್ವನಾಥ ಅವರಿಗೆ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. 765 ಪುಟಗಳಲ್ಲಿ ಹರಡಿರುವ ಇಂಗ್ಲೀಷಿನಲ್ಲಿ Bride in the Hills ದಕ್ಕಿರುವ ಕನ್ನಡದ ʻಮಲೆಗಳಲ್ಲಿ ಮದುಮಗಳುʼ ಇಂದು ಕನ್ನಡದ ಓದುಗರ ಮಡಿಲಿಗೆ…

Read More
Next Story