
ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರವಾಗಿದೆ.
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು; 11 ಮಂದಿ ವಿರುದ್ಧ ಎಫ್‌ಐಆರ್
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಸಂಬಂಧ 11 ಮಂದಿ ಆರೋಪಿಗಳ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಬ್ಬಿಗೆ ಪ್ರತಿ ಕ್ವಿಂಟಾಲ್‌ಗೆ 3,500 ರೂಪಾಯಿ ನಿಗದಿಪಡಿಸಬೇಕೆಂದು ಪಟ್ಟು ಹಿಡಿದಿದ್ದ ರೈತರು, ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ, ರಸ್ತೆ ತಡೆ ತೆರವುಗೊಳಿಸಲು ಮುಂದಾದ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.
ಕೊಲೆ ಯತ್ನ ಸೇರಿದಂತೆ ಗಂಭೀರ ಪ್ರಕರಣ ದಾಖಲು
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕೊಲೆ ಮಾಡುವ ಉದ್ದೇಶದಿಂದ ಕಲ್ಲು ತೂರಾಟ ನಡೆಸಲಾಗಿದೆ ಎಂದು ಪಿಎಸ್‌ಐ ಆರ್. ವಿ. ಪಾಟೀಲ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಸುಮಾರು 100 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಎರಡು ಪೊಲೀಸ್ ವ್ಯಾನ್‌ಗಳು ಮತ್ತು ಬಸ್‌ಗಳು ಜಖಂಗೊಂಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ವಿಶೇಷ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಸರ್ಕಾರದಿಂದ ಬೆಲೆ ನಿಗದಿ, ಪ್ರತಿಭಟನೆ ವಾಪಸ್
ರೈತರ ತೀವ್ರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿ ಬೆಲೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಇದರಲ್ಲಿ ಸಕ್ಕರೆ ಕಾರ್ಖಾನೆಗಳು 3,250 ರೂಪಾಯಿ ಮತ್ತು ರಾಜ್ಯ ಸರ್ಕಾರ 50 ರೂಪಾಯಿ ಸಬ್ಸಿಡಿ ನೀಡಲಿದೆ. ಈ ನಿರ್ಧಾರದ ನಂತರ, ಒಂಬತ್ತು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ರೈತರು ಹಿಂಪಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಲ್ಲಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, "ಪೊಲೀಸರು ಸಂಯಮದಿಂದ ವರ್ತಿಸಬೇಕು ಮತ್ತು ರೈತರ ಮೇಲೆ ಬಲಪ್ರಯೋಗ ಮಾಡಬಾರದು ಎಂದು ಸೂಚಿಸಲಾಗಿದೆ. ಕಲ್ಲು ತೂರಾಟ ನಡೆದರೂ ಪೊಲೀಸರು ಸಂಯಮ ಕಳೆದುಕೊಂಡಿಲ್ಲ. ನಾವು ರೈತರ ಪರವಾಗಿದ್ದೇವೆ, ದಯಮಾಡಿ ಸರ್ಕಾರಕ್ಕೆ ಸಹಕರಿಸಿ," ಎಂದು ಮನವಿ ಮಾಡಿದ್ದರು.

