
ಕಬ್ಬಿನ ಬವಣೆ: Part-2| ಬೆಳಗಾವಿ ರಾಜಕಾರಣಿಗಳ ಮೂಲವೇ ʼಸಕ್ಕರೆ ಲಾಬಿʼ! ಸರ್ಕಾರದಲ್ಲೂ ಅವರೇ ಭಾಗಿ!!
ಬೆಳಗಾವಿ ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 22 ಸಕ್ಕರೆ ಕಾರ್ಖಾನೆಗಳು ರಾಜಕೀಯ ಮುಖಂಡರ ಕಪಿಮುಷ್ಠಿಯಲ್ಲಿದೆ. ಜಾರಕಿಹೊಳಿ -ಹೆಬ್ಬಾಳ್ಕರ್ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ.
ಸಹಕಾರಿ ಸಕ್ಕರೆ ಕಾರ್ಖಾನೆಗಳು ಒಂದು ಕಾಲದಲ್ಲಿ ರೈತರ ಆರ್ಥಿಕ ಸಬಲೀಕರಣದ ಕನಸಾಗಿದ್ದವು. ಆದರೆ, ಇಂದು ಬಹುತೇಕ ಸಹಕಾರಿ ಮತ್ತು ಖಾಸಗಿ ಕಾರ್ಖಾನೆಗಳು ರಾಜಕೀಯ ನಾಯಕರು ಅಥವಾ ಅವರ ಕುಟುಂಬ ಸದಸ್ಯರ ನೇರ ನಿಯಂತ್ರಣದಲ್ಲಿವೆ.
ದೇಶದಲ್ಲಿ, ಅದರಲ್ಲಿಯೂ ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ಪ್ರಮುಖ ಕಬ್ಬು ಬೆಳೆಯುವ ರಾಜ್ಯಗಳಲ್ಲಿ, ಸಕ್ಕರೆ ಉದ್ಯಮವು ಕೇವಲ ಆರ್ಥಿಕ ಚಟುವಟಿಕೆಯಾಗಿ ಉಳಿದಿಲ್ಲ. ಇದು ರಾಜಕೀಯದ ಗಟ್ಟಿ ಬುನಾದಿಯಾಗಿದೆ. ಕಬ್ಬು ಬೆಳೆಯ ಸುತ್ತ ಹೆಣೆದಿರುವ ರಾಜಕೀಯ ಹಿಡಿತ ಮತ್ತು ಪ್ರಬಲ ಲಾಬಿಯಿಂದಾಗಿ, ಕಬ್ಬಿಗೆ ಸಂಬಂಧಿಸಿದ ನೀತಿಗಳು, ಹೆಚ್ಚಾಗಿ ಸಕ್ಕರೆ ಕಾರ್ಖಾನೆಗಳ ಪರವಾಗಿ ಮತ್ತು ರೈತರ ಹಿತಾಸಕ್ತಿಗೆ ವಿರುದ್ಧವಾಗಿ ರೂಪುಗೊಳ್ಳುತ್ತಿವೆ.
ಉತ್ತರ ಕರ್ನಾಟಕದ ಸಕ್ಕರೆ ಕಣಜವೆಂದೇ ಪ್ರಸಿದ್ಧವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಯು ಕೇವಲ ಆರ್ಥಿಕ ಬೆಳೆಯಾಗಿ ಉಳಿದಿಲ್ಲ. ಇದು ಜಿಲ್ಲಾ ರಾಜಕಾರಣದ ಅಧಿಕಾರ ಮತ್ತು ಪ್ರತಿಷ್ಠೆಯಾಗಿದೆ. ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿಹೊಳಿ ಸಹೋದರರು, ಲಕ್ಷ್ಮಣ ಸವದಿ ಸೇರಿದಂತೆ ಪ್ರಭಾವಿ ನಾಯಕರ ಕೈಯಲ್ಲಿರುವ ಸಕ್ಕರೆ ಕಾರ್ಖಾನೆಗಳು ಮತ್ತು ಪ್ರಮುಖ ಸಹಕಾರಿ ಸಂಸ್ಥೆಗಳು ಗ್ರಾಮೀಣ ಮತಬ್ಯಾಂಕ್ ಹಾಗೂ ಅಪಾರ ಸಂಪತ್ತಿನ ನಿಯಂತ್ರಣಕ್ಕೆ ಪ್ರಮುಖ ಕೇಂದ್ರಗಳಾಗಿವೆ.
ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹಾವೇರಿ ಜಿಲ್ಲೆಯಲ್ಲಿ ಸಕ್ಕರೆ ಉತ್ಪಾದನೆ ಅಗಾಧವಾಗಿದೆ. ಇಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆಗಳು ಸಹಕಾರಿ ಸಂಸ್ಥೆಗಳು. ಸಹಕಾರಿ ಸಂಸ್ಥೆಗಳ ಮಂಡಳಿಯ ಅಧ್ಯಕ್ಷ ಸ್ಥಾನವು ಶಾಸಕ ಸ್ಥಾನಕ್ಕಿಂತ ಕಡಿಮೆ ಏನಿಲ್ಲ. ಶಾಸಕರಾಗಲು ನಡೆಯುವ ಪೈಪೋಟಿಯಂತೆ ಸಹಕಾರಿ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತದೆ. ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸರ್ಕಾರದಿಂದ ಸುಲಭವಾಗಿ ಸಾಲ, ಸಬ್ಸಿಡಿ ಮತ್ತು ಕಾರ್ಖಾನೆಗಳ ನವೀಕರಣಕ್ಕೆ ಪರವಾನಗಿಗಳನ್ನು ಪಡೆಯುತ್ತಾರೆ.
ಕೇಂದ್ರ ಸರ್ಕಾರ ನಿಗದಿಪಡಿಸುವ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (Fair and Remunerative Price - ಎಫ್‌ಆರ್‌ಪಿ) ಮತ್ತು ರಾಜ್ಯ ಸರ್ಕಾರಗಳು ಘೋಷಿಸುವ ರಾಜ್ಯ ಸಲಹಾ ಬೆಲೆ (State Advised Price -ಎಸ್‌ಎಪಿ) ನಡುವಿನ ಗೊಂದಲ ಮತ್ತು ಪಾವತಿಯಲ್ಲಿನ ವಿಳಂಬಕ್ಕೆ ಈ ರಾಜಕೀಯ ಹಸ್ತಕ್ಷೇಪವೇ ಮುಖ್ಯ ಕಾರಣ ಎನ್ನಲಾಗಿದೆ.
ಕಬ್ಬು ಕೃಷಿ ಉತ್ಪನ್ನವಲ್ಲ, ರಾಜಕಾರಣದ ಜೀವನಾಡಿ
ಬೆಳಗಾವಿ ಕಬ್ಬು ಬೆಳೆಗಾರರ ಪ್ರಕಾರ, ಕಬ್ಬು ರಾಜ್ಯ ರಾಜಕೀಯದಲ್ಲಿ ಕೇವಲ ಕೃಷಿ ಉತ್ಪನ್ನವಲ್ಲ, ಅದು ಕಬ್ಬು ಕಾರ್ಖಾನೆಗಳ ರಾಜಕಾರಣದ ಜೀವನಾಡಿ. ರಾಜಕೀಯ ನಿಯಂತ್ರಣದಲ್ಲಿರುವ ಕಾರ್ಖಾನೆಗಳು ಉದ್ದೇಶಪೂರ್ವಕವಾಗಿ ರೈತರಿಗೆ ಕಬ್ಬಿನ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಚುನಾವಣಾ ನಿಧಿಗೆ ಅಥವಾ ವೈಯಕ್ತಿಕ ಸಂಪತ್ತಿಗೆ ಅಕ್ರಮ ಹಣವನ್ನು ಸಂಗ್ರಹಿಸುತ್ತವೆ. ಸ್ವಾತಂತ್ರ್ಯದ ನಂತರ, ಗ್ರಾಮೀಣ ಸಬಲೀಕರಣದ ದೃಷ್ಟಿಯಿಂದ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ರೈತರೇ ಮಾಲೀಕರಾಗಬೇಕು ಎಂಬ ಆಶಯವಿತ್ತು. ಆದರೆ ಕಾಲಕ್ರಮೇಣ, ಈ ಸಹಕಾರಿ ಸಂಸ್ಥೆಗಳ ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ಅಧ್ಯಕ್ಷರು ಪ್ರಾದೇಶಿಕ ರಾಜಕೀಯದ ಪ್ರಮುಖ ಕೇಂದ್ರಗಳಾದರು. ಈ ನಾಯಕರು ಶಾಸಕರು, ಸಚಿವರು ಅಥವಾ ಸಂಸದರಾಗಿ ಬೆಳೆದಿದ್ದಾರೆ ಎಂದಿದ್ದಾರೆ.
ಬೆಳೆಗಾವಿ ಜಿಲ್ಲೆಯ ಪ್ರಮುಖ ಕಾರ್ಖಾನೆಗಳಾದ ಹುಕ್ಕೇರಿ, ಮಲಪ್ರಭಾ, ನಂದಿ, ಗೋಕಾಕ್ ಮತ್ತು ರಾಯಭಾಗ ಸಕ್ಕರೆ ಕಾರ್ಖಾನೆಗಳು ವಿಭಿನ್ನ ರಾಜಕೀಯ ಗುಂಪುಗಳ ಹಿಡಿತದಲ್ಲಿವೆ. ಪ್ರಸ್ತುತ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಂಡವು ಮಲಪ್ರಭಾ ಕಾರ್ಖಾನೆ ಚುನಾವಣೆಯಲ್ಲಿ ಜಯಗಳಿಸಿದ್ದು, ಮತ್ತೊಂದೆಡೆ ಜಾರಕಿಹೊಳಿ ಸಹೋದರರು ಹುಕ್ಕೇರಿ ಮತ್ತು ಗೋಕಾಕ್ ಕಾರ್ಖಾನೆಗಳ ಮೇಲೆ ಬಲವಾದ ಹಿಡಿತ ಕಾಯ್ದುಕೊಂಡಿದ್ದಾರೆ. ಈ ಕಾರಣದಿಂದ ಕಾರ್ಖಾನೆಗಳ ನಿರ್ವಹಣೆ, ಸಾಲಮನ್ನಾ, ಮತ್ತು ರೈತರಿಗೆ ನೀಡಬೇಕಾದ ಪಾವತಿ ವಿಚಾರಗಳಲ್ಲಿ ರಾಜಕೀಯ ಹಸ್ತಕ್ಷೇಪ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಸಕ್ಕರೆ ಕಾರ್ಖಾನೆಗಳು
ಬೆಳಗಾವಿ ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 22 ಸಕ್ಕರೆ ಕಾರ್ಖಾನೆಗಳು ರಾಜಕೀಯ ಮುಖಂಡರ ಕಪಿಮುಷ್ಠಿಯಲ್ಲಿದೆ. ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಒಡೆತನದಲ್ಲಿ 2 ಸಕ್ಕರೆ ಕಾರ್ಖಾನೆಗಳಿವೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ 1, ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಅಧ್ಯಕ್ಷತೆಯಲ್ಲಿ 1 ಕಾರ್ಖಾನೆ ಇದೆ. ಕತ್ತಿ ಕುಟುಂಬದ 1, ಸವದಿ ಕುಟುಂಬದ ಹಿಡಿತದಲ್ಲಿ 1, ರಮೇಶ್ ಜಾರಕಿಹೊಳಿ ಒಡೆತನದಲ್ಲಿ 1, ಬಾಲಚಂದ್ರ ಜಾರಕಿಹೊಳಿ ಹಿಡಿತದಲ್ಲಿ 1, ಜೊಲ್ಲೆ ಹಿಡಿತದಲ್ಲಿರುವ 2, ಶಾಸಕ ವಿಠ್ಠಲ್ ಹಲಗೇಕರ್ ಒಡೆತನದ 1, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹಿಡಿತದಲ್ಲಿ 3, ಮಾಜಿ ಸಚಿವ ಶ್ರೀಮಂತ್ ಒಡೆತನದಲ್ಲಿ 1, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹಿಡಿತದಲ್ಲಿ 1 ಸೇರಿ ಬೆಳಗಾವಿ ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ.
ಇನ್ನು ಬೇರೆ ಜಿಲ್ಲೆಗಳ ಮತ್ತು ಇತರ ನಾಯಕರಿಗೆ ಸಂಬಂಧಿಸಿದಂತೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಎಂ.ಬಿ. ಪಾಟೀಲ್, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರೂ ಸಹ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಕ್ಕರೆ ಕಾರ್ಖಾನೆಗಳ ಮೇಲೆ ಹಿಡಿತ ಹೊಂದಿದ್ದಾರೆ. ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸರ್ಕಾರದಿಂದ ಸುಲಭವಾಗಿ ಸಾಲ, ಸಬ್ಸಿಡಿ ಮತ್ತು ಕಾರ್ಖಾನೆಗಳ ನವೀಕರಣಕ್ಕೆ ಪರವಾನಗಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕಳೆದ ಬಾರಿ ಮೊದಲ ಬಾರಿಗೆ ರಾಜಕೀಯ ಪ್ರವೇಶ ಪಡೆದಿದ್ದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸಹ ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸುತ್ತಿದ್ದಾರೆ. ಹೀಗೆ ರಾಜಕೀಯದಲ್ಲಿರುವ ಬಹುತೇಕ ನಾಯಕರು ಸರ್ಕಾರ ಕಾರ್ಖಾನೆಗಳ ಮೇಲೆ ತನ್ನ ಹಿಡಿತವನ್ನು ಸಾಧಿಸಿದ್ದಾರೆ.
ಜಾರಕಿಹೊಳಿ- ಹೆಬ್ಬಾಳ್ಕರ್ ಜಿದ್ದಾಜಿದ್ದಿ ಹಿಂದೆ ಸಕ್ಕರೆ ಕಾರಣ
ಜಾರಕಿಹೊಳಿಯ ಇಡೀ ಇಡೀ ಕುಟುಂಬವು (ಸತೀಶ್, ರಮೇಶ್, ಬಾಲಚಂದ್ರ) ಹಲವು ಸಕ್ಕರೆ ಕಾರ್ಖಾನೆಗಳು ಮತ್ತು ಪ್ರಮುಖ ಡಿ.ಸಿ.ಸಿ ಬ್ಯಾಂಕ್ ಮೇಲೆ ಹಿಡಿತ ಹೊಂದಿದೆ. ಇದು ಲಕ್ಷಾಂತರ ಕಬ್ಬು ಬೆಳೆಗಾರರು ಮತ್ತು ಗ್ರಾಹಕರ ಮೇಲೆ ನೇರ ನಿಯಂತ್ರಣ ನೀಡುತ್ತದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ತಮ್ಮದೇ ಆದ ಪ್ರಭಾವ ಮತ್ತು ಆರ್ಥಿಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಅವರು ನಿರ್ವಹಿಸುವ ಸಂಸ್ಥೆಗಳ ಮೂಲಕ ಬೆಳಗಾವಿ ಗ್ರಾಮೀಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜಕೀಯ ಆರ್ಥಿಕ ಹಿಡಿತ ಸಾಧಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 22 ಸಕ್ಕರೆ ಕಾರ್ಖಾನೆಗಳು ರಾಜಕೀಯ ಮುಖಂಡರ ಕಪಿಮುಷ್ಠಿಯಲ್ಲಿದೆ.ಜಾರಕಿಹೊಳಿ ಕುಟುಂಬ ಮತ್ತು ಹೆಬ್ಬಾಳ್ಕರ್ ನಡುವಿನ ರಾಜಕೀಯ ಜಿದ್ದಾಜಿದ್ದಿ ಕೇವಲ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅದು ಆರ್ಥಿಕ ಸಂಸ್ಥೆಗಳ ನಿಯಂತ್ರಣಕ್ಕಾಗಿ ನಡೆಯುವ ಹಣಾಹಣಿಯೂ ಆಗಿದೆ ಎಂಬ ಮಾತುಗಳು ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಕೇಳಿಬರುತ್ತವೆ.
ಸಕ್ಕರೆ ಕಾರ್ಖಾನೆಯ ಮೇಲೆ ಹಿಡಿತ ಸಾಧಿಸಲು ಕಾರಣ
ಕಾರ್ಖಾನೆಗಳ ನಿಯಂತ್ರಣವನ್ನು ರಾಜಕಾರಣಿಗಳು ಅಷ್ಟು ಹಠದಿಂದ ಕಾಯ್ದುಕೊಳ್ಳಲು ಹಲವು ಕಾರಣಗಳಿವೆ. ಕಾರ್ಖಾನೆ ಅಧ್ಯಕ್ಷರು ಕಬ್ಬು ಪೂರೈಸುವ ಸಾವಿರಾರು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಬಾಕಿ ಪಾವತಿ, ಸಬ್ಸಿಡಿ ಮತ್ತು ಸಾಲದಂತಹ ವಿಷಯಗಳು ರೈತರ ಮತಗಳನ್ನು ಸುಲಭವಾಗಿ ತಮ್ಮತ್ತ ಸೆಳೆಯಲು ಸಹಾಯ ಮಾಡುತ್ತವೆ. ಸಹಕಾರಿ ಮತ್ತು ಖಾಸಗಿ ಕಾರ್ಖಾನೆಗಳು ಪಕ್ಷಗಳಿಗೆ ಮತ್ತು ವೈಯಕ್ತಿಕ ರಾಜಕೀಯ ಕಾರ್ಯಾಚರಣೆಗಳಿಗೆ ಅತ್ಯಂತ ದೊಡ್ಡ ಮತ್ತು ನಿಯಮಿತವಾದ ಹಣಕಾಸು ಮೂಲ ವಾಗಿ ಕಾರ್ಯ ನಿರ್ವಹಿಸುತ್ತವೆ. ಅಲ್ಲದೇ, ಶಾಸಕ ಸ್ಥಾನಕ್ಕೆ ಬೇಕಾದ ಪ್ರಬಲ ನಾಯಕತ್ವದ ಮೆಟ್ಟಿಲು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಕ್ಕರೆ ಕಾರ್ಖಾನೆಗಳ ಮೇಲೆ ಹಿಡಿತ ಸಾಧಿಸಲು ನಿರಂತರ ಪ್ರಯತ್ನ ನಡೆಯುತ್ತಿರುತ್ತದೆ.
ಪ್ರಮುಖ ಸಕ್ಕರೆ ಕಾರ್ಖಾನೆಗಳು ಮತ್ತು ಮಾಲೀಕರು
* ಚಿದಾನಂದ ಪ್ರಭು ಕೋರೆ ಸಹಕಾರಿ ಕಾರ್ಖಾನೆ - ಮಲ್ಲಿಕಾರ್ಜುನ ಕೋರೆ
* ಬೆಳಗಾವಿ ಶುಗರ್ಸ್ ಕಾರ್ಖಾನೆ, ಸತೀಶ್ ಶುಗರ್ಸ್ ಕಾರ್ಖಾನೆ - ಸತೀಶ್ ಜಾರಕಿಹೊಳಿ
* ಗೋಕಾಕ್ ಸಕ್ಕರೆ ಕಾರ್ಖಾನೆ, ಹಿರೇನಂದಿ ಸೌಭಾಗ್ಯಲಕ್ಷ್ಮೀ ಕಾರ್ಖಾನೆ - ರಮೇಶ್ ಜಾರಕಿಹೊಳಿ
* ಘಟಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ - ಬಾಲಚಂದ್ರ ಜಾರಕಿಹೊಳಿ
* ಹರ್ಷ ಶುಗರ್ಸ್, ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ - ಲಕ್ಷ್ಮೀ ಹೆಬ್ಬಾಳ್ಕರ್
* ಶಿವಶಕ್ತಿ ಶುಗರ್ಸ್- ಪ್ರಭಾಕರ್ ಕೋರೆ
* ಬೀರೇಶ್ವರ್ ಸಕ್ಕರೆ ಕಾರ್ಖಾನೆ - ಶಾಮನೂರು ಶಿವಶಂಕರಪ್ಪ
* ಅಥಣಿ ಫಾರ್ಮರ್ಸ್ ಶುಗರ್ಸ್ - ಶ್ರೀಮಂತ ಪಾಟೀಲ್
* ವಿಶ್ವರಾಜ್ ಶುಗರ್ಸ್ - ನಿಖಿಲ್ ಕತ್ತಿ
* ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ - ರಮೇಶ್ ಕತ್ತಿ
* ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ - ಅಣ್ಣಸಾಹೇಬ್ ಜೊಲ್ಲೆ
* ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ - ಲಕ್ಷ್ಮಣ್ ಸವದಿ
ಶೇ 50ಕ್ಕಿಂತ ಹೆಚ್ಚು ಸಕ್ಕರೆ ಕಾರ್ಖಾನೆ ಮಾಲೀಕರೇ ಸರ್ಕಾರದ ಭಾಗ
ಸಕ್ಕರೆ ಕಾರ್ಖಾನೆಗಳ ಮೇಲೆ ರಾಜಕೀಯ ಪಾರುಪತ್ಯದ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ರೈತ ನಾಯಕರೂ ಆಗಿರುವ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ, ರಾಜಕೀಯ ಪ್ರಭಾವದಿಂದ ಸಕ್ಕರೆ ಕಾರ್ಖಾನೆಗಳ ಆಡಳಿತ ಪಾರದರ್ಶಕತೆ ಕುಗ್ಗುತ್ತಿದೆ. ಸಾಲಮನ್ನಾ, ಉತ್ಪಾದನಾ ನಿರ್ವಹಣೆ ಹಾಗೂ ರೈತರ ಪಾವತಿ ವಿಷಯಗಳಲ್ಲಿ ನಿರ್ಧಾರಗಳು ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿವೆ. ರಾಜ್ಯ ಸರ್ಕಾರವು ಸಹಕಾರ ಸಂಸ್ಥೆಗಳ ನಿಯಂತ್ರಣ ಕಾಯ್ದೆಯಡಿ ನಿಯಮಾವಳಿಗಳನ್ನು ಬಲಪಡಿಸಲು ಯೋಚನೆ ಮಾಡುತ್ತಿದ್ದರೂ, ಸ್ಥಳೀಯ ನಾಯಕರ ಒತ್ತಡದಿಂದ ಕ್ರಮಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಈ ಹಿಂದೆ ಸಹಕಾರ ಸಂಘ ಹಾಗೂ ಸರ್ಕಾರಿ-ಖಾಸಗಿ ಸಹಭಾಗಿತ್ವದ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಈಗ ರಾಜಕಾರಣಿಗಳೇ ಕಾರ್ಖಾನೆ ಆರಂಭಿಸಿದ್ದು, ಶೇ 50ಕ್ಕಿಂತ ಹೆಚ್ಚು ಸಕ್ಕರೆ ಕಾರ್ಖಾನೆ ಮಾಲೀಕರೇ ಸರ್ಕಾರದ ಭಾಗವಾಗಿರುವುದರಿಂದ ಲಾಬಿ ಹೆಚ್ಚಾಗಿದೆ. ಮೊದಲು ಸಕ್ಕರೆ ಕಾರ್ಖಾನೆಗಳು ಹಾಗೂ ರೈತರ ನಡುವೆ ವಿವಾದ ಏರ್ಪಟ್ಟಾಗ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುತ್ತಿತ್ತು. ಈಗ ಸಕ್ಕರೆ ರಾಜಕೀಯ ಲಾಬಿಯಿಂದಾಗಿ ಸಮಸ್ಯೆ ಇತ್ಯರ್ಥವಾಗುತ್ತಿಲ್ಲ. ಬೆಳಗಾವಿಯಲ್ಲಿ ಒಟ್ಟು 29 ಸಕ್ಕರೆ ಕಾರ್ಖಾನೆಗಳಿವೆ. ಮೂರು ಸಹಕಾರ ಸಂಘಗಳ ಅಧೀನದಲ್ಲಿದ್ದರೆ, ನಾಲ್ಕು ಕಾರ್ಖಾನೆಗಳು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದ್ದಾಗಿವೆ. ಉಳಿದ 22 ಕಾರ್ಖಾನೆಗಳು ಶಾಸಕರು, ಸಂಸದರು ಹಾಗೂ ಸಚಿವರಿಗೆ ಸೇರಿವೆ. ಬಾಗಲಕೋಟೆ ಹಾಗೂ ಬೆಳಗಾವಿ ಗಡಿಭಾಗದಲ್ಲಿರುವ ಗುರ್ಲಾಪುರ ಕ್ರಾಸ್ ನಲ್ಲೇ ಬೆಳೆ ಬೆಳೆಯಲಾಗುತ್ತದೆ. ಜತೆಗೆ ಕಾರ್ಖಾನೆಗಳು ಹೆಚ್ಚಿನವಿವೆ," ಎಂದು ತಿಳಿಸಿದರು.
"ಲಾಬಿ ಎಷ್ಟರಮಟ್ಟಿಗೆ ಇದೆ ಎಂದರೆ ಸಕ್ಕರೆ ಕಾಖಾನೆಗಳನ್ನು ರೈತರ ಮುಂದೆ ತಲೆ ಬಗ್ಗಿಸಲು ಬಿಡುತ್ತಿಲ್ಲ. ಏಕೆಂದರೆ ಒಂದು ಬಾರಿ ರೈತರ ಬೇಡಿಕೆಗಳಿಗೆ ಸ್ಪಂದಿಸಿದರೆ ಪ್ರತಿ ವರ್ಷ ಅದೇ ರೂಢಿಯಾಗಲಿದೆ ಎಂಬುದು ಕಾರ್ಖಾನೆ ಮಾಲೀಕರ ಕಳವಳ. ಸಕ್ಕರೆ ಸಚಿವ ಶಿವಾನಂದ ಪಾಟೀಲರು ಇದೇ ವಿಚಾರವಾಗಿ ಅಸಹಾಯಕತೆ ಹೊರಹಾಕಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಸಚಿವರಿಗೆ ರೈತರ ಪ್ರತಿಭಟನಾ ಸ್ಥಳಕ್ಕೆ ಬರಲು ಬಿಟ್ಟಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಶ್ರೀಮಂತ ಪಾಟೀಲ ಎರಡು ಕಾರ್ಖಾನೆಯನ್ನು ಮಹಾರಾಷ್ಟ್ರದಲ್ಲಿ, ಒಂದು ಬೆಳಗಾವಿಯಲ್ಲಿ ಸ್ಥಾಪಿಸಿದ್ದಾರೆ. ವಿಪರ್ಯಾಸವೆಂದರೆ ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ ಶ್ರೀಮಂತ್ ಪಾಟೀಲ್ ಅವರು 3400 ರೂ. ಪಾವತಿಸಿದರೆ, ಕರ್ನಾಟಕದಲ್ಲಿ 3 ಸಾವಿರ ರೂ. ನೀಡುತ್ತಿದ್ದಾರೆ. ಇದು ಯಾವ ನ್ಯಾಯ?," ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ, ಬೆಳಗಾವಿ ಜಿಲ್ಲೆಯ ಸಕ್ಕರೆ ಉದ್ಯಮವು ಆರ್ಥಿಕ ಶಕ್ತಿಯಷ್ಟೇ ಅಲ್ಲ, ರಾಜಕೀಯ ಶಕ್ತಿಯ ಕೇಂದ್ರವಾಗಿಯೂ ಪರಿಣಮಿಸಿದೆ. ಕಾರ್ಖಾನೆಗಳ ಮಾಲಿಕತ್ವ, ನಿರ್ವಹಣೆ ಮತ್ತು ಲಾಭ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಕಡಿಮೆ ಆಗದವರೆಗೂ ರೈತರ ಹಿತದೃಷ್ಟಿ ಸಂಪೂರ್ಣವಾಗಿ ಕಾಪಾಡುವುದು ಕಷ್ಟ ಎಂಬುದು ವಾಸ್ತವ ಸಂಗತಿಯಾಗಿದೆ.

