LIVE Indo-Pak Conflict | ಕರ್ನಲ್‌ ಖುರೇಶಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ; ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್‌ ಆದೇಶ
x

Indo-Pak Conflict | ಕರ್ನಲ್‌ ಖುರೇಶಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ; ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್‌ ಆದೇಶ

ವ್ಯಾಪಾರ ನಿಲ್ಲಿಸುವ ಬೆದರಿಕೆಯ ನಂತರ ಉಭಯ ದೇಶಗಳು ಕದನ ವಿರಾಮ ಒಪ್ಪಿಕೊಂಡವು ಎಂಬ ಟ್ರಂಪ್ ಹೇಳಿಕೆ ಆಧರಿಸಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿವೆ.


ಭಾರತ-ಪಾಕಿಸ್ತಾನದ ಮಧ್ಯೆ ಜಾರಿಯಾಗಿರುವ ಕದನ ವಿರಾಮ ಘೋಷಣೆ ಕುರಿತು ಚರ್ಚೆ, ರಾಜಕೀಯ ಸಂಘರ್ಷ ಆರಂಭವಾಗಿರುವ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸಂಘರ್ಷ ತಡೆಯಲು ತನ್ನ ವ್ಯಾಪಾರ ಮಾರ್ಗವನ್ನೇ ದಾಳವಾಗಿ ಬಳಸಲಾಗಿತ್ತು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.

ವ್ಯಾಪಾರ ನಿಲ್ಲಿಸುವ ಬೆದರಿಕೆಯ ನಂತರ ಉಭಯ ದೇಶಗಳು ಕದನ ವಿರಾಮ ಒಪ್ಪಿಕೊಂಡವು ಎಂಬ ಟ್ರಂಪ್ ಹೇಳಿಕೆ ಆಧರಿಸಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿವೆ. ಅಮೆರಿಕದ ಆಣತಿಯಂತೆ ಕದನ ವಿರಾಮ ಘೋಷಿಸಿರುವ ಮೋದಿ ಅವರು ದುರ್ಬಲ ಪ್ರಧಾನಿ ಎಂದು ಟೀಕಿಸಿವೆ. ಪ್ರತಿಪಕ್ಷಗಳ ಆಕ್ರೋಶದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಅಮೆರಿಕದ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದು, ಟ್ರಂಪ್‌ ಹೇಳಿಕೆಯನ್ನು ತಳ್ಳಿ ಹಾಕಿದೆ.

ಡೊನಾಲ್ಡ್ ಟ್ರಂಪ್ ಪುನರುಚ್ಚಾರ

ಸೌದಿ- ಅಮೆರಿಕದ ಹೂಡಿಕೆ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ನನಗೆ ಭಾರತ-ಪಾಕಿಸ್ತಾನ ಯುದ್ಧ ಮಾಡುವುದು ಇಷ್ಟವಿರಲಿಲ್ಲ. ವಿಶ್ವದಲ್ಲೇ ಅಮೆರಿಕ ಅತ್ಯಂತ ಶ್ರೇಷ್ಠವಾದ ಸೇನೆ ಹೊಂದಿದೆ. ಆದರೂ ಶಾಂತಿಪಾಲನೆಗೆ ಆದ್ಯತೆ ನೀಡುವುದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದ ಮಧ್ಯಸ್ಥಿಕೆಯಿಂದಾಗಿಯೇ ಐತಿಹಾಸಿಕ ಕದನ ವಿರಾಮ ಜಾರಿಯಾಯಿತು. ಯುದ್ಧ ನಿಲ್ಲಿಸಿದರೆ ಅಮೆರಿಕದೊಂದಿಗೆ ಹೆಚ್ಚು ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಹುದು ಎಂದು ಹೇಳಿದ್ದರಿಂದ ಸಂಘರ್ಷ ನಿಂತು ಹೋಯಿತು ಎಂದು ಹೇಳಿದಾಗ ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಹಲವು ಉನ್ನತ ಮಟ್ಟದ ನಾಯಕರು ಚಪ್ಪಾಳೆ ತಟ್ಟಿದರು.

ಪರಮಾಣು ಕ್ಷಿಪಣಿ ವ್ಯಾಪಾರ ನಿಲ್ಲಿಸಿ

ಪರಮಾಣು ಕ್ಷಿಪಣಿಗಳನ್ನು ಯಾವುದೇ ಕಾರಣಕ್ಕೂ ವ್ಯಾಪಾರ ಮಾಡಬೇಡಿ. ನೀವು ತುಂಬಾ ಸುಂದರವಾಗಿ ತಯಾರಿಸುವ ವಸ್ತುಗಳನ್ನು ಮಾತ್ರ ವ್ಯಾಪಾರ ಮಾಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಭಾರತ-ಪಾಕಿಸ್ತಾನದ ಇಬ್ಬರು ನಾಯಕರೂ ಶಕ್ತಿಶಾಲಿಗಳು, ಬುದ್ದಿವಂತರು. ಬಲಿಷ್ಠ ನಾಯಕತ್ವ ಹೊಂದಿವೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಶಮನವಾಗಿರುವುದು ಆಶಾದಾಯಕ ಬೆಳವಣಿಗೆ ಎಂದು ಟ್ರಂಪ್ ಹೇಳಿದ್ದಾರೆ.

ಭಾರತ-ಪಾಕ್ ನಡುವೆ ಕದನ ವಿರಾಮ ಜಾರಿಯಾದ ವಿಚಾರದಲ್ಲಿ ಯಾವುದೇ ದೇಶ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಭಾರತ ಪ್ರತಿಪಾದಿಸುತ್ತಿದೆ. ಪಾಕಿಸ್ತಾನವೇ ಸ್ವಯಂಪ್ರೇರಿತವಾಗಿ ಕದನ ವಿರಾಮಕ್ಕೆ ಪ್ರಸ್ತಾವ ಮಾಡಿತು. ಶಾಂತಿ ಸ್ಥಾಪನೆ ಸದುದ್ದೇಶದಿಂದ ನಾವು ಒಪ್ಪಿಕೊಂಡೆವು ಎಂದು ಭಾರತ ಹೇಳುತ್ತಿದೆ.

ಈಚೆಗೆ ನವದೆಹಲಿಯಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಮಾಹಿತಿ ನೀಡುವ ವೇಳೆಯೂ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು, ಕದನ ವಿರಾಮ ಜಾರಿಯಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಮಂಗಳವಾರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಒಪ್ಪಂದಕ್ಕೆ ವಾಷಿಂಗ್ಟನ್ ಮಧ್ಯವರ್ತಿ ಎಂಬ ಟ್ರಂಪ್ ಹೇಳಿಕೆಯನ್ನು ತಳ್ಳಿ ಹಾಕಿದ್ದರು.

ಭಾರತವು ತನಗೆ ಸಂಬಂಧಿಸಿದ ಸಮಸ್ಯೆಯನ್ನು ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ದೀರ್ಘಕಾಲದ ರಾಷ್ಟ್ರೀಯ ನಿಲುವು ಹೊಂದಿದೆ. ಜಮ್ಮು ಕಾಶ್ಮೀರ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸುವ ಟ್ರಂಪ್ ಅವರ ಹೇಳಿಕೆಯಿಂದ ನಮ್ಮ ನೀತಿ ಬದಲಾಗುವುದಿಲ್ಲ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ವಾಪಸ್ ಪಡೆಯುವ ವಿಚಾರವೂ ದೇಶದ ಸಾರ್ವಭೌಮ ನಿಲುವಾಗಿದೆ ಎಂದು ಹೇಳಿದ್ದರು.

ಪಾಕ್ ವಿರುದ್ಧ ರಾಜತಾಂತ್ರಿಕ ನಿರ್ಬಂಧ ಮುಂದುವರಿಕೆ

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಘೋಷಿಸಿರುವ ರಾಜತಾಂತ್ರಿಕ ನಿರ್ಬಂಧಗಳನ್ನು ಮುಂದುವರಿಸಲಾಘುವುದು ಎಂದು ಭಾರತ ಸರ್ಕಾರ ಹೇಳಿದೆ. ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಅಮಾನತು ಕೂಡ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿತ್ತು.

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲ ನಿಲ್ಲಿಸುವ ವಿಶ್ವಾಸ ಮೂಡುವವರೆಗೂ ಅಂತಾರಾಷ್ಟ್ರೀಯ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.

Live Updates

  • 14 May 2025 4:31 PM IST

    ಆಪರೇಷನ್ ಸಿಂದೂರ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

    "ಪ್ರಧಾನಿ ಮೋದಿ ಮೊದಲಿನಿಂದಲೂ ಪರಿಸರ ವ್ಯವಸ್ಥೆಯತ್ತ ಗಮನಹರಿಸುವಂತೆ ಕೇಳುತ್ತಿದ್ದಾರೆ. ಅನಿಲ, ರಾಸಾಯನಿಕ ತಯಾರಕರು ಭಾರತದಲ್ಲಿ ತಮ್ಮ ಸ್ಥಾವರಗಳನ್ನು ಸ್ಥಾಪಿಸುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯನ್ನು ಆಪರೇಷನ್ ಸಿಂಧೂರ್‌ನಲ್ಲಿಯೂ ಮಾಡಲಾಗಿದೆ. ತಂತ್ರಜ್ಞಾನವು ಭಾರತಕ್ಕೆ ದೊಡ್ಡ ಶಕ್ತಿಯನ್ನು ನೀಡುತ್ತದೆ ಮತ್ತು ಭವಿಷ್ಯಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತದೆ. ಈ ಸರಣಿಯಲ್ಲಿ, ಪ್ರಧಾನಿ ಮೋದಿ ಅವರ ಮೂರನೇ ಅವಧಿಯಲ್ಲಿ 1 ಲಕ್ಷ 25 ಸಾವಿರ ಕೋಟಿ ರೂ. ಮೌಲ್ಯದ ಐತಿಹಾಸಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 


  • 14 May 2025 2:32 PM IST

    ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಭೇಟಿ ಮಾಡಿದ ಉತ್ತರ ಸೇನಾ ಕಮಾಂಡರ್

    ಉತ್ತರ ಸೇನಾ ಕಮಾಂಡರ್,  ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಬುಧವಾರ ಭೇಟಿ ಮಾಡಿ ಕೇಂದ್ರಾಡಳಿತ ಪ್ರದೇಶದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಈ ಬಗ್ಗೆ ರಾಜಭವನದಲ್ಲಿ ಸಭೆ ನಡೆಸಲಾಯಿತು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

    ಕಣಿವೆಯಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು ಮತ್ತು ವಿವಿಧ ಅಂಶಗಳ ಬಗ್ಗೆ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಇನ್-ಸಿ), ಲೆಫ್ಟಿನೆಂಟ್ ಜನರಲ್ ಶರ್ಮಾ ಸಿನ್ಹಾ ಅವರಿಗೆ ವಿವರಿಸಿದರು ಎಂದು ವಕ್ತಾರರು ತಿಳಿಸಿದ್ದಾರೆ. 

  • 14 May 2025 2:28 PM IST

    ಪೂಂಚ್‌ನಲ್ಲಿ ಪಾಕ್ ಶೆಲ್ ದಾಳಿಗೆ ಬಲಿಯಾದ ಕುಟುಂಬವನ್ನು ಭೇಟಿ ಮಾಡಿದ ಮೆಹಬೂಬಾ ಮುಫ್ತಿ

    ಪಾಕಿಸ್ತಾನದ ಗಡಿಯಾಚೆಗಿನ ಶೆಲ್ ದಾಳಿಯಿಂದ ಪೂಂಚ್‌ನಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬವನ್ನು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಭೇಟಿಯಾದರು.

  • 14 May 2025 2:26 PM IST

    ಪ್ರಧಾನಿ ಮೋದಿ ವಿರುದ್ಧ ದೆಹಲಿಯಲ್ಲಿ ಎಎಪಿ ಸದಸ್ಯರಿಂದ ಪ್ರತಿಭಟನೆ

    ಆಪರೇಷನ್ ಸಿಂಧೂರ್ ಸಮಯದಲ್ಲಿ ಪಿಒಕೆಯನ್ನು ಮರಳಿ ಪಡೆಯದಿದ್ದಕ್ಕಾಗಿ ಪ್ರಧಾನಿ ಮೋದಿ ದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ದೆಹಲಿಯಲ್ಲಿ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ನಮ್ಮ ಸೈನಿಕರು ಶತ್ರುಗಳನ್ನು ಸೋಲಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಇದು ಕಾಶ್ಮೀರವನ್ನು ಮರಳಿ ಪಡೆಯುವ ಸಮಯ. ಕದನ ವಿರಾಮಕ್ಕೆ ಒಪ್ಪುವ ಮೂಲಕ ನೀವು ದೇಶಕ್ಕೆ ದ್ರೋಹ ಬಗೆದಿದ್ದೀರಿ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. 


  • 14 May 2025 2:20 PM IST

    ವಿಜಯ್ ಶಾ ಅವರೊಬ್ಬ ಮೂರ್ಖ; ಮುಕ್ತಾರ್ ಅಬ್ಬಾಸ್ ನಖ್ವಿ

    ಆಪರೇಷನ್ ಸಿಂಧೂರ್ ಸಮಯದಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರೊಂದಿಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರ ವಿವಾದಾತ್ಮಕ ಹೇಳಿಕೆಗಳನ್ನು ಬಿಜೆಪಿಯ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ ಖಂಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,, "ಅವರು ಮೂರ್ಖರು. ಕೆಲವು ಜನರು ಉತ್ಸಾಹದಲ್ಲಿ ಪ್ರಜ್ಞೆ ಕಳೆದುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಹೇಳಿಕೆಗಳು ಸ್ವೀಕಾರಾರ್ಹವಲ್ಲ ಮತ್ತು ಖಂಡನೀಯ ಎಂದು ಬಣ್ಣಿಸಿದ ನಖ್ವಿ, ಕರ್ನಲ್ ಖುರೇಷಿ ಅವರ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಶಾ ಒಬ್ಬ ಜೋಕರ್ ಆಗಿದ್ದಾರೆ ಎಂದು ತಿಳಿಸಿದರು. 

  • 14 May 2025 1:40 PM IST

    ಶೆಲ್ ದಾಳಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಜೆ-ಕೆ ಸಿಎಂ, ಮನೆಗಳ ಪುನರ್ನಿರ್ಮಾಣಕ್ಕೆ ಸಹಾಯದ ಭರವಸೆ

    ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾದ ಜನರ ಮನೆಗಳನ್ನು ಪುನರ್ನಿರ್ಮಿಸಲು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬುಧವಾರ ಎಲ್ಲಾ ರೀತಿಯ ಸಹಾಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸಲಾಮಾಬಾದ್, ಲಗಾಮಾ, ಬಂಡಿ ಮತ್ತು ಗಿಂಗಲ್ ಸೇರಿದಂತೆ ಉರಿಯ ಶೆಲ್ ದಾಳಿ ಪೀಡಿತ ಪ್ರದೇಶಗಳಿಗೆ ಅಬ್ದುಲ್ಲಾ ಭೇಟಿ ನೀಡಿದರು.

  • 14 May 2025 12:36 PM IST

    ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಮರ್ಪಣೆಯನ್ನು ಶ್ಲಾಂಘಿಸಿದ ರಾಷ್ಟ್ರಪತಿ

    ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಆಪರೇಷನ್ ಸಿಂಧೂರ್ ಬಗ್ಗೆ ವಿವರಿಸಿದರು. ಭಯೋತ್ಪಾದನೆಯ ವಿರುದ್ಧ ಭಾರತದ ಪ್ರತಿಕ್ರಿಯೆಯನ್ನು ಅದ್ಭುತ ಯಶಸ್ಸಿಗೆ ಕಾರಣವಾದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಮರ್ಪಣೆಯನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು.


  • ಪಾಕ್‌ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಸಾಹು ಭಾರತಕ್ಕೆ ಹಸ್ತಾಂತರ
    14 May 2025 12:31 PM IST

    ಪಾಕ್‌ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಸಾಹು ಭಾರತಕ್ಕೆ ಹಸ್ತಾಂತರ

    ಕಳೆದ ಏಪ್ರಿಲ್ 23 ರಂದು ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ ರೇಖೆಯನ್ನು ದಾಟಿದ್ದರಿಂದ ಪಾಕಿಸ್ತಾನದ ಸೇನೆ ವಶಕ್ಕೆ ಪಡೆದಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಪೂರ್ಣಂ ಸಾಹು ಅವರನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸಿದೆ.

  • 14 May 2025 11:47 AM IST

    ಭಾರತದ ನೀರಿನ ಪಾಲಿನ ಪ್ರತಿ ಹನಿಯೂ ಭಾರತದಲ್ಲಿಯೇ ಉಳಿಯುತ್ತದೆ: ಗಜೇಂದ್ರ ಸಿಂಗ್ ಶೇಖಾವತ್

    ಸಿಂಧೂ ಜಲ ಒಪ್ಪಂದ ಸ್ಥಗಿತಗೊಂಡಿರುವ ಕುರಿತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿದ್ದು, "ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಪ್ರಧಾನಿ ಮೊದಲೇ ಹೇಳಿದ್ದರು.1965 ರ ಯುದ್ಧ, 1971 ರ ಯುದ್ಧ ಮತ್ತು ಕಾರ್ಗಿಲ್ ಯುದ್ಧದ ಹೊರತಾಗಿಯೂ, ಭಾರತ ಒಪ್ಪಂದವನ್ನು ಗೌರವಿಸಿತು. ಆದರೆ ಈಗ ಸಂದೇಶ ಸ್ಪಷ್ಟವಾಗಿದೆ. ಈಗ ಭಾರತ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದ ಹಿತಾಸಕ್ತಿಗಳೊಂದಿಗೆ ಆಟವಾಡಲು ಸಾಧ್ಯವಿಲ್ಲ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗಿದೆ. ನಾವು ಅವರೊಂದಿಗೆ ಡೇಟಾ ಹಂಚಿಕೆಯನ್ನು ನಿಲ್ಲಿಸಿದ್ದೇವೆ. ಭಾರತದ ನೀರಿನ ಪ್ರತಿ ಹನಿಯೂ ಭಾರತದಲ್ಲಿಯೇ ಉಳಿಯುತ್ತದೆ. ಸರ್ಕಾರ ಇದಕ್ಕೆ ಬದ್ಧವಾಗಿದೆ'' ಎಂದು ಅವರು ತಿಳಿಸಿದ್ದಾರೆ. 

  • 14 May 2025 11:33 AM IST

    ತಿರಂಗಾ ಯಾತ್ರೆಗೆ ಚಾಲನೆ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌

    "ಇಡೀ ರಾಷ್ಟ್ರವು ಸೇನೆಯ ಶೌರ್ಯ ಮತ್ತು ಧೈರ್ಯಕ್ಕೆ ವಂದಿಸುತ್ತದೆ. ಇಡೀ ರಾಜ್ಯದ ಪರವಾಗಿ, ಆಪರೇಷನ್ ಸಿಂಧೂರ್‌ನ ಯಶಸ್ಸಿಗೆ ನಾವು ಪ್ರಧಾನಿ ಮೋದಿಗೆ ಧನ್ಯವಾದ ಹೇಳುತ್ತೇವೆ. ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಅನಾಗರಿಕ ಕೃತ್ಯವನ್ನು ಇಡೀ ಜಗತ್ತು ಖಂಡಿಸಿತು... ಸೇನೆಯು ಪಾಕಿಸ್ತಾನಕ್ಕೆ ಸೂಕ್ತ ಉತ್ತರವನ್ನು ನೀಡಿದೆ. ನಾವು ಯಾರಿಗೂ ತೊಂದರೆ ನೀಡುವುದಿಲ್ಲ, ಆದರೆ ಯಾರಾದರೂ ನಮಗೆ ತೊಂದರೆ ನೀಡಿದರೆ, ನಾವು ಅವರನ್ನು ಬಿಡುವುದಿಲ್ಲ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಕಳುಹಿಸಿತು... ಇಂದು, ಸೇನೆಯ ಬಗ್ಗೆ ನಮ್ಮ ಗೌರವ ಮತ್ತು ಪ್ರಧಾನಿ ಮೋದಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ತಿರಂಗಾ ಯಾತ್ರೆ ಉತ್ತರ ಪ್ರದೇಶದಲ್ಲಿ ಪ್ರಾರಂಭವಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು. 

Read More
Next Story