
Indo-Pak Conflict | ಕರ್ನಲ್ ಖುರೇಶಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ; ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ಆದೇಶ
ವ್ಯಾಪಾರ ನಿಲ್ಲಿಸುವ ಬೆದರಿಕೆಯ ನಂತರ ಉಭಯ ದೇಶಗಳು ಕದನ ವಿರಾಮ ಒಪ್ಪಿಕೊಂಡವು ಎಂಬ ಟ್ರಂಪ್ ಹೇಳಿಕೆ ಆಧರಿಸಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿವೆ.
ಭಾರತ-ಪಾಕಿಸ್ತಾನದ ಮಧ್ಯೆ ಜಾರಿಯಾಗಿರುವ ಕದನ ವಿರಾಮ ಘೋಷಣೆ ಕುರಿತು ಚರ್ಚೆ, ರಾಜಕೀಯ ಸಂಘರ್ಷ ಆರಂಭವಾಗಿರುವ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸಂಘರ್ಷ ತಡೆಯಲು ತನ್ನ ವ್ಯಾಪಾರ ಮಾರ್ಗವನ್ನೇ ದಾಳವಾಗಿ ಬಳಸಲಾಗಿತ್ತು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.
ವ್ಯಾಪಾರ ನಿಲ್ಲಿಸುವ ಬೆದರಿಕೆಯ ನಂತರ ಉಭಯ ದೇಶಗಳು ಕದನ ವಿರಾಮ ಒಪ್ಪಿಕೊಂಡವು ಎಂಬ ಟ್ರಂಪ್ ಹೇಳಿಕೆ ಆಧರಿಸಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿವೆ. ಅಮೆರಿಕದ ಆಣತಿಯಂತೆ ಕದನ ವಿರಾಮ ಘೋಷಿಸಿರುವ ಮೋದಿ ಅವರು ದುರ್ಬಲ ಪ್ರಧಾನಿ ಎಂದು ಟೀಕಿಸಿವೆ. ಪ್ರತಿಪಕ್ಷಗಳ ಆಕ್ರೋಶದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಅಮೆರಿಕದ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದು, ಟ್ರಂಪ್ ಹೇಳಿಕೆಯನ್ನು ತಳ್ಳಿ ಹಾಕಿದೆ.
ಡೊನಾಲ್ಡ್ ಟ್ರಂಪ್ ಪುನರುಚ್ಚಾರ
ಸೌದಿ- ಅಮೆರಿಕದ ಹೂಡಿಕೆ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ನನಗೆ ಭಾರತ-ಪಾಕಿಸ್ತಾನ ಯುದ್ಧ ಮಾಡುವುದು ಇಷ್ಟವಿರಲಿಲ್ಲ. ವಿಶ್ವದಲ್ಲೇ ಅಮೆರಿಕ ಅತ್ಯಂತ ಶ್ರೇಷ್ಠವಾದ ಸೇನೆ ಹೊಂದಿದೆ. ಆದರೂ ಶಾಂತಿಪಾಲನೆಗೆ ಆದ್ಯತೆ ನೀಡುವುದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕದ ಮಧ್ಯಸ್ಥಿಕೆಯಿಂದಾಗಿಯೇ ಐತಿಹಾಸಿಕ ಕದನ ವಿರಾಮ ಜಾರಿಯಾಯಿತು. ಯುದ್ಧ ನಿಲ್ಲಿಸಿದರೆ ಅಮೆರಿಕದೊಂದಿಗೆ ಹೆಚ್ಚು ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಹುದು ಎಂದು ಹೇಳಿದ್ದರಿಂದ ಸಂಘರ್ಷ ನಿಂತು ಹೋಯಿತು ಎಂದು ಹೇಳಿದಾಗ ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಹಲವು ಉನ್ನತ ಮಟ್ಟದ ನಾಯಕರು ಚಪ್ಪಾಳೆ ತಟ್ಟಿದರು.
ಪರಮಾಣು ಕ್ಷಿಪಣಿ ವ್ಯಾಪಾರ ನಿಲ್ಲಿಸಿ
ಪರಮಾಣು ಕ್ಷಿಪಣಿಗಳನ್ನು ಯಾವುದೇ ಕಾರಣಕ್ಕೂ ವ್ಯಾಪಾರ ಮಾಡಬೇಡಿ. ನೀವು ತುಂಬಾ ಸುಂದರವಾಗಿ ತಯಾರಿಸುವ ವಸ್ತುಗಳನ್ನು ಮಾತ್ರ ವ್ಯಾಪಾರ ಮಾಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಭಾರತ-ಪಾಕಿಸ್ತಾನದ ಇಬ್ಬರು ನಾಯಕರೂ ಶಕ್ತಿಶಾಲಿಗಳು, ಬುದ್ದಿವಂತರು. ಬಲಿಷ್ಠ ನಾಯಕತ್ವ ಹೊಂದಿವೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಶಮನವಾಗಿರುವುದು ಆಶಾದಾಯಕ ಬೆಳವಣಿಗೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತ-ಪಾಕ್ ನಡುವೆ ಕದನ ವಿರಾಮ ಜಾರಿಯಾದ ವಿಚಾರದಲ್ಲಿ ಯಾವುದೇ ದೇಶ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಭಾರತ ಪ್ರತಿಪಾದಿಸುತ್ತಿದೆ. ಪಾಕಿಸ್ತಾನವೇ ಸ್ವಯಂಪ್ರೇರಿತವಾಗಿ ಕದನ ವಿರಾಮಕ್ಕೆ ಪ್ರಸ್ತಾವ ಮಾಡಿತು. ಶಾಂತಿ ಸ್ಥಾಪನೆ ಸದುದ್ದೇಶದಿಂದ ನಾವು ಒಪ್ಪಿಕೊಂಡೆವು ಎಂದು ಭಾರತ ಹೇಳುತ್ತಿದೆ.
ಈಚೆಗೆ ನವದೆಹಲಿಯಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಮಾಹಿತಿ ನೀಡುವ ವೇಳೆಯೂ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು, ಕದನ ವಿರಾಮ ಜಾರಿಯಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮಂಗಳವಾರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಒಪ್ಪಂದಕ್ಕೆ ವಾಷಿಂಗ್ಟನ್ ಮಧ್ಯವರ್ತಿ ಎಂಬ ಟ್ರಂಪ್ ಹೇಳಿಕೆಯನ್ನು ತಳ್ಳಿ ಹಾಕಿದ್ದರು.
ಭಾರತವು ತನಗೆ ಸಂಬಂಧಿಸಿದ ಸಮಸ್ಯೆಯನ್ನು ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ದೀರ್ಘಕಾಲದ ರಾಷ್ಟ್ರೀಯ ನಿಲುವು ಹೊಂದಿದೆ. ಜಮ್ಮು ಕಾಶ್ಮೀರ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸುವ ಟ್ರಂಪ್ ಅವರ ಹೇಳಿಕೆಯಿಂದ ನಮ್ಮ ನೀತಿ ಬದಲಾಗುವುದಿಲ್ಲ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ವಾಪಸ್ ಪಡೆಯುವ ವಿಚಾರವೂ ದೇಶದ ಸಾರ್ವಭೌಮ ನಿಲುವಾಗಿದೆ ಎಂದು ಹೇಳಿದ್ದರು.
ಪಾಕ್ ವಿರುದ್ಧ ರಾಜತಾಂತ್ರಿಕ ನಿರ್ಬಂಧ ಮುಂದುವರಿಕೆ
ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಘೋಷಿಸಿರುವ ರಾಜತಾಂತ್ರಿಕ ನಿರ್ಬಂಧಗಳನ್ನು ಮುಂದುವರಿಸಲಾಘುವುದು ಎಂದು ಭಾರತ ಸರ್ಕಾರ ಹೇಳಿದೆ. ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಅಮಾನತು ಕೂಡ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿತ್ತು.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲ ನಿಲ್ಲಿಸುವ ವಿಶ್ವಾಸ ಮೂಡುವವರೆಗೂ ಅಂತಾರಾಷ್ಟ್ರೀಯ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.
Live Updates
- 14 May 2025 11:30 AM IST
ಮೆಕ್ಕಾಗೆ ಹೊರಟ ಹಜ್ ಯಾತ್ರಿಕರ ಎರಡನೇ ತಂಡ
ಹಜ್ ಯಾತ್ರಿಕರ ಎರಡನೇ ತಂಡ ಶ್ರೀನಗರದ ಹಜ್ ಹೌಸ್‌ನಿಂದ ವಿಮಾನ ನಿಲ್ದಾಣಕ್ಕೆ ಹೊರಡಿತು. ಭಾರತ-ಪಾಕಿಸ್ತಾನ ಒಪ್ಪಂದದ ಬಳಿಕ ಅವರು ಸೌದಿ ಅರೇಬಿಯಾದ ಮೆಕ್ಕಾಗೆ ತೆರಳುತ್ತಿದ್ದಾರೆ. ಶ್ರೀನಗರದಿಂದ ಹಜ್ ಯಾತ್ರಿಕರ ಮೊದಲ ತಂಡವು ಮೇ 4ರಂದು ಹೊರಟಿತ್ತು.
- 14 May 2025 11:12 AM IST
ಕದನ ವಿರಾಮದಿಂದ ಪಕ್ಷಗಳು ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲಿ; ವಿಶ್ವಸಂಸ್ಥೆಯ ವಕ್ತಾರರು
ಭಾರತ ಮತ್ತು ಪಾಕಿಸ್ತಾನಗಳು ಯುದ್ಧವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಬಂದಿರುವುದರಿಂದ "ನಾವು ಉತ್ತಮ ಸ್ಥಳದಲ್ಲಿದ್ದೇವೆ" ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರರು ಹೇಳಿದ್ದಾರೆ.
"ಕದನ ವಿರಾಮ ಮುಂದುವರೆದಿದೆ. ನಾವು ಮೊದಲಿಗಿಂತ ಉತ್ತಮ ಸ್ಥಾನದಲ್ಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ಕದನ ವಿರಾಮ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಪಕ್ಷಗಳು ತಮ್ಮ ನಡುವಿನ ಬಾಕಿ ಇರುವ ಹಲವಾರು ಸಮಸ್ಯೆಗಳನ್ನು ನಿಭಾಯಿಸಲು ಇದನ್ನು ಬಳಸುತ್ತವೆ ಎಂದು ನಾವು ಭಾವಿಸುತ್ತೇವೆ" ಎಂದು ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಡುಜಾರಿಕ್ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
- 14 May 2025 11:07 AM IST
ಉತ್ತರಾಖಂಡದಲ್ಲಿ ತಿರಂಗ ಯಾತ್ರೆ
ಭಾರತೀಯ ಸಶಸ್ತ್ರ ಪಡೆಗಳ ಗೌರವಾರ್ಥವಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಡೆಹ್ರಾಡೂನ್‌ನಲ್ಲಿ 'ತಿರಂಗ ಶೌರ್ಯ ಸಮ್ಮಾನ್ ಯಾತ್ರೆ' ನಡೆಸಲಾಗುತ್ತಿದೆ.