
ಸಾಂದರ್ಭಿಕ ಚಿತ್ರ
ಬೆಂಗಳೂರಿಗೆ ಸುರಂಗ| ಪರಿಸರಕ್ಕೆ ಧಕ್ಕೆಯಿಲ್ಲ, ಮೆಟ್ರೋಗಿಂತ ಸುರಂಗವೇ ಅಗ್ಗ; ಸರ್ಕಾರಕ್ಕೆ ಎಂಜಿನಿಯರ್ಸ್ ಸಂಸ್ಥೆ ವರದಿ
ಮೆಟ್ರೋ ಸುರಂಗ ಮಾರ್ಗಕ್ಕೆ ಪ್ರತಿ ಕಿ.ಮೀಟರ್‌ಗೆ 500 ಕೋಟಿ ರೂ.ಗೂ ಅಧಿಕ ವೆಚ್ಚವಾಗುತ್ತಿದೆ. ಆದರೆ, ಸುರಂಗ ರಸ್ತೆ ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ 446.83 ಕೋಟಿ ರೂ. ವೆಚ್ಚವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ʼಸುರಂಗ ಮಾರ್ಗ ʼ ನಿರ್ಮಿಸಲು ಮುಂದಾಗಿದ್ದು, ಜಾಗತಿಕ ಟೆಂಡರ್ ಕರೆದಿದೆ. ಪ್ರತಿಪಕ್ಷ ಬಿಜೆಪಿ ಹಾಗೂ ನಗರ ತಜ್ಞರು ಸುರಂಗ ರಸ್ತೆಯ ಬದಲು ಮೆಟ್ರೋ ಜಾಲ ವಿಸ್ತರಣೆಗೆ ಆಗ್ರಹಿಸುತ್ತಿದ್ದಾರೆ. ಆದರೆ, ಬೆಂಗಳೂರಿನ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆ ಮೆಟ್ರೋಗಿಂತ ಸುರಂಗ ಮಾರ್ಗವೇ ಅಗ್ಗವಾಗಿದೆ. ಟನಲ್ ರಸ್ತೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ವರದಿ ನೀಡಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆಗೆ ಬಿಜೆಪಿ, ಜೆಡಿಎಸ್, ಪರಿಸರ ಪ್ರೇಮಿಗಳು, ಲಾಲ್‌ಬಾಗ್ ನಡಿಗೆದಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಸುರಂಗ ಯೋಜನೆಯಿಂದ ಲಾಲ್‌ಬಾಗ್ ಪರಿಸರ, ಬಂಡೆಗೆ ಹಾನಿಯಾಗಲಿದೆ, ಜಲಮೂಲಗಳು ಬತ್ತಲಿವೆ ಎಂದು ಆತಂಕ ವ್ಯಕ್ತಪಡಿಸಿವೆ. ಹೀಗಿರುವಾಗ ಸುರಂಗ ರಸ್ತೆಯ ಸಾಧಕ-ಬಾಧಕ ಅಧ್ಯಯನ ಮಾಡಿರುವ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆ ವ್ಯತಿರಿಕ್ತ ವರದಿ ನೀಡಿದ್ದು, ಸುರಂಗ ರಸ್ತೆಯಿಂದಲೇ ಬೆಂಗಳೂರು ವಾಹನ ದಟ್ಟಣೆ ನಿವಾರಣೆ ಸಾಧ್ಯʼ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಸುರಂಗ ರಸ್ತೆಯಿಂದ ಬೇರೆ ಬೇರೆ ರಾಜ್ಯಗಳಲ್ಲಾಗಿರುವ ಸಂಚಾರ ದಟ್ಟಣೆ ನಿಯಂತ್ರಣದ ಜೊತೆಗೆ ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣವಾದರೆ ಆಗುವ ಪ್ರಯೋಜನಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಿದೆ.
ಮೆಟ್ರೋ ಸುರಂಗಕ್ಕಿಂತಲೂ ಕಡಿಮೆ ವೆಚ್ಚ
ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆ ಸಲ್ಲಿಸಿರುವ ವರದಿಯಲ್ಲಿ ನಗರದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಸೂಚಿಸಿರುವ ಅಂಶ ಬಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೆಟ್ರೋ ಸುರಂಗ ಮಾರ್ಗಕ್ಕೆ ಪ್ರತಿ ಕಿ.ಮೀ.ಗೆ 500 ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗುತ್ತಿದೆ. ಆದರೆ, ಸುರಂಗ ರಸ್ತೆಯ ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ 446.83 ಕೋಟಿ ರೂ. ವೆಚ್ಚವಾಗಲಿದೆ. ಇದು ಮೆಟ್ರೋ ಸುರಂಗಕ್ಕಿಂತಲೂ ಕಡಿಮೆ ವೆಚ್ಚವಾಗಲಿದೆ ಎಂದು ಉಲ್ಲೇಖಿಸಲಾಗಿದೆ.
ನಗರದಲ್ಲಿ ಸುರಂಗ ರಸ್ತೆ ನಿರ್ಮಾಣದಿಂದ ಸೂಕ್ಷ್ಮ ಪ್ರದೇಶ, ಲಾಲ್‌ಬಾಗ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ತೊಂದರೆಯಾಗುವುದಿಲ್ಲ. ಹಲವು ವಿರೋಧಗಳು ವ್ಯಕ್ತವಾಗಿವೆ ಎಂದು ಸರ್ಕಾರ ಸುರಂಗ ರಸ್ತೆ ಯೋಜನೆಯನ್ನು ಕೈ ಬಿಟ್ಟರೆ ನಗರದ ಟ್ರಾಫಿಕ್ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸಂಸ್ಥೆಯ ತಜ್ಞರು ಹೇಳಿದ್ದಾರೆ.
ವರದಿಯ ಪ್ರಮುಖ ಅಂಶಗಳು
ಪ್ರತಿ ಕಿಲೋಮೀಟರ್ ಗೆ 20 ರೂಪಾಯಿ ಪ್ರಯಾಣ ವೆಚ್ಚ.
ಮುಖ್ಯರಸ್ತೆಗಳಿಗೆ ಶೀಘ್ರವಾಗಿ ಸಂಪರ್ಕ ಸಾಧಿಸಲು ಅನುಕೂಲ.
ಸುರಂಗ ರಸ್ತೆಯಿಂದ ವಾಹನ ದಟ್ಟಣೆ ನಿಯಂತ್ರಣ ಜೊತೆಗೆ ಸಮಯದ ಉಳಿತಾಯ.
ಸುರಂಗ ರಸ್ತೆಯಿಂದ ಮಾಲಿನ್ಯ ಮಟ್ಟ ನಿಯಂತ್ರಣ ಜೊತೆಗೆ ಅಪಘಾತ ಇಳಿಕೆ ನಿರೀಕ್ಷೆ.
ಮೆಟ್ರೋ ನಿರ್ಮಾಣ ದರಕ್ಕಿಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಸಾಧ್ಯ.
ಏನಿದು ಸುರಂಗ ಯೋಜನೆ?
ಜಾಗತಿಕವಾಗಿ ಗಮನ ಸೆಳೆದಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರವು ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೂ 20 ಸಾವಿರ ಕೋಟಿ ರೂ. ವೆಚ್ಚದಲ್ಲಿ 16.7 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿದೆ. ನಗರದ ಸುರಂಗ ರಸ್ತೆ ನಿರ್ಮಾಣದಿಂದ ಆಗುವ ಸಾಧಕ-ಬಾಧಕಗಳ ಕುರಿತು ʼದ ಫೆಡರಲ್ ಕರ್ನಾಟಕʼ ವಿಶೇಷ ಸರಣಿ ಲೇಖನಗಳು ಹಾಗೂ ಸಂದರ್ಶನಗಳನ್ನು ಪ್ರಕಟಿಸಿತ್ತು.
ಈ ಕುರಿತು ಇನ್ನಷ್ಟು ಮಾಹಿತಿ ಪಡೆಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಬೆಂಗಳೂರಿಗೆ ಸುರಂಗ: Part-1| ಡಿಪಿಆರ್‌ನಲ್ಲಿವೆ 121 ಲೋಪ; ಯೋಜನೆ ವಿರೋಧಿಸಿದರೆ ಸರ್ಕಾರಕ್ಕೆ ಕೋಪ!
ಬೆಂಗಳೂರಿಗೆ ಸುರಂಗ: Part-2| ಸುರಂಗ ರಸ್ತೆ 16.7 ಕಿ.ಮೀ., ರ‍್ಯಾಂಪ್ ಉದ್ದ 18 ಕಿ.ಮೀ; ಐಟಿ ನಗರಿಗೆ ಶಾಪವೇ?
ಬೆಂಗಳೂರಿಗೆ ಸುರಂಗ: Part-3| ಉದ್ಯಾನ ನಗರಿಯ ಅಂತರ್ಜಲ ಕುಸಿಯುವ ಆತಂಕ : ವಿಸ್ತೃತ ಅಧ್ಯಯನಕ್ಕೆ ಒತ್ತಾಯ
ಬೆಂಗಳೂರಿಗೆ ಸುರಂಗ: Part-4| 'ಪಂಚ ಕೆರೆ'ಗಳ ಜಲಮೂಲಕ್ಕೇ ಧಕ್ಕೆ! ಎದುರಾಗಲಿದೆ ʼಜಲ ಬರʼ
ಬೆಂಗಳೂರಿಗೆ ಸುರಂಗ: Part-5| ಹೂಡಿಕೆದಾರರ ಸೆಳೆಯುವ ಪ್ಲಾನ್; ಹಸಿರು ವಲಯದಲ್ಲಿ ಕಟ್ಟಡ ನಿರ್ಮಾಣ ನಿಯಮ ಸಡಿಲಿಕೆ

