ಬೆಂಗಳೂರಿಗೆ ಸುರಂಗ: Part-1|  ಡಿಪಿಆರ್‌ನಲ್ಲಿವೆ 121 ಲೋಪ; ಯೋಜನೆ ವಿರೋಧಿಸಿದರೆ ಸರ್ಕಾರಕ್ಕೆ ಕೋಪ!
x

ಬೆಂಗಳೂರಿಗೆ ಸುರಂಗ: Part-1| ಡಿಪಿಆರ್‌ನಲ್ಲಿವೆ 121 ಲೋಪ; ಯೋಜನೆ ವಿರೋಧಿಸಿದರೆ ಸರ್ಕಾರಕ್ಕೆ ಕೋಪ!

ವಿಸ್ತೃತ ಯೋಜನಾ ವರದಿಯೇ ಇಷ್ಟು ಲೋಪಗಳಿಂದ ಕೂಡಿರಬೇಕಾದರೆ, ಯೋಜನೆಯ ಅಸಲಿಯತ್ತು ಏನಾಗಲಿದೆ, ನೈಸರ್ಗಿಕ ಮತ್ತು ಐತಿಹಾಸಿಕ ಕುರುಹುಗಳು ನಾಶವಾಗಲಿವೆ ಎಂಬ ಆತಂಕ ಸಾರ್ವಜನಿಕರದು.


Click the Play button to hear this message in audio format

ಜಾಗತಿಕವಾಗಿ ಗಮನ ಸೆಳೆದಿರುವ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರವು ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೆ ಉದ್ದೇಶಿತ ಟನಲ್‌ ರಸ್ತೆ ಯೋಜನೆ ಜಾರಿಗೆ ಮುಂದಾಗಿದೆ. ಆದರೆ, ಸುರಂಗ ರಸ್ತೆ ನಿರ್ಮಿಸಲು ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿಯಲ್ಲೇ (ಡಿಪಿಆರ್‌) 121 ಲೋಪಗಳಿರುವುದು ಬೆಳಕಿಗೆ ಬಂದಿದೆ.

ವಿಸ್ತೃತ ಯೋಜನಾ ವರದಿಯೇ ಇಷ್ಟು ಲೋಪಗಳಿಂದ ಕೂಡಿರಬೇಕಾದರೆ, ಯೋಜನೆಯ ಅಸಲಿಯತ್ತು ಏನಾಗಲಿದೆ, ನೈಸರ್ಗಿಕ ಮತ್ತು ಐತಿಹಾಸಿಕ ಕುರುಹುಗಳು ನಾಶವಾಗಲಿವೆ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಬೆಂಗಳೂರಿನಲ್ಲಿ ಸುರಂಗ ರಸ್ತೆ ಮಾರ್ಗ ನಿರ್ಮಿಸಲು ಖಾಸಗಿ ಸಂಸ್ಥೆಯೊಂದು ಡಿಪಿಆರ್‌ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಡಿಪಿಆರ್‌ನಲ್ಲಿಯೇ ಲೋಪಗಳಿದ್ದು, ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯು ನ್ಯೂನ್ಯತೆ, ಲೋಪಗಳ ಬಗ್ಗೆ ವರದಿ ನೀಡಿದೆ.

ಬೆಂಗಳೂರಿನಲ್ಲಿ ಟನಲ್ ರಸ್ತೆ ಯೋಜನೆ ಜಾರಿ ಮಾಡಿಯೇ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದಿದ್ದಾರೆ. ಆದರೆ, ಡಿಪಿಆರ್‌ ಲೋಪ, ಸಾರ್ವಜನಿಕರ ಕಳವಳ ನಿವಾರಿಸಲು ಆಸ್ಥೆ ವಹಿಸಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿವೆ.

ದೇಶ ಮತ್ತು ವಿಶ್ವದ ಹಲವು ನಗರದಲ್ಲಿರುವ ಸುರಂಗ ರಸ್ತೆ ಮಾರ್ಗಗಳನ್ನು ಖುದ್ದು ವೀಕ್ಷಿಸಿದ ಬಳಿಕ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ನಗರದ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂಬುದು ಅವರ ವಾದ. ಆದರೆ, ತರಾತುರಿಯಲ್ಲಿ ಖಾಸಗಿ ಸಂಸ್ಥೆ ಸಿದ್ಧಪಡಿಸಿರುವ ಡಿಪಿಆರ್‌ ಸಾಕಷ್ಟು ಲೋಪಗಳಿಂದ ಕೂಡಿದ್ದು, ಯೋಜನೆಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.

ಖಾಸಗಿ ಸಂಸ್ಥೆ ಸಿದ್ಧಪಡಿಸಿದ್ದ ಡಿಪಿಆರ್‌ ವರದಿ ಪರಿಶೀಲನೆ ನಡೆಸಲು ಬಿಎಂಆರ್‌ಸಿಎಲ್‌ನ ಕಾರ್ಯಕಾರಿ ನಿರ್ದೇಶಕ ಸಿದ್ದನಗೌಡ ಹೆಗ್ಗರಡಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು 89 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ವರದಿಯಲ್ಲಿ ಮಣ್ಣಿನ ಪರೀಕ್ಷೆ ಸಮಪರ್ಕವಾಗಿ ನಡೆದಿಲ್ಲ. ಸುರಂಗ ಮಾರ್ಗಕ್ಕೆ ಪ್ರವೇಶ ಮತ್ತು ನಿರ್ಗಮನದ ಹಾದಿಗಳು ಕಿರಿದಾಗಿದ್ದು, ಅಗಲವಾಗಿರಬೇಕಿತ್ತು. ಆತುರಾತುರದಲ್ಲಿ ಡಿಪಿಆರ್ ರೂಪಿಸಿರುವಂತೆ ಕಾಣುತ್ತಿದೆ ಎಂದು ಉಲ್ಲೇಖ ಮಾಡಲಾಗಿದೆ.

ವರದಿಯಲ್ಲಿರುವ ಲೋಪಗಳೇನು?

ಸುರಂಗ ರಸ್ತೆ ಮಾರ್ಗ ನಿರ್ಮಾಣಕ್ಕಾಗಿ ಕೇವಲ ನಾಲ್ಕು ಕಡೆ ಮಣ್ಣು ಪರೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಮತ್ತಷ್ಟು ಮಣ್ಣು ಪರೀಕ್ಷೆಗಳಾಗಬೇಕು. ಟನಲ್ ಮಾರ್ಗವು ಬಹುತೇಕ ಮೆಟ್ರೋ ಮಾರ್ಗಗಳಲ್ಲೇ ಸಾಗಿದೆ. ಇದರ ಆರ್ಥಿಕ ಮತ್ತು ತಾಂತ್ರಿಕತೆಯ ಪರಿಣಾಮಗಳ ಅಧ್ಯಯನ ಆಗಬೇಕು.

ಪ್ರವೇಶ ಮತ್ತು ನಿರ್ಗಮನ ಹಾದಿಗಳು ಮತ್ತಷ್ಟು ಅಗಲವಾಗಿರಬೇಕು. ಹೆಬ್ಬಾಳ ಕೆರೆಯ ಮಾರ್ಗ ಬದಲಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅಡಚಣೆ ಉಂಟಾಗುತ್ತದೆ. 25 ವರ್ಷಗಳಲ್ಲಿ 2+2 ಲೇನ್ ಇರಬೇಕು. ಆದರೆ 1+1 ಲೇನ್ ಯೋಜನೆ ರೂಪಿಸಲಾಗಿದೆ.

ಟನಲ್ ರಸ್ತೆಯ ಪೀಕ್ ಅವರ್‌ ನಿರ್ವಹಣೆ ಕುರಿತು ಅಧ್ಯಯನವಾಗಿಲ್ಲ. ನೈಸರ್ಗಿಕ ನಾಲೆಗಳ ಹರಿವು ಮತ್ತು ಅದನ್ನು ತಿರುಗಿಸುವ ಕುರಿತು ಅಧ್ಯಯನವಾಗಿಲ್ಲ. ಅಂತರ್ಜಲದ ಮೇಲಿನ ಪರಿಣಾಮವನ್ನೂ ಪರಿಗಣಿಸಿಲ್ಲ ಎಂದು ವರದಿಯಲ್ಲಿ ಕಂಡು ಬಂದ ಲೋಪಗಳಾಗಿವೆ. ವರದಿಯಲ್ಲಿ ಕಂಡು ಬಂದಿರುವ ಲೋಪಗಳ ಜತೆಗೆ ಲಾಲ್‌ಬಾಗ್‌ ಕೆಳಗೆ ಹಾದು ಹೋಗುವ ಟನಲ್‌ ರಸ್ತೆಯ ಕುರಿತು ಪುನರ್‌ ಪರಿಶೀಲನೆ ನಡೆಸಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

ಲಾಲ್‌ಬಾಗ್‌ ಬಳಿ ಎದುರಾಗುವ ಸಮಸ್ಯೆಗಳು

ಸಿಟಿಜನ್‌ ಫಾರ್‌ ಸಿಟಿಜನ್‌ ಸಂಸ್ಥೆಯ ವರದಿ ಪ್ರಕಾರ, ಸಿದ್ದಾಪುರ ರಸ್ತೆಯ ಲಾಲ್‌ಬಾಗ್ ಬದಿಯಲ್ಲಿರುವ ಅಶೋಕ ಪಿಲ್ಲರ್‌ನಿಂದ ಸುಮಾರು 50 ಮೀಟರ್‌ ದೂರದಲ್ಲಿ 1.4 ಕಿ.ಮೀ. ಕೆಳಮುಖ ಇಳಿಜಾರು ಪ್ರಾರಂಭವಾಗುತ್ತದೆ. ಈ ಇಳಿಜಾರನ್ನು ಪ್ರವೇಶಿಸಲು, ಎಲ್ಲಾ ಕಡೆಯ ಕಾರುಗಳು ಅಶೋಕ ಪಿಲ್ಲರ್‌ ಮೂಲಕ ಸಿದ್ದಾಪುರ ರಸ್ತೆಗೆ ಚಲಿಸುತ್ತವೆ. ವಿಲ್ಸನ್ ಗಾರ್ಡನ್ ಮತ್ತು ಡೈರಿ ವೃತ್ತದ ದಿಕ್ಕುಗಳಿಂದ ಬರುವ ಕಾರುಗಳು 1.1 ಕಿ.ಮೀ. ಸಿದ್ದಾಪುರ ರಸ್ತೆಯಲ್ಲಿ ಚಲಿಸಿ ಅಶೋಕ ಪಿಲ್ಲರ್‌ನಲ್ಲಿ ಯು-ತಿರುವು ತೆಗೆದುಕೊಂಡು ಪ್ರವೇಶಿಸುತ್ತವೆ. ಇದು ಅಶೋಕ ಪಿಲ್ಲರ್‌ ಸುತ್ತಲೂ ಭಾರಿ ದಟ್ಟಣೆಗೆ ಕಾರಣವಾಗುತ್ತವೆ.

1.1 ಕಿ.ಮೀ. ನಿರ್ಗಮನ ರ‍್ಯಾಂಪ್ ಸಿದ್ದಾಪುರ ರಸ್ತೆಯ ಮರಿಗೌಡ ಜಂಕ್ಷನ್‌ನಲ್ಲಿ ಬಹುತೇಕ ಕೊನೆಗೊಳ್ಳುತ್ತದೆ. ಆದ್ದರಿಂದ, ಮರಿಗೌಡ ಜಂಕ್ಷನ್‌ನಲ್ಲಿ ಸಿದ್ಧಾಪುರ ರಸ್ತೆಗೆ ಟ್ರಾಫಿಕ್ ಸಿಗ್ನಲ್ ಹಸಿರು ಬಣ್ಣದಲ್ಲಿದ್ದಾಗ ಮಾತ್ರ ಸುರಂಗದಿಂದ ನಿರ್ಗಮಿಸಲು ಸಾಧ್ಯವಾಗುತ್ತದೆ. ಉಳಿದ ಸಮಯದಲ್ಲಿ, ವಾಹನಗಳು ನಿಲ್ಲಿಸಿ ನಿರ್ಗಮನ ರ‍್ಯಾಂಪ್ ಒಳಗೆ ಕಾಯಬೇಕಾಗುತ್ತದೆ. ಪೀಕ್ ಸಮಯದಲ್ಲಿ, ಈ ರ‍್ಯಾಂಪ್ ಕಾರುಗಳಿಂದ ತುಂಬಿ ಸುರಂಗದೊಳಗೆಯೂ ಸಹ ಟ್ರಾಫಿಕ್ ಜಾಮ್‌ಗೆ ಕಾರಣವಾಗಬಹುದು. ಆದ್ದರಿಂದ, ಮರಿಗೌಡ ಜಂಕ್ಷನ್‌ನಲ್ಲಿ ನಿರ್ಗಮಿಸುವ ಸುರಂಗ ಬಳಕೆದಾರರು ರ‍್ಯಾಂಪ್ ಒಳಗೆ ನಿಧಾನಗತಿಯ ಚಲನೆ, ಕೆಂಪು ಸಂಚಾರ ಸಿಗ್ನಲ್ ಮತ್ತು ಮರಿಗೌಡ ಜಂಕ್ಷನ್‌ನಲ್ಲಿ ಅಶೋಕ ಪಿಲ್ಲರ್ ಕಡೆಗೆ ಯು-ತಿರುವುಗಳಿಂದಾಗಿ ಸಾಕಷ್ಟು ಸಮಯವನ್ನು ಕಳೆದುಕೊಳ್ಳುತ್ತಾರೆ. ಸುರಂಗವನ್ನು ಬಳಸದವರೂ ಸಹ ಹೆಚ್ಚುವರಿ ದಟ್ಟಣೆಯನ್ನು ಅನುಭವಿಸುತ್ತಾರೆ. ಸುರಂಗದಿಂದ ನಿರ್ಗಮಿಸುವ ಮತ್ತು ಡೈರಿ ವೃತ್ತದ ಬಲಭಾಗ ಮತ್ತು ಅಶೋಕ ಪಿಲ್ಲರ್ ಕಡೆಗೆ ಯು-ತಿರುವುಗಳು ಸೇರಿದಂತೆ ಎಲ್ಲಾ ದಿಕ್ಕುಗಳಲ್ಲಿ ವಾಹನಗಳು ಸಂಚರಿಸುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಿದೆ.

ನೀರು ಹರಿಯುವ ಮಾರ್ಗಕ್ಕೆ ಅಡ್ಡಿ

ಸುರಂಗ ರಸ್ತೆ ಮಾರ್ಗದ ನ್ಯೂನತೆಗಳ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಪರಿಸರ ಕಾರ್ಯಕರ್ತ, ‘ಸಿಟಿಜನ್ಸ್ ಫಾರ್ ಸಿಟಿಜನ್ಸ್’ನ ರಾಜಕುಮಾರ್ ದುಗರ್, 40 ಎಕರೆಗಳಷ್ಟು ವಿಸ್ತಾರವಾಗಿರುವ ಲಾಲ್‌ಬಾಗ್ ಕೆರೆ, ಮಳೆನೀರಿನ ಸಂಗ್ರಹಣಾ ಕೇಂದ್ರ ಮತ್ತು ಜೀವವೈವಿಧ್ಯದ ತಾಣವಾಗಿದೆ. ಅಲ್ಲದೆ, ಮೀನು, ಉಭಯಚರಗಳು, ಸರೀಸೃಪಗಳು ಮತ್ತು ವಲಸೆ ಹಕ್ಕಿಗಳಿಗೆ ನೆಲೆಯಾಗಿದೆ. ಅವುಗಳಿಗೆ ಧಕ್ಕೆಯಾಗಲಿದೆ. ಈ ಸುರಂಗ ಮಾರ್ಗವು ಕೆರೆಗೆ ನೀರು ಹರಿಯುವ ಮಾರ್ಗಗಳನ್ನು ಅಡ್ಡಿಪಡಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸುರಂಗ ಕೊರೆಯಲು 5 ಜಾಗ ಗುರುತು

ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಸುರಂಗ ಮಾರ್ಗವು ಸುಮಾರು 16.74 ಕಿ.ಮೀ. ಉದ್ದವಿದೆ. ಬೆಂಗಳೂರಿನ ಕೆಲವು ಪ್ರಮುಖ ಪ್ರದೇಶಗಳ ಭೂ ಭಾಗಗಳ ಕೆಳಗೆ ಈ ಸುರಂಗ ಮಾರ್ಗ ಹಾದು ಹೋಗಲಿದೆ. ಅದಕ್ಕಾಗಿ ಐದು ಜಾಗಗಳನ್ನು ಗುರುತಿಸಲಾಗಿದೆ. ಟನಲ್ ಬೋರಿಂಗ್ ಮಷಿನ್ ಆ ಜಾಗಗಳಲ್ಲಿ ಕೊರೆಯುವಿಕೆಗೆ ಪ್ರತಿ ಜಾಗದಲ್ಲೂ ಸುಮಾರು 6.5 ಎಕರೆ ಭೂಮಿ ಅಗತ್ಯವಿದೆ. 100 ಅಡಿ ಆಳದ 'ಶಾಫ್ಟ್‌ಗಳನ್ನು' ಅಗೆಯಲಾಗುತ್ತದೆ. ಲಾಲ್‌ಬಾಗ್‌ ಸಿದ್ದಾಪುರ ಪ್ರವೇಶದ್ವಾರದ ಬಳಿ ಸುರಂಗ ಅಗೆಯಲು ಜಾಗ ಗುರುತಿಸಲಾಗಿದೆ.

ಮೇಖ್ರಿ ವೃತ್ತದ ಬಳಿ ಅರಮನೆ ಮೈದಾನದಲ್ಲಿ ಸುರಂಗ ರಸ್ತೆಗೆ ಜಾಗ ಗುರುತಿಸಲಾಗಿದೆ. ಇದಲ್ಲದೇ, ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ, ಲಾಲ್‌ಬಾಗ್‌, ರೇಸ್‌ಕೋರ್ಸ್ ಬಳಿ ಅಗೆಯಲಾಗುತ್ತದೆ. ಸುರಂಗ ಮಾರ್ಗ ಹಾದು ಹೋಗುವ ಮೂರು ಕಡೆ ಪ್ರವೇಶ, ನಿರ್ಗಮನ ದ್ವಾರ ನಿರ್ಮಾಣಕ್ಕೆ ಒಟ್ಟು 45 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಲಭ್ಯವಿರುವ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಬಹುಮಹಡಿ ವಾಹನ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಲಾಗಿದೆ.

ಸುರಂಗ ಯೋಜನೆಯಲ್ಲಿ ನ್ಯೂನತೆಗಳು ಇರುವುದರ ಜತೆಗೆ ಆಕ್ರೋಶಗಳು ವ್ಯಕ್ತವಾದರೂ ಸಹಿತ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ತಜ್ಞರು ಸಹ ಈ ಯೋಜನೆಯಿಂದ ಅಂತರ್ಜಲಕ್ಕೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

Read More
Next Story