ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಬಾಲಕಿ ಸೇರಿ ನಾಲ್ವರು ಅಯ್ಯಪ್ಪ ಭಕ್ತರ ದುರ್ಮರಣ!
x
ತುಮಕೂರಿನಲ್ಲಿ ಸಂಭವಿಸಿದ ಅಪಘಾತ

ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಬಾಲಕಿ ಸೇರಿ ನಾಲ್ವರು ಅಯ್ಯಪ್ಪ ಭಕ್ತರ ದುರ್ಮರಣ!

ತುಮಕೂರಿನ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾದ ಪರಿಣಾಮ ಬಾಲಕಿ ಸೇರಿದಂತೆ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ರಾಜ್ಯದಲ್ಲಿ ಬೆಳ್ಳಂಬೆಳ್ಳಗೆಯೇ ಘೋರ ದುರಂತವೊಂದು ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಅಯ್ಯಪ್ಪ ಮಾಲಾಧಾರಿಗಳು ಸ್ಥಳದಲ್ಲೇ ಕೊಲೆಯುಸಿರೆಳೆದಿದ್ದಾರೆ ತುಮಕೂರು ಜಿಲ್ಲೆಯ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48ರ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಈ ದುರಂತ ಸಂಭವಿಸಿದೆ.

ಘಟನೆಯ ವಿವರ

ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಕ್ತರಿದ್ದ ಕ್ರೂಸರ್ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕ್ರೂಸರ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಮೃತಪಟ್ಟವರಲ್ಲಿ ಒಬ್ಬ ಬಾಲಕಿ ಹಾಗೂ ಮೂವರು ಪುರುಷರು ಸೇರಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಮೃತರ ಹೆಸರು ಮತ್ತು ವಿಳಾಸ ತಿಳಿದುಬಂದಿಲ್ಲ, ಪೊಲೀಸರು ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಪಘಾತದಲ್ಲಿ ಕ್ರೂಸರ್‌ನಲ್ಲಿದ್ದ ಇತರ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿ ಅಥವಾ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಈ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಪೊಲೀಸರ ಭೇಟಿ

ಘಟನಾ ಸ್ಥಳಕ್ಕೆ ಕೋರಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ಮೂಲಕ ನಜ್ಜುಗುಜ್ಜಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More
Next Story