
ವೇಗವಾಗಿ ಬಂದು ಮುಂದಿನ ಬಸ್‌ಗೆ ಗುದ್ದಿದ ಸ್ಲೀಪರ್ ಬಸ್: ನುಜ್ಜುಗುಜ್ಜಾದ ಮುಂಭಾಗ
ಚಂದಾಪುರ ಮೇಲ್ಸೇತುವೆ ಮೇಲೆ ಭೀಕರ ಅಪಘಾತ; ಪ್ರಯಾಣಿಕರು ಪಾರು
ತಮಿಳುನಾಡು ಕಡೆಗೆ ವೇಗವಾಗಿ ಚಲಿಸುತ್ತಿದ್ದ ಸ್ಲೀಪರ್ ಬಸ್, ಮುಂದಿದ್ದ ಮತ್ತೊಂದು ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗ ನುಜ್ಜುಗುಜ್ಜಾಗಿದೆ.
ಬೆಂಗಳೂರು ಹೊರವಲಯದ ಹೊಸೂರು ರಸ್ತೆಯ ಚಂದಾಪುರ ಫ್ಲೈಓವರ್ ಮೇಲೆ ಬುಧವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ತಮಿಳುನಾಡು ಕಡೆಗೆ ಪ್ರಯಾಣಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್, ಮತ್ತೊಂದು ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಅಪಘಾತದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿಕ್ಕಿಯ ರಭಸಕ್ಕೆ ಸ್ಲೀಪರ್ ಬಸ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಸೂರ್ಯನಗರ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದು, ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚಾಲಕನ ಅಜಾಗರೂಕತೆ ಅಥವಾ ಬ್ರೇಕ್ ವೈಫಲ್ಯ ಅಪಘಾತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಾಗಿದೆ.
ಡಿ.24ರಂದು ಮಧ್ಯರಾತ್ರಿ 2 ರಿಂದ 3 ಗಂಟೆ ಸುಮಾರಿಗೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -48ರಲ್ಲಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀಬರ್ಡ್' ಸಂಸ್ಥೆಗೆ ಸೇರಿದ ಖಾಸಗಿ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿತ್ತು. ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗಿರಲಿಲ್ಲ. ಲಾರಿ ಚಾಲಕ ಸೇರಿ ಒಟ್ಟು 7 ಮಂದಿ ಸಜೀವ ದಹನಗೊಂಡಿದ್ದರು. 28ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ʼಸೀ ಬರ್ಡ್ʼ ಬಸ್ ದುರಂತ ನಡೆದು ಎರಡು ದಿನದ ನಂತರ ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಇದೇ ಸಂಸ್ಥೆಯ ಬಸ್ ಅನ್ನು ಉಪ್ಪಾರಪೇಟೆ ಸಂಚಾರಿ ಪೊಲೀಸರು ತಪಾಸಣೆ ನಡೆಸಿದಾಗ ಚಾಲಕ ದಿವಾಕರ್ ಕುಡಿದು ವಾಹನ ಚಾಲನೆ ಮಾಡುತ್ತಿದ್ದದು ಬೆಳಕಿಗೆ ಬಂದಿತ್ತು. ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದಾದ್ಯಂತ ನಡೆಸಿದ 'ಡ್ರಿಂಕ್ ಅಂಡ್ ಡ್ರೈವ್' ತಪಾಸಣೆ ವೇಳೆ ಇದು ಪತ್ತೆಯಾಗಿತ್ತು.

