Two journalists from The Federal Karnataka win prestigious awards
x

ನವೀನ್ ಅಮ್ಮೆಂಬಳ (ಎಡ) ಅವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಮತ್ತು ಪ್ರಭು ಸ್ವಾಮಿ ನಟೇಕರ್ ಅವರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದ ಫೆಡರಲ್ ಕರ್ನಾಟಕದ ಇಬ್ಬರು ಪತ್ರಕರ್ತರಿಗೆ ಪ್ರತಿಷ್ಠಿತ ಪ್ರಶಸ್ತಿಗಳ ಗರಿ

ನವೀನ್ ಅಮ್ಮೆಂಬಳ ಮತ್ತು ಪ್ರಭು ಸ್ವಾಮಿ ನಾಟೇಕರ್ ಅವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಗೌರವಿಸಲ್ಪಟ್ಟಿದ್ದಾರೆ.


Click the Play button to hear this message in audio format

ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಯಾದ 'ದ ಫೆಡರಲ್' (The Federal), ತನ್ನ ನಿಷ್ಪಕ್ಷಪಾತ ಪತ್ರಿಕೋದ್ಯಮ ಮತ್ತು ಆಳವಾದ ವಿಶ್ಲೇಷಣೆಗಳಿಗೆ ಹೆಸರುವಾಸಿಯಾಗಿದೆ. ಈ ಸಂಪಾದಕೀಯ ಗುಣಮಟ್ಟಕ್ಕೆ ಸಾಕ್ಷಿಯೆಂಬಂತೆ, ನಮ್ಮ ಇಬ್ಬರು ಪತ್ರಕರ್ತರು ವೃತ್ತಿಜೀವನದಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಕರ್ನಾಟಕದ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ದ ಫೆಡರಲ್ ಸಂಸ್ಥೆಯ ಅಸೋಸಿಯೇಟ್ ಎಡಿಟರ್ ಹಾಗೂ 'ದ ಫೆಡರಲ್ ಕರ್ನಾಟಕ'ದ ಮುಖ್ಯಸ್ಥರಾದ ನವೀನ್ ಅಮ್ಮೆಂಬಳ ಅವರಿಗೆ 2025ರ ಸಾಲಿನ 'ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ. ಕಳೆದ 28 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಇವರ ವಿಶೇಷ ವರದಿಗಳು ಹಾಗೂ ಸಂಪಾದಕೀಯ ಕಾರ್ಯವೈಖರಿಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ವಿವಿಧ ವಿಭಾಗಗಳ ಗಣ್ಯ ಪತ್ರಕರ್ತರನ್ನು ಸನ್ಮಾನಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ದ ಫೆಡರಲ್ ಕರ್ನಾಟಕ'ದ ಹಿರಿಯ ವರದಿಗಾರರಾದ ಪ್ರಭು ಸ್ವಾಮಿ ನಟೇಕರ್ ಅವರು 2025ರ ಸಾಲಿನ 'ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ಸುಮಾರು 18 ವರ್ಷಗಳ ಕಾಲ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅವರ ಅಪಾರ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ. ಈ ಪ್ರಶಸ್ತಿಯು 50,000 ರೂಪಾಯಿ ನಗದು ಬಹುಮಾನ ಒಳಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಆಯೋಜಿಸಲಿರುವ ಸಮಾರಂಭದಲ್ಲಿ ಇದನ್ನು ಅಧಿಕೃತವಾಗಿ ಪ್ರದಾನ ಮಾಡಲಾಗುವುದು.

28 ವರ್ಷಗಳ ಸುದೀರ್ಘ ವೃತ್ತಿಜೀವನದ ಸಾಧನೆ

ನವೀನ್ ಅವರ ವೃತ್ತಿಜೀವನವು ಹಲವು ಪ್ರಮುಖ ವರದಿಗಳನ್ನು ಒಳಗೊಂಡಿದೆ. 2005ರ ಐಐಎಸ್ಸಿ ಮೇಲಿನ ಭಯೋತ್ಪಾದನಾ ದಾಳಿ, ಅದೇ ವರ್ಷದ ಐಟಿ ಉದ್ಯೋಗಿ ಪ್ರತಿಭಾ ಅವರ ಕೊಲೆ ಪ್ರಕರಣ ಹಾಗೂ 2009ರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಭಯೋತ್ಪಾದನಾ ಆರೋಪಿಯೊಬ್ಬ ಪಾಕಿಸ್ತಾನಕ್ಕೆ ಕರೆ ಮಾಡಿದ್ದ ಪ್ರಕರಣ - ಇವು ನವೀನ್ ಅವರು ವರದಿ ಮಾಡಿದ ಕೆಲವು ಪ್ರಮುಖ ಸುದ್ದಿಗಳು. ಇವೆಲ್ಲವೂ ರಾಷ್ಟ್ರಮಟ್ಟದಲ್ಲಿ ಭಾರೀ ಗಮನ ಸೆಳೆದಿದ್ದವು.

ದ ಫೆಡರಲ್ ಸಂಸ್ಥೆಗಾಗಿ ಅವರು ಸಿದ್ಧಪಡಿಸಿದ ವಿಶೇಷ ವರದಿಗಳಲ್ಲಿ ಕೋಲಾರದ ಟೊಮೆಟೊ ಬೆಳೆಗಾರರ ಸಂಕಷ್ಟದ ಕುರಿತಾದ ಸರಣಿ ಲೇಖನಗಳು, ಮುಡಾ (MUDA) ಹಗರಣ ಹಾಗೂ ದ್ವಿಭಾಷಾ ಸೂತ್ರದಂತಹ ಒಕ್ಕೂಟ ವ್ಯವಸ್ಥೆಯ ವಿಷಯಗಳು ಪ್ರಮುಖವಾಗಿವೆ. ಕರ್ನಾಟಕದಲ್ಲಿ ನಕ್ಸಲಿಸಂ ಕ್ಷೀಣಿಸುತ್ತಿರುವ ಕುರಿತಾದ ಅವರ ತನಿಖಾ ವರದಿಗಳ ಸರಣಿಯು ಸಾಕಷ್ಟು ಪ್ರಭಾವ ಬೀರಿದೆ.

ವಯನಾಡ್ ಭೂಕುಸಿತದ ನಂತರ ಅಲ್ಲಿಂದ ಸವಿಸ್ತಾರವಾಗಿ ವರದಿ ಮಾಡಿದ್ದ ನವೀನ್, ಅತ್ಯಂತ ಸೂಕ್ಷ್ಮ ಹಾಗೂ ಪ್ರಭಾವಶಾಲಿ ವಿಶೇಷ ಲೇಖನಗಳನ್ನು ನೀಡಿದ್ದರು. ಅದರಲ್ಲೂ ವಿಶೇಷವಾಗಿ, ಹಿಂದುಳಿದ ವರ್ಗಗಳ ಆಯೋಗದ ಭದ್ರತಾ ಕೊಠಡಿಯಿಂದ ಮೂಲ ಜಾತಿ ಗಣತಿ ದಾಖಲೆಗಳು ನಾಪತ್ತೆಯಾಗಿರುವ ಕುರಿತಾದ ಇವರ ತನಿಖಾ ವರದಿಯು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡಿದ್ದಲ್ಲದೆ, ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು."

ತೀಕ್ಷ್ಣ ವರದಿಗಾರಿಕೆ

ಪ್ರಭು ಸ್ವಾಮಿ ಅವರು ಲೋಕಾಯುಕ್ತ, ಅಪರಾಧ ಮತ್ತು ರಾಜಕೀಯ ಕ್ಷೇತ್ರಗಳ ಕುರಿತಾದ ತಮ್ಮ ತೀಕ್ಷ್ಣ ವರದಿಗಾರಿಕೆಗೆ ಹೆಸರುವಾಸಿಯಾಗಿದ್ದಾರೆ. 'ದ ಫೆಡರಲ್' ಸಂಸ್ಥೆಗಾಗಿ ಅವರು ಧರ್ಮಸ್ಥಳದ ಸಾಮೂಹಿಕ ಸಮಾಧಿ ಪ್ರಕರಣಗಳ ಕುರಿತು ಪ್ರಭಾವಶಾಲಿ ವರದಿಗಳನ್ನು ಸಿದ್ಧಪಡಿಸಿದ್ದರು. ಈ ಮೂಲಕ ಆ ಕ್ಷೇತ್ರಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳ ಬೆನ್ನಲ್ಲೇ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ಸ್ಥಳೀಯರ ಮತ್ತು ಸಾರ್ವಜನಿಕರ ಕಾಳಜಿಯನ್ನು ಅವರು ಬೆಳಕಿಗೆ ತಂದಿದ್ದರು."

ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಇತ್ತೀಚಿನ ಬಳ್ಳಾರಿಯ ಬ್ಯಾನರ್ ಗಲಾಟೆಯಂತಹ ಸಾಮಾಜಿಕ ವಿಷಯಗಳ ಕುರಿತೂ ಅವರು ವರದಿ ಮಾಡಿದ್ದಾರೆ. ಇದಲ್ಲದೆ, 'ದ ಫೆಡರಲ್ ಕರ್ನಾಟಕ'ಕ್ಕಾಗಿ ಅಪರಾಧ, ಆಡಳಿತ ಮತ್ತು ಸಾಮಾಜಿಕ-ರಾಜಕೀಯ ವಿಷಯಗಳ ಕುರಿತು ಹಲವಾರು ವಿಶೇಷ ಮತ್ತು ತನಿಖಾ ವರದಿಗಳನ್ನು ಸಿದ್ಧಪಡಿಸಿದ್ದಾರೆ.

ರಾಜ್ಯ ಕೇಂದ್ರಿತ ಆವೃತ್ತಿಗಳು

"2024ರ ಫೆಬ್ರವರಿಯಲ್ಲಿ ಪ್ರಾರಂಭವಾದ 'ದ ಫೆಡರಲ್ ಕರ್ನಾಟಕ' ಕನ್ನಡ ಭಾಷೆಯ ವೆಬ್‌ಸೈಟ್ ಆಗಿದ್ದು, ಸುದ್ದಿಗಳು, ವಿಶೇಷ ಲೇಖನಗಳು ಮತ್ತು ಅಭಿಪ್ರಾಯ ಬರಹಗಳನ್ನು ನೀಡುತ್ತಿದೆ. ಆರಂಭವಾದ ಒಂದು ವರ್ಷದೊಳಗೇ 'ದ ಫೆಡರಲ್ ಕರ್ನಾಟಕ'ದ ಯೂಟ್ಯೂಬ್ ಚಾನಲ್ 62,000ಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹಾಗೂ 2.6 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ.

ದ ಫೆಡರಲ್ ಸಂಸ್ಥೆಯು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗಾಗಿ ತೆಲುಗು ಭಾಷೆಯ ಆವೃತ್ತಿಗಳನ್ನು ಹಾಗೂ ಹಿಂದಿ ಭಾಷೆಯಲ್ಲಿ 'ದ ಫೆಡರಲ್ ದೇಶ್' ಆವೃತ್ತಿಯನ್ನು ಹೊಂದಿದೆ.

Read More
Next Story