ಜೆಡಿಎಸ್ ಚಿಹ್ನೆ ಬದಲಾವಣೆ: ತೆನೆ ಹೊತ್ತ ಮಹಿಳೆಯ ಜೊತೆ ಮರಳಿ ಬರಲಿದೆಯೇ ಚಕ್ರ?
x

ಜೆಡಿಎಸ್ ಚಿಹ್ನೆ ಬದಲಾವಣೆ: ತೆನೆ ಹೊತ್ತ ಮಹಿಳೆಯ ಜೊತೆ ಮರಳಿ ಬರಲಿದೆಯೇ ಚಕ್ರ?

2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ದೇವೇಗೌಡರು ಕೈಗೊಂಡಿರುವ ಈ ಐತಿಹಾಸಿಕ ನಿರ್ಧಾರದ ಹಿಂದಿನ ಜ್ಯೋತಿಷ್ಯ ಮತ್ತು ರಾಜಕೀಯ ಲೆಕ್ಕಾಚಾರಗಳು ಇವೆ.


Click the Play button to hear this message in audio format

ರಾಜ್ಯದ ಪ್ರಾದೇಶಿಕ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಾತ್ಯತೀತ ಜನತಾದಳ (ಜೆಡಿಎಸ್) ಈಗ ಅಸ್ತಿತ್ವ ಹಾಗೂ ಪುನಶ್ಚೇತನಕ್ಕಾಗಿ ಹವಣಿಸುತ್ತಿದೆ. ಎನ್​​ಡಿಎ ಸೇರಿಕೊಂಡಿರುವ ನಡುವೆಯೂ ತನ್ನ 'ಚುನಾವಣಾ ಚಿಹ್ನೆ'ಯಲ್ಲಿ ಬದಲಾವಣೆ ತರಲು ನಿರ್ಧರಿಸಿರುವುದು ಕುತೂಹಲ ಕೆರಳಿಸಿದೆ. ಸದ್ಯ ಇರುವ 'ತೆನೆ ಹೊತ್ತ ಮಹಿಳೆ' ಚಿಹ್ನೆಯೊಂದಿಗೆ ಹಳೆಯ 'ಚಕ್ರ'ದ ಗುರುತನ್ನು ಮರುಸೇರ್ಪಡೆಗೊಳಿಸುವ ಮೂಲಕ 2026ರ ವೇಳೆಗೆ ಹೊಸ ರೂಪದೊಂದಿಗೆ ಜನರ ಮುಂದೆ ಬರಲು ಜೆಡಿಎಸ್ ಸಜ್ಜಾಗುತ್ತಿದೆ. ಇದರ ಹಿಂದೆ ದಶಕಗಳ ರಾಜಕೀಯ ಇತಿಹಾಸ, ಭಾವನಾತ್ಮಕ ನಂಬಿಕೆ ಮತ್ತು ಮುಂಬರುವ 2028ರ ವಿಧಾನಸಭಾ ಚುನಾವಣೆಯ ಗೆಲುವಿನ ತಂತ್ರ ಅಡಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಸಲಹೆಯಂತೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಕ್ಷದ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಲು ಚಿಹ್ನೆಯಲ್ಲಿ ಮಾರ್ಪಾಡು ಮಾಡುವುದು ಅನಿವಾರ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಲು ಸಿದ್ಧತೆ ನಡೆಸಲಾಗಿದ್ದು, ಅನುಮತಿ ದೊರೆತ ತಕ್ಷಣ ಹೊಸ ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಪಕ್ಷ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಭಾವನಾತ್ಮಕ ಹಾಗೂ ಜ್ಯೋತಿಷ್ಯದ ಲೆಕ್ಕಾಚಾರ?

ಜೆಡಿಎಸ್ ನಾಯಕರ ಪಾಲಿಗೆ ರಾಜಕೀಯ ಎಂಬುದು ಕೇವಲ ಅಂಕಿ-ಅಂಶಗಳ ಆಟವಲ್ಲ, ಅದರಲ್ಲಿ ಭಾವನೆ ಮತ್ತು ನಂಬಿಕೆಗಳಿಗೂ ಹೆಚ್ಚಿನ ಸ್ಥಾನವಿದೆ. ʼತೆನೆ ಹೊತ್ತ ಮಹಿಳೆʼಯ ಹಿಂದೆ ʼಚಕ್ರʼವನ್ನು ಸೇರಿಸುವುದರಿಂದ ಆ ಚಿತ್ರಕ್ಕೆ ಒಂದು ಚಲನಶೀಲತೆ ಬರುತ್ತದೆ ಎಂಬುದು ನಾಯಕರ ನಂಬಿಕೆ. ಚಕ್ರವು ಪ್ರಗತಿ ಮತ್ತು ಕಾಲಚಕ್ರದ ಸಂಕೇತವಾಗಿದೆ. ಪಕ್ಷದ ಚಿಹ್ನೆಗೆ ಚಕ್ರ ಸ್ಪರ್ಶ ನೀಡುವುದರಿಂದ ಪಕ್ಷಕ್ಕೆ ಸಕಾರಾತ್ಮಕ ಶಕ್ತಿ ಲಭಿಸುತ್ತದೆ ಎಂಬ ಬಲವಾದ ನಂಬಿಕೆ ಜೆಡಿಎಸ್ ವಲಯದಲ್ಲಿದೆ. ವೃತ್ತ ಅಥವಾ ಚಕ್ರವು ಪೂರ್ಣತೆಯನ್ನು ಸೂಚಿಸುತ್ತದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಪಕ್ಷಕ್ಕೆ ಈ ಬದಲಾವಣೆ ಅದೃಷ್ಟ ತರಬಹುದು ಎಂಬ ಜ್ಯೋತಿಷ್ಯದ ಲೆಕ್ಕಾಚಾರಗಳೂ ಇದರ ಹಿಂದಿವೆ ಎಂದು ಹೇಳಲಾಗಿದೆ.

ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದೈವಬಲ ಮತ್ತು ಸಂಖ್ಯಾಶಾಸ್ತ್ರದ ಮೇಲೆ ಅಪಾರ ನಂಬಿಕೆಯಿದೆ. ಒಂದು ಪೂರ್ಣ ವೃತ್ತ ಅಥವಾ ಚಕ್ರವು ರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ ಎಂಬ ನಂಬಿಕೆ ಇದೆ. ರಾಜಕೀಯದಲ್ಲಿ ಏರಿಳಿತಗಳು ಸಹಜ. ಈಗ ಪಕ್ಷಕ್ಕೆ ಹಿನ್ನಡೆಯಾಗಿರುವ ಕಾಲದಲ್ಲಿ, ಹಳೆಯ ಚಿಹ್ನೆಯ ಭಾಗವನ್ನು ಮರಳಿ ತರುವುದು ಕಾಲಚಕ್ರವನ್ನು ತಮ್ಮತ್ತ ತಿರುಗಿಸುವ ಒಂದು ಸಾಂಕೇತಿಕ ಪ್ರಯತ್ನವಾಗಿದೆ ಎಂದು ಹೇಳಲಾಗಿದೆ.

ಜೆಡಿಎಸ್ ಪಾಲಿಗೆ ಚಕ್ರ ಎಂಬುದು ಅತ್ಯಂತ ಯಶಸ್ವಿ ಕಾಲಘಟ್ಟದ ನೆನಪು. ಅವಿಭಜಿತ ಜನತಾದಳದ ಕಾಲದಲ್ಲಿ ಚಕ್ರ ಗುರುತು ರಾಜ್ಯದಲ್ಲಿ ಅಭೂತಪೂರ್ವ ಗೆಲುವು ತಂದುಕೊಟ್ಟಿತ್ತು. ಈಗಿರುವ ತೆನೆ ಹೊತ್ತ ಮಹಿಳೆ ಕೃಷಿ ಸಂಸ್ಕೃತಿ ಮತ್ತು ರೈತಪರ ಕಾಳಜಿಯನ್ನು ಪ್ರತಿನಿಧಿಸುತ್ತದೆ. ಈ ಎರಡನ್ನೂ ಸೇರಿಸುವ ಮೂಲಕ ಪಕ್ಷವು ಎರಡು ಸಂದೇಶಗಳನ್ನು ನೀಡಲು ಬಯಸಿದೆ. ತೆನೆ ಹೊತ್ತ ಮಹಿಳೆ ಸ್ಥಿರತೆಯ ಸಂಕೇತವಾದರೆ, ಚಕ್ರವು ನಿರಂತರ ಚಲನೆ ಮತ್ತು ಪ್ರಗತಿಯ ಸಂಕೇತವಾಗಿದೆ. ಪಕ್ಷದ ನಾಯಕರ ನಂಬಿಕೆಯಂತೆ, ತೆನೆಯ ಹಿಂದೆ ಚಕ್ರವನ್ನು ಸೇರಿಸುವುದರಿಂದ ಅದು ಚಲಿಸುವ ಮಹಿಳೆಯಂತೆ ಕಾಣುತ್ತದೆ. ಇದು ಪಕ್ಷದ ಸಂಘಟನೆಯಲ್ಲಿ ಹೊಸ ವೇಗವನ್ನು ತರುತ್ತದೆ ಎಂಬುದು ಭಾವನಾತ್ಮಕ ಲೆಕ್ಕಾಚಾರ ಎಂದು ದ ಫೆಡರಲ್‌ ಕರ್ನಾಟಕಕ್ಕೆ ಜೆಡಿಎಸ್‌ ನಾಯಕರೊಬ್ಬರು ತಿಳಿಸಿದ್ದಾರೆ.

ಇತಿಹಾಸದ ಮೆಲುಕು: ಚಕ್ರದಿಂದ ತೆನೆಯವರೆಗೆ

ಜೆಡಿಎಸ್ ಪಕ್ಷದ ಚಿಹ್ನೆಯ ಪಯಣ ರೋಚಕವಾಗಿದೆ. ಈ ಹಿಂದೆ ಜನತಾದಳ ಅಖಂಡವಾಗಿದ್ದಾಗ 'ಚಕ್ರ'ವೇ ಅದರ ಪ್ರಬಲ ಗುರುತಾಗಿತ್ತು. ಆ ಕಾಲದಲ್ಲಿ ಜನತಾದಳ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಹಿಡಿದಿತ್ತು. ನಂತರದ ದಿನಗಳಲ್ಲಿ ಪಕ್ಷವು 'ಟ್ರಾಕ್ಟರ್' ಚಿಹ್ನೆಯನ್ನು ಹೊಂದಿತ್ತು. ಆದರೆ, ಚುನಾವಣಾ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಗಳು ಟ್ರಾಕ್ಟರ್‌ಗೆ ಹೋಲುವಂತಹ ಚಿಹ್ನೆಗಳನ್ನು ಪಡೆದಿದ್ದರಿಂದ ಗ್ರಾಮೀಣ ಮತದಾರರಲ್ಲಿ ಗೊಂದಲ ಉಂಟಾಯಿತು. ಇದರಿಂದಾಗಿ ಜೆಡಿಎಸ್ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳ ಅಂತರದಿಂದ ಸೋಲಬೇಕಾಯಿತು. ಈ ಗೊಂದಲ ನಿವಾರಿಸಲು ಮತ್ತು ರೈತಪರ ಎಂಬ ಸಂದೇಶ ಸಾರಲು 'ತೆನೆ ಹೊತ್ತ ಮಹಿಳೆ'ಯನ್ನು ಚಿಹ್ನೆಯಾಗಿ ಅಳವಡಿಸಿಕೊಳ್ಳಲಾಯಿತು. ಈಗ ಅದೇ ಚಿಹ್ನೆಗೆ ಹಳೆಯ 'ಚಕ್ರ'ದ ಬಲ ತುಂಬಲು ಪಕ್ಷ ಮುಂದಾಗಿದೆ.

ಹಿಂದೆ ಜೆಡಿಎಸ್ ಟ್ರಾಕ್ಟರ್ ಓಡಿಸುವ ರೈತನ ಚಿಹ್ನೆಯನ್ನು ಹೊಂದಿತ್ತು. ಆದರೆ, ಚುನಾವಣಾ ಕಣದಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಟ್ರಾಕ್ಟರ್ ಅನ್ನು ಹೋಲುವಂತಹ ಚಿಹ್ನೆಗಳನ್ನು ಹಂಚಿಕೆ ಮಾಡಿದಾಗ ಮತದಾರರು ಗೊಂದಲಕ್ಕೊಳಗಾದರು. ಈ ಸಣ್ಣ ಗೊಂದಲದಿಂದಾಗಿ ಜೆಡಿಎಸ್ ಹಲವು ಕ್ಷೇತ್ರಗಳಲ್ಲಿ ಕೇವಲ ಸಾವಿರಾರು ಮತಗಳ ಅಂತರದಿಂದ ಸೋಲನ್ನು ಅನುಭವಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಮತದಾರರಿಗೆ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವ ತೆನೆ ಹೊತ್ತ ಮಹಿಳೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಈಗ ಮತ್ತೆ ಚಕ್ರವನ್ನು ಸೇರಿಸುವ ಮೂಲಕ ಆ ಚಿಹ್ನೆಗೆ ಮತ್ತಷ್ಟು ಸ್ಪಷ್ಟತೆ ಮತ್ತು ಗಾಂಭೀರ್ಯ ನೀಡಲು ಹೊರಟಿದೆ.

2028ರ ವಿಧಾನಸಭಾ ಚುನಾವಣೆಯೇ ಗುರಿ

ಜೆಡಿಎಸ್ ಈ ಬದಲಾವಣೆಯನ್ನು 2026ರಲ್ಲೇ ಜಾರಿಗೆ ತರಲು ಹವಣಿಸುತ್ತಿರುವುದಕ್ಕೆ ಸ್ಪಷ್ಟ ಕಾರಣವಿದೆ. ಜೆಡಿಎಸ್ ಈ ಬದಲಾವಣೆಯನ್ನು ತರಾತುರಿಯಲ್ಲಿ ಮಾಡುತ್ತಿಲ್ಲ. 2026ರಲ್ಲಿ ಹೊಸ ಚಿಹ್ನೆ ಲಭ್ಯವಾದರೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಈ ಹೊಸ ಚಿಹ್ನೆಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸಬಹುದು. 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಹೊಸ ಚಿಹ್ನೆಯನ್ನು ಜನರ ಮನಸ್ಸಿನಲ್ಲಿ ಅಚ್ಚೊತ್ತಿಸುವುದು ಇದರ ಮುಖ್ಯ ಉದ್ದೇಶ. ಜೆಡಿಎಸ್ ತನ್ನನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಿಕೊಳ್ಳಲು ಈ ಚಿಹ್ನೆ ಬದಲಾವಣೆ ಒಂದು ದೊಡ್ಡ ಅಸ್ತ್ರವಾಗಲಿದೆ. ಇದು ಪಕ್ಷದ ತಳಮಟ್ಟದ ಮತದಾರರಿಗೆ ಹೊಸ ಬದಲಾವಣೆಯ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಲಿದೆ.

ರಾಜಕೀಯ ಅಸ್ಮಿತೆ

ಇತ್ತೀಚಿನ ವರ್ಷದಲ್ಲಿ ಜೆಡಿಎಸ್‌ ತನ್ನ ಭದ್ರಕೋಟೆಯಾದ ಹಳೆ ಮೈಸೂರು ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಸದ್ಯ ಬಿಜೆಪಿ ಜತೆ ಮೈತ್ರಿಯಲ್ಲಿದ್ದರೂ, ತನ್ನ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಅನಿವಾರ್ಯವಾಗಿದೆ. ಹಳೆಯ ಚಕ್ರ ಮತ್ತು ಹೊಸ ತೆನೆ ಹೊತ್ತ ಮಹಿಳೆಯ ಸಮಾಗಮವು ಹಿರಿಯ ಮತದಾರರಿಗೆ ಜನತಾದಳದ ಸುವರ್ಣಯುಗವನ್ನು ನೆನೆಪಿಸಿದರೆ, ಯುವ ಮತದಾರರಿಗೆ ನವೀಕರಿಸಿದ ಆವೃತ್ತಿಯಾಗಲಿ ಕಾಣಲಿದೆ. ಇದು ಒಂದು ರೀತಿಯಲ್ಲಿ 'ರೀ-ಬ್ರ್ಯಾಂಡಿಂಗ್' ತಂತ್ರವಾಗಿದೆ ಎಂದು ಹೇಳಲಾಗಿದೆ.

ನಿಯಮಗಳೇನು?

ಯಾವುದೇ ಪಕ್ಷವು ತನ್ನ ಚಿಹ್ನೆಯಲ್ಲಿ ಬದಲಾವಣೆ ತರಬೇಕಾದರೆ ಕೇಂದ್ರ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಬೇರೆ ಯಾವುದೇ ನೋಂದಾಯಿತ ಪಕ್ಷದ ಚಿಹ್ನೆಯನ್ನು ಇದು ಹೋಲಬಾರದು. ಗ್ರಾಮೀಣ ಭಾಗದ ಮತದಾರರು ದಶಕಗಳಿಂದ ಕೇವಲ 'ತೆನೆ ಹೊತ್ತ ಮಹಿಳೆ'ಯನ್ನು ನೋಡಿ ಅಭ್ಯಾಸವಾಗಿದ್ದಾರೆ. ಚಿಹ್ನೆಯಲ್ಲಿ ಸಣ್ಣ ಬದಲಾವಣೆಯಾದರೂ ಅದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವುದು ದೊಡ್ಡ ಸವಾಲಾಗಲಿದೆ. ಚಿಹ್ನೆಯ ಬದಲಾವಣೆಯನ್ನೇ ಅಸ್ತ್ರವಾಗಿಟ್ಟುಕೊಂಡು ವಿರೋಧ ಪಕ್ಷಗಳು ಜೆಡಿಎಸ್ ಸೋಲಿನ ಭಯದಿಂದ ಇಂತಹ ನಿರ್ಧಾರ ಮಾಡುತ್ತಿದೆ ಎಂದು ಟೀಕಿಸುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.

Read More
Next Story