
ಜೆಡಿಎಸ್‌ನಿಂದ ಜಿ.ಟಿ.ದೇವೇಗೌಡ ದೂರ: ದಳಪತಿಗಳಿಂದ ಕೋರ್ ಕಮಿಟಿಗೆ ನಾಯಕರ ಹುಡುಕಾಟ
ವರ್ಷ ಕಳೆದರೂ ಕೋರ್ ಕಮಿಟಿ ಸಭೆ ನಡೆಯದಿರುವುದು ಜೆಡಿಎಸ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೋರ್ ಕಮಿಟಿ ಅಧ್ಯಕ್ಷ ಸ್ತಾನಕ್ಕೆ ಪರ್ಯಾಯ ನಾಯಕ ನೇಮಿಸಲು ವರಿಷ್ಠರು ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್‌ನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿರುವಂತೆ ಕಂಡರೂ ಅಂತರ್ಯುದ್ಧ ನಡೆಯುತ್ತಿದ್ದು, ವರ್ಷ ಕಳೆದರೂ ಕೋರ್ ಕಮಿಟಿ ಸಭೆ ನಡೆಯದಿರುವುದು ಪಕ್ಷದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸಭೆಗಳನ್ನು ನಡೆಸದ ಕಾರಣ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಸುತ್ತಿರುವ ಕಾರಣ, ಆ ಸ್ಥಾನಕ್ಕೆ ಪರ್ಯಾಯ ನಾಯಕರನ್ನು ನೇಮಿಸಲು ಪಕ್ಷದ ವರಿಷ್ಠರು ಹುಡುಕಾಟ ನಡೆಸಿದ್ದಾರೆ.
ದಳಪತಿಗಳೊಂದಿಗೆ ಮುನಿಸಿಕೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಮತ್ತು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ನ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದು ಪಕ್ಷದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಸುಮಾರು ಒಂದು ವರ್ಷವಾದರೂ ಪಕ್ಷವನ್ನು ಸಕ್ರಿಯವಾಗಿಟ್ಟುಕೊಳ್ಳಲುವ ಸಂಬಂಧ ಕೋರ್ ಕಮಿಟಿ ಸಭೆ ಕರೆಯದೆ ಚರ್ಚೆಗಳನ್ನು ನಡೆಸಿಲ್ಲ. ಸಂಘಟನಾ ಚಟುವಟಿಕೆಯಿಂದ ದೂರ ಉಳಿದಿರುವುದು ಪಕ್ಷದ ಸಂಘಟನೆಗಾಗಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳಿಗೆ ಹಿನ್ನಡೆ ಉಂಟಾಗಿದೆ.
ಜಿ.ಟಿ.ದೇವೇಗೌಡ ಪಕ್ಷದ ಚಟುಟಿಕೆಗಳಿಂದ ದೂರ ಸರಿದಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮತ್ತೊಬ್ಬ ನಾಯಕನನ್ನು ತಂದು ಕೂರಿಸಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ. ಪಕ್ಷದ ಮುಖಂಡರಾದ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ಮಲ್ಲೇಶ್ ಬಾಬು, ಅರಕಲಗೂಡು ಮಂಜು ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಬಂಡೆಪ್ಪ ಕಾಶೆಂಪೂರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಅವರಿಗೆ ಪಕ್ಷದಲ್ಲಿ ಹಿರಿಯ ಮುಖಂಡರಾಗಿದ್ದು, ಇತರರಿಗಿಂತ ಪಕ್ಷದ ಸಂಘಟನೆಯ ಅನುಭವ ಇದೆ. ಹೀಗಾಗಿ ಅವರಿಗೆ ಕೋರ್ ಕಮಿಟಿ ಅಧ್ಯಕ್ಷ ಸ್ಥಾನ ನೀಡುವ ಸಂಬಂಧ ಪಕ್ಷದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ, ಈ ಬಗ್ಗೆ ಅಂತಿಮ ತೀರ್ಮಾನಗೊಂಡಿಲ್ಲ.
ಶೀಘ್ರದಲ್ಲಿಯೇ ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನದೇ ಆದ ಪ್ರಾಬಲ್ಯ ಹೊಂದಿದೆ. ಜಿ.ಟಿ.ದೇವೇಗೌಡ ಅವರು ಸಹ ಹಳೇ ಮೈಸೂರು ಭಾಗದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಆದರೆ ಪಕ್ಷ ಸಂಘಟನೆಯ ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ತೀರ್ಮಾನಗಳ ವಿರುದ್ಧ ಹಲವು ಬಾರಿ ಅಸಹಮತಿ ವ್ಯಕ್ತಪಡಿಸಿದ್ದರು. ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿ ನಿಯಮಿತವಾಗಿ ಸಭೆಗಳನ್ನು ಕರೆಯುವುದು, ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವುದು, ಪಕ್ಷದ ಸಂಘಟನೆಯನ್ನು ಬಲವರ್ಧನೆಗೆ ಮಾರ್ಗದರ್ಶನ ನೀಡಬೇಕು. ಆದರೆ ಕಳೆದೊಂದು ವರ್ಷದಿಂದ ಯಾವುದೇ ಸಭೆ ನಡೆಸಿಲ್ಲ. ಪರಿಣಾಮ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿಯೂ ಪಕ್ಷ ಸಂಘಟನೆ ನಿಷ್ಕ್ರಿಯಗೊಂಡಿದೆ.
ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡ ಪಕ್ಷದ ಬಲವರ್ಧನೆಗೆ ಸಂಘಟಿಸುತ್ತಿದ್ದಾರೆ. ಆದರೆ, ಅಧಿಕೃತ ತೀರ್ಮಾನಗಳು ಕೋರ್ ಕಮಿಟಿಯಲ್ಲಿಯೇ ನಡೆಯಬೇಕು. ಇದಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.
ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿಗದ ಕಾರಣ ಬೇಸರ:
ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿಗದ ಕಾರಣಕ್ಕಾಗಿ ಜಿ.ಟಿ.ದೇವೇಗೌಡ ಪಕ್ಷದ ವರಿಷ್ಠರ ಮೇಲೆ ಮುನಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಸಚಿವರಾದರು. ಅವರಿಂದ ತೆರವಾದ ಸ್ಥಾನಕ್ಕೆ ಪಕ್ಷವು ಶಾಸಕ ಸಿ.ಬಿ. ಸುರೇಶ್ ಬಾಬು ಅವರನ್ನು ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿತು. ಈ ಬಗ್ಗೆ ಸದನದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಈ ಘಟನೆ ಬಳಿಕ ಜಿ.ಟಿ.ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ಮಾತ್ರವಲ್ಲದೇ, ಅಧಿವೇಶನಕ್ಕೂ ಬರುವುದು ಸಹ ಕಡಿಮೆ ಮಾಡಿದರು.
ಜಿ.ಟಿ. ದೇವೇಗೌಡ ಕೋರ್ ಕಮಿಟಿ ಅಧ್ಯಕ್ಷರಾಗಿದ್ದರಿಂದ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಸುರೇಶ್‌ಬಾಬು ಅವರಿಗೆ ನೀಡಲಾಯಿತು. ಜೆಡಿಎಸ್ ವರಿಷ್ಠರು ಜಾತಿ ಲೆಕ್ಕಾಚಾರದ ಮೇಲೆ ಸುರೇಶ್ ಬಾಬುಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯದವರಾಗಿದ್ದು, ಸದನದೊಳಗೆ ಮತ್ತು ಹೊರಗೆ ಅವರಿಗೆ ಪ್ರತಿರೋಧವೊಡ್ಡಲು ಅದೇ ಸಮುದಾಯದ ನಾಯಕನಿಗೆ ಮಣೆ ಹಾಕಲಾಯಿತು. ಜಿ.ಟಿ.ದೇವೇಗೌಡ ಒಕ್ಕಲಿಗ ಸಮುದಾಯರಾಗಿದ್ದರು.
ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಲು ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕುವ ಬದಲು ಕುರುಬ ಸಮುದಾಯಕ್ಕೆ ಆದ್ಯತೆ ನೀಡುವುದು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ತಂತ್ರಗಾರಿಕೆಯಾಗಿತ್ತು. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಆಪ್ತ ಸುರೇಶ್ ಬಾಬುಗೆ ಅವಕಾಶ ನೀಡಲಾಯಿತು.
ಶಾಸಕಾಂಗ ಪಕ್ಷ ನಾಯಕನಾಗಲು ದೇವೇಗೌಡರ ಕಣ್ಣಿತ್ತು...
ಕೋರ್ ಕಮಿಟಿ ಅಧ್ಯಕ್ಷ ಸ್ಥಾನಕ್ಕಿಂತ ಶಾಸಕಾಂಗ ಪಕ್ಷದ ನಾಯಕನ ಸ್ಥಾನದ ಮೇಲೆ ಜಿ.ಟಿ.ದೇವೇಗೌಡ ಕಣ್ಣಿಟ್ಟಿದ್ದರು. ಆ ಸ್ಥಾನ ಸಿಗದ ಕಾರಣಕ್ಕಾಗಿ ವರಿಷ್ಠರ ಮೇಲೆ ಮುನಿಸಿಕೊಂಡರು. ಜಿ.ಟಿ.ದೇವೇಗೌಡ ಅವರು ಕೋರ್ ಕಮಿಟಿ ಅಧ್ಯಕ್ಷ ಸ್ಥಾನ ತ್ಯಾಗ ಮಾಡಲು ಸಹ ಸಿದ್ದರಾಗಿದ್ದರು. ಆದರೆ, ಪಕ್ಷದ ವರಿಷ್ಠರ ರಾಜಕೀಯ ಲೆಕ್ಕಾಚಾರವೇ ಬೇರೆಯಾಗಿತ್ತು. ಈ ವೇಳೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿ.ಟಿ.ದೇವೇಗೌಡ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಪಕ್ಷದ ವರಿಷ್ಠರು ಸಮಾಧಾನ ಮಾಡುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ವರಿಷ್ಠರು ಸಹ ಜಿ.ಟಿ.ದೇವೇಗೌಡ ಅವರನ್ನು ದೂರ ಇಟ್ಟಿದುದ, ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಕೆಳಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಧ್ಯಕ್ಷ ಗಾದಿಗೆ ಹುಡಕಾಟ
ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ.ದೇವೇಗೌಡ ಅವರನ್ನು ಕೆಳಗಿಸುವ ಕಾರ್ಯಕ್ಕೆ ಮುಂದಾಗಿರುವ ಜೆಡಿಎಸ್ ವರಿಷ್ಠರು ಇದೀಗ ಆ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ಪಕ್ಷದಲ್ಲಿ ಗಂಭೀರವಾಗಿ ನಡೆದಿದೆ. ಈ ಸಂಬಂಧ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದರು. ಶೀಘ್ರದಲ್ಲಿಯೇ ನೇಮಕ ಮಾಡಿ ಪಕ್ಷದ ಚಟುವಟಿಕೆಗಳಿಗೆ ವೇಗ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪಕ್ಷದ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಅವರ ಹೆಸರು ಕೋರ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಬಲವಾಗಿ ಕೇಳಿಬರುತ್ತಿದೆ. ಆದರೆ, ಬಂಡೆಪ್ಪ ಕಾಶೆಂಪೂರ ಅವರು ಕುರುಬ ಸಮುದಾಯಕ್ಕೆ ಸೇರಿರುವುದರಿಂದ ಪಕ್ಷದಲ್ಲಿ ಮೀನಾಮೇಷ ಎಣಿಸಲಾಗುತ್ತಿದೆ. ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸಹ ಕುರುಬ ಸಮುದಾಯಕ್ಕೆ ಸೇರಿದ್ದು, ಕೋರ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೂ ಅದೇ ಸಮುದಾಯದವರನ್ನು ನಿಯೋಜನೆ ಮಾಡುವುದು ಸಮಂಜಸವಲ್ಲ ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ಬೇರೆ ಸಮುದಾಯದವರನ್ನು ನೇಮಕ ಮಾಡಲು ಹುಡುಕಾಟ ನಡೆದಿದೆ. ಮಲ್ಲೇಶ್ ಬಾಬು, ಸಾ.ರಾ.ಮಹೇಶ್, ಅರಕಲಗೂಡು ಮಂಜು ಅವರಿಗೆ ಕೋರ್‌ಕಮಿಟಿ ಅಧ್ಯಕ್ಷ ಸ್ಥಾನ ನೀಡುವ ಕುರಿತು ಚರ್ಚೆಗಳು ನಡೆದಿವೆ. ಆದರೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಮೂಲಗಳು ಹೇಳಿವೆ.
ಬಂಡೆಪ್ಪ ಕಾಶೆಂಪೂರ ಮೇಲೆ ಒಲವು
ಈ ನಡುವೆ, ಬಂಡೆಪ್ಪ ಕಾಶೆಂಪೂರ ನೇಮಕ ಮಾಡುವ ಬಗ್ಗೆ ಪಕ್ಷದಲ್ಲಿ ವರಿಷ್ಠರು ಸೇರಿದಂತೆ ಬಹಳಷ್ಟು ಮಂದಿಗೆ ಒಲವು ಇದೆ. ಆದರೆ, ಅವರು ಬೀದರ್ ಜಿಲ್ಲೆಯಾಗಿರುವುದರಿಂದ ಹಿಂದೇಟು ಹಾಕಲಾಗುತ್ತಿದೆ. ಪ್ರತಿ ಸಭೆಗೂ ಅಲ್ಲಿಂದ ಬರಬೇಕಾಗುತ್ತದೆ. ಕೆಲವು ಬಾರಿ ತಕ್ಷಣ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅಂತಹ ಸಮಯದಲ್ಲಿ ಅಷ್ಟು ದೂರದಿಂದ ಬೆಂಗಳೂರಿಗೆ ಬರುವುದು ಕಷ್ಟಕರವಾಗುತ್ತದೆ. ಹೀಗಾಗಿ ಬೆಂಗಳೂರು ಸುತ್ತಮುತ್ತಲ ನಾಯಕರಿಗೆ ಆದ್ಯತೆ ನೀಡುವ ಬಗ್ಗೆಯೂ ಪಕ್ಷದಲ್ಲಿ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.
ಜಿ.ಟಿ.ದೇವೇಗೌಡ ಫೋಟೋ ಇಲ್ಲ
ಮೈಸೂರು ಭಾಗದ ಜೆಡಿಎಸ್ ವೆಬ್ಸೈಟ್ನಿಂದ ಜಿ.ಟಿ.ದೇವೇಗೌಡರ ಹೆಸರನ್ನು ಹೊರಗಿಡಲಾಗಿದೆ. ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರಾಗಿದ್ದರೂ ಜಿಟಿಡಿ ಅವರ ಫೋಟೋ ಮತ್ತು ಹೆಸರನ್ನ ಪಕ್ಷದ ಎಲ್ಲಾ ಪೋಸ್ಟರ್ ನಿಂದಲೂ ತೆಗೆಯಲಾಗುತ್ತಿದೆ. ಜೆಡಿಎಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ದೇವೇಗೌಡರ ಹೆಸರೇ ಇಲ್ಲ. ಈ ವೆಬ್‌ಸೈಟ್‌ನಲ್ಲಿ ಜೆಡಿಎಸ್ಸ್ನನ ಎಲ್ಲಾ ಶಾಸಕರು ಮತ್ತು ಸಂಸದರ ಫೋಟೋಗಳು ಮತ್ತು ಹೆಸರುಗಳಿವೆ. https://jds.ind.in/ ಹೆಸರಿನಲ್ಲಿ ಪಕ್ಷ ಸಂಘಟನೆಯ ಅಧಿಕೃತ ವೆಬ್ಸೈಟ್ ರಚನೆ ಮಾಡಲಾಗಿದೆ. ಈ ವೆಬ್‌ಸೈಟ್‌ನಲ್ಲಿ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರ ಹೆಸರು ಹಾಗೂ ಕಚೇರಿ ವಿಳಾಸದ ಜತೆಗೆ ದೂರವಾಣಿ ಸಂಖ್ಯೆಯನ್ನು ಒಳಗೊಂಡ ಮಾಹಿತಿ ನೀಡಲಾಗಿದೆ. ವೆಬ್‌ಸೈಟ್‌ನಲ್ಲಿ ಜೆಡಿಎಸ್ ಹಿರಿಯ ಶಾಸಕರಾಗಿರುವ ಜಿ.ಟಿ.ದೇವೇಗೌಡರ ಕುರಿತ ಸಣ್ಣ ಮಾಹಿತಿಯೂ ಇಲ್ಲ. ಮೈಸೂರಿನ ಶಾಸಕ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವು ಅವರ ಸಂಪೂರ್ಣ ಮಾಹಿತಿ ಈ ವೆಬ್ಸೈಟ್ನಲ್ಲಿದೆ. ಈಗಾಗಲೇ ಮೈಸೂರು ಭಾಗದ ಜೆಡಿಎಸ್ ಮುಖಂಡರ ಜಾಹೀರಾತು ಫಲಕದಲ್ಲಿ ಜಿಟಿಡಿ ಅವರ ಫೋಟೋ ತೆಗೆಯಲಾಗಿದೆ ಎಂದು ಹೇಳಲಾಗಿದೆ.

