ಸಿಎಂ ನೇತೃತ್ವದಲ್ಲಿ ರಾಜ್ಯದ ಸಂಸದರ ಸಭೆ; ಒಣ ಪ್ರತಿಷ್ಠೆಗಾಗಿ ಬಿಜೆಪಿ ಗೈರು?
x

ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವರು

ಸಿಎಂ ನೇತೃತ್ವದಲ್ಲಿ ರಾಜ್ಯದ ಸಂಸದರ ಸಭೆ; ಒಣ ಪ್ರತಿಷ್ಠೆಗಾಗಿ ಬಿಜೆಪಿ ಗೈರು?

ಹಣಕಾಸು ಆಯೋಗ ಹಂಚಿಕೆ ಮಾಡಿದ ಅನುದಾನ, ಸಮರ್ಪಕ ಜಿಎಸ್‌ಟಿ ತೆರಿಗೆ ನೀಡುವಂತೆ ಪದೇ ಪದೇ ಒತ್ತಾಯಿಸಿದರೂ ಕೇಂದ್ರ ಸರ್ಕಾರ ಮಾತ್ರ ಸೊಪ್ಪು ಹಾಕುತ್ತಿಲ್ಲ.


ಅನುದಾನ ಹಂಚಿಕೆ, ತೆರಿಗೆ ಪಾಲು, ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳ ಅನುದಾನ ವಿಚಾರವು ಕಳೆದ ಹಲವು ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ಹಣಕಾಸು ಆಯೋಗ ನೀಡುವ ಅನುದಾನ, ಸಮರ್ಪಕ ಜಿಎಸ್‌ಟಿ ಪಾಲು ನೀಡುವಂತೆ ಕರ್ನಾಟಕದ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡುತ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಸಂಸದರು ಕೂಡ ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸದ ಪರಿಣಾಮ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳು ಹಳ್ಳ ಹಿಡಿಯುತ್ತಿವೆ.

ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳಿಂದ ಬಿಜೆಪಿ (17), ಜೆಡಿಎಸ್(2) ಹಾಗೂ ಕಾಂಗ್ರೆಸ್ಸಿನ 9 ಮಂದಿ ಸಂಸದರು ಆಯ್ಕೆಯಾಗಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಜೆಪಿ ಸಂಸದರು ತಮ್ಮದೇ ಸರ್ಕಾರದ ಮೇಲೆ ಒತ್ತಡ ಹಾಕಿ, ರಾಜ್ಯದ ಅಭಿವೃದ್ಧಿಗೆ ಅಗತ್ಯ ಅನುದಾನ ಕೊಡಿಸಲು ಸಿದ್ಧರಿಲ್ಲ. ಕಾಂಗ್ರೆಸ್ ಸರ್ಕಾರ ಅಂಕಿ ಅಂಶಗಳ ಸಮೇತ ಬಾಕಿ ಹಣದ ಲೆಕ್ಕವಿಟ್ಟರೆ ಅದನ್ನು ದಿಕ್ಕುತಪ್ಪಿಸುವ, ರಾಜಕೀಯವಾಗಿ ಟೀಕಿಸುವ ಪ್ರಯತ್ನಗಳಲ್ಲಿ ರಾಜ್ಯದ ಕೇಂದ್ರ ಸಚಿವರು, ಬಿಜೆಪಿ ಸಂಸದರು ನಿರತರಾಗಿದ್ದಾರೆ.

ತೆರಿಗೆ ವಂಚನೆ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಪರಿಶಿಷ್ಟ ಮೀಸಲಾತಿ ಕಾನೂನು ಬಲ, ಭದ್ರಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆ, ನರೇಗಾ ಯೋಜನೆ ಹಾಗೂ ಶಾಸ್ತ್ರೀಯ ಸ್ಥಾನಮಾನದಡಿ ಕನ್ನಡದ ಅಭಿವೃದ್ಧಿ ಯಾವುದೇ ನೆರವು, ಅನುದಾನ ನೀಡದಿರುವುದು ಟೀಕೆಗೆ ಗುರಿಯಾಗಿದೆ.

ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರದಿಂದ ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಸಂಪನ್ಮೂಲಗಳ ಅಸಮಾನ ಹಂಚಿಕೆಯಿಂದ ಬಡತನ ಪ್ರಮಾಣ ಹೆಚ್ಚುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬುದು ತೋರ್ಪಡಿಕೆಗಷ್ಟೇ ಎನ್ನುವಂತಿದೆ. ಇಷ್ಟೆಲ್ಲಾ ಸಮಸ್ಯೆಗಳಿರುವಾಗ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ನಿರ್ಲಿಪ್ತರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕಕ್ಕೆ ಆಗಿರುವ ಅನ್ಯಾಯವೇನು?

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಿಂದ ಜಿಎಸ್‌ಟಿ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ 5.57 ಲಕ್ಷ ಕೋಟಿ ರೂ. ಹೋಗಿದೆ. ಆದರೆ, ರಾಜ್ಯಕ್ಕೆ ವಾಪಸ್ ಬಂದಿರುವುದು ಕೇವಲ 1.70 ಲಕ್ಷ ಕೋಟಿ ಮಾತ್ರ.

2024-25ರ ಸಾಲಿನಲ್ಲಿ ಸುಮಾರು 67 ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರ 24,960 ಕೋಟಿ ರೂ, ಕೇಂದ್ರ ಸರ್ಕಾರ 22,758 ಕೋಟಿ ರೂ. ಪಾಲು ನಿಗದಿಯಾಗಿತ್ತು. ಆದರೆ, ಕೇಂದ್ರ ಸರ್ಕಾರ ಈವರೆಗೆ 18,561 ಕೋಟಿ ರೂ. ಮಾತ್ರ ಪಾವತಿಸಿದೆ. 4,195 ಕೋಟಿ ಬಾಕಿ ಉಳಿಸಿಕೊಂಡಿದೆ.

ಜಲಜೀವನ್ ಮಿಷನ್ ಯೋಜನೆಯಡಿ 13 ಸಾವಿರ ಕೋಟಿ ರೂ. ಬಾಕಿ ಇದೆ. ಇದೇ ಕಾರಣದಿಂದ ಯೋಜನೆಯು ಹಳ್ಳ ಹಿಡಿದಿದೆ. ಪ್ರತಿಯೊಂದು ಮನೆ ನೀರು ಪೂರೈಸುವ ಈ ಯೋಜನೆಗೆ ಹಣ ಬಾಕಿ ಉಳಿಸಿಕೊಂಡಿದ್ದರೂ ಬಿಜೆಪಿ-ಜೆಡಿಎಸ್ ಸಂಸದರು ಪ್ರಶ್ನಿಸುತ್ತಿಲ್ಲ. ಕಬ್ಬಿನ ದರ ನಿಗದಿಯಲ್ಲೂ ಕೇಂದ್ರ ಸರ್ಕಾರವನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುತ್ತಿಲ್ಲ ಎಂದು ದೂರಲಾಗಿದೆ.

ಎಥೆನಾಲ್, ಎಂಎಸ್‌ಪಿ, ಎಫ್ಆರ್‌ಪಿ ನಿಗದಿಯಲ್ಲೂ ಕೇಂದ್ರ ಸರ್ಕಾರ ರಾಜ್ಯದ ಹಿತ ಪರಿಗಣಿಸಿಲ್ಲ. ಹಣಕಾಸು ಆಯೋಗದ ಶಿಫಾರಸಿನಂತೆ ಹಂಚಿಕೆ ಮಾಡಿದ್ದ ವಿಶೇಷ ಅನುದಾನ ಒದಗಿಸಿಲ್ಲ. ಇತ್ತೀಚೆಗೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅತಿವೃಷ್ಟಿ ಸಂಭವಿಸಿದರೂ ಕೇಂದ್ರದಿಂದ ಯಾವುದೇ ನೆರವು ಬಂದಿಲ್ಲ. ಕಬ್ಬು ಹಾಗೂ ಮೆಕ್ಕೆಜೋಳ ರೈತರು ದರ ಕುಸಿತದಿಂದ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರವು ನೆರವಿಗೆ ಬೇಡಿಕೆ ಇಟ್ಟರೆ ರಾಜ್ಯ ಬಿಜೆಪಿ ನಾಯಕರು ಟೀಕೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿವೆ.

ಸಿಎಂ ಕರೆದ ಸಭೆಗೆ ಹಾಜರಾಗಲು ನಕಾರ

ಡಿ.8 ರಂದು ರಾಜ್ಯದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ದನಿಯೆತ್ತುವ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರು ಸಂಸದರ ಸಭೆ ನಿಗದಿ ಮಾಡಿದ್ದರು. ಆದರೆ, ಸಭೆ ಕುರಿತು ತಮ್ಮೊಂದಿಗೆ ಚರ್ಚಿಸದೇ ದಿನಾಂಕ ನಿಗದಿ ಮಾಡಿದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಸಂಸದರು ಸಭೆಗೆ ಅಸಹಕಾರ ತೋರಿರುವುದು ಟೀಕೆಗೆ ಗುರಿಯಾಗಿದೆ.

ಸಂಸತ್ತಿನಲ್ಲಿ ರಾಜ್ಯದ ಪರ ದನಿಯೆತ್ತುವ ಸಲುವಾಗಿ ಸಂಸದರ ಸಭೆ ಕರೆಯಲಾಗಿದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಪತ್ರ ಬರೆದಿದ್ದರು. ಇದಕಪ್ಕೆ ಮರು ಪತ್ರ ಬರೆದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಪೂರ್ವ ನಿಗದಿತ ಕಾರ್ಯಕ್ರಮ ಹಾಗೂ ಅಧಿವೇಶನದ ನೆಪ ಹೇಳಿ ಸಭೆಗೆ ಹಾಜರಾಗಲು ಆಗುವುದಿಲ್ಲ. ಬೇರೊಂದು ದಿನಾಂಕ ನಿಗದಿ ಮಾಡುವಂತೆ ಸೂಚಿಸಿದ್ದಾರೆ.

ಆದರೆ, ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸುವ ಸಲುವಾಗಿ ಕರೆದಿದ್ದ ಸಭೆಯನ್ನು ಬೇರೆ ದಿನ ನಿಗದಿ ಮಾಡಿದರೆ ಪ್ರಯೋಜನವೇನು ಎಂಬುದು ಕಾಂಗ್ರೆಸ್ ನಾಯಕರ ಪ್ರಶ್ನೆಯಾಗಿದೆ.

ವಂದೇಮಾತರಂ ಗೀತೆಯ ಚರ್ಚೆಗೆ ಆದ್ಯತೆ

ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು, ಮೆಕ್ಕೆಜೋಳ ಬೆಳೆಯುವ ರೈತರು ಸೂಕ್ತ ಬೆಲೆಗಾಗಿ ಪರದಾಡುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ವೇತನ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದಾರೆ. ಕೇಂದ್ರ ಪುರಸ್ಕೃತ ಯೋಜನೆಗಳು ಸಮರ್ಪಕ ಅನುದಾನದ ಅಲಭ್ಯತೆಯಿಂದ ಕುಂಟುತ್ತಾ ಸಾಗಿವೆ. ಕರ್ನಾಟಕದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಕೇಂದ್ರ ಗಮನಕ್ಕೆ ತರಲು ಬಿಜೆಪಿ ಸಂಸದರು ಹಿಂದೇಟು ಹಾಕುತ್ತಿದ್ದಾರೆ.

ಡಿ.8 ರಂದು ಸಿಎಂ ಸಿದ್ದರಾಮಯ್ಯ ಕರೆದಿರುವ ಸಂಸದರ ಸಭೆಗೆ ಹಾಜರಾಗಲು ಸಾಧ್ಯವಿಲ್ಲ. ಅಂದು ಸಂಸತ್ತಿನಲ್ಲಿ ವಂದೇ ಮಾತರಂ 150ನೇ ವರ್ಷಾಚರಣೆಯ ಚರ್ಚೆಯಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿರುವುದು ಟೀಕೆಗೆ ಗುರಿಯಾಗಿದೆ.

ರಾಜ್ಯದ ಹಿತಾಸಕ್ತಿಗಿಂತ ವಂದೇ ಮಾತರಂ ಗೀತೆಯ ಚರ್ಚೆ ಪ್ರಮುಖವಾಯಿತೇ, ಇದು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರ ರಾಜ್ಯದೆಡೆಗಿನ ಕಾಳಜಿಗೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.8 ರಂದೇ ಸಭೆ ನಿಗದಿ ಏಕೆ?

ಡಿಸೆಂಬರ್ 8 ರಂದು ಹಣಕಾಸು ಮಸೂದೆ ಮಂಡನೆ, ವಂದೇ ಮಾತರಂ ಗೀತೆಯ ಮೇಲಿನ ಚರ್ಚೆ ನಡೆಯಲಿದೆ. ಈಗಾಗಲೇ ವಿರೋಧ ಪಕ್ಷಗಳು ದೇಶದಲ್ಲಿ ಎಸ್ಐಆರ್, ದೆಹಲಿ ವಾಯುಮಾಲಿನ್ಯ, ಚುನಾವಣಾ ಅಕ್ರಮಗಳ ಚರ್ಚೆಗೆ ಪಟ್ಟು ಹಿಡಿದಿದ್ದಾರೆ. ಡಿ.8 ರಂದು ಸಂಸತ್ ಅಧಿವೇಶನ ಮುಂದೂಡುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ, ಅಂದೇ ರಾಜ್ಯದ ಸಂಸದರೊಂದಿಗೆ ಚರ್ಚಿಸಬಹುದು ಎಂಬ ಕಾರಣದಿಂದ ಸಿಎಂ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಡಿ. 19 ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಾದರೂ ರಾಜ್ಯದ ವಿಷಯಗಳನ್ನು ಪ್ರಸ್ತಾಪಿಸುವ ಕುರಿತಂತೆ ಮನವೊಲಿಸಲು ಸಿಎಂ ಈ ಸಭೆ ಕರೆದಿದ್ದಾರೆ ಎನ್ನಲಾಗಿದೆ.

ಪೂರ್ವ ನಿಗದಿತ ಕಾರ್ಯಕ್ರಮದಿಂದಾಗಿ ಗೈರು

ಅಧಿವೇಶನದಲ್ಲಿ ಇಲಾಖೆಗಳ ಕಾರ್ಯದೊತ್ತಡ ಹೆಚ್ಚಿರಲಿದೆ. ಅಂದೇ ಹಣಕಾಸು ಇಲಾಖೆಯ ಮಸೂದೆ ಮಂಡನೆಯಾಗಲಿದೆ. ಪ್ರಧಾನಿ ನೇತೃತ್ವದಲ್ಲಿ ಹೊಸ ಮತ್ತು ನವೀಕೃತ ಇಂಧನ ಇಲಾಖೆಗೆ ಸಂಬಂಧಿಸಿದ ವಿಶೇಷ ಸಭೆ ನಡೆಯಲಿದೆ. ಜತೆಗೆ “ವಂದೇ ಮಾತರಂ” ಗೀತೆಯ 150ನೇ ವರ್ಷಾಚರಣೆ ಬಗ್ಗೆ ಚರ್ಚೆ ನಿಗದಿಯಾಗಿದೆ. ಹಾಗಾಗಿ ನಾವುಗಳು ಡಿ.8ರಂದು ನಾನೂ ಸೇರಿದಂತೆ ಕೇಂದ್ರ ಸಚಿವರು ಭಾಗವಹಿಸಲು ಆಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೂಡ ಸಭೆಗೆ ಬರಲು ಆಗುವುದಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.

ಬೇರೆ ದಿನಾಂಕ ನಿಗದಿಗೂ ಮುನ್ನ ಚರ್ಚಿಸಿ

ರಾಜ್ಯದ ಸಮಗ್ರ ಅಭಿವೃದ್ಧಿ, ಜನಕಲ್ಯಾಣದ ವಿಷಯಗಳ ಚರ್ಚೆಗೆ ನಾವು ಬದ್ಧರಾಗಿದ್ದೇವೆ. ಬೇರೊಂದು ದಿನಾಂಕ ನಿಗದಿ ಮಾಡುವ ಮೊದಲು ನಮ್ಮೊಂದಿಗೆ ಚರ್ಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಜೋಶಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಸಂಸದರು ಪ್ರತಿಷ್ಠೆಗೆ ಬಿದ್ದು ರಾಜ್ಯದ ಹಿತಾಸಕ್ತಿ ಕಡೆಗಣಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಒಮ್ಮೆಯೂ ಬಿಜೆಪಿ ಸಂಸದರು ಕೇಂದ್ರದ ಸರ್ಕಾರದಿಂದ ಅನುದಾನ, ಇನ್ನಿತರೆ ವಿಚಾರಗಳಿಗೆ ಒತ್ತಾಯಿಸಿಲ್ಲ.ಬದಲಿಗೆ ಕಾಂಗ್ರೆಸ್ ಸರ್ಕಾರದ ಬೇಡಿಕೆಗಳಿಗೆ ವ್ಯಂಗ್ಯಾತ್ಮಕವಾಗಿ ಟೀಕಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಸಂಸದರ ಸಭೆ ಮುಂದೂಡಿಕೆ

ಡಿ.8ರಂದು ನಿಗದಿಪಡಿಸಿದ್ದ ಸರ್ವ ಪಕ್ಷಗಳ ಸಭೆಗೆ ಸಂಸತ್ ಅಧಿವೇಶನ ಹಿನ್ನೆಲೆ ಬರಲು ಆಗದು ಎಂದು ಕೇಂದ್ರ ಸಚಿವರಾದ ವಿ.ಸೋಮಣ್ಣ, ಪ್ರಹ್ಲಾದ್ ಜೋಶಿ ಹೇಳಿರುವ ಹಿನ್ನೆಲೆಯಲ್ಲಿ ಮತ್ತೊಂದು ದಿನಾಂಕ ನಿಗದಿ ಮಾಡುತ್ತೇವೆ. ಡಿ.8 ರಂದು ಕರೆದಿದ್ದ ಸಂಸದರ ಸಭೆ ಮುಂದೂಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರಾಜ್ಯವೇ ಅನುದಾನ ಒದಗಿಸಿಲ್ಲ ಎಂದ ಶೆಟ್ಟರ್

ಚನ್ನಮ್ಮನ ಕಿತ್ತೂರು-ಧಾರವಾಡ ನೇರ ರೈಲ್ವೆ ಮಾರ್ಗ, ಸ್ಮಾರ್ಟ್ ಸಿಟಿ ಮಿಷನ್ -2 ರಡಿ ಘನತ್ಯಾಜ್ಯ ನಿರ್ವಹಣಾ ಘಟಕ, ಬೆಳಗಾವಿಯ ಹಲಗಾ ಸಮೀಪದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಪಾಲು ಸಿಕ್ಕಿಲ್ಲ ಎಂದು ಸಂಸದ ಜಗದೀಶ್‌ ಶೆಟ್ಟರ್‌ ಆರೋಪಿಸಿದ್ದಾರೆ.

ಅಮೃತ-2 ಯೋಜನೆಯಡಿ ಕೇಂದ್ರವು ಕೆರೆಗಳ ಪುನರುಜ್ಜಿವನಕ್ಕಾಗಿ 29 ಕೋಟಿ ಮತ್ತು ಉದ್ಯಾನಗಳ ಅಭಿವೃದ್ಧಿಗೆ 39.45 ಕೋಟಿ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಆ ಹಣವನ್ನು ಬಳಸಿಲ್ಲ, ಅದು ಬಳಕೆಯಾಗದೇ ಹೋದರೆ ಕೇಂದ್ರದ ಹಣ ವಾಪಸಾಗಲಿದೆ ಎಂದು ಹೇಳಿದ್ದಾರೆ.

Read More
Next Story