
ಸಿದ್ದು ಸರ್ಕಾರಕ್ಕೆ 2.5 ವರ್ಷ: Part-3| ಕೇಂದ್ರ-ರಾಜ್ಯ ಸಂಘರ್ಷ; ಅನುಷ್ಠಾನದ ಹಳಿ ತಪ್ಪಿದ ಕೇಂದ್ರದ ಯೋಜನೆಗಳು !
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನದ ಹಾದಿಯಲ್ಲಿ ಹಲವು ಅಡಚಣೆಗಳನ್ನು ಎದುರಿಸುತ್ತಿದ್ದು, ಆಡಳಿತಾತ್ಮಕ ವೈಫಲ್ಯಗಳೆಂಬ ಗರಡಿಗೆ ಸಿಲುಕಿ ನಲುಗುತ್ತಿವೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನದ ಹಾದಿಯಲ್ಲಿ ಹಲವು ಅಡಚಣೆಗಳನ್ನು ಎದುರಿಸುತ್ತಿವೆ. ಆಡಳಿತಾತ್ಮಕ ವೈಫಲ್ಯದ ಗರಡಿಗೆ ಸಿಲುಕಿ ನಲುಗುತ್ತಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ರಾಜಕೀಯ ಸಂಘರ್ಷ, ಅನುದಾನ ಹಂಚಿಕೆಯಲ್ಲಿ ವಿಳಂಬ ಹಾಗೂ ಆಡಳಿತಾತ್ಮಕ ವೈಫಲ್ಯಗಳಿಂದಾಗಿ ಜಲ ಜೀವನ್ ಮಿಷನ್, ಮನರೇಗಾ, ಪಿಎಂ-ಕಿಸಾನ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ಕುಸುಮ್ ಸೌರಶಕ್ತಿ ಯೋಜನೆಗಳಂತಹ ಪ್ರಮುಖ ಕಾರ್ಯಕ್ರಮಗಳು ಕುಂಠಿತಗೊಂಡಿವೆ. ಇದರಿಂದಾಗಿ ಅಭಿವೃದ್ಧಿಯ ಫಲಾನುಭವಿಗಳಾದ ಸಾಮಾನ್ಯ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನಗಳು ತಲುಪುತ್ತಿಲ್ಲ.
ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಎರಡೂವರೆ ವರ್ಷ ಕಳೆದರೂ ಪ್ರತಿ ಮನೆಗೆ ನೀರುಣಿಸುವ ಜಲ ಜೀವನ್ ಮಿಷನ್‌ನಿಂದ ಹಿಡಿದು, ಗ್ರಾಮೀಣರಿಗೆ ಉದ್ಯೋಗ ನೀಡುವ ಮನರೇಗಾ, ರೈತರಿಗೆ ಆರ್ಥಿಕ ಬೆಂಬಲ ನೀಡುವ ಪಿಎಂ-ಕಿಸಾನ್, ಹಳ್ಳಿಗಳಿಗೆ ರಸ್ತೆ ಕಲ್ಪಿಸುವ ಗ್ರಾಮ ಸಡಕ್ ಯೋಜನೆ ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ತುಂಬುವ ಕುಸುಮ್ ಯೋಜನೆಗಳವರೆಗೆ ಬಹುತೇಕ ಕಾರ್ಯಕ್ರಮಗಳು ನಿಧಿ ಹಂಚಿಕೆಯ ವಿವಾದ, ಅನುಷ್ಠಾನದಲ್ಲಿನ ವಿಳಂಬ ಮತ್ತು ಸ್ಪಷ್ಟ ಗುರಿಯ ಕೊರತೆಯಿಂದಾಗಿ ಕುಂಟುತ್ತಾ ಸಾಗಿವೆ. ಇದರಿಂದ ಯೋಜನೆಗಳ ಮೂಲ ಉದ್ದೇಶವೇ ಹಾದಿ ತಪ್ಪಿದೆ.
ಕೇಂದ್ರದ ಯೋಜನೆಗಳ ಯಶಸ್ಸು ರಾಜ್ಯಗಳ ಸಹಕಾರ ಮತ್ತು ದಕ್ಷ ಆಡಳಿತವನ್ನು ಅವಲಂಬಿಸಿರುತ್ತದೆ. ಆದರೆ, ಕರ್ನಾಟಕದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ಅಧಿಕಾರಿಶಾಹಿಯು ಕೇಂದ್ರದ ಹಣಕಾಸಿನ ನೆರವು ಸಮರ್ಪಕವಾಗಿ ಬಳಕೆಯಾಗದಂತೆ ತಡೆಯೊಡ್ಡುತ್ತಿವೆ. ಕೆಲವು ಯೋಜನೆಗಳಲ್ಲಿ ಕೇಂದ್ರದಿಂದ ಅನುದಾನ ಬಿಡುಗಡೆಯ ವಿಳಂಬ ಸಮಸ್ಯೆಯಾದರೆ, ಮತ್ತೆ ಕೆಲವು ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಆಡಳಿತ ಯಂತ್ರದ ವೈಫಲ್ಯ ಎದ್ದು ಕಾಣುತ್ತಿದೆ. ಪ್ರತಿ ಯೋಜನೆಯಲ್ಲಿಯೂ ತಾಂತ್ರಿಕ, ಮಾನವ ಸಂಪನ್ಮೂಲ, ಟೆಂಡರ್, ಮೇಲ್ವಿಚಾರಣೆ ಹಾಗೂ ಪ್ರಮಾಣೀಕರಣದ ಸಮಸ್ಯೆಗಳು ನಿಧಿ ಬಳಕೆಗೆ ಅಡ್ಡಿಯಾಗುತ್ತಿವೆ ಎಂದು ಹೇಳಲಾಗಿದೆ.
ಬಿಡುಗಡೆಯಾದ ಕೇಂದ್ರಾನುದಾನ
ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಯು ರಾಜ್ಯದಲ್ಲಿ ತೀವ್ರ ನಿರಾಶಾದಾಯಕವಾಗಿದೆ. 2025-26 ಸಾಲಿನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದ ತೆರಿಗೆ ಪಾಲಿನ ರೂಪದಲ್ಲಿ ಸುಮಾರು 51,876 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇನ್ನು ಕೇಂದ್ರ ಸರ್ಕಾರದ ಸಹಾಯಾನುದಾನದ ರೂಪದಲ್ಲಿ 16 ಸಾವಿರ ಕೋಟಿ ರೂ. ಹಂಚಿಕೆ ಮಾಡಿದೆ. ಆರ್ಥಿಕ ಇಲಾಖೆಯ ಅಂಕಿ - ಅಂಶದಂತೆ ಮೊದಲ ತ್ರೈಮಾಸಿಕದಲ್ಲಿ ಕೇಂದ್ರದ ತೆರಿಗೆ ಹಂಚಿಕೆ ಪೈಕಿ ರಾಜ್ಯಕ್ಕೆ 11,924 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಕೇಂದ್ರದ ಸಹಾಯಾನುದಾನದ ಪೈಕಿ ಮೊದಲ ತ್ರೈಮಾಸಿಕದಲ್ಲಿ 1,667 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಂದರೆ, ಕೇಂದ್ರದಿಂದ ಬರುವ ಈ ಎರಡು ಅನುದಾನಗಳಿಂದ ಒಟ್ಟು 13,591 ಕೋಟಿ ರೂ. ಬಿಡುಗಡೆಯಾಗಿದೆ.
2024-25 ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಒಟ್ಟು 46,859 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಕೇಂದ್ರದ ಪಾಲು 22,758 ಕೋಟಿ ರೂ. ಹಾಗೂ ರಾಜ್ಯದ ಪಾಲು 24,960 ಕೋಟಿ ರೂ. ಇತ್ತು. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಸಾಮಾನ್ಯವಾಗಿ ಕೇಂದ್ರ ಹಾಗೂ ರಾಜ್ಯದ ಅನುದಾನದ ಪಾಲು 50:50, 60:40 ಮತ್ತು 70:30 ಅನುಪಾತಗಳಲ್ಲಿ ಇರುತ್ತವೆ. ಕಳೆದ ಬಜೆಟ್ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಕೇಂದ್ರದ ತೆರಿಗೆ ಪಾಲು ಹಾಗೂ ಸಹಾಯಾನುದಾನಗಳ ಪೈಕಿ ಒಟ್ಟು ಸುಮಾರು 14,348 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ರಾಜ್ಯದಲ್ಲಿ ಸುಮಾರು 67 ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. ಕೇಂದ್ರ ಹಾಗೂ ರಾಜ್ಯಗಳ ಜಂಟಿ ಅನುದಾನಗಳ ಮೂಲಕ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಪ್ರಮುಖ ಕೇಂದ್ರ ಪುರಸ್ಕೃತ ಯೋಜನೆಗಳ ಆರ್ಥಿಕ ಪ್ರಗತಿ ಮಾತ್ರ ಕಳಪೆಯಾಗಿದೆ. ಕೆಲ ಪ್ರಮುಖ ಯೋಜನೆಗಳಿಗಷ್ಟೇ ಅತ್ಯಲ್ಪ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಜಲ ಜೀವನ್ ಮಿಷನ್: ಅನುದಾನದ ಹಗ್ಗಜಗ್ಗಾಟ
ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ 'ಮನೆ ಮನೆಗೆ ಗಂಗೆ' ಎಂದೇ ಖ್ಯಾತವಾಗಿರುವ ಜಲ ಜೀವನ್ ಮಿಷನ್ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ. ಕೇಂದ್ರ ಸರ್ಕಾರವು ಕರ್ನಾಟಕವು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರೆ, ರಾಜ್ಯ ಸರ್ಕಾರವು ಈ ಆರೋಪವನ್ನು ನಿರಾಧಾರ ಎಂದು ತಳ್ಳಿಹಾಕಿದೆ. ಯೋಜನೆಗೆ ಕೇಂದ್ರದ ಪಾಲು 26,119 ಕೋಟಿ ರೂ.ಗಳಾಗಿದ್ದು, ಈವರೆಗೆ ಬಿಡುಗಡೆಯಾಗಿದ್ದು ಕೇವಲ 11,760 ಕೋಟಿ ರೂ. ಮಾತ್ರ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಾದ 23,142 ಕೋಟಿ ರೂ.ಗಳಲ್ಲಿ ಈಗಾಗಲೇ 20,442 ಕೋಟಿ ರೂ. ಬಿಡುಗಡೆ ಮಾಡಿದೆ. 2019-20 ರಿಂದ 2024-25ರ ಅವಧಿಗೆ ಕೇಂದ್ರದಿಂದ ಬಿಡುಗಡೆಯಾಗಿರುವ 11,760 ಕೋಟಿ ರೂ. ಪೈಕಿ ಶೇ. 99.95 ರಷ್ಟು ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಕೇಂದ್ರದಿಂದ ಅನುದಾನ ಬಿಡುಗಡೆ ವಿಳಂಬವಾದರೂ, ಯೋಜನೆ ಕುಂಠಿತವಾಗಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು 4,977.25 ಕೋಟಿ ರೂ. ಮುಂಗಡವಾಗಿ ಬಿಡುಗಡೆ ಮಾಡಿದೆ. ಹೆಚ್ಚುವರಿ ಅನುದಾನಕ್ಕಾಗಿ ಮಾಡಿದ ಮನವಿಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ರಾಜ್ಯ ಸರ್ಕಾರದ ಆರೋಪವಾಗಿದೆ.
ಈ ಯೋಜನೆಯಡಿ, ಕೇಂದ್ರದ ಪಾಲು ಶೇ. 45 ರಷ್ಟಿದ್ದರೆ, ರಾಜ್ಯ ಸರ್ಕಾರದ ಪಾಲು ಶೇ. 55 ರಷ್ಟಿದೆ, ಆದರೂ ರಾಜ್ಯವು ನಿಗದಿತ ಮಿತಿಗಿಂತ ಹೆಚ್ಚು ಖರ್ಚು ಮಾಡಿದೆ ಎನ್ನಲಾಗಿದೆ.
ಮನರೇಗಾ: ಕೂಲಿಗಾಗಿ ಕಾರ್ಮಿಕರ ಪರದಾಟ
ಗ್ರಾಮೀಣ ಜನರಿಗೆ ಉದ್ಯೋಗ ಭದ್ರತೆ ನೀಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಸಹ ಅನುದಾನದ ಕೊರತೆಯಿಂದ ಬಳಲುತ್ತಿದೆ. ಮನರೇಗಾ ಅಡಿ ದುಡಿದ ಲಕ್ಷಾಂತರ ಕಾರ್ಮಿಕರು ಕೂಲಿಗಾಗಿ ತಿಂಗಳುಗಟ್ಟಲೆ ಕಾಯುವಂತಾಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ 960 ಕೋಟಿ ರೂ. ಕೂಲಿ ಅನುದಾನವನ್ನು ಬಾಕಿ ಉಳಿಸಿಕೊಂಡಿರುವುದೇ ಈ ಬಿಕ್ಕಟ್ಟಿಗೆ ಮೂಲ ಕಾರಣ. ನಿಯಮಗಳ ಪ್ರಕಾರ, ನರೇಗಾ ಕೂಲಿಯ ಶೇ. 100ರಷ್ಟು ಮೊತ್ತವನ್ನು ಕೇಂದ್ರವೇ ಭರಿಸಬೇಕು. ರಾಜ್ಯ ಸರ್ಕಾರವು ಹಣ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಿದರೂ ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ ಎನ್ನಲಾಗಿದೆ.
ಅಲ್ಲದೇ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದು, 2025-26ನೇ ಆರ್ಥಿಕ ವರ್ಷದಲ್ಲಿ ಕೇಂದ್ರದಿಂದ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ, ಸಾಮಗ್ರಿ ವೆಚ್ಚದ 787.20 ಕೋಟಿ ರೂ. ಹಾಗೂ ಕೂಲಿಯ 600 ಕೋಟಿ ರೂ. ಬಿಲ್‌ಗಳು ಬಾಕಿ ಉಳಿದಿವೆ ಎಂಬುದನ್ನು ಗಮನಕ್ಕೆ ತಂದಿದ್ದಾರೆ. ಅನುದಾನದ ಕೊರತೆಯು ಗ್ರಾಮೀಣ ಪ್ರದೇಶಗಳಲ್ಲಿನ ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರಿದ್ದು, ಕಾರ್ಮಿಕರು ಕೂಲಿಗಾಗಿ ಕಾಯುವಂತಾಗಿದೆ.
ಇದಲ್ಲದೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಸಾಫ್ಟ್‌ವೇರ್ ವ್ಯವಸ್ಥೆಯು ಮತ್ತೊಂದು ಆಡಳಿತಾತ್ಮಕ ತಲೆನೋವಾಗಿ ಪರಿಣಮಿಸಿದೆ. ಕೆ2 ಪಿಎಫ್‌ಎಂಎಸ್ ತಂತ್ರಾಂಶದ ಮೂಲಕ ವೇತನ ಪಾವತಿಗೆ ಕೇಂದ್ರ ಸೂಚಿಸಿದ್ದರಿಂದ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಯೋಜನೆಗಾಗಿ ದುಡಿಯುತ್ತಿರುವ ಸುಮಾರು 3ಸಾವಿರಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಮೂರು ತಿಂಗಳಿಂದ ವೇತನವಿಲ್ಲದೆ ಪರದಾಡುವಂತಾಗಿದೆ. ಈ ಬೆಳವಣಿಗೆಯು ಕೇಂದ್ರದ ತಾಂತ್ರಿಕ ನೀತಿಗಳು ಮತ್ತು ರಾಜ್ಯದಲ್ಲಿನ ಅದರ ಅನುಷ್ಠಾನದ ನಡುವಿನ ಸಮನ್ವಯದ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಪಿಎಂ-ಕಿಸಾನ್: ಪರಿಶೀಲನೆಯ ಸವಾಲು
ರೈತರಿಗೆ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯು ರಾಜ್ಯದಲ್ಲಿ ಬಹುತೇಕ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದರೂ, ಫಲಾನುಭವಿಗಳ ಆಯ್ಕೆಯಲ್ಲಿ ಕೆಲವು ಆಡಳಿತಾತ್ಮಕ ಸವಾಲುಗಳು ಎದುರಾಗಿವೆ.ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಾರ್ಷಿಕ 6 ಸಾವಿರ ರೂ. ವರ್ಗಾಯಿಸುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯು ಇತರ ಯೋಜನೆಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ತುಲನಾತ್ಮಕವಾಗಿ ಸುಗಮವಾಗಿ ಜಾರಿಯಾಗುತ್ತಿದೆ. ಕೇಂದ್ರ ಸರ್ಕಾರವು ನಿಯಮಿತವಾಗಿ ಕಂತುಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ, ಇಲ್ಲಿನ ಪ್ರಮುಖ ಆಡಳಿತಾತ್ಮಕ ಸವಾಲೆಂದರೆ ಅರ್ಹ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವುದಾಗಿದೆ. ಅನರ್ಹರು ಯೋಜನೆಯ ಲಾಭ ಪಡೆಯುವುದನ್ನು ತಡೆಯಲು ನಿರಂತರ ಪರಿಶೀಲನೆ ಮತ್ತು ದತ್ತಾಂಶ ಶುದ್ಧೀಕರಣ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 35.44 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಗ್ರಾಮ ಸಡಕ್ ಯೋಜನೆ: ಗ್ರಾಮೀಣ ರಸ್ತೆಗಳಿಗೆ ಅನುದಾನದ ಕೊರತೆ:
ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಮತ್ತೊಂದು ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಕೇಂದ್ರ ಶೇ. 60ರಷ್ಟು ಮತ್ತು ರಾಜ್ಯ ಶೇ. 40ರಷ್ಟು ಅನುದಾನವನ್ನು ಭರಿಸುತ್ತದೆ. ಆದರೆ, ಈ ಯೋಜನೆಗೂ ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ಬಿಸಿ ತಟ್ಟಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಬಂಡವಾಳ ವೆಚ್ಚಕ್ಕಾಗಿ ವಿಶೇಷ ನೆರವಿನ ರೂಪದಲ್ಲಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ನೀಡಿದ್ದರೆ, ಕರ್ನಾಟಕಕ್ಕೆ ಸಿಕ್ಕಿದ್ದು ತುಲನಾತ್ಮಕವಾಗಿ ಕಡಿಮೆ ಇದೆ. ಅನುದಾನದ ಕೊರತೆಯು ಸಹಜವಾಗಿಯೇ ಕಾಮಗಾರಿಗಳ ವಿಳಂಬಕ್ಕೆ ಮತ್ತು ಕೆಲವೆಡೆ ಯೋಜನೆಗಳು ಅರ್ಧಕ್ಕೆ ನಿಲ್ಲಲು ಕಾರಣವಾಗುತ್ತದೆ. ಗ್ರಾಮೀಣ ರಸ್ತೆಗಳ ನಿರ್ಮಾಣವು ರಾಜ್ಯದ ಆರ್ಥಿಕತೆಗೆ ಚೈತನ್ಯ ನೀಡುವ ಪ್ರಮುಖ ಅಂಶವಾಗಿರುವುದರಿಂದ, ಈ ಯೋಜನೆಯಲ್ಲಿನ ಯಾವುದೇ ವಿಳಂಬವು ಗ್ರಾಮೀಣ ಜನರ ಜೀವನಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ.
ಕುಸುಮ್ ಸೌರಶಕ್ತಿ ಯೋಜನೆ: ರೈತರ ನಿರಾಸಕ್ತಿ ಮತ್ತು ಸರ್ಕಾರದ ನಿಧಾನಗತಿ
ರೈತರ ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ಅಳವಡಿಸಿ, ಅವರನ್ನು ಇಂಧನ ಸ್ವಾವಲಂಬಿಗಳನ್ನಾಗಿಸುವ ಕುಸುಮ್ ಯೋಜನೆಯು ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ರಾಜ್ಯ ಸರ್ಕಾರವು ತನ್ನ ಪಾಲಿನ ಸಹಾಯಧನವನ್ನು ಶೇ. 30 ರಿಂದ 50 ಕ್ಕೆ ಹೆಚ್ಚಿಸಿ ಯೋಜನೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆಯಾದರೂ, ಅನುಷ್ಠಾನದಲ್ಲಿ ಹಿನ್ನಡೆಯಾಗಿದೆ. 'ಕುಸುಮ್-ಎ' ಘಟಕದಡಿ ರೈತರು ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ರಾಜ್ಯದಿಂದ ಯಾವುದೇ ಬೇಡಿಕೆ ಸಲ್ಲಿಕೆಯಾಗಿಲ್ಲ ಎಂದು ಹೇಳಲಾಗಿದೆ. 'ಕುಸುಮ್-ಬಿ' ಅಡಿಯಲ್ಲಿ ಮಂಜೂರಾದ 41,365 ಸೌರ ಪಂಪ್‌ಗಳಲ್ಲಿ ಕೇವಲ 2,388 ಮಾತ್ರ ಅಳವಡಿಕೆಯಾಗಿವೆ. 'ಕುಸುಮ್-ಸಿ' ಅಡಿಯಲ್ಲಿ 6.28 ಲಕ್ಷ ಪಂಪ್‌ಗಳನ್ನು ಸೌರೀಕರಣಗೊಳಿಸಲು ಅನುಮೋದನೆ ದೊರೆತಿದ್ದರೂ, ಕೇವಲ 23,133 ಪಂಪ್‌ಗಳಿಗೆ ಮಾತ್ರ ಸೌರಶಕ್ತಿ ಸಂಪರ್ಕ ಕಲ್ಪಿಸಲಾಗಿದೆ. ಇದು ಯೋಜನೆಯ ಅನುಷ್ಠಾನದಲ್ಲಿನ ಆಡಳಿತಾತ್ಮಕ ವೈಫಲ್ಯ ಮತ್ತು ರೈತರಲ್ಲಿನ ಅರಿವಿನ ಕೊರತೆಯನ್ನು ಬಿಂಬಿಸುತ್ತದೆ.
ಈ ಯೋಜನೆಯಡಿ ರೈತರು ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಲು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಮಾರಾಟ ಮಾಡಲು ಸಹಾಯಧನ ನೀಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಈ ಯೋಜನೆಯ ಪ್ರಗತಿ ಅತ್ಯಂತ ನಿರಾಶಾದಾಯಕವಾಗಿದೆ. ಯೋಜನೆಯ ಬಗ್ಗೆ ರೈತರಲ್ಲಿ ಅರಿವಿನ ಕೊರತೆ ಮತ್ತು ಯೋಜನೆಯನ್ನು ಜನಪ್ರಿಯಗೊಳಿಸಿ, ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರದ ಇಂಧನ ಮತ್ತು ಕೃಷಿ ಇಲಾಖೆಗಳ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಕೇಂದ್ರದಿಂದ ಅವಕಾಶವಿದ್ದರೂ, ರಾಜ್ಯದ ಆಡಳಿತ ಯಂತ್ರ ಅದನ್ನು ಬಳಸಿಕೊಳ್ಳಲು ವಿಫಲವಾಗಿರುವುದು ಸ್ಪಷ್ಟವಾಗಿದೆ ಎಂದು ತಿಳಿದುಬಂದಿದೆ.
ಫಸಲ್‌ಬೀಮಾ ಯೋಜನೆಯಡಿ 5.90 ಕೋಟಿ ರೂ. ಬಿಡುಗಡೆ
ಫಸಲ್ ಬೀಮಾ ಯೋಜನೆಯಲ್ಲಿ ಕೇಂದ್ರದ ಪಾಲು 1,113 ಕೋಟಿ ರೂ. ಇದ್ದು, ಸುಮಾರು 337.30 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಾಗರ ಮಾಲ ಯೋಜನೆಗೆ ಕೇಂದ್ರದ ಪಾಲು 32.18 ಕೋಟಿ ರೂ. ಇದ್ದು, ಈ ಪೈಕಿ ಈವರೆಗೆ ಬಿಡುಗಡೆ 5.90 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 1.90 ಕೋಟಿ ರೂ. ವೆಚ್ಚ ಮಾಡಲಾಗಿದೆ. ರಾಜ್ಯದ ಪಾಲು 32.18 ಕೋಟಿ ರೂ.ನಲ್ಲಿ 3 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದರೆ, 3 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದೇ ರೀತಿ ಪೋಷಣ ಅಭಿಯಾನದಲ್ಲಿ ರಾಜ್ಯ ಪಾಲಿನ 44.10 ಕೋಟಿ ರೂ.ಪೈಕಿ 41.57 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರ ಪಾಲಿನ 66.15 ಕೋಟಿ ರೂ. ಪೈಕಿ 62.36 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈವರೆಗೆ ಈ ಯೋಜನೆಗೆ ಯಾವುದೇ ವೆಚ್ಚವನ್ನು ಮಾಡಿಲ್ಲ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ರಾಜ್ಯದ ಪಾಲಿನ 539 ಕೋಟಿ ರೂ. ಪೈಕಿ 6.81 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 3.06 ಕೋಟಿ ರೂ. ವೆಚ್ಚ ಮಾಡಲಾಗಿದೆ ಎನ್ನಲಾಗಿದೆ.
ಪಿಎಂ ಆವಾಸ್ ಯೋಜನೆ
ಪಿಎಂ ಆವಾಸ್ ಯೋಜನೆ (ಗ್ರಾಮೀಣ) ಕೇಂದ್ರದ ಪಾಲಿನ 473 ಕೋಟಿ ರೂ.ಪೈಕಿ ಯಾವುದೇ ಹಣ ಬಿಡುಗಡೆಯಾಗಿಲ್ಲ. 143.21 ಕೋಟಿ ರೂ. ಯೋಜನೆಗೆ ವೆಚ್ಚ ಮಾಡಲಾಗಿದೆ. ಹಾಗೆಯೇ ರಾಜ್ಯದ ಪಾಲಿನ 432 ಕೋಟಿ ರೂ. ಪೈಕಿ ಯಾವುದೇ ಹಣ ಬಿಡುಗಡೆಯಾಗಿಲ್ಲ. ಆದರೆ, ಯೋಜನೆಗೆ 97.26 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದರಂತೆಯೇ ಪಿಎಂ ಆವಾಸ್ ಯೋಜನೆ (ನಗರ) ಸಂಯೋಜಿತ ಅಂಬೇಡ್ಕರ್ ವಸತಿ ಯೋಜನೆ ಹಾಗೂ ವಾಜಪೇಯಿ ವಸತಿ ಯೋಜನೆಗೆ ಒಟ್ಟು ರಾಜ್ಯದ ಪಾಲು 448.97 ಕೋಟಿ ಹಂಚಿಕೆಯಾಗಿದೆ. ಆದರೆ, ಈವರೆಗೆ ಅನುದಾನ ಬಿಡುಗಡೆ ಹಾಗೂ ವೆಚ್ಚ ಶೂನ್ಯವಾಗಿದೆ. ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಕೇಂದ್ರದ ಪಾಲು 230.44 ಕೋಟಿ ರೂ. ಇದ್ದು, ಈವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಆದರೆ, ವೆಚ್ಚ 22.74 ಕೋಟಿ ರೂ. ಮಾಡಲಾಗಿದೆ. ಯೋಜನೆಗೆ ರಾಜ್ಯದ ಪಾಲು 147.22 ಕೋಟಿ ರೂ. ಆಗಿದ್ದು, ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ವೆಚ್ಚ 14.57 ಕೋಟಿ ಆಗಿದೆ. ಪಿಎಂ ಅಭಿಮ್ ಕೇಂದ್ರದ ಪಾಲು 242.92 ಕೋಟಿ ರೂ., ರಾಜ್ಯ ಪಾಲು 129 ಕೋಟಿ ರೂ ಆಗಿದ್ದರೆ, ಬಿಡುಗಡೆ, ವೆಚ್ಚ ಶೂನ್ಯವಾಗಿದೆ ಎಂದು ತಿಳಿದುಬಂದಿದೆ.
ಆಯುಷ್ ಮಿಷನ್ ಯೋಜನೆ
ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಗೆ ಕೇಂದ್ರದ ಪಾಲು 60 ಕೋಟಿ ರೂ., ರಾಜ್ಯದ ಪಾಲು 40 ಕೋಟಿ ರೂ. ಆಗಿದ್ದು, ಈವರೆಗೆ ಬಿಡುಗಡೆ, ವೆಚ್ಚ ಶೂನ್ಯವಾಗಿದೆ. ಭದ್ರ ಮೇಲ್ದಂಡೆ ಯೋಜನೆ ಕೇಂದ್ರದ ಪಾಲು 1ಸಾವಿರ ಕೋಟಿ ರೂ., ರಾಜ್ಯದ ಪಾಲು 250 ಕೋಟಿ ರೂ. ಆಗಿದ್ದರೆ, ಬಿಡುಗಡೆ, ವೆಚ್ಚ ಶೂನ್ಯವಾಗಿದೆ. ಅದೇ ರೀತಿ ವೇಗವರ್ಧಿತ ನೀರಾವಾರಿ ಪ್ರಯೋಜನ ಕಾರ್ಯಕ್ರಮ (ಎಐಬಿಪಿ)ಗೆ ಕೇಂದ್ರದ ಪಾಲು 857.39 ಕೋಟಿ ರೂ., ರಾಜ್ಯದ ಪಾಲು 547.61 ಕೋಟಿ ರೂ. ಆಗಿದ್ದು, ಈವರೆಗೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ ಎಂದು ಹೇಳಲಾಗಿದೆ.
ಒಟ್ಟಾರೆ ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ ಮೂಲ ಉದ್ದೇಶಗಳು ಮರೆಯಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಪ್ರತಿಷ್ಠೆ ಬದಿಗಿಟ್ಟು, ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ಈ ಯೋಜನೆಗಳ ನಿಜವಾದ ಫಲ ರಾಜ್ಯದ ಜನರಿಗೆ ತಲುಪಲು ಸಾಧ್ಯ. ಇಲ್ಲವಾದಲ್ಲಿ, ಸಾವಿರಾರು ಕೋಟಿ ರೂಪಾಯಿಗಳ ಅನುದಾನವು ಕಾಗದದ ಮೇಲಿನ ಅಂಕಿಅಂಶವಾಗಿಯೇ ಉಳಿದು, ಅಭಿವೃದ್ಧಿಯು ಮರೀಚಿಕೆ ಆಗುವುದರಲ್ಲಿ ಸಂದೇಹವಿಲ್ಲ.

