ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆ ಸೋರಿಕೆಗೆ ತಡೆಗೆ ಕಠಿಣ ಕ್ರಮ; ಪರೀಕ್ಷಾ ಸಮಯ ಬದಲಾವಣೆ, ಮುಖ್ಯಶಿಕ್ಷಕರೇ ಹೊಣೆ
x

ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆ ಸೋರಿಕೆಗೆ ತಡೆಗೆ ಕಠಿಣ ಕ್ರಮ; ಪರೀಕ್ಷಾ ಸಮಯ ಬದಲಾವಣೆ, ಮುಖ್ಯಶಿಕ್ಷಕರೇ ಹೊಣೆ

ಹಿಂದಿನ ಪರೀಕ್ಷೆಗಳಲ್ಲಿ ಬೆಳಗಿನ ಜಾವವೇ ಪ್ರಶ್ನೆಪತ್ರಿಕೆಗಳು ಶಾಲಾ ಲಾಗಿನ್‌ಗೆ ರವಾನೆಯಾಗುತ್ತಿದ್ದವು. ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೆಲವರು ಪರೀಕ್ಷೆಗೂ ಮುನ್ನವೇ ವಾಟ್ಸ್‌ಆ್ಯಪ್‌ಗಳಲ್ಲಿ ಹರಿಬಿಡುತ್ತಿದ್ದರು.


Click the Play button to hear this message in audio format

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ-1ರ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ಭಾರೀ ಮುಜುಗರಕ್ಕೀಡಾಗಿದ್ದ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ, ಇದೀಗ ಎಚ್ಚೆತ್ತುಕೊಂಡಿದೆ. ಮುಂಬರುವ ಎರಡು ಮತ್ತು ಮೂರನೇ ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಇಂತಹ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಿರುವ ಮಂಡಳಿ, ಇದೇ ಮೊದಲ ಬಾರಿಗೆ ಅತ್ಯಂತ ಕಠಿಣವಾದ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಪರೀಕ್ಷಾ ಸಮಯವನ್ನೇ ಬದಲಾವಣೆ ಮಾಡುವ ಮೂಲಕ ಪರೀಕ್ಷಾ ಅಕ್ರಮ ಮಾಡುವವರಿಗೆ ಎಚ್ಚರಿಕೆ ಕೊಟ್ಟಿದೆ.

ಹಿಂದಿನ ಪರೀಕ್ಷೆಗಳಲ್ಲಿ ಬೆಳಗಿನ ಜಾವವೇ ಪ್ರಶ್ನೆಪತ್ರಿಕೆಗಳು ಶಾಲಾ ಲಾಗಿನ್‌ಗೆ ರವಾನೆಯಾಗುತ್ತಿದ್ದವು. ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೆಲವರು ಪರೀಕ್ಷೆಗೂ ಮುನ್ನವೇ ವಾಟ್ಸ್‌ಆ್ಯಪ್‌ಗಳಲ್ಲಿ ಹರಿಬಿಡುತ್ತಿದ್ದರು. ಈ ದಂಧೆಯನ್ನು ಬುಡಸಮೇತ ಕಿತ್ತುಹಾಕಲು ತಂತ್ರ ರೂಪಿಸಿರುವ ಇಲಾಖೆ, ಮುಂಬರುವ ಪರೀಕ್ಷೆಗಳನ್ನು ಬೆಳಗ್ಗೆ 11 ಗಂಟೆಗೆ ನಡೆಸಲು ತೀರ್ಮಾನಿಸಿದೆ. ಆದೇಶದ ಪ್ರಕಾರ, ಪರೀಕ್ಷೆ 11 ಗಂಟೆಗೆ ಆರಂಭವಾದರೂ, ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೇ ಶಾಲೆಗೆ ಹಾಜರಾಗುವುದು ಕಡ್ಡಾಯ.

ಒಮ್ಮೆ ವಿದ್ಯಾರ್ಥಿಗಳು ಶಾಲೆಯ ಆವರಣದೊಳಗೆ ಬಂದ ನಂತರ, ಅಂದರೆ ಬೆಳಗ್ಗೆ 9.30ರ ಸುಮಾರಿಗೆ ಶಾಲಾ ಲಾಗಿನ್‌ನಲ್ಲಿ ಪ್ರಶ್ನೆಪತ್ರಿಕೆಗಳು ಲಭ್ಯವಾಗಲಿವೆ. ವಿದ್ಯಾರ್ಥಿಗಳು ಈಗಾಗಲೇ ಶಾಲೆಯೊಳಗಿರುವುದರಿಂದ ಮತ್ತು ಅವರ ಬಳಿ ಮೊಬೈಲ್ ಇಲ್ಲದಿರುವುದರಿಂದ ಪ್ರಶ್ನೆಪತ್ರಿಕೆ ಹೊರಗಡೆ ಸೋರಿಕೆಯಾಗುವ ಸಾಧ್ಯತೆ ಸಂಪೂರ್ಣ ಬಂದ್ ಆಗಲಿದೆ ಎಂಬುದು ಮಂಡಳಿಯ ಲೆಕ್ಕಾಚಾರ.

ಮುಖ್ಯಶಿಕ್ಷಕರಿಗೆ ಜವಾಬ್ದಾರಿ

ಈ ಬಾರಿ ಶಾಲಾ ಮುಖ್ಯಶಿಕ್ಷಕರನ್ನೇ 'ಒನ್ ಮ್ಯಾನ್ ಆರ್ಮಿ'ಯಂತೆ ಕೆಲಸ ಮಾಡಲು ಸೂಚಿಸಲಾಗಿದ್ದು, ಅಕ್ರಮ ನಡೆದರೆ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ಮುಖ್ಯಶಿಕ್ಷಕರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಬಳಸಿ ಮಾತ್ರ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಬೇಕು. ಅದರಲ್ಲೂ ಶಾಲೆಯ ಒಂದೇ ಕಂಪ್ಯೂಟರ್ ಮತ್ತು ಒಂದೇ ಐಪಿ (IP) ಅಡ್ರೆಸ್ ಮೂಲಕವೇ ಲಾಗಿನ್ ಆಗಬೇಕು. ಒಂದಕ್ಕಿಂತ ಹೆಚ್ಚು ಕಡೆ ಲಾಗಿನ್ ಆದರೆ ಅಥವಾ ಬೇರೆ ಐಪಿ ಅಡ್ರೆಸ್ ಬಳಸಿದರೆ, ಅದು ಮಂಡಳಿಯ ಕೇಂದ್ರ ಕಚೇರಿಯ ಸರ್ವರ್‌ನಲ್ಲಿ ತಕ್ಷಣ ಪತ್ತೆಯಾಗಲಿದ್ದು, ಅಂತಹ ಮುಖ್ಯಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಶ್ನೆಪತ್ರಿಕೆ ಮುದ್ರಣದ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿಯೂ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಮುದ್ರಣ ಕಾರ್ಯಕ್ಕೆ ಶಾಲೆಯ ಒಬ್ಬರು ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿಕೊಳ್ಳಬಹುದು, ಆದರೆ ಅವರಿಗೂ ಲಾಗಿನ್ ವಿವರಗಳನ್ನು ನೀಡುವಂತಿಲ್ಲ. ಮುದ್ರಣದ ವೇಳೆ ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್ ಅಥವಾ ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮುದ್ರಣ ಮುಗಿದ ತಕ್ಷಣ ಕಂಪ್ಯೂಟರ್‌ನಿಂದ ಕಡತಗಳನ್ನು ಶಾಶ್ವತವಾಗಿ ಅಳಿಸಿಹಾಕಬೇಕು. ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳು ಅಥವಾ ಹೊರಗಿನವರು ಮುದ್ರಣ ಕೊಠಡಿಗೆ ಪ್ರವೇಶಿಸುವಂತಿಲ್ಲ.

ಮೊಬೈಲ್ ಹಾವಳಿಗೆ ಬ್ರೇಕ್​

ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಹಾವಳಿಗೆ ಬ್ರೇಕ್ ಹಾಕಲಾಗಿದ್ದು, ವಿದ್ಯಾರ್ಥಿಗಳು ಮಾತ್ರವಲ್ಲದೆ, ಪರೀಕ್ಷಾ ಕರ್ತವ್ಯದಲ್ಲಿರುವ ಶಿಕ್ಷಕರು ಕೂಡ ಮೊಬೈಲ್ ಬಳಸುವಂತಿಲ್ಲ. ಒಂದು ವೇಳೆ ಮೊಬೈಲ್ ತಂದಿದ್ದಲ್ಲಿ, ಪರೀಕ್ಷೆ ಮುಗಿಯುವವರೆಗೆ ಅದನ್ನು ಶಾಲೆಯ ಸ್ವಾಧೀನ ಅಧಿಕಾರಿಯ ವಶದಲ್ಲಿ ಇಡಬೇಕು. ಒಟ್ಟಿನಲ್ಲಿ ವಾರ್ಷಿಕ ಪರೀಕ್ಷೆಗೂ ಮುನ್ನ ನಡೆಯುವ ಈ ತಾಲೀಮು ಪರೀಕ್ಷೆಗಳಲ್ಲೇ ಇಲಾಖೆ ಇಷ್ಟೊಂದು ಕಠಿಣ ಕ್ರಮಕ್ಕೆ ಮುಂದಾಗಿರುವುದು, ಮುಂಬರುವ ದಿನಗಳಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಮಂಡಳಿಯ ದಿಟ್ಟ ನಿರ್ಧಾರವನ್ನು ತೋರಿಸುತ್ತದೆ. ನಿಯಮ ಉಲ್ಲಂಘಿಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಂಡಳಿ ಎಚ್ಚರಿಸಿದೆ.

Read More
Next Story