SSLC-2025 | ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ:  ಶೇ 66.14 ರಷ್ಟು ಫಲಿತಾಂಶ ದಾಖಲು; ಬಾಲಕಿಯರ ಮೇಲುಗೈ
x

SSLC-2025 | ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ 66.14 ರಷ್ಟು ಫಲಿತಾಂಶ ದಾಖಲು; ಬಾಲಕಿಯರ ಮೇಲುಗೈ

ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ರಾಜ್ಯಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. ಒಟ್ಟು 8,96,447 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.


2024-25ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಮತ್ತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶುಕ್ರವಾರ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಪ್ರಕಟಿಸಿದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಲಕಿಯರು ಶೇ 74 ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ 58.07 ರಷ್ಟಿದೆ. ಒಟ್ಟಾರೆ ಫಲಿತಾಂಶ ಶೇ.66.14ರಷ್ಟು ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಶೇ.91.12ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇ.89.96ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆ 83.19 ರಷ್ಟು, ಶಿವಮೊಗ್ಗ ಜಿಲ್ಲೆ 82.29 ಹಾಗೂ ಕೊಡಗು ಜಿಲ್ಲೆ 82.21 ರಷ್ಟು ಫಲಿತಾಂಶ ಪಡೆಯುವ ಮೂಲಕ ಮೊದಲ ಐದು ಸ್ಥಾನದಲ್ಲಿವೆ. ಶೇ. 42.43 ರಷ್ಟು ಫಲಿತಾಂಶದೊಂದಿಗೆ ಕಲಬುರಗಿ ಕೊನೆಯ ಸ್ಥಾನದಲ್ಲಿದೆ.

ಕರ್ನಾಟಕ ರಾಜ್ಯ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು, (ಮೇ 2) ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಿತ್ತು.

ಫಲಿತಾಂಶವು ಮಧ್ಯಾಹ್ನ 12:30ರ ನಂತರ ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು kseab.karnataka.gov.in ನಲ್ಲಿ ಲಭ್ಯವಾಗಿತ್ತು. ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ರಾಜ್ಯಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. ಒಟ್ಟು 8,96,447 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ 4,61,563 ಬಾಲಕರು ಮತ್ತು 4,34,884 ಬಾಲಕಿಯರು ಸೇರಿದ್ದಾರೆ. ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:15 ಗಂಟೆಯವರೆಗೆ ಒಂದೇ ಅವಧಿಯಲ್ಲಿ ನಡೆದಿದ್ದರು. ಅಕ್ರಮಗಳು ನಡೆಯದಂತೆ ಕೃತಕ ಬುದ್ದಿಮತ್ತೆ (AI) ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗಿತ್ತು.


ರಿಸಲ್ಟ್​ ಈ ರೀತಿ ಪರೀಕ್ಷಿಸಿ

  • ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಿ.
  • ಎಸ್‌ಎಸ್‌ಎಲ್‌ಸಿ ಫಲಿತಾಂಶ 2025" ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • ಫಲಿತಾಂಶವು ಪರದೆಯ ಮೇಲೆ ಕಾಣುತ್ತದೆ .
  • ಭವಿಷ್ಯದ ಉಪಯೋಗಕ್ಕಾಗಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ.

ಇದರ ಜೊತೆಗೆ, ಎಸ್​​ಎಂಎಸ್​ ಮತ್ತು ಡಿಜಿಲಾಕರ್ ಮೂಲಕವೂ ಫಲಿತಾಂಶವನ್ನು ಪರಿಶೀಲಿಸುವ ಸೌಲಭ್ಯವಿದೆ ಎಂದು ಮಂಡಳಿ ಮಾಹಿತಿ ನೀಡಿದೆ.

ಉತ್ತೀರ್ಣರಾಗಲು ಬೇಕಾಗಿರುವ ಅಂಕಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ 35% ಅಂಕಗಳನ್ನು ಗಳಿಸಬೇಕು. ಒಟ್ಟಾರೆ 35% ಅಂಕಗಳು ಮತ್ತು ಒಳಗೊಂಡಿರುವ ಪ್ರಾಯೋಗಿಕ ಅಥವಾ ಆಂತರಿಕ ಮೌಲ್ಯಮಾಪನದಲ್ಲಿ ಅಗತ್ಯ ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ಈ ಅಂಕಗಳನ್ನು ಗಳಿಸಲು ವಿಫಲರಾದರೆ, ಅವರಿಗೆ ಎರಡು ಹೆಚ್ಚುವರಿ ಅವಕಾಶಗಳು ಲಭ್ಯವಿರುತ್ತವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಮತ್ತು ಪರೀಕ್ಷೆ-3 ಮೂಲಕ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಬಹುದು. ಈ ಪರೀಕ್ಷೆಗಳ ವಿವರಗಳನ್ನು ಫಲಿತಾಂಶ ಪ್ರಕಟವಾದ ನಂತರ ಘೋಷಿಸಲಾಗುವುದು.

ಮಂಗಳೂರಿನ ಬಂದ್‌ನಿಂದ ವಿದ್ಯಾರ್ಥಿಗಳಿಗೆ ತೊಂದರೆ

ಈ ಮಧ್ಯೆ, ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರೆ ನೀಡಿದೆ. ಹೀಗಾಗಿ ಫಲಿತಾಂಶ ವೀಕ್ಷಣೆಗಾಗಿ ಶಾಲೆಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ.

Live Updates

  • 2 May 2025 3:09 PM IST

    ಉರ್ದು ಪ್ರೌಢ ಶಾಲೆಯ ವಿಧ್ಯಾರ್ಥಿನಿ ಟಾಪರ್!

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಉರ್ದು ಪ್ರೌಢ ಶಾಲೆಯ ವಿಧ್ಯಾರ್ಥಿನಿ ಶಗುಪ್ತಾ ಅಂಜುಮ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625ಅಂಕ ಗಳಿಸಿದ್ದಾರೆ. 



  • 2 May 2025 3:03 PM IST

    ಮತ್ತೆ ಹಿಂದೆ ಬಿದ್ದ ವಿದ್ಯಾಕಾಶಿ ಧಾರವಾಡ!

    ಧಾರವಾಡ ಜಿಲ್ಲೆಯಲ್ಲಿ ಮಿಶನ್ ವಿದ್ಯಾಕಾಶಿ ಎಂಬ ವಿಶೇಷ ಕಾರ್ಯಕ್ರಮವನ್ನು ಕಳೆದ ಒಂದು ವರ್ಷದಿಂದ ವಿಶೇಷ ತರಗತಿಯನ್ನು ಜಿಲ್ಲಾಡಳಿತ ಆರಂಭಿಸಿತ್ತು. 2024ರ ಫಲಿತಾಂಶದಲ್ಲಿ 22ನೇ ರ‍್ಯಾಂಕ್‌ ಪಡೆದಿದ್ದ ಜಿಲ್ಲೆ ಈ ಬಾರಿ 22 ರಿಂದ 18ನೇ ರ‍್ಯಾಂಕ್‌ಗೆ ಇಳಿದಿದೆ. 

  • 2 May 2025 12:03 PM IST

    ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ: ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ

    ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ದ್ವಿತೀಯ ಸ್ಥಾನ ಮತ್ತು ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ. ಒಟ್ಟು 22ವಿದ್ಯಾರ್ಥಿಗಳು 625 ಕ್ಕೆ 625ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. 


  • 2 May 2025 11:54 AM IST

    ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆರಂಭ

    ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ಶುರುವಾಗಿದ್ದು, ಕೆಲವೇ ಕ್ಷಣಗಳಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ  ಪ್ರಕಟ ಮಾಡಲಿದ್ದಾರೆ. 

  • 2 May 2025 10:05 AM IST

     2024ರಲ್ಲಿ ಒಟ್ಟಾರೆ ಉತ್ತೀರ್ಣ ಪ್ರಮಾಣ 73.40% ಆಗಿತ್ತು, ಆದರೆ ಇದು 2023ರ 83.89% ಮತ್ತು 2022ರ 85.13% ಗಿಂತ ಕಡಿಮೆಯಾಗಿತ್ತು. 

  • 2 May 2025 10:03 AM IST

    ಈ ಬಾರಿ ಹೆಚ್ಚುವರಿ ಗ್ರೇಸ್‌ ಅಂಕ ಇಲ್ಲ

    ಪರೀಕ್ಷಾ ಅಕ್ರಮ ತಡೆಗೆ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕಳೆದ ಸಾಲಿನಲ್ಲಿ ನೀಡಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್‌ ಅಂಕ ವ್ಯವಸ್ಥೆಯನ್ನು ಈ ಬಾರಿ ಕೈಬಿಡಲಾಗಿದೆ. ಕಳೆದ ಬಾರಿ ಹೆಚ್ಚುವರಿ ಗ್ರೇಸ್‌ ಅಂಕ ನೀಡಿದ್ದರೂ ಶೇ.10ರಷ್ಟು ಫಲಿತಾಂಶ ಕುಸಿದಿತ್ತು. 

  • 2 May 2025 10:02 AM IST

    50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ

    ಏ.11ರಿಂದ ರಾಜ್ಯಾದ್ಯಂತ ನೂರಾರು ಕೇಂದ್ರಗಳಲ್ಲಿ ಸುಮಾರು 75 ಸಾವಿರಕ್ಕೂ ಹೆಚ್ಚು ಮೌಲ್ಯಮಾಪಕರು 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದರು. ಕಳೆದ ವಾರವೇ ಮೌಲ್ಯಮಾಪನ ಕಾರ್ಯ ಮುಕ್ತಾಯಗೊಂಡಿದ್ದು, ಫಲಿತಾಂಶದ ಕಂಪ್ಯೂಟರೀಕರಣ ಪ್ರಕ್ರಿಯೆ ನಡೆದಿತ್ತು.

Read More
Next Story