ಕರ್ನಾಟಕದಲ್ಲಿ ಶುಶ್ರೂಷಕರ ನೋಂದಣಿಗಾಗಿ ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನ: ಇದು ದೇಶದಲ್ಲೇ ಮೊದಲು
x

ಕರ್ನಾಟಕದಲ್ಲಿ ಶುಶ್ರೂಷಕರ ನೋಂದಣಿಗಾಗಿ ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನ: ಇದು ದೇಶದಲ್ಲೇ ಮೊದಲು

ಈ ತಂತ್ರಜ್ಞಾನದ ನೆರವಿನಿಂದ, ಶುಶ್ರೂಷಕರ ವೈಯಕ್ತಿಕ ಮಾಹಿತಿ, ವಿಳಾಸ, ಫೋಟೋ ಸೇರಿದಂತೆ ಇತರೆ ಡಾಟಾಗಳನ್ನು ಆಧಾರ್‌ ಇ-ಕೆವೈಸಿ (E-Kyc) ಮೂಲಕ ನೇರವಾಗಿ ಆಧಾರ್‌ ಸರ್ವರ್‌ನಿಂದ ಕರ್ನಾಟಕ ಶುಶ್ರೂಷ ಪರಿಷತ್‌ ಪಡೆದುಕೊಳ್ಳಲಿದೆ.


ದೇಶದಲ್ಲೇ ಮೊದಲ ಬಾರಿಗೆ ಶುಶ್ರೂಷಕರ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್‌ ಅಭಿವೃದ್ಧಿಪಡಿಸಿರುವ ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನ ಜಾರಿಗೆ ಬಂದಿದೆ. ಈ ನೂತನ ತಂತ್ರಜ್ಞಾನವನ್ನು ನಾಳೆ (ಮಂಗಳವಾರ) ಲೋಕಾರ್ಪಣೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್‌ ತಿಳಿಸಿದರು.

ಜುಲೈ 15, ಮಂಗಳವಾರದಂದು ಆಧಾರ್‌, ಡಿಜಿ ಲಾಕರ್‌ ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ತಂತ್ರಜ್ಞಾನ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು. ಈ ತಂತ್ರಜ್ಞಾನವನ್ನು ಯುಐಡಿಎಐ (UIDAI), ಸಿ-ಇಜಿ (C-eG), ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ (RGUHS) ಹಾಗೂ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ (KSDNEB) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಈ ತಂತ್ರಜ್ಞಾನದ ನೆರವಿನಿಂದ, ಶುಶ್ರೂಷಕರ ವೈಯಕ್ತಿಕ ಮಾಹಿತಿ, ವಿಳಾಸ, ಫೋಟೋ ಸೇರಿದಂತೆ ಇತರೆ ಡಾಟಾಗಳನ್ನು ಆಧಾರ್‌ ಇ-ಕೆವೈಸಿ (E-Kyc) ಮೂಲಕ ನೇರವಾಗಿ ಆಧಾರ್‌ ಸರ್ವರ್‌ನಿಂದ ಕರ್ನಾಟಕ ಶುಶ್ರೂಷ ಪರಿಷತ್‌ ಪಡೆದುಕೊಳ್ಳಲಿದೆ. ಇದರಿಂದಾಗಿ ಶುಶ್ರೂಷಕರು ನೋಂದಣಿಗಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿನ ಕೇಂದ್ರ ಕಚೇರಿಗೆ ಬರುವ ತೊಂದರೆ ತಪ್ಪಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಶುಶ್ರೂಷಕರ ಸಂಕಷ್ಟಕ್ಕೆ ಮುಕ್ತಿ: ಲಕ್ಷಾಂತರ ಜನರಿಗೆ ಅನುಕೂಲ

ಈ ಹಿಂದೆ, ರಾಜ್ಯ ಮತ್ತು ಹೊರ ರಾಜ್ಯದ ಶುಶ್ರೂಷಕರು ಕೇವಲ ನೋಂದಣಿಯ ಉದ್ದೇಶದಿಂದ ಊಟ, ವಸತಿಗಾಗಿ ಸಾವಿರಾರು ರೂಪಾಯಿ ವ್ಯಯಿಸಿ ಬೆಂಗಳೂರಿಗೆ ಬಂದು ಪರದಾಡುತ್ತಿದ್ದರು. ಅಲ್ಲದೆ, ಕೇಂದ್ರ ಕಚೇರಿಯಲ್ಲಿ ನೋಂದಣಿಗಾಗಿ ಸರತಿ ಸಾಲಿನಲ್ಲಿ ನಿಂತು ಕಾಯಬೇಕಿತ್ತು. ಮಹಿಳೆಯರು, ಗರ್ಭಿಣಿಯರು, ಹಸುಗೂಸುಗಳ ತಾಯಂದಿರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ನೂತನ ಡಿಜಿ ಲಾಕರ್‌ ತಂತ್ರಜ್ಞಾನದ ಅಳವಡಿಕೆಯಿಂದ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರಕಿದಂತಾಗಿದೆ ಎಂದು ಡಾ. ಪಾಟೀಲ್‌ ವಿವರಿಸಿದರು.

"ನಾಡಿನ ನಾನಾ ಮೂಲೆಗಳಿಂದ ಮತ್ತು ವಿವಿಧ ಹೊರರಾಜ್ಯಗಳಿಂದ ಬರುತ್ತಿದ್ದ ಶುಶ್ರೂಷಕರ ತೊಂದರೆಗಳನ್ನು ತಪ್ಪಿಸಲು ದೇಶದಲ್ಲೇ ಪ್ರಥಮ ಬಾರಿಗೆ ಆಧಾರ್‌ ಮತ್ತು ಡಿಜಿ ಲಾಕರ್‌ ಇ-ಕೆವೈಸಿ ಮೂಲಕ ಅವಕಾಶ ಮಾಡಿಕೊಡಲಾಗುತ್ತಿದೆ. ವ್ಯಾಪಕವಾಗಿ ಅಭಿವೃದ್ಧಿಗೊಳ್ಳುತ್ತಿರುವ ಡಿಜಿಟಲ್‌ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ನೆರವಿನಿಂದ ನಮ್ಮ ಸರ್ಕಾರ ಅಳವಡಿಸಿಕೊಂಡಿರುವ ಈ ನೂತನ ತಂತ್ರಜ್ಞಾನ ಲಕ್ಷಾಂತರ ಶುಶ್ರೂಷಕರ ತೊಂದರೆ ತಾಪತ್ರಯಗಳಿಗೆ ಅಂತ್ಯ ಹಾಡಲಿದೆ," ಎಂದು ಸಚಿವರು ಹೇಳಿದರು.

ನಕಲಿ ಪ್ರಮಾಣಪತ್ರಗಳಿಗೆ ಕಡಿವಾಣ

ಈ ಹೊಸ ಡಿಜಿ ಲಾಕರ್‌ (Digi Locker-Requester) ತಂತ್ರಜ್ಞಾನವು ನಕಲಿ ಪ್ರಮಾಣಪತ್ರಗಳ ಹಾವಳಿಯನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತಿನ ಕುಲಸಚಿವರಾದ ಡಾ. ಕೆ. ಮಲ್ಲು ತಿಳಿಸಿದರು. ಈ ವ್ಯವಸ್ಥೆಯಿಂದ ಶುಶ್ರೂಷಕರ ಆಧಾರ್‌ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿ ಮತ್ತಿತರ ಪ್ರಮಾಣಪತ್ರಗಳನ್ನು ಸಂಬಂಧಪಟ್ಟ ಆಯಾ ಪರೀಕ್ಷಾ ಬೋರ್ಡ್‌ಗಳಿಂದ ನೇರವಾಗಿ ಪಡೆದುಕೊಳ್ಳಲಾಗುತ್ತದೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿಗಳು ಅಳವಡಿಸಿಕೊಂಡಿರುವ ಈ ತಂತ್ರಜ್ಞಾನದಿಂದ, ಪರೀಕ್ಷಾ ಫಲಿತಾಂಶವನ್ನು ನೇರವಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್‌ ಪಡೆದುಕೊಳ್ಳಲಿದೆ. ನಂತರ ಡಿಜಿ ಲಾಕರ್‌ ತಂತ್ರಜ್ಞಾನ (Digi Locker-Issuer) ದಿಂದ ಶುಶ್ರೂಷಕರಿಗೆ ನೇರವಾಗಿ ನೋಂದಣಿ ಪತ್ರವನ್ನು ವಿತರಿಸಬಹುದಾಗಿದೆ ಎಂದು ಡಾ. ಕೆ. ಮಲ್ಲು ಮಾಹಿತಿ ನೀಡಿದರು. ಈ ಮೂಲಕ ನೋಂದಣಿ ಪ್ರಕ್ರಿಯೆಯು ಹೆಚ್ಚು ಪಾರದರ್ಶಕ ಮತ್ತು ಸುರಕ್ಷಿತವಾಗಲಿದೆ.

Read More
Next Story