ಹೃದಯಾಘಾತ ಪ್ರಕರಣ ಹೆಚ್ಚಳ: ಮೈಸೂರು ಜಯದೇವಕ್ಕೆ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲು ಸೂಚನೆ
x

ಹೆಚ್ಚುವರಿ ವೈದ್ಯರನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು. 

ಹೃದಯಾಘಾತ ಪ್ರಕರಣ ಹೆಚ್ಚಳ: ಮೈಸೂರು ಜಯದೇವಕ್ಕೆ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲು ಸೂಚನೆ

ಆಸ್ಪತ್ರೆಗೆ ನಿತ್ಯ 700 ಜನರ ಬದಲಿಗೆ ಸುಮಾರು 2,000 ಜನರು ಆರೋಗ್ಯ ತಪಾಸಣೆಗೆ ಬರುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚುವರಿ ತಜ್ಞ ವೈದ್ಯರನ್ನು ನಿಯೋಜನೆ ಮಾಡಬೇಕು ಎಂದು ಸಿಎಂಗೆ ದಿನೇಶ್‌ ಗೂಳಿಗೌಡ ಪತ್ರ ಬರೆದಿದ್ದರು.


ರಾಜ್ಯದ ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವುದರಿಂದ ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಗೆ ತುರ್ತಾಗಿ ತಜ್ಞ ವೈದ್ಯರನ್ನು ನಿಯೋಜಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿರುವುದರಿಂದ ಆತಂಕಗೊಂಡ ಜನರು ಚಿಕಿತ್ಸೆಗಾಗಿ ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತಿದ್ದಾರೆ. ಹೀಗಾಗಿ ಈ ಆಸ್ಪತ್ರೆಗೆ ಇತರೆ ಜಿಲ್ಲೆಗಳಿಂದ ತುರ್ತಾಗಿ ತಜ್ಞ ವೈದ್ಯರನ್ನು ನಿಯೋಜನೆ ಮಾಡುವಂತೆ ವಿಧಾನ ಪರಿಷತ್‌ ಶಾಸಕ ದಿನೇಶ್ ಗೂಳಿಗೌಡ ಸಿಎಂ ಸಿದ್ದರಾಮಯ್ಯಗೆ ಗುರುವಾರ(ಜು.3) ಪತ್ರ ಬರೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತಿಳಿಸಿದ್ದಾರೆ.

ಸಾಮಾನ್ಯವಾಗಿ 30 ರಿಂದ 50 ವರ್ಷ ವಯಸ್ಸಿನವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಿತ್ಯ 700 ಜನರ ಬದಲಿಗೆ ಸುಮಾರು 2,000 ಜನರು ಆಸ್ಪತ್ರೆಗೆ ಬರುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚುವರಿ ತಜ್ಞ ವೈದ್ಯರ ನಿಯೋಜನೆ ಮಾಡಬೇಕಿದೆ. ಅಲ್ಲದೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಾಥಮಿಕ ತಪಾಸಣೆ ವ್ಯವಸ್ಥೆ, ಹೃದಯಾಘಾತದ ಕಾರಣಗಳ ಕುರಿತು ಸಮಗ್ರ ಅಧ್ಯಯನ, ಜನಜಾಗೃತಿ ಮತ್ತು ಆರೋಗ್ಯ ಮೂಲಸೌಕರ್ಯ ಬಲಪಡಿಸುವಿಕೆ ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿ ಕ್ರಮ ವಹಿಸುವಂತೆ ಸಿಎಂ, ಡಿಸಿಎಂ, ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒತ್ತು

ಆಯಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣ ಕಂಡುಬಂದವರಿಗೆ ಪ್ರಾರ್ಥಮಿಕ ಪರೀಕ್ಷೆಗೊಳಪಡಿಸಿ ಚಿಕಿತ್ಸೆ ನೀಡಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಮಾತ್ರ ಮೈಸೂರಿನ ಜಯದೇವಕ್ಕೆ ಕಳುಹಿಸುವ ವ್ಯವಸ್ಥೆಯಾಗಬೇಕಿದೆ. ಇದರಿಂದ ಮುಖ್ಯ ಆಸ್ಪತ್ರೆಯ ಮೇಲಿನ ಒತ್ತಡ ತಪ್ಪುತ್ತದೆ. ಜತೆಗೆ ಈ ಭಾಗದಲ್ಲಿ ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನೂ ತಪ್ಪಿಸಬಹುದಾಗಿದೆ.

ಅಧ್ಯಯನ ಅಗತ್ಯ

ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ವೈಜ್ಞಾನಿಕ ಮತ್ತು ಸಮಗ್ರವಾಗಿ ಅಧ್ಯಯನ ಮಾಡುವ ಮೂಲಕ ಕಾರಣಗಳನ್ನು ಕಂಡುಕೊಳ್ಳಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಪ್ರಕರಣಗಳನ್ನು ವಿಶ್ಲೇಷಿಸಿ ಇವುಗಳ ಹೆಚ್ಚಳಕ್ಕೆ ಕಾರಣಗಳನ್ನು ಗುರುತಿಸಬೇಕು, ಅನುವಂಶೀಯತೆ, ಆಹಾರ ಪದ್ಧತಿ, ಆಧುನಿಕ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ, ಧೂಮಪಾನ, ಮದ್ಯಪಾನ ಮತ್ತು ಇತರ ವ್ಯಸನಗಳ ಪಾತ್ರದ ಬಗ್ಗೆ ಸಮಗ್ರ ಅಧ್ಯಯನ ಮಾಡಬೇಕು ಎಂದು ತಿಳಿಸಿದ್ದಾರೆ.

ಜನರಲ್ಲಿ ಅರಿವು ಅಗತ್ಯ

ಆಹಾರ ಪದಾರ್ಥಗಳಲ್ಲಿನ ಕಲಬೆರಕೆ, ವಾಯು ಮತ್ತು ಜಲ ಮಾಲಿನ್ಯದಂತಹ ಪರಿಸರ ಅಂಶಗಳು ಹೃದಯದ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ತಜ್ಞರ ಸಮಿತಿಯಿಂದ ಅಧ್ಯಯನ ನಡೆಯಬೇಕು. ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ನಂತಹ ಕಾಯಿಲೆಗಳ ನಿರ್ವಹಣೆ ಮತ್ತು ಹೃದಯದ ಆರೋಗ್ಯದ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿರುವುದರಿಂದ ಈ ಕುರಿತು ಜನಸಾಮಾನ್ಯರಲ್ಲಿ ವ್ಯಾಪಕ ಅರಿವು ಮೂಡಿಸುವುದು ಅತ್ಯಂತ ಮಹತ್ವದಾಗಿದೆ ಎಂದರು.

ರಾಜ್ಯದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ನರ್ಸಿಂಗ್ ಕಾಲೇಜುಗಳ ಸಹಯೋಗದಿಂದಾಗಿ ಹೃದಯಾಘಾತದ ಲಕ್ಷಣಗಳು, ತಡೆಗಟ್ಟುವ ಕ್ರಮಗಳು, ಆರೋಗ್ಯಕರ ಜೀವನಶೈಲಿಯ ಪ್ರಾಮುಖ್ಯತೆ ಮತ್ತು ತುರ್ತು ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಣ್ಣ ಎದೆನೋವು, ಕುತ್ತಿಗೆ ನೋವು, ಬೆನ್ನು ನೋವುಗಳಿಗೂ ಜನರು ಭಯಪಟ್ಟು ಆಸ್ಪತ್ರೆಗಳಿಗೆ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಆತಂಕ ನಿವಾರಣಾ ಶಿಬಿರಗಳನ್ನು ಏರ್ಪಡಿಸಬೇಕು.

ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಿ

ಹೃದಯಾಘಾತ ಪ್ರಕರಣಗಳನ್ನು ನಿಭಾಯಿಸಲು ಪ್ರಸ್ತುತ ಆರೋಗ್ಯ ಮೂಲಸೌಕರ್ಯವನ್ನು ತುರ್ತಾಗಿ ಬಲಪಡಿಸುವುದು ಅತ್ಯಗತ್ಯವಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ವೈದ್ಯರು, ನರ್ಸ್‌ಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ಹೃದಯ ಸಂಬಂಧಿ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ವಿಶೇಷ ತರಬೇತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Read More
Next Story