
ಕೃಷ್ಣ ಮೇಲ್ದಂಡೆ ಯೋಜನೆ-3| ಭೂಸ್ವಾಧೀನ, ಪರಿಹಾರ ನಿರ್ಣಯಕ್ಕೆ ಸೆ.16 ರಂದು ವಿಶೇಷ ಸಂಪುಟ ಸಭೆ
ಒಪ್ಪಂದದ ಐತೀರ್ಪು ರಚಿಸಲು ಏಕರೂಪದ ದರ ನಿಗದಿಪಡಿಸಲು ಹಾಗೂ ಇನ್ನಿತರ ಆಡಳಿತಾತ್ಮಕ ವಿಷಯಗಳಿಗೆ ಅನುಮೋದನೆ ನೀಡುವ ಕುರಿತು ವಿಸ್ತೃತವಾದ ಹಾಗೂ ಸಕಾರಾತ್ಮಕ ಚರ್ಚೆ ನಡೆದಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗಳಿಗಾಗಿ ಅವಶ್ಯವಿರುವ ಜಮೀನಿಗೆ ಪರಿಹಾರ ನೀಡಲು ಮತ್ತು ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಸೆ.16 ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಕೈಗೊಳ್ಳುವ ಕುರಿತಂತೆ ಒಪ್ಪಂದದ ಐತೀರ್ಪು ರಚಿಸಲು ಏಕರೂಪದ ದರ ನಿಗದಿಪಡಿಸಲು ಹಾಗೂ ಇನ್ನಿತರ ಆಡಳಿತಾತ್ಮಕ ವಿಷಯಗಳಿಗೆ ಅನುಮೋದನೆ ನೀಡುವ ಕುರಿತು ವಿಸ್ತೃತವಾದ ಹಾಗೂ ಸಕಾರಾತ್ಮಕ ಚರ್ಚೆ ನಡೆದಿದೆ ಎಂದರು.
ಉತ್ತರ ಕರ್ನಾಟಕದ ದಶಕಗಳ ಕನಸಾದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಬುಧವಾರ (ಸೆ.10) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರು ಹರಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಲಾಗಿದೆ.
100 ಟಿಎಂಸಿ ನೀರು ಸಂಗ್ರಹ
ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ತೀರ್ಪಿನ ಅನ್ವಯ, ಕರ್ನಾಟಕಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರನ್ನು ಬಳಸಿಕೊಂಡು, ಸುಮಾರು 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ, ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಎತ್ತರಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ, ಹೆಚ್ಚುವರಿಯಾಗಿ 100 ಟಿಎಂಸಿ ನೀರನ್ನು ಸಂಗ್ರಹ ಸಾಧ್ಯವಾಗಲಿದೆ.
1,33,867 ಎಕರೆ ಜಮೀನು ಭೂಸ್ವಾಧೀನ
ಈ ಬೃಹತ್ ಯೋಜನೆಗೆ ಒಟ್ಟು 1,33,867 ಎಕರೆ ಜಮೀನು ಭೂಸ್ವಾಧೀನದ ಅಗತ್ಯವಿದೆ. ಇದರಲ್ಲಿ 75,563 ಎಕರೆ ಜಮೀನು ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ. ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಜಮೀನು ಕಳೆದುಕೊಳ್ಳುವ ರೈತರಿಗೆ ನ್ಯಾಯಯುತವಾದ ಪರಿಹಾರವನ್ನು ಒದಗಿಸಲು ಮತ್ತು ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಈ ಕುರಿತು ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದರು.
ಹೊರಗುತ್ತಿಗೆ ನೌಕರರ ಸೇವಾ ಭದ್ರತೆಗೆ ಉಪಸಮಿತಿ ರಚನೆ
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮತ್ತು ನಿಗಮ ಮಂಡಳಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ನೌಕರರಿಗೆ ಸೇವಾ ಭದ್ರತೆ ಮತ್ತು ಇತರ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕುರಿತು ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟದ ಉಪಸಮಿತಿಯೊಂದನ್ನು ರಚಿಸಲು ಸಚಿವ ಸಂಪುಟ ತೀರ್ಮಾನಿಸಿದೆ.
ರಾಜ್ಯದ ಎಲ್ಲಾ ಕಾರ್ಮಿಕರ ಹಿತದೃಷ್ಟಿಯಿಂದ ವಿವಿಧ ಇಲಾಖೆಗಳು ಮತ್ತು ಇಲಾಖೆಗಳ ಅಧಿನದಲ್ಲಿರುವ ನಿಗಮ ಮಂಡಳಿಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಗಳ ಬಗ್ಗೆ ಸೂಕ್ತ ನಿರ್ಣಯವನ್ನು ಸಚಿವ ಸಂಪುಟದ ಉಪಸಮಿತಿ ಕೈಗೊಳ್ಳಲಿದೆ. ಹೊರಗುತ್ತಿಗೆ ನೌಕರರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಅಪಾಯಕಾರಿ ಸೇವೆ ಸಲ್ಲಿಸುವ ನೌಕರರ ಹಿತರಕ್ಷಣೆ ಮಾಡುವ ದೃಷ್ಟಿಯಿಂದ ಸಚಿವ ಸಂಪುಟ ಉಪಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಪ್ರಮುಖ ನಿರ್ಣಯಗಳು
- "ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2025"ಕ್ಕೆ ಅನುಮೋದನೆ .
- ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದ ಬಗ್ಗೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲು ಅನುಮೋದನೆ.
- ಮಾಲೂರು, ಕೊರಟಗೆರೆ, ಮಾಗಡಿ, ಕುಶಾಲನಗರ, ಜಗಳೂರು, ಸವಣೂರು, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಹಾಕ್ ಆಸ್ಪತ್ರೆಗಳ ನವೀಕರಣ ಕಾಮಗಾರಿಗಳನ್ನು ಒಟ್ಟು ರೂ.542.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ.
- ವಿಜಯಪುರ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ವಿಜಯಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಪರಿಷ್ಕೃತ ಅಭಿವೃದ್ಧಿ ಕಾಮಗಾರಿಗಳ ಒಟ್ಟು ಮೊತ್ತ 618.75 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಮೊದಲು ಮುಖ್ಯಕಾರ್ಯದರ್ಶಿಗಳಿಂದ ಪ್ರಗತಿ ಪರಿಶೀಲನಾ ವರದಿ ಪಡೆದು ಸಚಿವ ಸಂಪುಟಕ್ಕೆ ನೀಡಲು ಸೂಚನೆ.
- 35 ಸಂಚಾರಿ ಆರೋಗ್ಯ ಘಟಕಗಳ ದುರಸ್ತಿಯನ್ನು ಕೈಗೊಂಡು ಹೊಸದಾಗಿ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ, ಸದರಿ ವಾಹನಗಳನ್ನು Connected Health Eco-System ಸಂಚಾರಿ ಆರೋಗ್ಯ ಘಟಕಗಳಾಗಿ ರೂ. 12.25 ಕೋಟಿಗಳ ವೆಚ್ಚದಲ್ಲಿ ಪರಿವರ್ತಿಸಲು ಹಾಗೂ ರೂ. 14.70 ಕೋಟಿಗಳ ಅಂದಾಜು ಮೊತ್ತದಲ್ಲಿ ಸದರಿ ವಾಹನಗಳ ವಾರ್ಷಿಕ ನಿರ್ವಹಣೆ ಮಾಡಲು ಅನುಮೋದನೆ.
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಸುಂಕ ಸಂಗ್ರಹಣೆಯನ್ನು ಹೆಚ್ಚಿಸಲು "Labour Cess Tracking & Monitoring System Software" ಎಂಬ ನೂತನ ತಂತ್ರಾಂಶವನ್ನು 28.19 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಸಚಿವ ಸಂಪುಟ ಮಂಜೂರಾತಿ.
- ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 1000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್ಗಳಿಗೆ ಅವಶ್ಯವಿರುವ ಉಪಕರಣಗಳು, ಪೀಠೋಪಕರಣಗಳನ್ನು ರೂ. 20.05 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ಕ್ಷೇತ್ರಗಳಲ್ಲಿ ವಿವಿಧ ವಿಧಾನಸಭಾಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿನ ಅತೀ ಹಿಂದುಳಿದ ಕಾಲೊನಿಗಳನ್ನು ಮಾದರಿ ಕಾಲೊನಿಗಳನ್ನಾಗಿ ಅಭಿವೃದ್ಧಿ ಪಡಿಸಲು ರೂ. 398.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
- ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಸಜ್ಜೆಪಾಳ್ಯ ಗ್ರಾಮದಲ್ಲಿರುವ ಸರ್ವೆ ನಂಬರ್ 04ರಲ್ಲಿ ಲಭ್ಯವಿರುವ ಜಮೀನಿನಲ್ಲಿ 5 ಎಕರೆ ಜಮೀನನ್ನು ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಕೇಂದ್ರ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸಲು "ಶ್ರೀ ಮಹರ್ಷಿ ವಾಲ್ಮೀಕಿ ಸೌಧ” ನಿರ್ಮಾಣ ಮಾಡಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿದೆ.
- ಮೆ|| ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ ವತಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಘನತ್ಯಾಜ್ಯದ ಪೈಕಿ 300 ಮೆಟ್ರಿಕ್ ಟನ್ ಹಸಿ ತ್ಯಾಜ್ಯವನ್ನು ಉಪಯೋಗಿಸಿಕೊಂಡು Compressed Bio-Gas Plant ಅನ್ನು ಸ್ಥಾಪಿಸಲು ಹರಳಗುಂಟೆ ಗ್ರಾಮದ (KCDC ಸಂಸ್ಕರಣಾ ಘಟಕ) ಸರ್ವೆ ನಂ: 39, 40, 45 ಮತ್ತು 46ರಲ್ಲಿ ಲಭ್ಯವಿರುವ ಸುಮಾರು 18.00 ಎಕರೆ ಜಾಗವನ್ನು ಸೀಮಿತ ಬಳಕೆಗೋಸ್ಕರ ಮಾತ್ರ (For permissive use only) ಆಧಾರದಲ್ಲಿ 25 ವರ್ಷಗಳ ಅವಧಿಗೆ ಮೆ|| ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ನೀಡಲು ಸರ್ಕಾರಿ ಆದೇಶ ದಿನಾಂಕ: 30.12.2022 ನ್ನು ಪರಿಷ್ಕರಿಸಲು ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೈರಮಂಗಲ ಕೆರೆಯ ದಡದಲ್ಲಿ 100 ದಶಲಕ್ಷ ಲೀಟರ್ ಸಾಮರ್ಥ್ಯದ ದ್ವಿತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ಹಾಗೂ 25 ದಶಲಕ್ಷ ಲೀಟರ್ ಸಾಮರ್ಥ್ಯದ ತೃತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿ ಮತ್ತು ಈ ಘಟಕಗಳ 07 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (O&M)ಯನ್ನು ಒಟ್ಟು ರೂ. 391.82 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
- ರಾಯಚೂರು ಜಿಲ್ಲೆ, ಮಾನ್ಸಿ ತಾಲ್ಲೂಕಿನ ಯಡವಿಹಾಳ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ನೀರನ್ನೆತ್ತಿ, ತುಂಗಭದ್ರಾ ಎಡದಂಡೆ ಕಾಲುವೆಯ ವಿತರಣಾ ಕಾಲುವೆ 76ರಡಿ ಸುಮಾರು 10,000 ಎಕರೆ ಬಾಧಿತ ಅಚ್ಚು ಕಟ್ಟಿಗೆ ನೀರೊದಗಿಸುವ ರೂ.109.10 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.