
ಕಂದಾಯ ಸಚಿವ ಕೃಷ್ಣಬೈರೇಗೌಡ
ಅವೈಜ್ಞಾನಿಕ ಭೂಸ್ವಾಧೀನ ಪ್ರಕ್ರಿಯೆಯಿಂದ ಸರ್ಕಾರಕ್ಕೆ ಭಾರೀ ನಷ್ಟ; ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಗರಂ
ಜಮೀನು ಮಾಲೀಕರಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯದಲ್ಲಿ ಬಹಳ ಹಿಂದಿನಿಂದಲೂ ಭಾರೀ ತಪ್ಪುಗಳು ನಡೆಯುತ್ತಲೇ ಇವೆ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ವಿಷಾದಿಸಿದರು.
ಭೂ ಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ಕೆಲ ಅಧಿಕಾರಿಗಳ ಬೇಜವ್ದಾರಿತನ ಹಾಗೂ ಅವೈಜ್ಞಾನಿಕ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳಿಗೆ ಶನಿವಾರ ಏರ್ಪಡಿಸಿದ್ದ “ಭೂ ಸ್ವಾಧೀನ ಹಾಗೂ ನ್ಯಾಯಾಲಯ ಪ್ರಕರಣಗಳ ವ್ಯವಹರಣೆ” ಕುರಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭೂ ಸ್ವಾಧೀನ ಹಾಗೂ ಜಮೀನು ಮಾಲೀಕರಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯದಲ್ಲಿ ಬಹಳ ಹಿಂದಿನಿಂದಲೂ ತಪ್ಪುಗಳು ನಡೆಯುತ್ತಲೇ ಇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗುತ್ತಿದೆ” ಎಂದು ವಿಷಾದಿಸಿದರು.
ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಮಾಲೀಕರಿಗೆ 2017ರ ಪರಿಷ್ಕೃತ ದರದ ಪರಿಹಾರ ನೀಡಬೇಕಾದ ಪ್ರಕರಣದಲ್ಲಿ ಕೆಲ ಅಧಿಕಾರಿಗಳು 2023ರ ಪರಿಷ್ಕೃತ ದರ ನೀಡಿದ್ದಾರೆ. ಎಲ್ಲಾ ಸರ್ವೇ ನಂಬರ್‌ಗಳ ನೀರಾವರಿ ಮತ್ತು ಖುಷ್ಕಿ ಜಮೀನುಗಳಿಗೆ ನಿಯಮ ಮೀರಿ ಒಂದೇ ದರ ನಿಗದಿ ಮಾಡಲಾಗಿದೆ. ಭೂ ಪರಿವರ್ತನೆಗೊಂಡು ಅಭಿವೃದ್ಧಿ ಪಡಿಸದ ಭೂಮಿಯ ಪೈಕಿ ಶೇ.55 ರಷ್ಟು ಭೂಮಿಗೆ ಮಾತ್ರ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಆದರೆ, ಹಲವು ಪ್ರಕರಣಗಳಲ್ಲಿ ಶೇ.100 ರಷ್ಟೂ ಪರಿಹಾರ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರು ಬರೆದಿದ್ದ ಪತ್ರವನ್ನು ಕಾರ್ಯಾಗಾರದಲ್ಲಿ ಸಚಿವರು ಓದಿ ಹೇಳಿದರು.
ಕೃಷಿ ಭೂಮಿಗೆ ಹೆಚ್ಚು ಪರಿಹಾರ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರು ಭೂ ಸ್ವಾಧೀನಕ್ಕೂ ಮುನ್ನ ತಮ್ಮ ಖುಷ್ಕಿ ಜಮೀನಲ್ಲಿ ದಿಢೀರನೇ ಸಸಿ ನೆಡುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೋಲಾರ ಜಿಲ್ಲೆ ನರಸಾಪುರದಲ್ಲಿ ಇಂತಹ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ, ಪರಿಹಾರ ನಿಗದಿ ಮಾಡುವ ಮುನ್ನ ಅಧಿಕಾರಿಗಳು ನಿಗದಿತ ಭೂಮಿಗೆ ಸಂಬಂಧಿಸಿದ ಸ್ಯಾಟಲೈಟ್ ಇಮೇಜ್ ಅನ್ನು ಒಮ್ಮೆ ಪರಿಶೀಲಿಸಲು ಸಮಸ್ಯೆ ಏನು?, ಇಡೀ ವಿಶ್ವದಲ್ಲೇ ಬೆಂಗಳೂರು ತಂತ್ರಜ್ಞಾನದಲ್ಲಿ ಅಗ್ರಮಾನ್ಯ ನಗರ. ಆದರೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಅಧಿಕಾರಿಗಳಿಗೆ ಏಕಿಷ್ಟು ತಾತ್ಸಾರ ಎಂದು ಅಸಮಾಧಾನ ಹೊರಹಾಕಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲೇ ಲಕ್ಷ ಕೋಟಿ ರೂ. ನಷ್ಟ
"ಅಧಿಕಾರಿಗಳ ಬೇಜವಾಬ್ದಾರಿ ಭೂಸ್ವಾಧೀನ ಪರಿಹಾರ ಪ್ರಕ್ರಿಯೆಯಿಂದ ಮಹತ್ವದ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲೇ ಸರ್ಕಾರಕ್ಕೆ ಕನಿಷ್ಟ 1 ಲಕ್ಷ ಕೋಟಿ ರೂ. ನಷ್ಟ ಉಂಟಾಗಲಿದೆ. ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಕ್ಯಾಬಿನೆಟ್‌ನಲ್ಲಿ 17,000 ಕೋಟಿ ರೂ. ಒಪ್ಪಿಗೆ ಪಡೆಯಲಾಗಿದೆ. ಯೋಜನೆಯ ಅಂದಾಜು ಒಟ್ಟು ವೆಚ್ಚ 51,000 ಕೋಟಿ ರೂ. ಆದರೆ, ಭೂ ಸ್ವಾಧೀನಕ್ಕೆ ಮಾತ್ರ 2.01 ಲಕ್ಷ ಕೋಟಿ ರೂ. ಹಣ ಸರ್ಕಾರದ ಬೊಕ್ಕಸದಿಂದ ಕರಗಿಹೋಗುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.
1.04 ಲಕ್ಷ ಎಕರೆ ಸ್ವಾಧೀನ
ಭೂಸ್ವಾಧೀನಗೊಂಡ ಜಮೀನಿಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರದ ಮೊತ್ತವನ್ನು ನಿಗದಿಪಡಿಸಲಾಗಿದೆ. ಮುಳುಗಡೆ ಭೂಮಿಗೆ 1.26 ಕೋಟಿ ರೂ, ಆರ್‌ಸಿ ಭೂಮಿಗೆ 5.53 ಕೋಟಿ ರೂ. ಹಾಗೂ ಬಿಟಿಡಿಎಲ್ ಭೂಮಿಗೆ 23.50 ಕೋಟಿ ರೂ. ಪರಿಹಾರ ಅಂತಿಮಗೊಳಿಸಲಾಗಿದೆ. ಈಗಾಗಲೇ 29,400 ಎಕರೆ ಭೂ ಸ್ವಾಧೀನಗೊಂಡಿದ್ದು, 66,000 ಕೋಟಿ ರೂ. ಹಣವನ್ನು ಪರಿಹಾರವಾಗಿ ನೀಡಲಾಗಿದೆ. ಆದರೆ, ಇನ್ನೂ 1.04ಲಕ್ಷ ಎಕರೆ ಭೂಮಿ ಸ್ವಾಧೀನಗೊಳ್ಳಬೇಕಿದ್ದು, ಅಷ್ಟೂ ಭೂಮಿಗೆ ಈಗಿನ ನಿಗದಿತ ದರದಲ್ಲೇ ಪರಿಹಾರ ನೀಡಿದರೂ 2.01ಲಕ್ಷ ಕೋಟಿ ರೂ. ಹಣ ಖರ್ಚಾಗಲಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳದೂ ತಪ್ಪಿದೆ
ಈ ವಿಚಾರದಲ್ಲಿ ಸರ್ಕಾರದ ವಕೀಲರು, ನಿಗಮ ಹಾಗೂ ಜನ ಪ್ರತಿನಿಧಿಗಳಾದ ನಮ್ಮದೂ ತಪ್ಪಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನಾಳೆ ಮಹತ್ವದ ಕೃಷ್ಣ ಮೇಲ್ದಂಡೆ ಯೋಜನೆ ಭವಿಷ್ಯ ಏನಾಗಲಿದೆ ಯೋಚಿಸಿ. ಯಾವ ಸರ್ಕಾರದಿಂದ ಇಷ್ಟು ಮೊತ್ತದ ಹಣ ನೀಡಲು ಸಾಧ್ಯ. ಇದೆಲ್ಲಕ್ಕೂ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ. ಅವರು ಸರಿಯಾದ ಸಮಯಕ್ಕೆ ನ್ಯಾಯಾಲಯದ ಅಪೀಲಿಗೆ ಹೋಗಿದ್ದರೆ ಭೂ ಸ್ವಾಧೀನ ಪ್ರಕ್ರಿಯೆಗಳು ಸರ್ಕಾರಕ್ಕೆ ಹೊರೆಯಾಗುತ್ತಿರಲಿಲ್ಲ ಎಂದರು.
ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ, ಯಾವ ಸರ್ಕಾರವೂ ಉಳಿಯುವುದಿಲ್ಲ, ಜನರನ್ನೂ ಉಳಿಸಲು ಆಗುವುದಿಲ್ಲ. ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು, ಇಲ್ಲದಿದ್ದರೆ ಅವರನ್ನು ಎಚ್ಚರಿಸುವ ವಿಧಾನವನ್ನೂ ಸರ್ಕಾರ ಅನಿವಾರ್ಯವಾಗಿ ಕೈಗೆತ್ತಿಕೊಳ್ಳಲಿದೆ. ಹೀಗಾಗಿ ಚರ್ಚೆ ಮಾಡಿ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕಾರ್ಯಾಗಾರ ಆರಂಭಿಸಲಾಗಿದೆ ಎಂದು ತಿಳಿಸಿದರು.