
ದೇವನಹಳ್ಳಿ ಭೂಸ್ವಾಧೀನ ಬಿಕ್ಕಟ್ಟು | ಭೂ ಸ್ವಾಧೀನ ಹೋರಾಟಕ್ಕೆ ಮಣಿದು ರೈತರಿಗೇ ಗಾಳ ಹಾಕಿತೇ ಸರ್ಕಾರ?
ರೈತರ ಹೋರಾಟಕ್ಕೆ ಮಣಿದು ಸರ್ಕಾರವೇನೋ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿದೆ. ಆದರೆ, ಭೂಮಿ ಮಾರುವವರಿಗೆ ಹೆಚ್ಚಿನ ಪರಿಹಾರ ಹಾಗೂ ಅಭಿವೃದ್ಧಿಪಡಿಸಿದ ಭೂಮಿ ನೀಡುವ ಆಮಿಷ ತೋರಿ ರೈತರನ್ನು ಸರ್ಕಾರ ಬಲೆಗೆ ಕೆಡವಿತೇ ಎಂಬ ಅನುಮಾನಗಳು ಮೂಡಿವೆ.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದರೂ ಷರತ್ತುಗಳ ಮೂಲಕ ರೈತರನ್ನು ಕಟ್ಟಿಹಾಕಿತೇ ಎಂಬ ಅನುಮಾನ ವ್ಯಕ್ತವಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ 1777 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಸರ್ಕಾರ ಕೈಬಿಟ್ಟಿದೆ. ಆದರೆ, ಇದೇ ವೇಳೆ ಸರ್ಕಾರ ಹಾಕಿರುವ ಎರಡು ಷರತ್ತುಗಳು ರೈತರೇ ಸ್ವಯಂಪ್ರೇರಣೆಯಿಂದ ಭೂಮಿ ಮಾರಾಟ ಮಾಡುವಂತಿವೆ.
ಇತ್ತೀಚೆಗೆ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ನಡೆಸಿದ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವ ಜತೆಗೆ ಷರತ್ತುಗಳನ್ನು ವಿಧಿಸಲಾಗಿದೆ.
ಆ ಪ್ರಕಾರ, ಭೂ ಮಾಲೀಕರು ಸ್ವಯಂ ಪ್ರೇರಣೆಯಿಂದ ಭೂಮಿ ಮಾರಲು ಮುಂದಾದರೆ ಹೆಚ್ಚಿನ ಪರಿಹಾರ ಹಾಗೂ ಅಭಿವೃದ್ಧಿಪಡಿಸಿದ ನಿವೇಶನ ನೀಡಲಾಗುವುದು.
ಈ ಆಯ್ಕೆ ಒಪ್ಪದ ರೈತರು ತಮ್ಮ ಭೂಮಿಯನ್ನು ಕೃಷಿ ಭೂಮಿಯನ್ನಾಗಿಯೇ ಉಳಿಸಿಕೊಳ್ಳಬೇಕು ಎಂಬ ಷರತ್ತು ಹಾಕುವ ಮೂಲಕ ರೈತರನ್ನು ಕಟ್ಟಿಹಾಕಿದೆ ಎನ್ನಲಾಗಿದೆ.
ಸರ್ಕಾರಕ್ಕೆ ಭೂಮಿ ಮಾರಾಟ ಮಾಡಲು ಇಚ್ಛಿಸದ ರೈತರು ಮುಂದಿನ 20-25 ವರ್ಷಗಳವರೆಗೆ ಭೂಮಿ ಮಾರಾಟ ಮಾಡದಂತೆ ನಿರ್ಬಂಧಿಸಲು ಹಸಿರು ವಲಯದ ಅಸ್ತ್ರವನ್ನೂ ಬಳಸಿದೆ. ಹಾಗಾಗಿ ಸರ್ಕಾರದ ಭೂ ಸ್ವಾಧೀನ ಪ್ರಕ್ರಿಯೆ ರದ್ದತಿ ವಿಚಾರ ರೈತರಿಗೆ ಅನುಕೂಲ ಆಗುವುದಕ್ಕಿಂತ ಅನಾನೂಕೂಲವನ್ನೇ ಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ.
ಚನ್ನರಾಯಪಟ್ಟಣ ರೈತರ 1200 ದಿನಗಳ ಹೋರಾಟಕ್ಕೆ ರಾಜ್ಯ ಸರ್ಕಾರ ತಕ್ಷಣಕ್ಕೆ ಮಣಿದಂತೆ ಕಂಡರೂ ಭವಿಷ್ಯದಲ್ಲಿ ರೈತರನ್ನು ಕಟ್ಟಿಹಾಕುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳಲಾಗಿದೆ.
ಸರ್ಕಾರಗಳ ಇಂತಹ ಜಾಣ ನಡೆಗೆ ಉದಾಹರಣೆಗಳೂ ಇವೆ.1994-95 ರಲ್ಲಿ ಅಂದಿನ ನೀರಾವರಿ ಸಚಿವರಾಗಿದ್ದ ಎಚ್.ಎನ್.ನಂಜೇಗೌಡ ಅವರು ವಿಧಾನಸಭೆಯಲ್ಲಿ ದೇವೇಗೌಡರನ್ನು ಉದ್ದೇಶಿಸಿ ಮಾತನಾಡಿದ್ದ ಸಂಗತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಉದಾಹರಿಸಲಾಗುತ್ತಿದೆ.
" ದೇವೇಗೌಡರೇ, ನಮ್ಮೂರ ಕಡೆ ಒಂದು ಮಾತಿದೆ. ಒಬ್ಬ ಹೇಳಿದನಂತೆ " ಅಕ್ಕಾ, ನಾನು ಜಾತ್ರೆಗೆ ಹೋಗಬೇಕು ಅಂತ ತೀರ್ಮಾನ ಮಾಡಿದ್ದೀನಿ. ನೀನು ಹೋಗು ಅಂದ್ರೂ ಹೋಗ್ತೀನಿ, ಬೇಡ ಅಂದರೂ ಹೋಗ್ತೀನಿ. ಈಗ ಏನ್ ಮಾಡ್ಲಿ ಹೇಳು " ಎಂಬ ನಂಜೇಗೌಡರ ಮಾತು ಸದ್ಯದ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದೆ.
ಭೂ ಸ್ವಾಧೀನ ಪ್ರಕ್ರಿಯೆ ಕೈಬಿಟ್ಟ ಸರ್ಕಾರದ ನಿರ್ಧಾರದಿಂದ ಚನ್ನರಾಯಪಟ್ಟಣ ಹೋಬಳಿಯ ರೈತರು ಗೆದ್ದಿಲ್ಲ, ಭೂ ಸ್ವಾಧೀನ ಪ್ರಕ್ರಿಯೆ ಕೈಬಿಟ್ಟರೂ ಸರ್ಕಾರ ಸೋತಿಲ್ಲ ಎಂದೇ ವಿಶ್ಲೇಷಿಸಲಾಗಿದೆ.
ರಾಜ್ಯ ಸರ್ಕಾರ ಬಲವಂತವಾಗಿ ಭೂಸ್ವಾಧೀನದಿಂದ ಹಿಂದೆ ಸರಿದರೂ ಮಾಲೀಕರೇ ಭೂಮಿ ಮಾರಾಟ ಮಾಡುವಂತಹ ಅನಿವಾರ್ಯತೆ ಸೃಷ್ಟಿಸಿದರೂ ಅಚ್ಚರಿಯಿಲ್ಲ. ಹಾಗಾಗಿ ರೈತರು ಇದನ್ನು ಜಯ ಎಂದು ಪರಿಗಣಿಸಿದೇ ಎಚ್ಚರಿಕೆ ಎಂದೇ ಭಾವಿಸಬೇಕಾಗಿದೆ ಎನ್ನುತ್ತಾರೆ ರೈತ ಹೋರಾಟಗಾರರು.
ಹಸಿರು ವಲಯ ಘೋಷಣೆಯ ಅಸ್ತ್ರ
ಭೂಸ್ವಾಧೀನದಿಂದ ಕೈಬಿಟ್ಟ ಭೂಮಿಯನ್ನು ಹಸಿರು ವಲಯ ಎಂದು ಘೋಷಣೆ ಮಾಡಲು ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಂದು ವೇಳೆ ಹಸಿರು ವಲಯ ಘೋಷಣೆ ಮಾಡಿದರೆ ರೈತರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹಸಿರು ವಲಯದ ವ್ಯಾಪ್ತಿಗೆ ಸೇರುವ ಭೂಮಿಯಲ್ಲಿ ಕೃಷಿ ಹೊರತುಪಡಿಸಿ ಬೇರೆ ಯಾವುದೇ ವಾಣಿಜ್ಯ ಬಳಕೆಗೆ ಭೂಮಿಯನ್ನು ಬಳಕೆ ಮಾಡುವಂತಿಲ್ಲ. ಮುಂದಿನ ದಿನಗಳಲ್ಲಿ ರೈತರು ಭೂಮಿ ಮಾರಾಟ ಮಾಡಲು ಉದ್ದೇಶಿಸಿದರೆ ಸಾಧ್ಯವಾಗುವುದಿಲ್ಲ. ಇದು ಪರೋಕ್ಷವಾಗಿ ಸರ್ಕಾರದ ಜಾಣೆ ನಡೆ ಎಂದೇ ಹೇಳಬಹುದಾಗಿದೆ.
ಭೂಮಿಗೆ ಎಷ್ಟೇ ಬೆಲೆ ಬಂದರೂ ಮಾರಾಟ ಮಾಡಲು ಸಾಧ್ಯವಾಗದಿದ್ದಾಗ ಭವಿಷ್ಯದಲ್ಲಿ ಮತ್ತೆ ಸರ್ಕಾರಕ್ಕೆ ಭೂಮಿ ನೀಡುವ ಪ್ರಮೇಯ ಬಂದರೂ ಬರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
"ಜಮೀನು ಕೊಡುವವರಿಗೆ ಹೆಚ್ಚಿನ ಪರಿಹಾರ ಹಾಗೂ ಅಭಿವೃದ್ಧಿಪಡಿಸಿದ ಭೂಮಿ ಕೊಡುವುದಾಗಿ ಸರ್ಕಾರ ಹೇಳಿದೆ. ಆದರೆ, ಜಮೀನು ಕೊಡುವವರ ಸಂಖ್ಯೆ ಶೇ 10 ರಷ್ಟಿಲ್ಲ. ಕೈಗಾರಿಕಾ ಸಚಿವರು 20 ವರ್ಷ ಹಸಿರು ವಲಯ ಮಾಡುವ ಪ್ರಸ್ತಾಪವಿರಿಸಿದ್ದ ಬಗ್ಗೆ ವದಂತಿ ಹರಡಿಸಿದ್ದರು. ಆದರೆ, ರೈತರು ಹಸಿರುವಲಯ ಘೋಷಣೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅಂತಹ ನಿರ್ಧಾರ ಕೈಗೊಂಡಿಲ್ಲ. ಕಳೆದ ವಾರ ಜಮೀನು ಕೊಡಲು ಸಿದ್ಧ ಎಂದು ಹೇಳಿಕೊಂಡು ಬಂದಿದ್ದ ರೈತರ ನಿಯೋಗದಲ್ಲಿ ದಲ್ಲಾಳಿಗಳು ಹಾಗೂ ಈಗಾಗಲೇ ಜಮೀನು ಮಾರಾಟ ಮಾಡಿದ್ದ ದಲಿತ ಸಮುದಾಯದವರು ಇದ್ದರು. ಮಾರಾಟ ಮಾಡಿಕೊಂಡಿರುವ ಜಮೀನಿನ ಮೇಲೆ ಮತ್ತೆ ಕೇಸ್ ಹಾಕಿದರೆ ಇನ್ನಷ್ಟು ಪರಿಹಾರ ಸಿಗಲಿದೆ ಎಂಬ ಆಮಿಷವೊಡ್ಡಿ ರೈತರನ್ನು ದಲ್ಲಾಳಿಗಳು ಕರೆತಂದಿದ್ದರು.ಸದ್ಯ ಕೃಷಿಯನ್ನೇ ನಂಬಿ ಜೀವನ ನಡೆಸುವುದರಿಂದ ಯಾರೂ ಕೂಡ ಜಮೀನು ಮಾರಾಟ ಮಾಡುವುದಿಲ್ಲ. ಭವಿಷ್ಯದಲ್ಲಿ ಮಾರಾಟ ಮಾಡಲು ಇಚ್ಛಿಸುವವರಿಗೆ ಯಾವುದೇ ಸಮಸ್ಯೆಯೂ ಆಗುವುದಿಲ್ಲ" ಎಂದು ಪೋಲನಹಳ್ಳಿ ಗ್ರಾಮದ ರೈತ ಪ್ರಮೋದ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವ ವಹಿಸಿದ್ದ ಕಾರಹಳ್ಳಿ ಶ್ರೀನಿವಾಸ್ ಅವರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, ಸರ್ಕಾರ ಭೂಸ್ವಾಧೀನ ಕೈಬಿಟ್ಟ ಮಾತ್ರಕ್ಕೆ ರೈತರು ಎಚ್ಚರ ಕಳೆದುಕೊಳ್ಳಬಾರದು. ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿರುವುದನ್ನು ಯಾರೂ ಕೂಡ ರೈತರ ಜಯ ಎಂದು ಭಾವಿಸಬಾರದು. ಸರ್ಕಾರದ ಭವಿಷ್ಯದ ಆಲೋಚನೆಗಳು, ಆಯ್ಕೆಗಳು ತೆರೆದೇ ಇವೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ರೈತರ ಮಾತ್ರ ಇನ್ನಷ್ಟು ಎಚ್ಚರ ವಹಿಸುವುದು ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ತಿಳಿಸಿದರು.
ಈಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ರೈತರ ನಿಯೋಗ ಭೂಮಿ ಕೊಡಲು ಸಿದ್ಧ ಎಂದು ಹೇಳಿತ್ತು. ಈಗ ಸರ್ಕಾರ ಕೈಗೊಂಡಿರುವ ತೀರ್ಮಾನ ನೋಡಿದಂತೆ ಆ ನಿಯೋಗದ ಬೇಡಿಕೆಯೂ ಈಡೇರಿದಂತಿದೆ. ಆದರೆ, ರೈತರ ನಿಯೋಗದಲ್ಲಿದ್ದ ಬಹುತೇಕರದ್ದು ತಕರಾರು, ಇನ್ನಿತರೆ ವ್ಯಾಜ್ಯಗಳಿರುವ ಭೂಮಿ ಮಾತ್ರ. ದಲ್ಲಾಳಿಗಳ ಆಮಿಷಕ್ಕೆ ಒಳಗಾಗಿ ಬಂದವರೇ ಹೆಚ್ಚಿದ್ದಾರೆ. ಹಾಗಾಗಿ ಜಮೀನು ಮಾರಾಟ ಮಾಡುವ ರೈತರ ಸಂಖ್ಯೆ ಕಡಿಮೆ ಇದೆ ಎಂದು ಹೇಳಿದರು.
ಕಡಿಮೆ ಬೆಲೆಯೂ ವಿರೋಧಕ್ಕೆ ಕಾರಣ?
ದೇವನಹಳ್ಳಿ ತಾಲೂಕಿನಲ್ಲಿ ಈಗ ಪ್ರತಿ ಎಕರೆ 4- 5 ಕೋಟಿ ರೂ,ಗಳಿಗೆ ಮಾರಾಟವಾಗುತ್ತಿದೆ. ಆದರೆ, ಸರ್ಕಾರ ಕೇವಲ 2.50 ಕೋಟಿ ಬೆಲೆ ನಿಗದಿ ಮಾಡುತ್ತಿದೆ. ಸಹಜವಾಗಿ ಬೆಲೆ ತಾರತಮ್ಯದಿಂದಲೂ ಕೆಲ ರೈತರು ಭೂಮಿ ಕೊಡಲು ಒಪ್ಪುತ್ತಿಲ್ಲ. ಈಗಾಗಲೇ ಮಾರಾಟ ಮಾಡಲು ಸಿದ್ಧರಾಗಿದ್ದ ರೈತರು ಕೂಡ ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಕಾರಹಳ್ಳಿ ಶ್ರೀನಿವಾಸ್ ವಿಶ್ಲೇಷಿಸಿದರು.
ಭೂ ಮಾಲೀಕರು ಸ್ವಯಂಪ್ರೇರಣೆಯಿಂದ ಜಮೀನು ಮಾರಾಟ ಮಾಡಲು ಮುಂದೆ ಬಂದಲ್ಲಿ ಹೆಚ್ಚಿನ ಹಣಕಾಸು ಪರಿಹಾರ ಅಥವಾ ಹೆಚ್ಚಿನ ವಿಸ್ತೀರ್ಣದ ಅಭಿವೃದ್ಧಿಪಡಿಸಿದ ನಿವೇಶನವನ್ನು ನೀಡಲಾಗುವುದು ಎಂದು ಹೇಳಿತ್ತು.
ಅದೇ ರೀತಿ ಹೆಚ್ಚಿನ ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ನಿವೇಶನವನ್ನು ಪಡೆಯಲು ಒಪ್ಪದ ರೈತರ ಜಮೀನುಗಳನ್ನು ಕೃಷಿ ಭೂಮಿಯಾಗಿಯೇ ಮುಂದುವರಿಸಲಾಗುವುದು ಎಂದಿತ್ತು. ಈ ಎರಡೂ ಷರತ್ತುಗಳನ್ನು ಅವಲೋಕಿಸಿದರೆ ಸರ್ಕಾರ ತನ್ನ ಪ್ರಯತ್ನದಿಂದ ಹಿಂದೆ ಸರಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಭೂಸ್ವಾಧೀನ ವಿರೋಧಿ ಹೋರಾಟಗಾರರ ಬೇಡಿಕೆಯನ್ನು ಈಡೇರಿಸಿದಂತಾಗಿದೆ. ತನ್ನ ದೂರಾಲೋಚನೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.