
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಮುಂದುವರಿದ ಚಳಿ| ವಾಹನ ಸವಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ
ಬೆಂಗಳೂರು ಸೇರಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂಜಾನೆ ವೇಳೆ ದಟ್ಟ ಮಂಜು ಕವಿಯಲಿದ್ದು, ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ರಾಜ್ಯದ ಹಲವೆಡೆ ಚಳಿಯ ವಾತಾವರಣ ತೀವ್ರಗೊಂಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಶೀತ ಗಾಳಿಯೊಂದಿಗೆ ದಟ್ಟ ಮಂಜು ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತೀವ್ರ ಚಳಿಯ ಜೊತೆಗೆ ಒಣಹವೆ ಮುಂದುವರಿಯಲಿದೆ. ವಿಶೇಷವಾಗಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂಜಾನೆ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ರಸ್ತೆ ಸಂಚಾರಿಗಳು ಹಾಗೂ ವಾಹನ ಸವಾರರು ಜಾಗರೂಕತೆಯಿಂದ ಚಾಲನೆ ಮಾಡಬೇಕೆಂದು ಇಲಾಖೆ ಸೂಚಿಸಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಹವಾಮಾನದಲ್ಲಿ ಭಾರಿ ಏರುಪೇರು ಉಂಟಾಗುತ್ತಿದ್ದು, ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಹವಾಮಾನದ ಈ ಬದಲಾವಣೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ವೈದ್ಯರು ತಿಳಿಸಿದ್ದಾರೆ.ಆರೋಗ್ಯ ಕಾಪಾಡಿಕೊಳ್ಳಲು ಬೆಚ್ಚನೆಯ ಉಡುಪುಗಳನ್ನು ಧರಿಸುವುದು, ಬಿಸಿ ಆಹಾರ ಸೇವನೆ ಮತ್ತು ಸಮತೋಲಿತ ಆಹಾರಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ.
ಇನ್ನುಳಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಒಣಹವೆ ಇರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ಹದಿನೇಳಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯಲಿದೆ. ಅದೇ ರೀತಿ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಚಾಲ್ತಿಯಲ್ಲಿರುವ ಒಣಹವೆಯ ಪರಿಸ್ಥಿತಿಯೇ ಇಂದೂ ಕೂಡ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಕಳೆದ 4 ವರ್ಷಗಳಲ್ಲಿ ಈ ವರ್ಷವೇ ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ ಕಳಪೆ ಮಟ್ಟಕ್ಕೆ ಏರಿದೆ. ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (AQI) ಇಂದಿನ ಗಾಳಿಯ ಗುಣಮಟ್ಟ 165 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಇರಲಿದೆ ಎಂದು ಮುನ್ಸೂಚನೆ ನೀಡಿದೆ.
ಬೆಂಗಳೂರಿನ ಇಂದಿನ ಗಾಳಿಯಲ್ಲಿ PM2.5, 82 µg/m³ ಇದ್ದು, PM10 119 µg/m³ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮಿತಿಗಿಂತ ಹೆಚ್ಚಾಗಿದೆ. PM ಎಂದರೆ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು. PM2.5 ಎಂದರೆ ವಾಯುವಿನಲ್ಲಿರುವ ಸಣ್ಣ ಗಾತ್ರದ ಕಣಗಳಾದರೆ, PM10 ಎಂದರೆ ಸ್ವಲ್ಪ ದೊಡ್ಡ ಗಾತ್ರದ ಕಣಗಳಾಗಿವೆ. ಬೆಂಗಳೂರಿನಲ್ಲಿ 1.2 ಕೋಟಿ ದಾಟಿರುವ ವಾಹನಗಳಿಂದ ಹೊರಸೂಸುವ ಹೊಗೆ ನಗರದ ಮಾಲಿನ್ಯಕ್ಕೆ 42% ರಷ್ಟು ಕೊಡುಗೆ ನೀಡುತ್ತಿದೆ ಎಂದು ತಿಳಿದುಬಂದಿದೆ.

