Secret Meeting of Dalit Ministers: Discussion Held Between Parameshwara and Mahadevappa
x

ಸಚಿವರಾದ ಡಾ.ಜಿ. ಪರಮೇಶ್ವರ್‌ ಹಾಗೂ ಎಚ್‌.ಸಿ. ಮಹದೇವಪ್ಪ 

ದಲಿತ ಸಚಿವರ ರಹಸ್ಯ ಸಭೆ; ಪರಮೇಶ್ವರ್​, ಮಹದೇವಪ್ಪ ನಡುವೆ ಚರ್ಚೆ

ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರ ನಿವಾಸದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಒಂದು ಗಂಟೆಗೂ ಹೆಚ್ಚು ಕಾಲ ಮುಚ್ಚಿದ ಬಾಗಿಲ ಸಮಾಲೋಚನೆ ನಡೆಸಿದರು.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ನಾಯಕತ್ವದ ಚರ್ಚೆಗೆ ಕಿಡಿ ಹೊತ್ತಿಸುವಂತೆ, ಹಿರಿಯ ಸಚಿವ ಹಾಗೂ ದಲಿತ ಸಮುದಾಯದ ಪ್ರಬಲ ನಾಯಕರಾದ ಡಾ.ಜಿ. ಪರಮೇಶ್ವರ್ ಮತ್ತು ಡಾ.ಎಚ್.ಸಿ. ಮಹದೇವಪ್ಪ ಅವರ ನಡುವೆ ನಡೆದ ‘ರಹಸ್ಯ’ ಸಭೆಯು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಭೆಯ ನಂತರ ಮಾತನಾಡಿದ ಗೃಹ ಸಚಿವ ಪರಮೇಶ್ವರ್, “ನಮ್ಮ ದೃಷ್ಟಿಯಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿ, ಎರಡೂವರೆ ವರ್ಷದ ಅವಧಿ ಹಂಚಿಕೆ ಬಗ್ಗೆ ನಮಗೆ ಯಾರೂ ಹೇಳಿಲ್ಲ,” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ರಹಸ್ಯ ಸಭೆಯಲ್ಲಿ ನಡೆದಿದ್ದೇನು?

ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ನಿವಾಸದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಒಂದು ಗಂಟೆಗೂ ಹೆಚ್ಚು ಕಾಲ ಮುಚ್ಚಿದ ಬಾಗಿಲ ಸಮಾಲೋಚನೆ ನಡೆಸಿದರು. ಸಭೆಯ ನಂತರ ಇಬ್ಬರೂ ನಾಯಕರು ಇದು ರಾಜಕೀಯ ಸಭೆಯಲ್ಲ ಎಂದು ಸ್ಪಷ್ಟನೆ ನೀಡಿದರು. “ನನ್ನ ಸಿದ್ಧಾರ್ಥ ಕಾಲೇಜಿನ ಕಟ್ಟಡ ನಿರ್ಮಾಣ ವಿಚಾರವಾಗಿ ಚರ್ಚಿಸಲು ಬಂದಿದ್ದೆ, ಸಚಿವನಾಗಿ ಅಲ್ಲ, ಕಾಲೇಜಿನ ಅಧ್ಯಕ್ಷನಾಗಿ ಬಂದಿದ್ದೆ,” ಎಂದು ಪರಮೇಶ್ವರ್ ತಿಳಿಸಿದರು. ಇದನ್ನೇ ಪುನರುಚ್ಚರಿಸಿದ ಮಹಾದೇವಪ್ಪ, “ತುಮಕೂರಿನ ಸಹಕಾರ ಸಂಘವೊಂದಕ್ಕೆ ಅನುದಾನ ಕೋರಿ ಪತ್ರ ನೀಡಿದ್ದಾರೆ, ಇದರಲ್ಲಿ ಬೇರೆ ರಾಜಕೀಯ ಚರ್ಚೆ ನಡೆದಿಲ್ಲ,” ಎಂದರು.

ಪರಮೇಶ್ವರ್ ಸ್ಪಷ್ಟನೆ: 5 ವರ್ಷಕ್ಕೆ ಸಿದ್ದರಾಮಯ್ಯ ಸಿಎಂ

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ಮುಖ್ಯಮಂತ್ರಿ ಅಧಿಕಾರಾವಧಿ ಬಗ್ಗೆ ಇದ್ದ ಗೊಂದಲಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. “ಸಿಎಲ್‌ಪಿ ಸಭೆಯಲ್ಲಿ ನಾವೆಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಐದು ವರ್ಷದ ಅವಧಿಗೆ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದೇವೆ. ನಮಗೆ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ನಿಂದಾಗಲೀ, ಬೇರೆ ಯಾರಿಂದಾಗಲೀ ಯಾವುದೇ ಮಾಹಿತಿ ಇರಲಿಲ್ಲ. ಈ ಗೊಂದಲವನ್ನು ಹೈಕಮಾಂಡ್ ಬಗೆಹರಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ,” ಎಂದರು.

ಸಿಎಂ ಸಿದ್ದರಾಮಯ್ಯ ಅವರ “ಹೈಕಮಾಂಡ್ ಒಪ್ಪಿದರೆ 5 ವರ್ಷ ನಾನೇ ಸಿಎಂ” ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, “ಅವರ ಹೇಳಿಕೆಯಲ್ಲಿ ತಪ್ಪೇನಿದೆ? ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧ” ಎಂದು ಹೇಳಿದರು.

ಮಹಾದೇವಪ್ಪ ವಾಗ್ದಾಳಿ

ಇದೇ ವೇಳೆ ಮಾತನಾಡಿದ ಸಚಿವ ಎಚ್.ಸಿ. ಮಹಾದೇವಪ್ಪ, “ರಾಜಕೀಯದಲ್ಲಿ ಯಾರೂ ಯಾರಿಗೂ ಅನಿವಾರ್ಯರಲ್ಲ. ಇಂಥವರಿದ್ದರೆ ಮಾತ್ರ ಸಂಸ್ಥೆ ನಡೆಯುತ್ತದೆ ಎನ್ನುವುದು ಅಂಧಾಭಿಮಾನ. ಹೊಗಳುಭಟ್ಟತನವು ಸರ್ವಾಧಿಕಾರವನ್ನು ಸೃಷ್ಟಿಸುತ್ತದೆ,” ಎಂದು ‘ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ’ ಎಂಬ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ದಲಿತ ಸಿಎಂ ಮತ್ತು ಸಮಾವೇಶದ ಕೂಗು

ದಲಿತ ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಶೀಘ್ರದಲ್ಲೇ ದಲಿತ ಸಮಾವೇಶ ನಡೆಸಲಾಗುವುದು ಎಂದು ಪರಮೇಶ್ವರ್ ಇದೇ ವೇಳೆ ಪುನರುಚ್ಚರಿಸಿದರು. ದಲಿತ ಸಿಎಂ ಕುರಿತ ಪ್ರಶ್ನೆಗೆ, “ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಬಹಳಷ್ಟು ಸಮರ್ಥರಿದ್ದಾರೆ, ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆಯೋ ನೋಡಬೇಕು,” ಎಂದರು. ಮಹಾದೇವಪ್ಪ ಕೂಡ, “ದಲಿತ ಸಿಎಂ ಸ್ಥಾನ ಕೇಳುವ ಸನ್ನಿವೇಶ ಬಂದಾಗ ಮಾತನಾಡುತ್ತೇನೆ,” ಎಂದು ಮಾರ್ಮಿಕವಾಗಿ ಉತ್ತರಿಸಿದರು.

Read More
Next Story