
ಸಿಎಂ ಸಿದ್ದರಾಮಯ್ಯ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ
ಹೈಕಮಾಂಡ್ ತೀರ್ಮಾನಿಸಿದರೆ ನಾನೇ ಐದು ವರ್ಷ ಸಿಎಂ; ಸಿದ್ದರಾಮಯ್ಯ ಹೊಸ ವರಸೆ
ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ, ನವೆಂಬರ್ ಕ್ರಾಂತಿ, ದಲಿತ ಸಿಎಂ ಹಾಗೂ ಸಂಪುಟ ಪುನಾರಚನೆ ಕುರಿತಂತೆ ಹಲವು ಉಹಾಪೋಹಗಳ ನಡುವೆ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಷ್ಟು ದಿನ ನಾನೇ ಐದು ವರ್ಷ ಸಿಎಂ ಎಂದು ಬೀಗುತ್ತಿದ್ದ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ನಾನು ಸಿಎಂ ಆಗಿ ಮುಂದುವರೆಯಲು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿರುವುದು ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ.
ಸೋಮವಾರ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದಾಗಿದೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿಯೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಚಿವರು ವಿವಿಧ ಹೇಳಿಕೆ ನೀಡುತ್ತಿದ್ದಾರೆ. ಆದರೆ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಶಾಂತಿ ಕದಡುವವರ ವಿರುದ್ಧ ಪ್ರಕರಣ
ಕಲ್ಲಡ್ಕ ಪ್ರಭಾಕರ್ ಭಟ್ ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡುವ ಪ್ರಚೋದನಾತ್ಮಕ ಭಾಷಣವನ್ನು ಮಾಡುತ್ತಿದ್ದು, ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅವರು ತಮ್ಮ ಭಾಷಣದಲ್ಲಿ ಮಹಿಳೆಯರಿಗೆ ಅಗೌರವವಾಗಿ ಮಾತನಾಡಿದ್ದಾರೆ ಎಂದು ಹೇಳಿದರು.
ಎಸ್‌ಐಟಿ ವರದಿ
ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿಯ ವಿಷಯದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಈ ತಿಂಗಳಾಂತ್ಯದಲ್ಲಿ ಎಸ್‌ಐಟಿ ಅಧಿಕಾರಿಗಳು ವರದಿಯ ಸಲ್ಲಿಸಲಿದ್ದಾರೆ ಎಂದು ಈಗಾಗಲೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ ಎಂದರು.
ವಾಹನ ಸೌಲಭ್ಯ
ಪತ್ರಕರ್ತರ ಹಲವಾರು ವರ್ಷಗಳ ಬೇಡಿಕೆಯಾಗಿಯಂತೆ ಪತ್ರಕರ್ತರಿಗೆ ಅನುಕೂಲವಾಗುವಂತೆ ವಾರ್ತಾ ಇಲಾಖೆಯಿಂದ ವಾಹನ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

