ದಲಿತ ಸಿಎಂ ಚರ್ಚೆಗೆ ಬಲ ತುಂಬಿದ ಜಾರಕಿಹೊಳಿ ಡಿನ್ನರ್‌ ಮೀಟಿಂಗ್‌
x

ಸತೀಶ್ ಜಾರಕಿಹೊಳಿ 

ದಲಿತ ಸಿಎಂ ಚರ್ಚೆಗೆ ಬಲ ತುಂಬಿದ ಜಾರಕಿಹೊಳಿ ಡಿನ್ನರ್‌ ಮೀಟಿಂಗ್‌

ದಲಿತ ನಾಯಕರು ಹಾಗೂ ಉದ್ಯಮಿಗಳ ಸಭೆಗೆ ಪಕ್ಷಾತೀತವಾಗಿ ಸಚಿವರು, ಶಾಸಕರು, ಉದ್ಯಮಿಗಳು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರು ಭಾಗಿಯಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.


ಕಾಂಗ್ರೆಸ್‌ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ತಾತ್ಕಾಲಿಕವಾಗಿ ಶಮನವಾಗಿದ್ದರೂ ಪಕ್ಷದ ಆಂತರಿಕ ವಲಯದಲ್ಲಿ ಸಿಎಂ ಗದ್ದುಗೆ ಗುದ್ದಾಟ ಸದ್ದಿಲ್ಲದೇ ನಡೆಯುತ್ತಿದೆ. ದಿನಕ್ಕೊಂದು ಡಿನ್ನರ್‌ ಮೀಟಿಂಗ್‌ ನಡೆಸುವ ಮೂಲಕ ಬಣಗಳ ಶಕ್ತಿ ಪ್ರದರ್ಶನ ನಡೆಯುತ್ತಿದೆ.

ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಸುಮಾರು 40ಕ್ಕೂ ಹೆಚ್ಚು ಶಾಸಕರಿಗೆ ಔತಣ ಕೂಟ ನೀಡಿದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷಾತೀತವಾಗಿ ದಲಿತ ಶಾಸಕರು, ಸಚಿವರು ಹಾಗೂ ಉದ್ಯಮಿಗಳ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಬೆಳಗಾವಿ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಸಭೆ ನಡೆಸಿದ ಸತೀಶ್ ಜಾರಕಿಹೊಳಿ ಅವರು, ದಲಿತ ರಾಜಕಾರಣಿಗಳು ಹಾಗೂ ಉದ್ಯಮಿಗಳ ಸಮಸ್ಯೆ ಆಲಿಸುವ ನೆಪದಲ್ಲಿ ದಲಿತ ಸಿಎಂ ಬೇಡಿಕೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಿದರೇ ಎಂಬ ಪ್ರಶ್ನೆಗಳು ಎದ್ದಿವೆ.

ದಲಿತ ನಾಯಕರು ಹಾಗೂ ಉದ್ಯಮಿಗಳ ಸಭೆಗೆ ಪಕ್ಷಾತೀತವಾಗಿ ಸಚಿವರು, ಶಾಸಕರು, ಉದ್ಯಮಿಗಳು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರು ಭಾಗಿಯಾಗಿರುವುದು ಇಂತಹದ್ದೊಂದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಸಭೆಯಲ್ಲಿ ನಡೆದಿದ್ದೇನು?

ಮಂಗಳವಾರ ರಾತ್ರಿ ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಸತೀಶ್ ಜಾರಕಿಹೊಳಿ ಅವರು ಡಿನ್ನರ್ ಮೀಟಿಂಗ್ ಆಯೋಜಿಸಿದ್ದರು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಚಿವರು, ಶಾಸಕರು, ಪರಿಷತ್ ಸದಸ್ಯರು ಹಾಗೂ ಉದ್ಯಮಿಗಳು ಭಾಗವಹಿಸಿದ್ದು, ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಲು ಒತ್ತಡ ಹೇರುವ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ.

ಅಧಿವೇಶನ ಮುಗಿದ ಮೇಲೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ದಲಿತರಿಗೆ ಅವಕಾಶ ಸಿಗಬೇಕು. ದಲಿತ ಸಮುದಾಯದಲ್ಲಿ ಹಲವರು ಹಿರಿಯ ನಾಯಕರಿದ್ದಾರೆ. ಅಂತವರಿಗೆ ಹೈಕಮಾಂಡ್ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಸ್ಪಷ್ಟ ಸಂದೇಶವನ್ನು ಜನರಿಗೆ ರವಾನಿಸಬೇಕು ಎಂದು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು.

ನಾವು ಯಾವುದೇ ಪಕ್ಷದಲ್ಲಿರಲಿ, ನಮ್ಮ ಸಮುದಾಯದ ಪರವೇ ನಾವು ನಿಲ್ಲಬೇಕು. ಅವಕಾಶಗಳಿದ್ದಾಗ ಎಲ್ಲರೂ ಒಗ್ಗಟ್ಟಾಗಿಯೇ ಅಧಿಕಾರ ಪಡೆಯಬೇಕು ಎಂದು ಸಚಿವರು, ಶಾಸಕರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಿಎಂ ಸ್ಥಾನವನ್ನು ದಲಿತ ಸಮುದಾಯಕ್ಕೆ ನೀಡುವುದಾದರೆ ನಮ್ಮ ಬೆಂಬಲವೂ ಇರಲಿದೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸತೀಶ್ ಜಾರಕಿಹೊಳಿ ಅವರು ಆಯೋಜಿಸಿದ್ದ ಡಿನ್ನರ್ ಮೀಟಿಂಗ್ನಲ್ಲಿ ದಲಿತ ಸಿಎಂ ವಿಚಾರ ಪ್ರಸ್ತಾಪವಾಗಿದ್ದು ನಿಜ. ರಾಜ್ಯದಲ್ಲಿ ನಮ್ಮ ದಲಿತ ಸಮುದಾಯ ಹೆಚ್ಚಿದೆ, ಆಂಧ್ರದಲ್ಲಿ ಒಬ್ಬರು ಮಾತ್ರ ದಲಿತರು ಸಿಎಂ ಆಗಿದ್ದರು, ಅವರು ಕೇವಲ ಒಂಭತ್ತು ತಿಂಗಳು ಮಾತ್ರ ಇದ್ದರು. ಈಗ ಸಹಜವಾಗಿ ನಾವು ಅವಕಾಶ ಕೇಳುವುದಲ್ಲಿ ತಪ್ಪೇನಿದೆ, ಇವತ್ತಲ್ಲ ಮುಂದೆ ಸಮುದಾಯಕ್ಕೆ ಅವಕಾಶ ಬೇಕು. ದಲಿತರಿಗೂ ಸಿಎಂ ಆಗುವ ಹಕ್ಕಿದೆ ಎಂದು ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ಹೇಳಿದ್ದಾರೆ.

ದಲಿತ ಉದ್ಯಮಿಗಳಿಂದಲೂ ಸಿಎಂ ಕೂಗಿಗೆ ಬಲ

ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ದಲಿತ ಸಮುದಾಯದ ಉದ್ಯಮಿಗಳು ಕೂಡ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹಾಕಿದ್ದಾರೆ. ಕಳೆದ ಹಲವು ದಶಕಗಳಿಂದ ದಲಿತರಿಗೆ ಉನ್ನತಾಧಿಕಾರ ಸಿಕ್ಕಿಲ್ಲ.

ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ವಿಚಾರ ತಾತ್ಕಾಲಿಕವಾಗಿ ಶಮನವಾಗಿದ್ದರೂ ಅಧಿವೇಶನ ಮುಗಿದ ನಂತರ ಮತ್ತೆ ವಿವಾದ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಆ ಸ್ಥಾನಕ್ಕೆ ದಲಿತ ನಾಯಕರನ್ನೇ ಕೂರಿಸಬೇಕು. ಆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸಾಮಾಜಿಕ ನ್ಯಾಯ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವ ಕೆ.ಎಚ್ ಮುನಿಯಪ್ಪ, ಶಾಸಕ ಬಸವರಾಜ್ ದದ್ದಲ್, ಎಂಎಲ್ಸಿ ಎಫ್.ಎಚ್.ಜಕ್ಕಪ್ಪನ್ನವರ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ದೇವದುರ್ಗದ ಶಾಸಕಿ ಕರೆಮ್ಮಾದೇವಿ ನಾಯಕ್, ಶಾಸಕ ರಘುಮೂರ್ತಿ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಭಾಗಿಯಾಗಿದ್ದರು.

Read More
Next Story