
ಕತ್ರಿಗುಪ್ಪೆಯಲ್ಲಿ ಪುಡಿ ರೌಡಿಗಳ ಅಟ್ಟಹಾಸ
ಕತ್ರಿಗುಪ್ಪೆ|ತಾಯಿ-ಮಗನ ಮೇಲೆ ಲಾಂಗು ಮಚ್ಚಿನಿಂದ ಭೀಕರ ಹಲ್ಲೆ ನಡೆಸಿದ ಪುಡಿರೌಡಿಗಳು
ಬಾಷಿರ್ ಎಂಬುವವರಿಗೆ ಸೇರಿದ ಪಾನ್ ಶಾಪ್ ಮೇಲೆ 10ಕ್ಕೂ ಹೆಚ್ಚು ಪುಡಿ ರೌಡಿಗಳು ಮಾರಕಾಸ್ತ್ರಗಳೊಂದಿಗೆ ಮುಗಿಬಿದ್ದಿದ್ದಾರೆ. ರೌಡಿಗಳು ಲಾಂಗು ಮತ್ತು ಮಚ್ಚುಗಳಿಂದ ಮಾಲೀಕ ಬಾಷಿರ್ ಹಾಗೂ ಆತನ ತಾಯಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಪಾನ್ ಶಾಪ್ ಮಾಲೀಕ ಹಾಗೂ ಆತನ ತಾಯಿಯ ಮೇಲೆ ಪುಡಿ ರೌಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಡೆದಿದೆ.
ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬಾಷಿರ್ ಎಂಬುವವರಿಗೆ ಸೇರಿದ ಬೀಡಾ ಅಂಗಡಿಯ ಮೇಲೆ ಹತ್ತಕ್ಕೂ ಹೆಚ್ಚು ಪುಡಿ ರೌಡಿಗಳ ತಂಡ ದಾಳಿ ಮಾಡಿದೆ. ಭಾನುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಲಾಂಗು, ಮಚ್ಚುಗಳೊಂದಿಗೆ ನುಗ್ಗಿದ ಕಿರಾತಕರು, ಅಂಗಡಿಯಲ್ಲಿದ್ದ ಬಾಟಲಿಗಳನ್ನು ಪುಡಿ ಮಾಡಿ ಅಂಗಡಿ ಮಾಲೀಕ ಬಾಷಿರ್ ಹಾಗೂ ಅವರ ತಾಯಿಯ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ದಾಳಿಗೂ ಮುನ್ನವೇ ರೌಡಿಗಳ ತಂಡ ಬಾಷಿರ್ ಅವರನ್ನು ಗುರಿಯಾಗಿಸಿಕೊಂಡಿತ್ತು ಎಂದು ತಿಳಿದುಬಂದಿದ್ದು, ಮನೆಯ ಬಳಿ ಕಾರಿನಲ್ಲಿ ಕುಳಿತಿದ್ದ ಬಾಷಿರ್ ಮೇಲೆ ಮೊದಲು ಹಲ್ಲೆ ನಡೆಸಿದ್ದ ಪುಂಡರು, ಆನಂತರ ಪಾನ್ ಶಾಪ್ ಬಳಿ ಬಂದು ಹಲ್ಲೆ ನಡೆಸಿದ್ದಾರೆ. ದಾಳಿಕೋರರೆಲ್ಲರೂ ಅದೇ ಏರಿಯಾದ ನಿವಾಸಿಗಳಾಗಿದ್ದು, ಹಲ್ಲೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸದ್ಯ ಈ ಸಂಬಂಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಬನಶಂಕರಿ ಎರಡನೇ ಹಂತದ ಎ.ಕೆ. ಕಾಲೋನಿಯಲ್ಲಿ ಭೀಕರ ಹತ್ಯೆಯೊಂದು ನಡೆದಿತ್ತು. ಹನುಮಂತನಗರದ ರೌಡಿಶೀಟರ್ ಶಿವಪ್ರಸಾದ್ ಹಾಗೂ ಆತನ ಗ್ಯಾಂಗ್, 'ಕಾಂತ' ಎಂಬ ವ್ಯಕ್ತಿಯನ್ನು ಕೊಲ್ಲಲು ಸಂಚು ರೂಪಿಸಿತ್ತು. ಆದರೆ ತಪ್ಪು ಗ್ರಹಿಕೆಯಿಂದಾಗಿ ಮೈಸೂರು ಮೂಲದ ನಿಖಿಲ್ ಎಂಬ ಅಮಾಯಕ ಮಿನಿ ಗೂಡ್ಸ್ ವಾಹನ ಚಾಲಕನನ್ನು ಅಟ್ಟಾಡಿಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕತ್ರಿಗುಪ್ಪೆ ಮೂಲದ ಯುವಕರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಕಳೆದ ಜುಲೈನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಎಂಬುವವರನ್ನು ಅವರ ತಾಯಿಯ ಮುಂದೆಯೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ದಾಳಿಯು ಇಡೀ ಬನಶಂಕರಿ ಮತ್ತು ಕತ್ರಿಗುಪ್ಪೆ ಭಾಗದಲ್ಲಿ ತಲ್ಲಣ ಮೂಡಿಸಿತ್ತು.

