
ಸಾಂದರ್ಭಿಕ ಚಿತ್ರ
ಮಗಳನ್ನು ಕೊಡದ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿರಾತಕ
ಗೀತಾ ಅವರ 19 ವರ್ಷದ ಮಗಳನ್ನು ಮದುವೆ ಮಾಡಿಕೊಡುವಂತೆ ಮುತ್ತು ಒತ್ತಾಯಿಸುತ್ತಿದ್ದನು. ಆದರೆ ಇದಕ್ಕೆ ಗೀತಾ ಒಪ್ಪದಿದ್ದಾಗ ಆಕ್ರೋಶಗೊಂಡ ಮುತ್ತು ಈ ಕೃತ್ಯ ಎಸಗಿದ್ದಾನೆ.
ತನ್ನ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಗೀತಾ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಮುತ್ತು ಎಂದು ಗುರುತಿಸಲಾಗಿದೆ.
ಗೀತಾ ಅವರು ಆ ಪ್ರದೇಶದಲ್ಲಿ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದರೆ, ಆರೋಪಿ ಮುತ್ತು ಅದೇ ಭಾಗದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದನು. ಇಬ್ಬರ ನಡುವೆ ಪರಿಚಯ ಉಂಟಾಗಿದೆ. ಗೀತಾ ಅವರ 19 ವರ್ಷದ ಮಗಳು ಮತ್ತು ಮುತ್ತು ಎಲ್ಲರೂ ಒಂದೇ ಮನೆಯಲ್ಲಿ ವಾಸವಿದ್ದರು ಎಂದು ವರದಿಯಾಗಿದೆ. ಈ ಸಮಯದಲ್ಲಿ ಮುತ್ತು ಗೀತಾ ಅವರ ಮಗಳನ್ನು ಮದುವೆ ಮಾಡಿಕೊಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದನು. ಆದರೆ ಗೀತಾ ಈ ಪ್ರಸ್ತಾಪಕ್ಕೆ ಸ್ಪಷ್ಟವಾಗಿ ಅಸಮ್ಮತಿ ಸೂಚಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡ ಮುತ್ತು, ಗೀತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.
ಕೃತ್ಯ ಎಸಗಿದ ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬೆಂಕಿಯಿಂದ ತೀವ್ರವಾಗಿ ಸುಟ್ಟ ಗಾಯಗಳಿಗೊಳಗಾದ ಗೀತಾ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕೆಲವು ದಿನಗಳ ಹಿಂದೆ ಇಂತಹದ್ದೇ ಒಂದು ಘಟನೆ ನಡೆಸಿತ್ತು. ಮೃತರನ್ನು ಮನ್ಸೂರ್ ಎಂದು ಗುರುತಿಸಲಾಗಿದೆ. ಆರೋಪಿ ಸಿದ್ದಲಿಂಗಪ್ಪ ಎಂಬುವವನು ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಅನುಮಾನದ ಮೇಲೆ ಮನ್ಸೂರ್ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಗಲಾಟೆ ತಾರಕಕ್ಕೇರಿದಾಗ, ಸಿದ್ದಲಿಂಗಪ್ಪ ಮನ್ಸೂರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಭೀಕರ ದೃಶ್ಯವು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

