ರಾಜ್ಯಪಾಲರು v/s ರಾಜ್ಯ ಸರ್ಕಾರ: ವಿಧಾನಸಭೆಯಲ್ಲಿ ಇಂದು ಹೈಡ್ರಾಮಾ ಸಾಧ್ಯತೆ
x
ಕರ್ನಾಟಕ ವಿಧಾನಮಂಡಲ ಅಧಿವೇಶನ

ರಾಜ್ಯಪಾಲರು v/s ರಾಜ್ಯ ಸರ್ಕಾರ: ವಿಧಾನಸಭೆಯಲ್ಲಿ ಇಂದು ಹೈಡ್ರಾಮಾ ಸಾಧ್ಯತೆ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಜಂಟಿ ಅಧಿವೇಶನದ ಭಾಷಣ ಮತ್ತು ರಾಷ್ಟ್ರಗೀತೆಯ ಶಿಷ್ಟಾಚಾರ ಉಲ್ಲಂಘನೆ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಪ್ರತಿಷ್ಠೆಯ ಹೋರಾಟ ಶುರುವಾಗಿದೆ.


ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಶಿಷ್ಟಾಚಾರದ ಉಲ್ಲಂಘನೆಯು ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ಪ್ರತಿಷ್ಠೆಯ ಹೋರಾಟವಾಗಿ ಮಾರ್ಪಟ್ಟಿದೆ. ಚರ್ಚೆಗೆ ಅವಕಾಶ ನೀಡಬೇಕು ಎಂದು ಎರಡು ಪಕ್ಷಗಳು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಸದನದಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮಂಗಳವಾರ ಸಭಾಧ್ಯಕ್ಷ ಯು.ಟಿ.ಖಾದರ್‌ ರೂಲಿಂಗ್‌ ನೀಡುವ ಸಾಧ್ಯತೆ ಇದೆ.

ಸಂಪ್ರದಾಯದಂತೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಸರ್ಕಾರ ಸಿದ್ಧಪಡಿಸಿದ್ದ 43 ಪುಟಗಳ ಸುದೀರ್ಘ ಭಾಷಣದ ಪೈಕಿ ಕೇವಲ ಮೊದಲ ಮತ್ತು ಕೊನೆಯ ಪ್ಯಾರಾಗಳನ್ನು ಓದಿ ರಾಜ್ಯಪಾಲರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ರಾಜ್ಯಪಾಲರು ನಿರ್ಗಮಿಸಿದ ರೀತಿ ಮತ್ತು ಅದರ ನಂತರದ ಬೆಳವಣಿಗೆಗಳು ಸದನದಲ್ಲಿ ಗದ್ದಲಕ್ಕೆ ನಾಂದಿ ಹಾಡಿವೆ.

ರಾಜ್ಯಪಾಲರು ಭಾಷಣ ಮುಗಿಸಿ ಹೊರನಡೆಯುವಾಗ ಕಾಂಗ್ರೆಸ್ ಶಾಸಕರು ಘೋಷಣೆಗಳನ್ನು ಕೂಗುವ ಮೂಲಕ ಅವರಿಗೆ ಅಡ್ಡಿಪಡಿಸಿದ್ದಾರೆ ಎಂಬುದು ಬಿಜೆಪಿಯ ಪ್ರಬಲ ಆರೋಪ. ರಾಜ್ಯಪಾಲರು ರಾಜ್ಯದ ಸಂವಿಧಾನಿಕ ಮುಖ್ಯಸ್ಥರಾಗಿದ್ದು, ಅವರಿಗೆ ಗೌರವ ನೀಡುವುದು ಶಾಸಕರ ಕರ್ತವ್ಯ. ಅವರನ್ನು ಹೀಯಾಳಿಸುವುದು ಅಥವಾ ತಡೆಯುವುದು ಸಂವಿಧಾನಾತ್ಮಕ ಮೌಲ್ಯಗಳ ಉಲ್ಲಂಘನೆ ಎಂದು ಬಿಜೆಪಿ ವಾದಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗದ್ದಲ ಸೃಷ್ಟಿಸಿದ ಶಾಸಕರನ್ನು ಅಮಾನತು ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಇನ್ನೊಂದೆಡೆ, ಕಾಂಗ್ರೆಸ್ ಪಕ್ಷವು ರಾಜ್ಯಪಾಲರ ವಿರುದ್ಧವೇ ಪ್ರತಿ-ಆರೋಪ ಮಾಡಿದೆ. ರಾಷ್ಟ್ರಗೀತೆ ಪೂರ್ಣಗೊಳ್ಳುವ ಮೊದಲೇ ರಾಜ್ಯಪಾಲರು ಸದನದಿಂದ ಹೊರನಡೆದಿರುವುದು ರಾಷ್ಟ್ರೀಯ ಅಸ್ಮಿತೆ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರ ಎಂಬುದು ಆಡಳಿತ ಪಕ್ಷದ ವಾದವಾಗಿದೆ.. ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ರಾಷ್ಟ್ರಗೀತೆಗೆ ತೋರಿದ ಅಗೌರವ ಎಂದು ಟೀಕಿಸಿದ್ದಾರೆ.

ಸಭಾಧ್ಯಕ್ಷ ಯು.ಟಿ. ಖಾದರ್ ಮಂಗಳವಾರ ಈ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಬೇಕೇ? ಅಥವಾ ಇಲ್ಲವೇ? ಎಂಬುದರ ಕುರಿತು ರೂಲಿಂಗ್‌ ನೀಡಲಿದ್ದಾರೆ. ಸಭಾಧ್ಯಕ್ಷರು ರಾಜ್ಯಪಾಲರಿಗೆ ಕಾಂಗ್ರೆಸ್‌ ಶಾಸಕರು ಅವಮಾನ ಮಾಡಿದ್ದಾರೆಯೇ ಎಂಬ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಅಧಿಕಾರ ಇದೆ. ಅಲ್ಲದೇ, ರಾಷ್ಟ್ರಗೀತೆ ಪೂರ್ಣಗೊಳ್ಳುವ ಮುನ್ನವೇ ರಾಜ್ಯಪಾಲರು ಹೊರಟಿದ್ದಾರೆಯೇ ಮತ್ತು ಅದಕ್ಕೆ ಸೂಕ್ತ ಕಾರಣಗಳಿವೆಯೇ ಎಂಬ ತಾಂತ್ರಿಕ ಅಂಶಗಳನ್ನು ಗಮನಿಸುವ ಸಾಧ್ಯತೆ ಇದೆ. ಸಭಾಧ್ಯಕ್ಷರು ನೀಡುವ ತೀರ್ಪು ಸದನವು ಸುಗಮವಾಗಿ ನಡೆಯಲಿದೆಯೇ? ಅಥವಾ ಇಲ್ಲವೇ? ಎಂಬುದು ಗೊತ್ತಾಗಲಿದೆ. ಒಂದು ವೇಳೆ ಬಿಜೆಪಿ ಸದಸ್ಯರ ಬೇಡಿಕೆಯನ್ನು ತಿರಸ್ಕರಿಸಿದರೆ ವಿರೋಧ ಪಕ್ಷದ ಪ್ರತಿಭಟನೆ ತೀವ್ರಗೊಳ್ಳಬಹುದು. ಅದೇ ರೀತಿ, ರಾಷ್ಟ್ರಗೀತೆಗೆ ಅಗೌರವ ತೋರಿರುವ ಕುರಿತು ಯಾವುದೇ ನಿರ್ಣಯ ಪ್ರಕಟಿಸಿದ್ದರೆ ಕಾಂಗ್ರೆಸ್‌ ಸದಸ್ಯರು ಗದ್ದಲ ಸೃಷ್ಟಿಸುವ ಸಾಧ್ಯತೆ ಇದೆ.

ಈ ಘಟನೆಯು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಶೀತಲ ಸಮರವನ್ನು ಬಹಿರಂಗಪಡಿಸಿದೆ. ಮುಡಾ ಹಗರಣ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯಪಾಲರು ಸರ್ಕಾರದ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗಿನಿಂದಲೂ ರಾಜ್ಯ ಸರ್ಕಾರ ಮತ್ತು ಲೋಕಭವನದ ನಡುವೆ ಸಂಘರ್ಷದ ವಾತಾವರಣ ಇರುವುದು ಸ್ಪಷ್ಟವಾಗಿದೆ. ಸಭಾಧ್ಯಕ್ಷರು ನೀಡುವ ತೀರ್ಪು ಸದನವು ಸುಗಮವಾಗಿ ನಡೆಯಲಿದೆಯೇ? ಅಥವಾ ಇಲ್ಲವೇ? ಎಂಬುದು ಗೊತ್ತಾಗಲಿದೆ. ಒಂದು ವೇಳೆ ಬಿಜೆಪಿ ಸದಸ್ಯರ ಬೇಡಿಕೆಯನ್ನು ತಿರಸ್ಕರಿಸಿದರೆ ವಿರೋಧ ಪಕ್ಷದ ಪ್ರತಿಭಟನೆ ತೀವ್ರಗೊಳ್ಳಬಹುದು. ಅದೇ ರೀತಿ, ರಾಷ್ಟ್ರಗೀತೆಗೆ ಅಗೌರವ ತೋರಿರುವ ಕುರಿತು ಯಾವುದೇ ನಿರ್ಣಯ ಪ್ರಕಟಿಸದಿದ್ದರೆ ಕಾಂಗ್ರೆಸ್‌ ಸದಸ್ಯರು ಗದ್ದಲ ಸೃಷ್ಟಿಸುವ ಸಾಧ್ಯತೆ ಇದೆ.

Read More
Next Story