ಸಂಘರ್ಷಕ್ಕೆ ಬ್ರೇಕ್, ಅಭಿವೃದ್ಧಿಗೆ ಜೈ: ಕೇಂದ್ರದ ವಿರುದ್ಧ ಪ್ರಸ್ತಾಪ ಇಲ್ಲದೆ ರಾಜ್ಯಪಾಲರ ಭಾಷಣ
x
ಮಾಣೇಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಿಎಂ ಸಿದ್ಧರಾಮಯ್ಯ

ಸಂಘರ್ಷಕ್ಕೆ ಬ್ರೇಕ್, ಅಭಿವೃದ್ಧಿಗೆ ಜೈ: ಕೇಂದ್ರದ ವಿರುದ್ಧ ಪ್ರಸ್ತಾಪ ಇಲ್ಲದೆ ರಾಜ್ಯಪಾಲರ ಭಾಷಣ

ಬೆಂಗಳೂರಿನ ಮಾಣೇಕ್ ಶಾ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣದ ಸಂಪೂರ್ಣ ವರದಿ.


ದೇಶದ 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ಶೀತಲ ಸಮರಕ್ಕೆ ತಾತ್ಕಾಲಿಕ ವಿರಾಮ ಬಿದ್ದಂತಿದೆ. ಮಾಣೇಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ವಾಗ್ದಾಳಿ ನಡೆಸದೆ ಕೇವಲ ರಾಜ್ಯದ ಅಭಿವೃದ್ಧಿ ಮಂತ್ರವನ್ನು ಪಠಿಸಿದರು.

ಸಂಘರ್ಷ ಬಿಟ್ಟು ಪ್ರಗತಿಯ ಹಾದಿ

ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಕೇಂದ್ರದ ನೀತಿಗಳನ್ನು ಟೀಕಿಸುವ ಅಂಶಗಳಿದ್ದ ಕಾರಣ ರಾಜ್ಯಪಾಲರು ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆದರೆ ಈ ಬಾರಿ ಗಣರಾಜ್ಯೋತ್ಸವದ ಪವಿತ್ರ ದಿನದಂದು ಅಂತಹ ಯಾವುದೇ ಮುಜುಗರ ತಪ್ಪಿಸಲು ಸರ್ಕಾರವು ಅತ್ಯಂತ ಸಂಯಮದಿಂದ ಕರಡು ಸಿದ್ಧಪಡಿಸಿತ್ತು.

ಅಭಿವೃದ್ಧಿಯೇ ಗುರಿ

ಭಾಷಣದ ಉದ್ದಕ್ಕೂ ರಾಜ್ಯದ ಆರ್ಥಿಕ ಪ್ರಗತಿ, ಕೈಗಾರಿಕಾ ಹೂಡಿಕೆ ಮತ್ತು ತಾಂತ್ರಿಕ ಬೆಳವಣಿಗೆಯ ಬಗ್ಗೆ ಮಾತ್ರ ಒತ್ತು ನೀಡಲಾಯಿತು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿವೆ ಎಂದು ರಾಜ್ಯಪಾಲರು ಶ್ಲಾಘಿಸಿದರು. ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿದ ರಾಜ್ಯಪಾಲರು, ಕರ್ನಾಟಕವು ಕೈಗಾರಿಕೆ, ತಂತ್ರಜ್ಞಾನ ಮತ್ತು ಸಾಮಾಜಿಕ ನ್ಯಾಯದ ಹಾದಿಯಲ್ಲಿ ದೇಶಕ್ಕೇ ಮಾದರಿಯಾಗಿ ಮುನ್ನಡೆಯುತ್ತಿದೆ ಎಂದು ಬಣ್ಣಿಸಿದರು.

"ಸಂವಿಧಾನದ ರಕ್ಷಣೆಯೇ ನಮ್ಮೆಲ್ಲರ ಪರಮ ಜವಾಬ್ದಾರಿ. ಸಮಾನತೆ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ನಿರ್ಮಾಣವಾದ ನಮ್ಮ ಗಣತಂತ್ರ ವ್ಯವಸ್ಥೆಯು ಭಾರತದ ನೈಜ ಶಕ್ತಿಯಾಗಿದೆ," ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆಶಯ ವ್ಯಕ್ತಪಡಿಸಿದರು. 77ನೇ ಗಣರಾಜ್ಯೋತ್ಸವದ ಅಂಗವಾಗಿ ಮಾಣೇಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಚಿತ್ರಣವನ್ನು ಸಾರಿದರು.

ವಿಶೇಷವಾಗಿ, ಮುಂಬರುವ ವಿಧಾನಮಂಡಲ ಅಧಿವೇಶನದ ದೃಷ್ಟಿಕೋನವನ್ನೇ ಬಿಂಬಿಸುವಂತೆ ಮಾತನಾಡಿದ ರಾಜ್ಯಪಾಲರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ತಂದಿರುವ ಬದಲಾವಣೆ, ಮಹಿಳಾ ಕಾರ್ಮಿಕರಿಗೆ ನೀಡಿರುವ ವೇತನ ಸಹಿತ ಋತುಚಕ್ರ ರಜೆಯಂತಹ ಕ್ರಾಂತಿಕಾರಕ ನಿರ್ಧಾರಗಳು ಮತ್ತು ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಕೈಗೊಂಡಿರುವ ಕಠಿಣ ಕಾನೂನು ಕ್ರಮಗಳನ್ನು ಶ್ಲಾಘಿಸಿದರು.

"ನಾವು ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನದ ಆಶಯಗಳನ್ನು ಬದುಕಿನ ಸಿದ್ಧಾಂತವಾಗಿ ಅಳವಡಿಸಿಕೊಂಡಾಗ ಮಾತ್ರ ನೈಜ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ," ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.

ಸಂವಿಧಾನದ ಆಶಯ ಮತ್ತು ಅಂಬೇಡ್ಕರ್ ಸ್ಮರಣೆ

ತಮ್ಮ ಭಾಷಣದ ಆರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಸ್ಮರಿಸಿದ ರಾಜ್ಯಪಾಲರು, "ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು ಒಂದಕ್ಕೊಂದು ಪೂರಕವಾದವುಗಳು. ಸಮಾನತೆಯಿಲ್ಲದ ಸ್ವಾತಂತ್ರ್ಯ ಸರ್ವಾಧಿಕಾರಕ್ಕೆ ನಾಂದಿಯಾಗುತ್ತದೆ. ಈ ಮೂರು ತತ್ವಗಳನ್ನು ಬದುಕಿನ ಕ್ರಮವಾಗಿ ಸ್ವೀಕರಿಸಬೇಕು," ಎಂದು ತಿಳಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಪಾತ್ರವನ್ನು ಗೌರವಿಸುವುದು ದೇಶದ ಅಖಂಡತೆಗೆ ಅತಿಮುಖ್ಯ ಎಂದರು.

ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ ಸಬಲೀಕರಣ

ರಾಜ್ಯ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದ ರಾಜ್ಯಪಾಲರು, ಕರ್ನಾಟಕದ ಗ್ಯಾರಂಟಿ ಯೋಜನೆಗಳು ಬಡವರ ಮತ್ತು ಮಹಿಳೆಯರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿವೆ ಎಂದು ಉಲ್ಲೇಖಿಸಿದರು.

137 ಕೋಟಿ ಕುಟುಂಬಗಳು ಸರ್ಕಾರದ ಯೋಜನೆಗಳಿಂದ ನೇರ ಆರ್ಥಿಕ ಸೌಲಭ್ಯ ಪಡೆದಿವೆ. ಮಹಿಳೆಯರ ಸುರಕ್ಷತೆಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ಸಂಗತಿ. ಮಹಿಳಾ ಕಾರ್ಮಿಕರಿಗೆ ವಾರ್ಷಿಕ 12 ದಿನಗಳ ವೇತನ ಸಹಿತ 'ಋತುಚಕ್ರ ರಜೆ' ನೀಡುತ್ತಿರುವುದು ದೇಶದಲ್ಲೇ ಮಾದರಿ ಹೆಜ್ಜೆ.

ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ

ರಾಜ್ಯದ ಆರ್ಥಿಕ ಪ್ರಗತಿಯ ಬಗ್ಗೆ ಮಾತನಾಡುತ್ತಾ, 2025-26ರ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕಾಗಿ 83,200 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು. ಬೆಂಗಳೂರಿನ ಅಭಿವೃದ್ಧಿಗಾಗಿ 1.5 ಲಕ್ಷ ಕೋಟಿ ರೂ.ಗಳ ಯೋಜನೆಗಳು ರೂಪಿತವಾಗುತ್ತಿವೆ. ಸೆಮಿಕಂಡಕ್ಟರ್, ಏರೋಸ್ಪೇಸ್ ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ ಕರ್ನಾಟಕ ವಿಶ್ವದ ಗಮನ ಸೆಳೆಯುತ್ತಿದೆ ಎಂದು ಅವರು ವಿವರಿಸಿದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ

ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸುಧಾರಣೆಗೆ 'ಅಕ್ಷರ ಆವಿಷ್ಕಾರ' ಯೋಜನೆ ಮತ್ತು 300 ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳು ದೇಶದ 'ಹೆಲ್ತ್ ಹಬ್'ಗಳಾಗಿ ವಿಕಸನಗೊಳ್ಳುತ್ತಿವೆ.

ರೈತ ಪರ ಮತ್ತು ಕಾನೂನು ಸುವ್ಯವಸ್ಥೆ

ಅತಿವೃಷ್ಟಿ ಪರಿಹಾರವಾಗಿ 2,250 ಕೋಟಿ ರೂ. ವಿನಿಯೋಗಿಸಲಾಗಿದ್ದು, ಹಾಲಿನ ಪ್ರೋತ್ಸಾಹ ಧನವಾಗಿ 4,130 ಕೋಟಿ ರೂ.ಗಳನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ. 4,050 ದಾಖಲೆರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಹಕ್ಕುಪತ್ರ ವಿತರಿಸಲಾಗಿದೆ.

ಯುವಜನತೆಯನ್ನು ಬಲಿಪಡೆಯುತ್ತಿರುವ ಡ್ರಗ್ಸ್ ಪಿಡುಗನ್ನು 'ನರಹತ್ಯೆ'ಗೆ ಸಮಾನಾದ ಅಪರಾಧ ಎಂದು ಪರಿಗಣಿಸಿ ಕಠಿಣ ಕಾನೂನು ರೂಪಿಸಲಾಗುತ್ತಿದೆ ಎಂದು ರಾಜ್ಯಪಾಲರು ಎಚ್ಚರಿಸಿದರು.

"ವಿವಿಧತೆಯಲ್ಲಿ ಏಕತೆ ನಮ್ಮ ನೈಜ ಶಕ್ತಿ. ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿ ಕೆಲಸ ಮಾಡೋಣ. ಸುಭದ್ರ ಮತ್ತು ಸೌಹಾರ್ದ ಕರ್ನಾಟಕದ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ," ಎಂದು ಹೇಳುವ ಮೂಲಕ ರಾಜ್ಯಪಾಲರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

Read More
Next Story