ಗಣರಾಜ್ಯೋತ್ಸವ ಪರೇಡ್‌: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ, ಕೇಂದ್ರದ ಧೋರಣೆಗೆ ಆಕ್ರೋಶ
x

ಗಣರಾಜ್ಯೋತ್ಸವ ಪರೇಡ್‌: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ, ಕೇಂದ್ರದ ಧೋರಣೆಗೆ ಆಕ್ರೋಶ

ಸಂಸ್ಕೃತಿ, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಕರ್ನಾಟಕವನ್ನು ಕೇಂದ್ರ ಸರ್ಕಾರ ಮತ್ತೆ ಕಡೆಗಣಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.


ನವದೆಹಲಿಯ ಕರ್ತವ್ಯಪಥದಲ್ಲಿ ಸೋಮವಾರ ನಡೆಯಲಿರುವ ವೈಭವದ 77ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಸಿಗದಿರುವುದು ರಾಜ್ಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಸಂಸ್ಕೃತಿ, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಕರ್ನಾಟಕವನ್ನು ಕೇಂದ್ರ ಸರ್ಕಾರ ಮತ್ತೆ ಕಡೆಗಣಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪ್ರತಿ ವರ್ಷ ಗಣರಾಜ್ಯೋತ್ಸವದ ಪರೇಡ್ ನಲ್ಲಿ ವಿವಿಧ ರಾಜ್ಯಗಳ ಸಂಸ್ಕೃತಿ, ಸಾಧನೆ ಬಿಂಬಿಸುವ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯುತ್ತದೆ. ಆದರೆ, ಈ ಬಾರಿಯ ಪರೇಡ್ ಗೆ ಸ್ತಬ್ಧಚಿತ್ರ ಆಯ್ಕೆ ಮಾಡದಿರುವುದು ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆಯನ್ನು ಅನುಮಾನದಿಂದ ನೋಡುವಂತಾಗಿದೆ.

ಕೇಂದ್ರದ ವಿರುದ್ಧ ಕರ್ನಾಟಕ ಆಕ್ರೋಶ

ಕೇಂದ್ರ ಸರ್ಕಾರದ ತಜ್ಞರನ್ನು ಒಳಗೊಂಡ ಆಯ್ಕೆ ಸಮಿತಿಯು ಈ ಬಾರಿ ಕೆಲವೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಕರ್ನಾಟಕದ ಆಕ್ರೋಶಕ್ಕೆ ಕಾರಣವಾಗಿದೆ.

ದೃಶ್ಯ ವಿನ್ಯಾಸ, ವೈವಿಧ್ಯತೆ, ಪರೇಡ್ ಸಮಯ ಮಿತಿ ಹಾಗೂ ವಿಷಯಗಳನ್ನು ಪ್ರಭಾವಿಸುವ ಮಾನದಂಡಗಳನ್ನು ಉಲ್ಲೇಖಿಸಿ ಕರ್ನಾಟಕದ ಸ್ತಬ್ಧಚಿತ್ರವನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಕೇಂದ್ರದ ಸಮರ್ಥನೆಗೆ ತಿರುಗೇಟು ನೀಡಿರುವ ರಾಜ್ಯ ಸರ್ಕಾರವು ಇದು ಕೇವಲ ತಾಂತ್ರಿಕ ನಿರ್ಧಾರವಲ್ಲ, ರಾಜಕೀಯ ಪ್ರೇರಿತ ತೀರ್ಮಾನ. ದಕ್ಷಿಣ ಭಾರತದ ರಾಜ್ಯಗಳ ವಿರುದ್ಧ ನಿರಂತರ ನಿರ್ಲಕ್ಷ್ಯದ ಹಿಡಿದ ಕನ್ನಡಿ ಎಂದು ಟೀಕಿಸಿದೆ.

2024ರ ಗಣರಾಜ್ಯೋತ್ಸವ ಪರೇಡ್ ನಲ್ಲೂ ರಾಜ್ಯದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಿರಲಿಲ್ಲ. 2023ರಲ್ಲಿ ‘ನಾರಿ ಶಕ್ತಿ’ ವಿಷಯದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿ, ಒತ್ತಡಕ್ಕೆ ಮಣಿದು ಕೊನೆ ಕ್ಣಣದಲ್ಲಿ ಆಯ್ಕೆ ಮಾಡಿತ್ತು.

ಹೀಗೆ, ಪ್ರತಿ ವರ್ಷ ಸ್ತಬ್ಧ ಚಿತ್ರ ಆಯ್ಕೆ ವಿಚಾರವು ರಾಜಕೀಯ ವಿವಾದದ ರೂಪ ಪಡೆಯುತ್ತಿದ್ದು, ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ’

2026 ನೇ ಸಾಲಿ‌ ಗಣರಾಜ್ಯೋತ್ಸವ ಪರೇಡ್ ಗೆ ಕರ್ನಾಟಕ ಸರ್ಕಾರ “ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ” ಎಂಬ ವಿಷಯವನ್ನು ಇಟ್ಟುಕೊಂಡು ಸ್ತಬ್ಧಚಿತ್ರ ತಯಾರಿಸುವುದಾಗಿ ಪ್ರಸ್ತಾಪಿಸಿತ್ತು.

ಒಂದು ಕಡೆ ಕೃಷಿ ಪರಂಪರೆ, ಮತ್ತೊಂದು ಕಡೆ ಬೆಂಗಳೂರು ಕೇಂದ್ರಿತ ಐಟಿ, ಸೆಮಿಕಂಡಕ್ಟರ್ ಹಾಗೂ ನವೀನ ತಂತ್ರಜ್ಞಾನದಲ್ಲಿನ ಸಾಧನೆ ಪರಂಪರೆ ಮತ್ತು ಪ್ರಗತಿಯ ಬಿಂಬಿಸುವಂತೆ ಸ್ತಬ್ಧಚಿತ್ರದ ಮಾದರಿ ಕಳುಹಿಸಿತ್ತು. ಆದರೆ, ಆಯ್ಕೆ ಸಮಿತಿಯು ಕರ್ತವ್ಯ ಪಥದ ಪರೇಡ್ ಗೆ ಅವಕಾಶ ನೀಡದೇ ಕೆಂಪುಕೋಟೆಯ ‘ಭಾರತ ಪರ್ವ’ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ಅವಕಾಶ ನೀಡಿದೆ.

ಸಂಘರ್ಷಕ್ಕೆ ಕಾರಣವಾದ ಧೋರಣೆ

ಸ್ತಬ್ಧಚಿತ್ರವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ; ಅದು ರಾಜ್ಯಗಳ ರಾಜಕೀಯ ಸ್ಥಾನಮಾನ, ಒಕ್ಕೂಟ ವ್ಯವಸ್ಥೆಯ ಗೌರವ ಹಾಗೂ ರಾಷ್ಟ್ರ ಮಟ್ಟದ ವೇದಿಕೆಯಲ್ಲಿ ಕರ್ನಾಟಕದ ಪ್ರಾತಿನಿಧ್ಯದ ಪ್ರಶ್ನೆಯೂ ಆಗಿತ್ತು. ಆದರೆ, ರಾಜ್ಯದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡದಿರುವುದು ಕೇಂದ್ರ ಹಾಗೂ ರಾಜ್ಯದ ನಡುವಿನ ಸಂಘರ್ಷ ಹೆಚ್ಚಿಸಲಿದೆ ಎನ್ನಲಾಗಿದೆ.

ಮೈಸೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕರ್ನಾಟಕದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿಲ್ಲ. ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶಿಸುವ ಸಂಬಂಧ ಪತ್ರ ವ್ಯವಹಾರವಾಗಿದ್ದರೂ ಕೇಂದ್ರ ಸರ್ಕಾರ ಆಯ್ಕೆ ಮಾಡಿಲ್ಲ. ಇದು ಕರ್ನಾಟಕಕ್ಕೆ ಮಾಡಿದ ಅಪಮಾನ ಎಂದು ಟೀಕಿಸಿದ್ದಾರೆ.

ಇನ್ನು ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ಕೇಂದ್ರದ ಕ್ರಮ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

"ಸರಿಯಾದ ಪತ್ರ ವ್ಯವಹಾರ ನಡೆಸದ ಕಾರಣ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ" ಎಂದು ಮೈಸೂರು ಬಿಜೆಪಿ ಸಂಸದ ಯದುವೀರ್ ಒಡೆಯರ್ ದೂರಿದರೆ, ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ.

"ಸತತವಾಗಿ ಪ್ರಶಸ್ತಿ ಗೆಲ್ಲುತ್ತಿದ್ದ ರಾಜ್ಯದ ಸ್ತಬ್ಧಚಿತ್ರವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ. ಚುನಾವಣಾ ದೃಷ್ಟಿಯಿಂದ ಬೇರೆ ರಾಜ್ಯಗಳಿಗೆ ಅವಕಾಶ ನೀಡಲಾಗಿದೆ" ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"2026ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಒಟ್ಟು 30 ಸ್ತಬ್ಧಚಿತ್ರಗಳಿಗೆ ಅವಕಾಶವಿದೆ. ಆದರೆ, 17 ಸ್ತಬ್ಧಚಿತ್ರಗಳಿಗೆ ಮಾತ್ರ ಕರ್ತವ್ಯ ಪಥದಲ್ಲಿ ಸಾಗಲು ಅವಕಾಶ ನೀಡಲಾಗಿದೆ" ಎಂದು ದೂರಿದ್ದಾರೆ.

Read More
Next Story