
ಮಲೈ ಮಹದೇಶ್ವರ ದೇವಾಲಯದ ಸಮೀಪದ ಕಾಡಿನಲ್ಲಿ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. (ಸಾಂದರ್ಭಿಕ ಚಿತ್ರ)
ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಿಷೇಧ; ಸರ್ಕಾರದ ಕಠಿಣದ ನಿರ್ಧಾರ ಯಾಕೆ?
ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಜನವರಿ 21ರ ಸಂಜೆ 6 ಗಂಟೆಯಿಂದ ಜನವರಿ 24ರ ಮಧ್ಯರಾತ್ರಿವರೆಗೆ ನಿಷೇಧ ಇರಲಿದೆ.
ಪುರಣಾ ಪ್ರಸಿದ್ಧ ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಕಾಲುದಾರಿಯಲ್ಲಿ ಚಿರತೆ ದಾಳಿಗೆ ಭಕ್ತರೊಬ್ಬರು ಬಲಿಯಾದ ಬೆನ್ನಲ್ಲೇ, ಚಾಮರಾಜನಗರ ಜಿಲ್ಲಾಡಳಿತವು ಮಹತ್ವದ ಆದೇಶ ಹೊರಡಿಸಿದೆ. ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುವ ಹಾಗೂ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಆದೇಶಿಸಿದ್ದಾರೆ.
ಬುಧವಾರ (ಜ. 21) ಮುಂಜಾನೆ ಸುಮಾರು 5. 45ರ ಸಮಯದಲ್ಲಿ ಹನೂರು ತಾಲೂಕಿನ ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮೆಟ್ಟಿಲು ಹಾದಿಯ 'ರಂಗಸ್ವಾಮಿ ಒಡ್ಡು' ಎಂಬ ಜಾಗದಲ್ಲಿ ಚಿರತೆ ದಾಳಿ ನಡೆದಿದೆ. ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರ ತಂಡದ ದಾಳಿ ಮಾಡಿದ ಚಿರತೆ, ಒಬ್ಬ ವ್ಯಕ್ತಿಯನ್ನು ಕಾಡಿನೊಳಗೆ ಎಳೆದೊಯ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಆ ವ್ಯಕ್ತಿಯು ಮೃತಪಟ್ಟಿದ್ದನ್ನು ಅರಣ್ಯ ಇಲಾಖೆ ದೃಢಪಡಿಸಿತ್ತು.
ಜಿಲ್ಲಾಡಳಿತದ ಕ್ರಮ
ಚಿರತೆಯು ಕಾಡುಹಾದಿಯಲ್ಲಿ ಇನ್ನೂ ಸಕ್ರಿಯವಾಗಿದ್ದು, ಮತ್ತೆ ದಾಳಿ ನಡೆಸುವ ಸಂಭವವಿರುವುದರಿಂದ ಮತ್ತು ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಜನವರಿ 21ರ ಸಂಜೆ 6 ಗಂಟೆಯಿಂದ ಜನವರಿ 24ರ ಮಧ್ಯರಾತ್ರಿವರೆಗೆ ನಿಷೇಧ ಇರಲಿದೆ.
ಮೆಟ್ಟಿಲು ಹಾದಿ ಅಥವಾ ಕಾಡುಹಾದಿಯಲ್ಲಿ ಪಾದಯಾತ್ರೆ ಮಾಡುವುದು ಮತ್ತು ದ್ವಿಚಕ್ರ ವಾಹನಗಳಲ್ಲಿ ಬೆಟ್ಟಕ್ಕೆ ತೆರಳುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಆದೇಶವು ಚಿರತೆ ಸೆರೆ ಕಾರ್ಯಾಚರಣೆಯಲ್ಲಿರುವ ಅರಣ್ಯ ಸಿಬ್ಬಂದಿ, ಪಶುವೈದ್ಯಾಧಿಕಾರಿಗಳು ಮತ್ತು ಬಂದೋಬಸ್ತ್‌ಗಾಗಿ ನಿಯೋಜನೆಗೊಂಡ ಪೊಲೀಸ್ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ.
ಶಿವರಾತ್ರಿ ಮುನ್ನ ಎಚ್ಚರಿಕೆ
ಮಲೈ ಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ ಮತ್ತು ಯುಗಾದಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮಾಡುವುದು ವಾಡಿಕೆ. ಆದರೆ, ಪ್ರಸ್ತುತ ಪರಿಸ್ಥಿತಿ ಅಪಾಯಕಾರಿಯಾಗಿರುವುದರಿಂದ ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು. ಚಿರತೆಯನ್ನು ಸೆರೆಹಿಡಿಯುವ ತನಕ ಕಾಡುಹಾದಿಯ ಸಾಹಸಕ್ಕೆ ಮುಂದಾಗಬಾರದು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

