
ಮೊಟ್ಟೆ ತಿಂದ್ರೆ ಕ್ಯಾನ್ಸರ್ ವದಂತಿ- 147 ಮಾದರಿಗಳ ಪರೀಕ್ಷೆ; ರಿಪೋರ್ಟ್‌ನಲ್ಲೇನಿದೆ?
ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬುದು ಕೇವಲ ವದಂತಿ. ಜನರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ವಿಚಾರವೊಂದು ಭಾರೀ ಸದ್ದು ಮಾಡುತ್ತಿದೆ. ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಮೊಟ್ಟೆ ಸುರಕ್ಷಿತ ಎಂದು ಪದೇ ಪದೆ ಹೇಳುತ್ತಲೇ ಬಂದಿದ್ದಾರೆ. ಈ ಬಗ್ಗೆ ಬುಧವಾರ ಮತ್ತೆ ಸದನದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದು, ಮೊಟ್ಟೆ ಸೇವನೆಯಿಂದ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಸದನಕ್ಕೆ ಭರವಸೆ ನೀಡಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಗಳ ವಿತರಣೆ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉತ್ತರ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುನಿಲ್ ಕುಮಾರ್, ಮೊಟ್ಟೆ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಹರಿದಾಡುತ್ತಿವೆ. ಈ ಬಗ್ಗೆ ಪೋಷಕರಲ್ಲಿ ಮತ್ತು ಜನರಲ್ಲಿ ಸಾಕಷ್ಟು ಆತಂಕ ಮನೆಮಾಡಿದೆ. ಆದ್ದರಿಂದ ಆರೋಗ್ಯ ಸಚಿವರು ಈ ಬಗ್ಗೆ ಸದನದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
147 ಮೊಟ್ಟೆಗಳ ಮಾದರಿ ಪರೀಕ್ಷೆ
ಸದಸ್ಯರ ಆತಂಕಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈ ವಿಷಯದ ಬಗ್ಗೆ ಈಗಾಗಲೇ ಸಾರ್ವಜನಿಕವಾಗಿ ಮಾಹಿತಿ ನೀಡಲಾಗಿದೆ. ಒಂದು ನಿರ್ದಿಷ್ಟ ಕಂಪನಿಯ ಮೊಟ್ಟೆಗಳಲ್ಲಿ ಆ್ಯಂಟಿ ಬಯೋಟಿಕ್ ಅಂಶಗಳಿವೆ ಎಂಬ ವದಂತಿ ಹರಡಿತ್ತು. ಈ ಬಗ್ಗೆ ಕೇಂದ್ರದ ಆಹಾರ ಸುರಕ್ಷತಾ ಇಲಾಖೆ (FSSAI) ಮತ್ತು ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಗಮನಹರಿಸಿವೆ. ಕಳೆದ ವರ್ಷ ರಾಜ್ಯದಾದ್ಯಂತ 147 ಮೊಟ್ಟೆಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಕೇವಲ ಒಂದು ಮಾದರಿ ಮಾತ್ರ ವಿಫಲವಾಗಿದ್ದು, ಉಳಿದ ಎಲ್ಲಾ ಸ್ಯಾಂಪಲ್‌ಗಳು ಉತ್ತಮ ಗುಣಮಟ್ಟದಿಂದ ಕೂಡಿವೆ ಎಂದು ಅಂಕಿಅಂಶ ಸಮೇತ ವಿವರಿಸಿದರು.
ಯಾವುದೋ ವದಂತಿಗಳಿಗೆ ಕಿವಿಗೊಟ್ಟು ಪೌಷ್ಟಿಕಾಂಶದ ಮೂಲವಾಗಿರುವ ಮೊಟ್ಟೆ ಸೇವನೆಯನ್ನು ನಿಲ್ಲಿಸುವುದು ಬೇಡ. ಮೊಟ್ಟೆ ಆರೋಗ್ಯಕ್ಕೆ ಅತ್ಯಂತ ಹಿತಕಾರಿ ಹಾಗೂ ಸುರಕ್ಷಿತ. ಯಾವುದೇ ರೀತಿಯ ಭಯ ಬೇಡ ಎಂದು ಸಚಿವರು ಸದನದಲ್ಲಿ ಸ್ಪಷ್ಟಪಡಿಸುವ ಮೂಲಕ ಮೊಟ್ಟೆ ವಿವಾದಕ್ಕೆ ತೆರೆ ಎಳೆದರು.
ದೈನಂದಿನ ಆಹಾರದ ಪ್ರಮುಖ ಭಾಗವಾಗಿರುವ ಮೊಟ್ಟೆಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜೆನೋಟಾಕ್ಸಿಕ್' ಅಂಶಗಳಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ನಿಷೇಧಿತ ಆಂಟಿಬಯಾಟಿಕ್‌ಗಳಿದ್ದು, ಅವು ಗಂಭೀರ ಆರೋಗ್ಯ ಸಮಸ್ಯೆಗೆ ದಾರಿಮಾಡಿಕೊಡುತ್ತವೆ ಎಂಬ ವಿಡಿಯೋವೊಂದು ಗ್ರಾಹಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ 'ಎಗಾಸ್' ಸಂಸ್ಥೆಯ ಮೊಟ್ಟೆಗಳ ಕುರಿತು ಪ್ರಸ್ತಾಪಿಸಲಾಗಿದ್ದು, ಪ್ರಯೋಗಾಲಯದ ವರದಿಗಳನ್ನು ಉಲ್ಲೇಖಿಸಿ ಈ ಮೊಟ್ಟೆಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳಿವೆ ಎಂದು ಹೇಳಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಭಯಕ್ಕೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

