
ಸ್ವಾತಂತ್ರ್ಯ ಬಂದು ದಶಕಗಳಾಯ್ತು! ಕರ್ನಾಟಕದ 1,749 ಹಳ್ಳಿಗಳಿಗೆ ಬಸ್‌ಗಳೇ ಇಲ್ಲ! ರಸ್ತೆಗಳೂ ಇಲ್ಲ!!
ವಿದ್ಯಾರ್ಥಿಗಳು, ಗರ್ಭಿಣಿಯರು, ವೃದ್ಧರು ಪರದಾಡುತ್ತಿದ್ದಾರೆ. ತುರ್ತು ಚಿಕಿತ್ಸೆಗೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಸಾಹಸವಾಗಿದೆ. ಸಕಾಲದಲ್ಲಿ ಚಿಕಿತ್ಸೆಯಿಲ್ಲದೆ ಪ್ರಾಣ ಕಳೆದುಕೊಂಡವರೆಷ್ಟೋ...
ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸಾರಿಗೆ ವ್ಯವಸ್ಥೆ ಅತ್ಯಂತ ಸುಧಾರಿತ ಸ್ಥಿತಿಯಲ್ಲಿದೆ ಎಂಬುದು ಹೆಮ್ಮೆಯ ವಿಷಯ. ಆದರೆ, ಈ ಯಶಸ್ಸಿನ ಪರದೆಯ ಹಿಂದೆ ಕಹಿಯಾದ ಮತ್ತು ಆಘಾತಕಾರಿ ಸತ್ಯ ಅಡಗಿದೆ!
ರಾಜ್ಯದ ಸುಮಾರು 1,749 ಕ್ಕೂ ಹೆಚ್ಚು ಹಳ್ಳಿಗಳು ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದು ಅಮೃತ ಮಹೋತ್ಸವ ಆಚರಿಸಿದ ನಂತರವೂ ಇಂದಿಗೂ ಸಾರಿಗೆ ಸಂಸ್ಥೆಯ 'ಕೆಂಪು ಬಸ್'ನ ಮುಖವನ್ನೇ ನೋಡಿಲ್ಲ! ಇದು ಪ್ರಗತಿಶೀಲ ಕರ್ನಾಟಕದ ಪಾಲಿಗೆ ಒಂದು ದೊಡ್ಡ ವಿರೋಧಾಭಾಸವಾಗಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಎಂದು ರಾಜ್ಯವು ನಾಲ್ಕು ಪ್ರಮುಖ ಸಾರಿಗೆ ನಿಗಮಗಳನ್ನು ಹೊಂದಿದೆ. ಈ ನಾಲ್ಕು ನಿಗಮಗಳ ಮೂಲಕ ರಾಜ್ಯದ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ. 'ಶಕ್ತಿ' ಯೋಜನೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿ, ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಆದರೆ, ಸರ್ಕಾರದ ಈ ಎಲ್ಲಾ ಸಾಧನೆಗಳು 1,749 ಹಳ್ಳಿಗಳ ಹೊಸ್ತಿಲಲ್ಲಿ ಬಂದು ನಿಂತುಬಿಡುತ್ತವೆ. ಈ ಹಳ್ಳಿಗಳಿಗೆ ಬಸ್ ಬಾರದಿರಲು ಪ್ರಮುಖ ಕಾರಣ ಸಾರಿಗೆ ಸಂಸ್ಥೆಯ ವೈಫಲ್ಯಕ್ಕಿಂತ ಹೆಚ್ಚಾಗಿ, ಮೂಲಭೂತ ಸೌಕರ್ಯವಾದ 'ರಸ್ತೆ'ಯ ಕೊರತೆಯಾಗಿದೆ.
ಸಾರಿಗೆ ಜಾಲದ ಅಂಕಿ-ಅಂಶಗಳು
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 26 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿವೆ. ಇಡೀ ರಾಜ್ಯದಲ್ಲಿ ಒಟ್ಟು 31,641 ಜನವಸತಿ ಗ್ರಾಮಗಳಿದ್ದು, ಈ ಪೈಕಿ 29,892 ಹಳ್ಳಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸರಕಾರಿ ದಾಖಲೆಗಳು ಹೇಳುತ್ತವೆ. ಮೇಲ್ನೋಟಕ್ಕೆ ಇದು ದೊಡ್ಡ ಸಾಧನೆಯಂತೆ ಕಂಡರೂ, ಉಳಿದಿರುವ 1,749 ಗ್ರಾಮಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ಬಸ್‌ಗಳ ಸಂಚಾರಕ್ಕೆ ಯೋಗ್ಯವಾದ ರಸ್ತೆಯೇ ಇಲ್ಲದಿರುವುದು ಈ ಸಮಸ್ಯೆಯ ಮೂಲ ಕಾರಣ. ಅನೇಕ ಕಡೆಗಳಲ್ಲಿ ಸಾರಿಗೆ ಸಂಸ್ಥೆಯು ಹಳ್ಳಿಯ ಹೊಸ್ತಿಲವರೆಗೂ ಬರುವುದಿಲ್ಲ. ಬದಲಾಗಿ ಹಳ್ಳಿಯಿಂದ 2 ಕಿ.ಮೀ. ದೂರದ ಮುಖ್ಯ ರಸ್ತೆಯವರೆಗೆ ಮಾತ್ರ ಸೇವೆ ಒದಗಿಸುತ್ತದೆ. ಈ 2 ಕಿ.ಮೀ. ಅಂತರವು ವೃದ್ಧರಿಗೆ, ರೋಗಿಗಳಿಗೆ ಮತ್ತು ಶಾಲಾ ಮಕ್ಕಳಿಗೆ ಮೈಲುಗಳಷ್ಟು ದೂರದಂತೆ ಭಾಸವಾಗುತ್ತಿದೆ.
ಮೂಲಭೂತ ಸೌಕರ್ಯದ ಕೊರತೆ
ಬಸ್ಸುಗಳು ಸಂಚರಿಸಲು ಕನಿಷ್ಠ ಗುಣಮಟ್ಟದ ರಸ್ತೆಗಳ ಅವಶ್ಯಕತೆಯಿದೆ. ಆದರೆ ವರದಿಯ ಪ್ರಕಾರ, ಈ 1,749 ಹಳ್ಳಿಗಳಿಗೆ ತಲುಪಲು ಸುಸಜ್ಜಿತವಾದ ಡಾಂಬರು ರಸ್ತೆಗಳೇ ಇಲ್ಲ. ಅನೇಕ ಕಡೆ ಕಚ್ಚಾ ರಸ್ತೆಗಳು, ಗುಡ್ಡಗಾಡು ಪ್ರದೇಶಗಳು ಅಥವಾ ತೀರಾ ಕಿರಿದಾದ ದಾರಿಗಳಿರುವುದರಿಂದ ಬೃಹತ್ ಸಾರಿಗೆ ಬಸ್ಸುಗಳು ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಂತೂ ಈ ಹಳ್ಳಿಗಳು ಸಂಪೂರ್ಣವಾಗಿ ಹೊರಜಗತ್ತಿನಿಂದ ಕಡಿತಗೊಳ್ಳುತ್ತವೆ. ಸಾರಿಗೆ ಸಂಸ್ಥೆಯು ಲಾಭ-ನಷ್ಟದ ಲೆಕ್ಕಾಚಾರದ ಜೊತೆಗೆ ವಾಹನಗಳ ನಿರ್ವಹಣೆಯನ್ನೂ ನೋಡಬೇಕಾಗುತ್ತದೆ. ಕೆಟ್ಟ ರಸ್ತೆಗಳಲ್ಲಿ ಬಸ್ಸುಗಳನ್ನು ಓಡಿಸುವುದರಿಂದ ವಾಹನಗಳು ಬೇಗನೆ ದುರಸ್ತಿಗೆ ಬರುತ್ತವೆ ಎಂಬ ತಾಂತ್ರಿಕ ಕಾರಣವೂ ಈ ಗ್ರಾಮಗಳನ್ನು ಸಾರಿಗೆ ನಕ್ಷೆಯಿಂದ ಹೊರಗಿಟ್ಟಿದೆ.
'ಶಕ್ತಿ' ಯೋಜನೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿ, ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಆದರೆ, ಸರ್ಕಾರದ ಈ ಎಲ್ಲಾ ಸಾಧನೆಗಳು 1,749 ಹಳ್ಳಿಗಳ ಹೊಸ್ತಿಲಲ್ಲಿ ಬಂದು ನಿಂತುಬಿಡುತ್ತವೆ.
ಈ ಹಳ್ಳಿಗಳಿಗೆ ಬಸ್ ಬರದಿರಲು ಪ್ರಮುಖ ಕಾರಣ ಸಾರಿಗೆ ಸಂಸ್ಥೆಯ ವೈಫಲ್ಯಕ್ಕಿಂತ ಹೆಚ್ಚಾಗಿ, ಮೂಲಭೂತ ಸೌಕರ್ಯವಾದ ರಸ್ತೆಯ ಕೊರತೆಯಾಗಿದೆ. ಇದು ಕೇವಲ ಸಾರಿಗೆ ಇಲಾಖೆಯ ಸಮಸ್ಯೆಯಲ್ಲ, ಬದಲಾಗಿ ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಶಿಕ್ಷಣದ ಮೇಲೆ ಬೀರುತ್ತಿರುವ ಭೀಕರ ಪರಿಣಾಮ
ಸಾರಿಗೆ ಸಂಪರ್ಕವಿಲ್ಲದ ಹಳ್ಳಿಗಳಲ್ಲಿ ಅತ್ಯಂತ ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಿರುವುದು ವಿದ್ಯಾರ್ಥಿಗಳು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು. ಹಳ್ಳಿಗಳಲ್ಲಿ ಕೇವಲ ಪ್ರಾಥಮಿಕ ಶಾಲೆಗಳಿರುತ್ತವೆ. ಪ್ರೌಢಶಾಲೆ ಅಥವಾ ಕಾಲೇಜಿಗೆ ಹೋಗಬೇಕೆಂದರೆ ಹತ್ತಿರದ ಪಟ್ಟಣಕ್ಕೆ ಹೋಗಲೇಬೇಕು. ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಪ್ರತಿದಿನ 5 ರಿಂದ 10 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.
ಸುರಕ್ಷತೆಯ ದೃಷ್ಟಿಯಿಂದ ಮತ್ತು ಸುದೀರ್ಘ ನಡಿಗೆಯ ಆಯಾಸದಿಂದಾಗಿ ಅನೇಕ ಪೋಷಕರು ಹೆಣ್ಣುಮಕ್ಕಳನ್ನು ಹೈಸ್ಕೂಲ್ ನಂತರ ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಹೈಸ್ಕೂಲ್ ಅಥವಾ ಕಾಲೇಜಿಗೆ ಹೋಗಲು ಸಾಧ್ಯವಾಗದೆ 7ನೇ ಅಥವಾ 10ನೇ ತರಗತಿಯ ನಂತರ ಶಿಕ್ಷಣಕ್ಕೆ ವಿದಾಯ ಹೇಳುತ್ತಿದ್ದಾರೆ.
ಇದು ಗ್ರಾಮೀಣ ಭಾಗದಲ್ಲಿ 'ಡ್ರಾಪ್ ಔಟ್' ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ದಿನದ 3-4 ಗಂಟೆಗಳ ಕಾಲ ಕೇವಲ ಪ್ರಯಾಣಕ್ಕೇ ವ್ಯಯವಾಗುವುದರಿಂದ ವಿದ್ಯಾರ್ಥಿಗಳಿಗೆ ಓದಿನ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ.
ಗಂಡು ಮಕ್ಕಳನ್ನು ಹೇಗೋ ಕಷ್ಟಪಟ್ಟು ಶಾಲೆಗೆ ಕಳುಹಿಸುವ ಪೋಷಕರು, ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಮನೆಯಲ್ಲೇ ಉಳಿಸಿಕೊಳ್ಳುತ್ತಿದ್ದಾರೆ. ಇದು ಗ್ರಾಮೀಣ ಹೆಣ್ಣುಮಕ್ಕಳ ಸಬಲೀಕರಣಕ್ಕೆ ದೊಡ್ಡ ಕೊಡಲಿಯೇಟಾಗಿದೆ. ವಿದ್ಯಾಭ್ಯಾಸ ಮರೆತು ಹೆಣ್ಣುಮಕ್ಕಳಿಗೆ ಬಾಲ್ಯ ವಿವಾಹ ಮಾಡುವ ಅಥವಾ ಮನೆಯ ಕೆಲಸಕ್ಕೆ ಸೀಮಿತಗೊಳಿಸುವ ಪರಿಪಾಠ ಇಂದಿಗೂ ಮುಂದುವರಿಯುತ್ತಿದೆ. ಆರ್ಥಿಕವಾಗಿ ಸಬಲರಾದವರು ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸುತ್ತಾರೆ ಅಥವಾ ನಗರಗಳ ಹಾಸ್ಟೆಲ್‌ಗಳಲ್ಲಿ ಇರಿಸುತ್ತಾರೆ. ಆದರೆ, ಬಡ ರೈತರ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಮತ್ತೆ ಕೂಲಿ ಕೆಲಸಕ್ಕೆ ಸೇರುವಂತಾಗಿದೆ.
ಗ್ರಾಮಗಳಿಗೆ ಬಸ್ ಕಲ್ಪಿಸಲು ಕೇವಲ ಬಸ್ಸುಗಳಿದ್ದರೆ ಸಾಲದು, ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮೊದಲು ರಸ್ತೆಗಳನ್ನು ಸರಿಪಡಿಸಬೇಕಿದೆ. ರಸ್ತೆಗಳು ಸಿದ್ಧವಾದರೆ ಮಾತ್ರ ಕೆಎಸ್‌ಆರ್‌ಟಿಸಿ ತನ್ನ ಸೇವೆಯನ್ನು ಈ ಗ್ರಾಮಗಳ ಹೊಸ್ತಿಲಿಗೆ ತಲುಪಿಸಲು ಸಾಧ್ಯ.
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಪ್ರಾದೇಶಿಕ ಅಸಮಾನತೆ: ರಾಜ್ಯದ ಜಿಲ್ಲೆಗಳ ವ್ಯಥೆ
ಚಿತ್ರದುರ್ಗ ಜಿಲ್ಲೆಯು ಅತಿ ಹೆಚ್ಚು ಹಳ್ಳಿಗಳು ಬಸ್ ಸೌಲಭ್ಯದಿಂದ ವಂಚಿತವಾಗಿವೆ. ಬಯಲು ಸೀಮೆಯಾಗಿದ್ದರೂ ಸರಿಯಾದ ರಸ್ತೆಗಳಿಲ್ಲದಿರುವುದು ದುರಂತ. ಇಲ್ಲಿ 445 ಗ್ರಾಮಗಳಿಗೆ ಕೆಂಪು ಬಸ್ ಇಲ್ಲ ಎಂಬುದು ಶೋಚನೀಯ ಸಂಗತಿ. ಶಿವಮೊಗ್ಗ ಜಿಲ್ಲೆಯಲ್ಲಿ 364 ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆಯಲ್ಲಿ 250 ಗ್ರಾಮಗಳಿಗೆ ಬಸ್ ಸಂಚಾರ ಇಲ್ಲವಾಗಿದೆ. ಮಲೆನಾಡು ಮತ್ತು ಗುಡ್ಡಗಾಡು ಪ್ರದೇಶಗಳನ್ನೊಳಗೊಂಡ ಜಿಲ್ಲೆಗಳಾಗಿದ್ದು, ಇಲ್ಲಿನ ಭೌಗೋಳಿಕ ಸವಾಲುಗಳು ಮತ್ತು ರಸ್ತೆಗಳ ಅವ್ಯವಸ್ಥೆ ಬಸ್ ಸಂಚಾರಕ್ಕೆ ಅಡ್ಡಿಯಾಗಿವೆ. ತುಮಕೂರು ಜಿಲ್ಲೆಯಲ್ಲಿ 156 ಮತ್ತು ದಾವಣಗೆರೆ ಜಿಲ್ಲೆಯಲ್ಲಿ 134 ಗ್ರಾಮಗಳು ಬಸ್‌ಗಳನ್ನೇ ಕಂಡಿಲ್ಲ. ಸುಧಾರಿತ ಜಿಲ್ಲೆಗಳೆಂದು ಕರೆಸಿಕೊಳ್ಳುವ ಇಲ್ಲಿಯೂ ಇಷ್ಟು ದೊಡ್ಡ ಸಂಖ್ಯೆಯ ಹಳ್ಳಿಗಳಿಗೆ ಬಸ್ಸಿಲ್ಲದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ.
ಜಿಲ್ಲಾವಾರು ಬಸ್ ಸೌಲಭ್ಯವಿಲ್ಲದ ಗ್ರಾಮಗಳ ಪಟ್ಟಿ
ಜಿಲ್ಲೆ ಬಸ್ ಸೌಲಭ್ಯವಿಲ್ಲದ ಗ್ರಾಮಗಳ ಸಂಖ್ಯೆ
ಚಿತ್ರದುರ್ಗ 445 (ರಾಜ್ಯದಲ್ಲೇ ಗರಿಷ್ಠ)
ಶಿವಮೊಗ್ಗ 364
ಚಿಕ್ಕಮಗಳೂರು 250
ತುಮಕೂರು 156
ದಾವಣಗೆರೆ 134
ಉತ್ತರ ಕನ್ನಡ 100
ಹಾಸನ 70
ಬೆಳಗಾವಿ 95
ಕಲಬುರಗಿ 80
ಯಾದಗಿರಿ 70
ರಾಯಚೂರು 60
ಕೊಪ್ಪಳ 45
ವಿಜಯಪುರ 40
ಬಾಗಲಕೋಟೆ 35
ಬೀದರ್ 30
ಆರ್ಥಿಕ ಪರಿಣಾಮಗಳು
ಸಾರಿಗೆ ಸೌಲಭ್ಯವಿಲ್ಲದ ಕಾರಣ ಈ ಗ್ರಾಮಗಳ ಆರ್ಥಿಕತೆ ಕುಂಠಿತಗೊಂಡಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಖಾಸಗಿ ವಾಹನಗಳಿಗೆ ದುಬಾರಿ ಬಾಡಿಗೆ ನೀಡಬೇಕಿದೆ. ಆರೋಗ್ಯ ತುರ್ತು ಪರಿಸ್ಥಿತಿಯಲ್ಲಂತೂ ಈ ಜನರ ಪಾಡು ದೇವರಿಗೇ ಪ್ರೀತಿ. ಆಂಬ್ಯುಲೆನ್ಸ್ ಕೂಡ ಬರಲಾಗದ ರಸ್ತೆಗಳಲ್ಲಿ ರೋಗಿಗಳನ್ನು ಹೊತ್ತು ಸಾಗಿಸುವ ದೃಶ್ಯಗಳು ಇಂದಿಗೂ ಕಾಣಸಿಗುತ್ತವೆ. ಇದು ರಾಜ್ಯದ ಪ್ರತಿಷ್ಠೆಗೆ ಮತ್ತು ಅಭಿವೃದ್ಧಿ ಹೊಂದಿದ ರಾಜ್ಯ ಎಂಬ ಹಣೆಪಟ್ಟಿಗೆ ಕುಂದು ತರುವ ಸಂಗತಿಯಾಗಿದೆ. ಸಾರಿಗೆ ಸೌಲಭ್ಯವಿದ್ದರೆ ಹಳ್ಳಿಗಳ ಜನರು ನಗರ ಪ್ರದೇಶಗಳಿಗೆ ಹೋಗಿ ಕೆಲಸ ಮಾಡಿ ಸಂಜೆ ಮರಳಬಹುದು. ಆದರೆ ಬಸ್ಸಿಲ್ಲದ ಕಾರಣ ಅವರು ಹಳ್ಳಿಯಲ್ಲೇ ನಿರುದ್ಯೋಗಿಗಳಾಗಿ ಉಳಿಯುವಂತಾಗಿದೆ ಅಥವಾ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.
ಕೇವಲ ಆರ್ಥಿಕ ಮಾತ್ರವಲ್ಲದೇ, ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಲ್ಲಿ ಆರೋಗ್ಯ ಸೇವೆ ಎಂಬುದು ಮರೀಚಿಕೆಯಾಗಿದೆ. ಗರ್ಭಿಣಿಯರು, ವೃದ್ಧರು ಅಥವಾ ತುರ್ತು ಚಿಕಿತ್ಸೆ ಬೇಕಾದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಒಂದು ದೊಡ್ಡ ಸಾಹಸವೇ ಸರಿ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡ ಎಷ್ಟೋ ಘಟನೆಗಳು ಈ ಗ್ರಾಮಗಳಲ್ಲಿ ವರದಿಯಾಗುತ್ತಲೇ ಇವೆ. ಆಂಬ್ಯುಲೆನ್ಸ್ ಕೂಡ ಬರಲಾಗದಂತಹ ರಸ್ತೆಗಳಿರುವಾಗ, ಸಾಮಾನ್ಯ ಬಸ್ಸುಗಳ ನಿರೀಕ್ಷೆ ಈ ಜನರಿಗೆ ಕನಸಿನಂತಾಗಿದೆ.
ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿ, ಬಸ್ ತಿರುಗಲು ಜಾಗವಿಲ್ಲದ ಮತ್ತು ತೀರಾ ಕಿರಿದಾದ ರಸ್ತೆಗಳಿರುವ ಗ್ರಾಮಗಳಿವೆ. ಅಲ್ಲದೇ, ಕೇವಲ ಮಣ್ಣು ರಸ್ತೆಗಳಿದ್ದು, ಮಳೆಗಾಲದಲ್ಲಿ ಕೆಸರಾಗುತ್ತವೆ. ಇಂತಹ ಗ್ರಾಮಗಳಲ್ಲಿ ಬಸ್‌ಗಳ ಸಂಚಾರ ಕಷ್ಟಕರ. ಹಲವು ಹಳ್ಳಿಗಳಿಗೆ ಮುಖ್ಯ ರಸ್ತೆಯಿಂದ 2 ಕಿ.ಮೀ. ದೂರದವರೆಗೆ ಬಸ್‌ಗಳು ಪ್ರಯಾಣಿಸುತ್ತವೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯು ರಸ್ತೆ ನಿರ್ಮಾಣ ಮಾಡಿದರೆ, ಬಸ್ ಸಂಚಾರ ಮಾಡುವುದಕ್ಕೆ ಇಲಾಖೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.
ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಗ್ರಾಮಗಳಿಗೆ ಬಸ್ ಕಲ್ಪಿಸಲು ಕೇವಲ ಬಸ್ಸುಗಳಿದ್ದರೆ ಸಾಲದು, ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮೊದಲು ರಸ್ತೆಗಳನ್ನು ಸರಿಪಡಿಸಬೇಕಿದೆ. ರಸ್ತೆಗಳು ಸಿದ್ಧವಾದರೆ ಮಾತ್ರ ಕೆಎಸ್‌ಆರ್‌ಟಿಸಿ ತನ್ನ ಸೇವೆಯನ್ನು ಈ ಗ್ರಾಮಗಳ ಹೊಸ್ತಿಲಿಗೆ ತಲುಪಿಸಲು ಸಾಧ್ಯ. ಅಲ್ಲದೇ, ಕೆಲವು ಗ್ರಾಮಗಳಿಗೆ ಮಿನಿ ಬಸ್ ಯೋಜನೆ ತರುವ ಚಿಂತನೆ ಇದೆ. ಈ ಸಮೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಸ್ತೆಗಳ ನಿರ್ಮಾಣವಾಗದ ಹೊರತು ಬಸ್ ಸಂಚಾರ ಮಾಡುವುದು ಕಷ್ಟ ಎಂದರು.

