NIA Report| ಎನ್‌ಐಎ ವರದಿ: 23 ಭಯೋತ್ಪಾದಕ ಸಂಘಟನೆಗಳ ನಿಷೇಧ
x

ಎಐ ಆಧಾರಿತ ಚಿತ್ರ

NIA Report| ಎನ್‌ಐಎ ವರದಿ: 23 ಭಯೋತ್ಪಾದಕ ಸಂಘಟನೆಗಳ ನಿಷೇಧ

ಎನ್‌ಐಎ ಸಂಸ್ಥೆಯ ದಕ್ಷತೆಗೆ ಸಾಕ್ಷಿಯಾಗಿ, ತೀರ್ಪು ಹೊರಬಂದ 103 ಪ್ರಕರಣಗಳ ಪೈಕಿ 100 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಕೇವಲ 3 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳು ಖುಲಾಸೆಯಾಗಿದ್ದಾರೆ.


ರಾಷ್ಟ್ರೀಯ ತನಿಖಾ ಸಂಸ್ಥೆ (NIA). ಕಳೆದ ಐದು ವರ್ಷಗಳಲ್ಲಿ (2019-2025) ಕೈಗೊಳ್ಳಲಾದ ಕ್ರಮಗಳು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿವೆ. ಕೇಂದ್ರ ಸರ್ಕಾರವು ಎನ್‌ಐಎ ನೀಡಿದ ವರದಿಗಳ ಆಧಾರದ ಮೇಲೆ ಒಟ್ಟು 23 ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ.

ಕಳೆದ ಐದು ವರ್ಷಗಳಲ್ಲಿ ಒಟ್ಟು 375 ಭಯೋತ್ಪಾದನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2024ರಲ್ಲಿ ಅತಿ ಹೆಚ್ಚು ಅಂದರೆ 80 ಪ್ರಕರಣಗಳು ದಾಖಲಾಗಿರುವುದು ಕಂಡುಬರುತ್ತದೆ. ಎನ್‌ಐಎ ಸಂಸ್ಥೆಯ ದಕ್ಷತೆಗೆ ಸಾಕ್ಷಿಯಾಗಿ, ತೀರ್ಪು ಹೊರಬಂದ 103 ಪ್ರಕರಣಗಳ ಪೈಕಿ 100 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಕೇವಲ 3 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳು ಖುಲಾಸೆಯಾಗಿದ್ದಾರೆ. ಅಂದರೆ, ಶೇ. 97ರಷ್ಟು ದೋಷಾರೋಪಣೆ ಸಾಬೀತಾದಂತಾಗಿದೆ. ಇದಲ್ಲದೆ, ತನಿಖಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಎನ್‌ಐಎ 'ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ'ದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ (ಯುಎಪಿಎ) 1967ರ ಅಡಿಯಲ್ಲಿ ದೇಶವಿರೋಧಿ ಸಂಘಟನೆಗಳನ್ನು ನಿಷೇಧಿಸುವ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಮೂಲಗಳ ಪ್ರಕಾರ 1967 ರಿಂದ 2019 ರವರೆಗಿನ ಸುದೀರ್ಘ ಅವಧಿಯಲ್ಲಿ ಒಟ್ಟು 41 ಉಗ್ರ ಸಂಘಟನೆಗಳನ್ನು ನಿಷೇಧಿಸಲಾಗಿತ್ತು. ಆದರೆ, ಕೇವಲ 2019 ರಿಂದ 2025 ರವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರವು ಎನ್‌ಐಎ ನೀಡಿದ ವರದಿಗಳ ಆಧಾರದ ಮೇಲೆ 23 ಹೊಸ ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ.

ಮಾಹಿತಿ ಸಂಗ್ರಹಣೆ

ಒಂದು ಸಂಘಟನೆಯನ್ನು ನಿಷೇಧಿಸುವುದು ಸುಲಭದ ಪ್ರಕ್ರಿಯೆಯಲ್ಲ. ಅದಕ್ಕಾಗಿ ಬಲವಾದ ಸಾಕ್ಷ್ಯಾಧಾರಗಳು ಬೇಕಾಗುತ್ತದೆ. ಎನ್‌ಐಎ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಸಂಗ್ರಹಿಸುತ್ತದೆ. ಈ ವೇಳೆ ಉಗ್ರ ಸಂಘಟನೆಗಳ ಹುಟ್ಟು ಮತ್ತು ಅವುಗಳ ಪೂರ್ವಪರ ಇತಿಹಾಸದ ಮಾಹಿತಿ ಕಲೆ ಹಾಕಲಾಗುತ್ತದೆ. ಉಗ್ರ ಸಂಘಟನೆಗಳ ಹುಟ್ಟು, ಅವುಗಳಿಗೆ ಹಣಕಾಸು ಒದಗಿಸುವ ಮೂಲಗಳು, ಸದಸ್ಯರ ನೇಮಕಾತಿ ವಿಧಾನ, ಸಂಘಟನೆಗಳ ಸದಸ್ಯರ ಸಂಖ್ಯೆ ಮತ್ತು ಅವರ ಚಟುವಟಿಕೆಗಳು, ಸಂಘಟನೆಯ ಗುರಿಗಳು ಮತ್ತು ಅವರು ದಾಳಿ ಮಾಡಲು ಯೋಜಿಸಿರುವ ಪ್ರದೇಶಗಳ ಮಾಹಿತಿಯನ್ನು ಕಲೆ ಹಾಕುತ್ತದೆ.

ಕೇವಲ ಸಾಕ್ಷಿಗಳ ಹೇಳಿಕೆಯ ಮೇಲೆ ಅವಲಂಬಿತವಾಗದೆ, ಡಿಜಿಟಲ್ ಫೋರೆನ್ಸಿಕ್ಸ್ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಬಳಸಲಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಕೆ ಮಾಡುತ್ತದೆ.

ಅಲ್ಲದೇ, ಎಲ್ಲಾ ಸಾಕ್ಷ್ಯಾಧಾರಗಳನ್ನು ಕ್ರೋಢೀಕರಿಸಿ ದೇಶದ ಹಿತದೃಷ್ಟಿಯಿಂದ ಉಗ್ರ ಸಂಘಟನೆಗಳನ್ನು ನಿಷೇಧಿಸುವಂತೆ ಮನವಿ ಮಾಡಿರುತ್ತದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಐದು ವರ್ಷಗಳ ಅಂಕಿ-ಅಂಶಗಳು

ಕಳೆದ ಐದು ವರ್ಷಗಳ ಪ್ರಕರಣಗಳ ಅಂಕಿ-ಅಂಶಗಳನ್ನು ಗಮನಿಸಿದಾಗ 2024ರಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಕಂಡುಬರುತ್ತದೆ. ಇದು ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ ಎಂದರ್ಥವಲ್ಲ, ಬದಲಿಗೆ ಎನ್‌ಐಎ ಅತ್ಯಂತ ಸಕ್ರಿಯವಾಗಿ ಕಾರ್ಯಾಚರಣೆ ನಡೆಸಿ, ಗುಪ್ತವಾಗಿ ನಡೆಯುತ್ತಿದ್ದ ಚಟುವಟಿಕೆಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿದೆ ಎಂಬುದನ್ನು ಸೂಚಿಸುತ್ತದೆ. ಸಣ್ಣ ಸುಳಿವು ಸಿಕ್ಕರೂ ತನಿಖೆ ನಡೆಸಿ, ಭಯೋತ್ಪಾದಕ ಜಾಲಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ.

ದಾಖಲಾದ ಪ್ರಕರಣಗಳ ಅಂಕಿ-ಅಂಶಗಳು

2020: 59

2021: 61

2022: 73

2023: 68

2024: 80

2025 : 34

ಒಟ್ಟು: 375

ಶಿಕ್ಷೆಯ ಪ್ರಮಾಣ

ತನಿಖಾ ಸಂಸ್ಥೆಯ ಯಶಸ್ಸು ಅದು ಎಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಎನ್‌ಐಎ ಇಲ್ಲಿ ಜಾಗತಿಕ ಮಟ್ಟದ ದಾಖಲೆ ಬರೆದಿದೆ. ವಿಶ್ವದ ಪ್ರಸಿದ್ಧ ತನಿಖಾ ಸಂಸ್ಥೆಗಳಾದ ಎಫ್‌ಬಿಐ ಅಥವಾ ಇಂಟರ್‌ಪೋಲ್‌ನಂತಹ ಸಂಸ್ಥೆಗಳಿಗೂ ಸರಿಸಾಟಿಯಾಗುವಂತಹ 'ದೋಷಾರೋಪಣೆ ಸಾಬೀತು ದರ'ವನ್ನು ಎನ್‌ಐಎ ಸಾಧಿಸಿದೆ. ಇದು ಸಂಸ್ಥೆಯು ಸಂಗ್ರಹಿಸುವ ಸಾಕ್ಷ್ಯಾಧಾರಗಳು ಎಷ್ಟು ವೈಜ್ಞಾನಿಕವಾಗಿವೆ ಮತ್ತು ನ್ಯಾಯಾಲಯದಲ್ಲಿ ಎಷ್ಟು ಬಲವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೇವಲ 3 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳು ಬಿಡುಗಡೆಯಾಗಿರುವುದು ಸಂಸ್ಥೆಯ ತನಿಖಾ ವ್ಯವಸ್ಥೆಯಲ್ಲಿರುವ ಪಾರದರ್ಶಕತೆ ಮತ್ತು ದಕ್ಷತೆಯನ್ನು ಎತ್ತಿ ತೋರಿಸುತ್ತದೆ. 103 ಪ್ರಕರಣಗಳಲ್ಲಿ ತೀರ್ಪು ಬಂದಿದ್ದು, 100 ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಮೂರು ಪ್ರಕರಣಗಳು ಖುಲಾಸೆಯಾಗಿವೆ. ಶೇ. 97.08ರಷ್ಟು ಎನ್‌ಐಎ ಸಾಧಿಸಿದೆ.

ಶಿಕ್ಷೆಯ ಪ್ರಮಾಣ ವಿವರ

ಒಟ್ಟು ತೀರ್ಪು ಬಂದ ಪ್ರಕರಣಗಳು: 103

ಶಿಕ್ಷೆಯಾದ ಪ್ರಕರಣಗಳು: 100

ಖುಲಾಸೆಯಾದ ಪ್ರಕರಣಗಳು: 03

ಯಶಸ್ಸಿನ ಶೇಕಡವಾರು: ಶೇ. 97.08

ನಿಷೇಧಿತ ಸಂಘಟನೆಗಳ ವಿವರ

ಕಳೆದ ಐದು ವರ್ಷಗಳಲ್ಲಿ ನಿಷೇಧಕ್ಕೊಳಗಾದ 23 ಸಂಘಟನೆಗಳ ಪಟ್ಟಿಯು ಭಾರತವು ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಮೂಲಭೂತವಾದಿ ಸಂಘಟನೆಗಳಾದ ಸಿಮಿ ಮತ್ತು ಪಿಎಫ್‌ಐನಂತಹ ಸಂಘಟನೆಗಳು ದೇಶದ ಒಳಗಿದ್ದುಕೊಂಡೇ ಕೋಮು ಸೌಹಾರ್ದತೆ ಕೆಡಿಸಲು ಮತ್ತು ಯುವಕರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದವು. ಇವುಗಳ ಮೇಲಿನ ನಿಷೇಧವು ದೇಶದ ಆಂತರಿಕ ಶಾಂತಿಗೆ ವರದಾನವಾಗಿದೆ. ಈಶಾನ್ಯ ಭಾರತದ ಉಗ್ರಗಾಮಿಗಳಾದ ಯುಎಲ್‌ಎಫ್‌ಎ, ಎನ್‌ಎಲ್‌ಎಫ್‌ಟಿ, ಎಟಿಟಿಎಫ್ ಮುಂತಾದ ಸಂಘಟನೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿ, ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯವಾಗಿದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಪೋಷಿಸುತ್ತಿದ್ದ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್, ಮುಸ್ಲಿಂ ಲೀಗ್ ಮತ್ತು ಹರಿಯತ್ ಕಾನ್ಫರೆನ್ಸ್‌ನ ಅಂಗಸಂಸ್ಥೆಗಳನ್ನು ನಿಷೇಧಿಸುವ ಮೂಲಕ ಅಲ್ಲಿನ 'ಟೆರರ್ ಇಕೋ ಸಿಸ್ಟಮ್' ಅನ್ನು ಬುಡಸಹಿತ ಕಿತ್ತುಹಾಕಲಾಗಿದೆ. ಇದು ಕಲ್ಲು ತೂರಾಟ ಮತ್ತು ಸಶಸ್ತ್ರ ದಂಗೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಐದು ವರ್ಷಗಳಲ್ಲಿ ನಿಷೇಧಕ್ಕೊಳಗಾದ 23 ಉಗ್ರ ಸಂಘಟನೆಗಳ ಮಾಹಿತಿ

* ಸಿಮಿ - ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ

* ಯುಎಲ್‌ಎಫ್‌ಎ - ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ

* ಎಟಿಟಿಎಫ್ - ಆಲ್ ತ್ರಿಪುರ ಟೈಗರ್ ಫೋರ್ಸ್

* ಮೀಟೇ ಸಂಘಟನೆಗಳು - ಪಿಎಲ್‌ಎ, ಆರ್‌ಪಿಎಫ್ ಸೇರಿದಂತೆ 6 ಸಂಘಟನೆಗಳು

* ಎನ್‌ಎಲ್‌ಎಫ್‌ಟಿ - ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರ

* ಎಚ್‌ಎನ್‌ಎಲ್‌ಸಿ - ಹಿನ್ನಿವ್‌ಟ್ರೆಪ್ ನ್ಯಾಷನಲ್ ಲಿಬರೇಷನ್ ಕೌನ್ಸಿಲ್

* ಎಲ್‌ಟಿಟಿಇ - ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ

* ಎನ್‌ಎಸ್‌ಸಿಎನ್ - ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್

* ಐಆರ್‌ಎಫ್ - ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಜಾಕಿರ್ ನಾಯ್ಕ್ ಸಂಸ್ಥೆ)

* ಜೆಇಎಲ್ - ಜಮಾತ್-ಎ-ಇಸ್ಲಾಮಿ, ಜಮ್ಮು ಮತ್ತು ಕಾಶ್ಮೀರ

* ಜೆಕೆಎಲ್‌ಎಫ್ - ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಮೊಹಮ್ಮದ್ ಯಾಸಿನ್ ಮಲಿಕ್ ಬಣ)

* ಎಸ್‌ಎಫ್‌ಜೆ - ಸಿಖ್ಸ್ ಫಾರ್ ಜಸ್ಟೀಸ್

* ಪಿಎಫ್‌ಐ - ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ 8 ಸಹವರ್ತಿ ಸಂಘಟನೆಗಳು

* ಜೆಕೆಡಿಎಫ್‌ಪಿ - ಜಮ್ಮು ಮತ್ತು ಕಾಶ್ಮೀರ ಡೆಮಾಕ್ರಟಿಕ್ ಫ್ರೀಡಂ ಪಾರ್ಟಿ

* ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ)

* ತೆಹ್ರೀಕ್-ಎ-ಹುರಿಯತ್ - ಜಮ್ಮು ಮತ್ತು ಕಾಶ್ಮೀರ

* ಮುಸ್ಲಿಂ ಸಮ್ಮೇಳನ ಜಮ್ಮು ಮತ್ತು ಕಾಶ್ಮೀರ (ಭಟ್ ಬಣ)

* ಮುಸ್ಲಿಂ ಸಮ್ಮೇಳನ ಜಮ್ಮು ಮತ್ತು ಕಾಶ್ಮೀರ (ಸುಮ್ಮಿ ಬಣ)

* ಜೆಕೆಎನ್‌ಎಫ್ - ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್

* ಜೆಕೆಪಿಎಫ್‌ಎಲ್ - ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಫ್ರೀಡಂ ಲೀಗ್

* ಜೆಕೆಪಿಎಲ್ - ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಲೀಗ್‌ನ ನಾಲ್ಕು ಬಣಗಳು

* ಜೆಇಎಂ - ಜಮ್ಮು ಮತ್ತು ಕಾಶ್ಮೀರ ಇತ್ತಿಹಾದ್-ಉಲ್ ಮುಸ್ಲಿಮೀನ್

* ಎಪಿಸಿ - ಅವಾಮಿ ಫ್ರೀಯಾ ಸಮಿತಿ

ಆರ್ಥಿಕತೆ ಮೇಲೆ ಪ್ರಭಾವ

ಭಯೋತ್ಪಾದನೆಯ ನಿರ್ಮೂಲನೆಯು ಕೇವಲ ಭದ್ರತೆಗೆ ಸೀಮಿತವಾಗಿಲ್ಲ, ಇದು ದೇಶದ ಆರ್ಥಿಕತೆಯ ಮೇಲೂ ಪ್ರಭಾವ ಬೀರುತ್ತದೆ. ದೇಶವು ಸುರಕ್ಷಿತವಾಗಿದೆ ಎಂಬ ಸಂದೇಶವು ಜಾಗತಿಕ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುತ್ತದೆ. ಉಗ್ರ ಸಂಘಟನೆಗಳಿಗೆ ಬರುತ್ತಿದ್ದ ಹವಾಲಾ ಹಣ ಮತ್ತು ನಕಲಿ ನೋಟುಗಳ ಜಾಲವನ್ನು ಎನ್‌ಐಎ ಧ್ವಂಸಗೊಳಿಸಿದೆ. ಇದರಿಂದ ದೇಶದ ಆರ್ಥಿಕತೆಗೆ ಆಗುತ್ತಿದ್ದ ನಷ್ಟ ತಪ್ಪಿದೆ. ಜನಸಾಮಾನ್ಯರಲ್ಲಿ ಭಯಮುಕ್ತ ವಾತಾವರಣ ನಿರ್ಮಾಣವಾಗಿದೆ. 2019ರ ನಂತರ ದೇಶದ ಪ್ರಮುಖ ನಗರಗಳಲ್ಲಿ ದೊಡ್ಡ ಮಟ್ಟದ ಉಗ್ರ ದಾಳಿಗಳು ನಡೆಯದಿರುವುದು ಎನ್‌ಐಎಯ ಅತ್ಯಂತ ದೊಡ್ಡ ಸಾಧನೆ ಎನ್ನಬಹುದು.

ಭಯೋತ್ಪಾದನೆಯು ಈಗ ಕೇವಲ ಶಸ್ತ್ರಾಸ್ತ್ರಗಳಿಗೆ ಸೀಮಿತವಾಗಿಲ್ಲ, ಅದು 'ಸೈಬರ್ ಭಯೋತ್ಪಾದನೆ'ಯತ್ತ ಹೊರಳುತ್ತಿದೆ. ಎನ್‌ಐಎ ಈ ಸವಾಲನ್ನು ಅರಿತಿದ್ದು, ತನ್ನ ತನಿಖಾ ತಂತ್ರಗಳನ್ನು ಆಧುನೀಕರಿಸುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ದತ್ತಾಂಶ ವಿಶ್ಲೇಷಣೆ ಬಳಸಿ ಉಗ್ರರ ಸಂಚುಗಳನ್ನು ಮುಂಚಿತವಾಗಿ ಪತ್ತೆಹಚ್ಚುವ ನಿಟ್ಟಿನಲ್ಲಿ ಸಂಸ್ಥೆ ಹೆಜ್ಜೆ ಇಟ್ಟಿದೆ. ಎನ್‌ಐಎ ಇಂದು ಜಗತ್ತಿನ ಮುಂಚೂಣಿ ತನಿಖಾ ಸಂಸ್ಥೆಯಾಗಿ ಹೊರಹೊಮ್ಮಿದೆ.

Read More
Next Story