
ರಾಜನಾಥ್ ಸಿಂಗ್.
Op Sindoor: 100 ಉಗ್ರರನ್ನು ಹೊಡೆದುರುಳಿಸಿದ ಭಾರತ; ಸರ್ವಪಕ್ಷ ಸಭೆಯಲ್ಲಿ ರಾಜನಾಥ್ ಸಿಂಗ್ ಮಾಹಿತಿ
ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಸರ್ಕಾರ ಹಾಗೂ ಸಶಸ್ತ್ರ ಪಡೆಗಳ ಜತೆ ಇಡೀ ದೇಶವೇ ಒಗ್ಗಟ್ಟು ಪ್ರದರ್ಶಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಪ್ರತಿಪಕ್ಷಗಳು ಎಲ್ಲ ರೀತಿಯ ನೆರವು ನೀಡಬೇಕು ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಕುರಿತು ವಿವರಿಸಲು ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ್ದಾರೆ. ಸುಮಾರು ಒಂದೂವರೆ ಗಂಟೆ ನಡೆದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರರ ನೆಲೆಗಳ ಮೇಲೆ ನಡೆಸಲಾದ ಕಾರ್ಯಾಚರಣೆಯ ಕುರಿತು ಸಂಪೂರ್ಣ ವಿವರಣೆ ನೀಡಿದ್ದು, ದಾಳಿಯಲ್ಲಿ ಸುಮಾರು 100 ಉಗ್ರರನ್ನು ಸದೆಬಡಿಯಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಜಾರಿಯಲ್ಲಿದ್ದು, ಒಂದು ವೇಳೆ ಪಾಕಿಸ್ತಾನ ದಾಳಿ ನಡೆಸಿದರೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ರಾಜನಾಥ ಸಿಂಗ್ ಈ ವೇಳೆ ನುಡಿದರು.
'ಆಪರೇಷನ್ ಸಿಂಧೂರ ಜಾರಿಯಲ್ಲಿರುವುದರಿಂದ ಸಶಸ್ತ್ರ ಪಡೆಗಳ ಈ ಕಾರ್ಯಾಚರಣೆಗೆ ಸಂಬಂಧಿಸಿದ ತಾಂತ್ರಿಕ ವಿವರಗಳನ್ನು ಈಗ ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಸಶಸ್ತ್ರ ಪಡೆಯ ಯಾವುದೇ ಅಧಿಕಾರಿಯೂ ಸಭೆಯಲ್ಲಿ ಭಾಗವಹಿಸಿಲ್ಲ. ಅವರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಒಮ್ಮತ ವ್ಯಕ್ತಗೊಂಡಿತು. ರಾಷ್ಟ್ರೀಯ ಭದ್ರತೆ ಬಗ್ಗೆ ವಿಪಕ್ಷದ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ
ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಸರ್ಕಾರ ಹಾಗೂ ಸಶಸ್ತ್ರ ಪಡೆಗಳ ಜತೆ ಇಡೀ ದೇಶವೇ ಒಗ್ಗಟ್ಟು ಪ್ರದರ್ಶಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಪ್ರತಿಪಕ್ಷಗಳು ಎಲ್ಲ ರೀತಿಯ ನೆರವು ನೀಡಬೇಕು ಎಂದು ಹೇಳಿದ್ದಾರೆ.
ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಭಯೋತ್ಪಾದನಾ ವಿಚಾರದಲ್ಲಿ ಸರ್ಕಾರಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದರು. ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು ಭಯೋತ್ಪಾದಕರ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲ ನೀಡುವುದಾಗಿ ಹೇಳಿದರು.
ಸಭೆಯಲ್ಲಿ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಬುಧವಾರ ಮಧ್ಯರಾತ್ರಿ ಪಂಜಾಬ್‌ನ ಫಿರೋಜ್‌ಪುರ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ವ್ಯಕ್ತಿಯನ್ನು ಬಿಎಸ್‌ಎಫ್ ಯೋಧರು ಹೊಡೆದುರುಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೇನೆಯು ಅಪ್ರಚೋದಿತ ದಾಳಿಗಳನ್ನು ಮುಂದುವರಿಸಿದ್ದು, ಪೂಂಚ್‌ನಲ್ಲಿ ಶೆಲ್ ದಾಳಿಗೆ 4 ಮಕ್ಕಳು ಸೇರಿದಂತೆ 15 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಭಾರತದ ಯೋಧ ಲಾನ್ಸ್ ನಾಯಕ್ ದಿನೇಶ್ ಕುಮಾರ್ ಹುತಾತ್ಮರಾಗಿದ್ದಾರೆ. ಗಡಿ ರಾಜ್ಯಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ ಮತ್ತು ಪೊಲೀಸರ ರಜೆಗಳನ್ನು ರದ್ದುಪಡಿಸಲಾಗಿದೆ. ಕೆಲವು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.