Naxal Encounter | ದಶಕದ ಬಳಿಕ ಮಾರ್ದನಿಸಿದ ಗುಂಡಿನ ಸದ್ದು; ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ 17 ವರ್ಷಗಳ ಬಳಿಕ ಮತ್ತೆ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮಾವೋವಾದಿ ಮುಖಂಡ ವಿಕ್ರಮ್ ಗೌಡ ಹತನಾಗಿದ್ದಾನೆ. ಆತ ನಕ್ಸಲರ ನೇತ್ರಾವತಿ ತಂಡದ ಕಮಾಂಡರ್ ಆಗಿದ್ದ.
ಪಶ್ಚಿಮಘಟ್ಟ ಪ್ರದೇಶದಲ್ಲಿ ದಶಕದ ಬಳಿಕ ಮತ್ತೆ ನಕ್ಸಲ್ ಚಟುವಟಿಕೆ ತಲೆ ಎತ್ತಿದ್ದು, ಸೋಮವಾರ ರಾತ್ರಿ ನಡೆದ ನಕ್ಸಲ್-ಪೊಲೀಸ್ ಮುಖಾಮುಖಿಯಲ್ಲಿ ಮಾವೋವಾದಿ ನಕ್ಸಲ್ ಮುಖಂಡ ವಿಕ್ರಮ್ ಗೌಡನನ್ನು ಪೊಲೀಸರು ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ.
ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಸೋಮವಾರ ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿ ನಡೆಸಿದ ಎನ್‌ಕೌಂಟರ್‌ನಲ್ಲಿ ವಿಕ್ರಮ್ ಗೌಡ ಸಾವಿಗೀಡಾಗಿದ್ದಾನೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳ ಗಡಿ ಭಾಗಗಳ ಪೊಲೀಸರ "ವಾಂಟೆಡ್" ಪಟ್ಟಿಯಲ್ಲಿದ್ದ ವಿಕ್ರಮ್ ಗೌಡ ನಕ್ಸಲರ "ನೇತ್ರಾವತಿ" ತಂಡದಲ್ಲಿ ಸಕ್ರಿಯನಾಗಿದ್ದ.
ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆಯ ಮೂಲಕ ಸುಮಾರು 17 ವರ್ಷಗಳ ಬಳಿಕ ಮತ್ತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುಂಡಿನ ಸದ್ದು ಮಾರ್ದನಿಸಿದ್ದು, ನಕ್ಸಲ್ ನಾಯಕನ ಸಾವು ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದ ಎಎನ್ ಎಫ್ ತಂಡ ಕೂಂಬಿಂಗ್ ಕಾರ್ಯಾಚರಣೆ ಹೆಚ್ಚಿಸಿತ್ತು. ಸೋಮವಾರ ರಾತ್ರಿ 5 ಮಂದಿ ನಕ್ಸಲರ ತಂಡ ಉಡುಪಿ ಜಿಲ್ಲೆಯ ಹೆಬ್ರಿ ಪಕ್ಕದ ಸೀತಂಬೈಲು ಸಮೀಪ ಅಕ್ಕಿ ಮತ್ತಿತರ ವಸ್ತುಗಳನ್ನು ಸಂಗ್ರಹಿಸಲು ಬಂದಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿದರು. ಆ ವೇಳೆ ನಡೆದ ಮುಖಾಮುಖಿಯ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿ ದಾಳಿ ನಡೆಸಿದ್ದು, ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ. ಆತನ ಜತೆಗಿದ್ದ ಇನ್ನೂಐವರು ಸ್ಥಳದಿಂದ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಡಗಾರು ಲತಾ
ಚಿಕ್ಕಮಗಳೂರು ಭಾಗದಲ್ಲಿ ನಕ್ಸಲ್ ನಾಯಕಿ ತುಂಗಾ ತಂಡದ ಮುಂಡಗಾರು ಲತಾ ಭೇಟಿ ಹಿನ್ನೆಲೆಯಲ್ಲಿ ಮತ್ತೆ ನಕ್ಸಲರ ಚಲನವಲನ ಹೆಚ್ಚಾಗಿದೆ ಎಂಬ ಕಾರಣಕ್ಕೆ ನಕ್ಸಲ್ ನಿಗ್ರಹ ಪೊಲೀಸರು ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಪೊಲೀಸರು ಕೂಂಬಿಂಗ್ ನಡೆಸುತ್ತಿದ್ದರು. ಹೆಬ್ರಿ, ಕಾರ್ಕಳ ಭಾಗಗಳಲ್ಲಿ ನಕ್ಸಲರ ಓಡಾಟ ಖಚಿತವಾಗುತ್ತಿದ್ದಂತೆ ಕಳೆದೊಂದ ವಾರದಿಂದ ಕೂಂಬಿಂಗ್ ಚಟುವಟಿಕೆಯನ್ನು ಹೆಚ್ಚಿಸಲಾಗಿತ್ತು.
ವಿಕ್ರಮ್ ಗೌಡ ದಶಕಗಳ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಕಾರ್ಕಳ ಭಾಗದಲ್ಲಿ ವಿಕ್ರಮ್ ಗೌಡ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಮುಂಡಗಾರು ಲತಾ ಹೆಚ್ಚು ಭಾಗಿಗಳಾಗಿದ್ದೆರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ ವಿಕ್ರಮ್ ಗೌಡ ಮತ್ತು ಮುಂಡಗಾರು ಲತಾ ತಂಡಗಳು ಕೇರಳದಲ್ಲಿ ಅವಿತುಕೊಂಡಿದ್ದು, ಈ ವರ್ಷದ ಫೆಬ್ರವರಿ ತಿಂಗಳಲ್ಲಿ ವಯನಾಡು ಪ್ರದೇಶದಲ್ಲಿ ಕೇರಳ ಪೊಲೀಸರು ನಡೆಸಿದ ಗುಂಡಿನ ದಾಳಿ ಬಳಿಕ ಕರ್ನಾಟಕ ಗಡಿ ಭಾಗದಲ್ಲಿ ತಲೆಮರೆಸಿಕೊಂಡಿದ್ದರು.
ಇತ್ತೀಚೆಗೆ ಈ ತಂಡಗಳು ಹಳ್ಳಿಗಳಿಗೆ ಭೇಟಿ ನೀಡಿ, ಕಸ್ತೂರಿ ರಂಗನ್ ವರದಿ ಆಗುಹೋಗುಗಳ, ಭೂ ಒತ್ತುವರಿ ಮತ್ತಿತರ ವಿಷುಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ಮಂಡಗಾರು ಲತಾ ಮತ್ತು ಆಕೆಯ ಮೂವರು ಸಹಚರರನ್ನು ಒಳಗೊಂಡ ಶಸ್ತ್ರಧಾರಿಗಳ ತಂಡ ಭೇಟಿ ನೀಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಎಎನ್ಎಫ್ ತಂಡ ಆ ಭಾಗದಲ್ಲಿ ತೀವ್ರ ಕಾರ್ಯಾಚರಣೆ ನಡೆಸಿತ್ತು.
ಲತಾ ಮತ್ತು ಜಯಣ್ಣ, ವಿಕ್ರಮ್ ಗೌಡ ಅವರ ತಂಡ ಕಳೆದ ಹದಿನೈದು ದಿನಗಳಿಂದ ಕೊಪ್ಪ ಮತ್ತು ಶೃಂಗೇರಿ, ಕಾರ್ಕಳ, ಹೆಬ್ರಿ ಮತ್ತಿತರ ಕಡೆ ಸಕ್ರಿಯವಾಗಿತ್ತು. ಕೆಲವು ಮನೆಗಳಿಗೆ ಭೇಟಿ ನೀಡಿ, ಸಭೆಗಳನ್ನು ನಡೆಸಿ ಅರಣ್ಯ ಒತ್ತುವರಿ ತೆರವು ಮತ್ತು ಕಸ್ತೂರಿ ರಂಗನ್ ವರದಿ ಜಾರಿಯ ವಿಷಯದ ಕುರಿತು ಚರ್ಚೆ ನಡೆಸಿದೆ. ಮಲೆನಾಡಿಗರ ಬದುಕಿನ ಅಳಿವು- ಉಳಿವಿನ ಪ್ರಶ್ನೆಯಾಗಿರುವ ಈ ಎರಡು ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರ ಬೆಂಬಲ ಗಳಿಸಿ ಮತ್ತೆ ನಕ್ಸಲ್ ಚಟುವಟಿಕೆಯನ್ನು ಮಲೆನಾಡಿನಲ್ಲಿ ಪುನರುಜ್ಜೀವನಗೊಳಿಸುವ ಪ್ರಯತ್ನ ಈ ತಂಡದ್ದು ಎಂಬುದು ಪೊಲೀಸರ ಮಾಹಿತಿ.
ಚಿಕ್ಕಮಗಳೂರಿನ ಕಡೆಗುಂಡಿ ಗ್ರಾಮದ ಸುಬ್ಬೇಗೌಡ ಎಂಬುವರ ಮನೆಯಲ್ಲಿ ಮೂರು ಅಕ್ರಮ ಬಂದೂಕುಗಳು ಪತ್ತೆಯಾಗಿದ್ದವು.ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ದಶಕದ ಹಿಂದೆ
2003ರ ನವೆಂಬರ್ 17ರಂದು ಕಾರ್ಕಳದ ಈದು ಬಳಿ ನಡೆದ ಪಾರ್ವತಿ ಮತ್ತು ಹಾಜಿಮಾ ಪೊಲೀಸ್ ಗುಂಡಿನ ದಾಳಿಗೆ ಬಲಿಯಾಗಿದ್ದರು. 2005ರ ಮೆಣಸಿನಹಾಡ್ಯ ಎನ್ಕೌಂಟರ್ ನಲ್ಲಿ ಮಲೆನಾಡು ನಕ್ಸಲ್ ಚಳವಳಿಯ ನೇತೃತ್ವ ವಹಿಸಿದ್ದ ಸಾಕೇತ್ ರಾಜನ್ ಸಾವು ಕಂಡಿದ್ದ. 2007ರ ಒಡೆಯರ ಮಠ ಎನ್ಕೌಂಟರ್ನಲ್ಲಿ ಐವರು ನಕ್ಸಲರು ಹತರಾಗಿದ್ದರು. ಆ ಬಳಿಕ ಹಲವು ಪ್ರಮುಖ ನಕ್ಸಲರು ಶರಣಾಗಿ ಕಾಡಿನಿಂದ ಹೊರಬಂದು ಪುನರ್ವಸತಿ ಹೊಂದಿದ್ದರು. ಇತ್ತೀಚೆಗೆ ಪ್ರಮುಖ ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿ ಹಾಗೂ ಹೊಸಗದ್ದೆ ಪ್ರಭಾ ಕೂಡ ಶರಣಾಗಿದ್ದರು.
ಬಂಧಿಸಬಹುದಿತ್ತು!
ನಕ್ಸಲ್ ನಾಯಕ ವಿಕ್ರಮ್ ಗೌಡನನ್ನು ಬಂಧಿಸದೆ ಸಾಯಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್. ಶಿವಸುಂದರ್ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ "ನಿಮಗೂ ಬಿಜೆಪಿಗೂ ವ್ಯತ್ಯಾಸವೇನು?" ಎಂದು ಪ್ರಶ್ನಿಸಿದ್ದಾರೆ.
"ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಕೈಗಳಿಗೆ ರಕ್ತ ಅಂಟಿದೆ. ಕರ್ನಾಟಕ ಪೊಲೀಸರು ನಕ್ಸಲ್ ವಿಕ್ರಂ ಗೌಡರನ್ನು ಬಂಧಿಸದೆ ಕೊಂದಿದ್ದಾರೆ. ಇದು ಮೋದಿ ಸರ್ಕಾರ ನಕ್ಸಲ್ ನಿರ್ನಾಮದ ಹೆಸರಲ್ಲಿ ಪ್ರಾರಂಭಿಸಿರುವ ಅದಿವಾಸಿ ನಿರ್ನಾಮ ಯಜ್ಞಕ್ಕೆ ನಿಮ್ಮ ಕೊಡುಗೆಯೇ?," ಎಂದು ಅವರು ಪ್ರಶ್ನಿಸಿದ್ದಾರೆ.
"ನಿಮಗೂ ಬಿಜೆಪಿಗೂ ವ್ಯತ್ಯಾಸವೇನು? ಕರ್ನಾಟಕದ ಆತ್ಮಸಾಕ್ಷಿ ಈಗಲಾದರೂ ಎಚ್ಚರಗೊಳ್ಳಬಹುದೇ? ಪೊಲೀಸ್ ಎನ್ ಕೌಂಟರ್ ಎಂಬ ಪೊಲೀಸ್ ಕೊಲೆಗಳನ್ನು ತಡೆಯಬಹುದೇ?," ಎಂದು ಅವರು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ್ದಾರೆ.