Red Alert Again | ಮಲೆನಾಡಿನಲ್ಲಿ ಮತ್ತೆ ತಲೆ ಎತ್ತಿದ ನಕ್ಸಲ್ ಚಟುವಟಿಕೆ?
ಕಳೆದ ಎರಡು ದಿನಗಳಿಂದಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಂಬಿಂಗ್ ಕಾರ್ಯಚರಣೆ ತೀವ್ರಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಒಂದೂವರೆ ದಶಕದ ಬಳಿಕ ಮತ್ತೆ ಮಲೆನಾಡಿನಲ್ಲಿ ಎಎನ್ಎಫ್ ಪಡೆಯ ಬೂಟಿನ ಸದ್ದು ಮಾರ್ದನಿಸತೊಡಗಿದೆ.
ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ, ವಿವಿಧ ಸರ್ಕಾರಿ ಭೂಮಿ ಒತ್ತುವರಿ ತೆರವು, ಅಡಿಕೆ ಬೆಳೆ ರೋಗ, ಹೀಗೆ ಹತ್ತಾರು ಸಮಸ್ಯೆಗಳ ನಡುವೆ ಬೇಯುತ್ತಿರುವ ಮಲೆನಾಡು ಸದ್ಯ ಕುದಿ ನೆಲವಾಗಿದೆ. ಈ ನಡುವೆ, ಸುಮಾರು ಒಂದೂವರೆ ದಶಕದಿಂದ ಸದ್ದಡಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿದೆ ಎಂಬ ವರದಿಗಳು ಮಲೆನಾಡಿನಲ್ಲಿ ಮತ್ತೊಂದು ಆತಂಕ ಸೃಷ್ಟಿಸಿದೆ.
2013-14ರ ವೇಳೆಗೆ ಸಕಲೇಶಪುರದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಪಡೆಯ ಅಂದಿನ ಮುಖ್ಯಸ್ಥ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ನಕ್ಸಲರ ತಂಡವೊಂದನ್ನು ಸುತ್ತುವರಿದ ಘಟನೆಯ ಬಳಿಕ ಕಳೆದ ಒಂದು ದಶಕದಲ್ಲಿ ಮಲೆನಾಡಿನಲ್ಲಿ ನಕ್ಸಲರು ನೇರವಾಗಿ ಕಾಣಿಸಿಕೊಂಡ ಉದಾಹರಣೆಗಳಿರಲಿಲ್ಲ.
ಇದೀಗ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ನಕ್ಸಲ್ ಸಂಘಟನೆಯ ತುಂಗಾ ತಂಡದ ನಾಯಕಿ ಮಂಡಗಾರು ಲತಾ ಮತ್ತು ಆಕೆಯ ಮೂವರು ಸಹಚರರನ್ನು ಒಳಗೊಂಡ ಶಸ್ತ್ರಧಾರಿಗಳ ತಂಡ ಭೇಟಿ ನೀಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಎಎನ್ಎಫ್ ತಂಡ ಆ ಭಾಗದಲ್ಲಿ ತೀವ್ರ ಕಾರ್ಯಾಚರಣೆ ಆರಂಭಿಸಿದೆ. ನಕ್ಸಲ್ ನಿಗ್ರ ಪಡೆಯ ಕೂಂಬಿಕ್ ಕಾರ್ಯಾಚರಣೆಯನ್ನು ಕೂಡ ಆ ಭಾಗದಲ್ಲಿ ತೀವ್ರಗೊಳಿಸಲಾಗಿದ್ದು, ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗದ(ಐಎಸ್‌ಡಿ) ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರಣಬ್ ಮೊಹಂತಿ ಮತ್ತು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲೂಕಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಹದಿನೈದು ದಿನಗಳಿಂದ ಸಕ್ರಿಯ?
ನಕ್ಸಲ್ ನಾಯಕಿ ಮಂಡಗಾರು ಲತಾ ಮತ್ತು ಜಯಣ್ಣ ಅವರ ತಂಡ ಕಳೆದ ಹದಿನೈದು ದಿನಗಳಿಂದ ಕೊಪ್ಪ ಮತ್ತು ಶೃಂಗೇರಿ ಗಡಿ ಭಾಗದಲ್ಲಿ ಸಕ್ರಿಯವಾಗಿದೆ. ಕೆಲವು ಮನೆಗಳಿಗೆ ಭೇಟಿ ನೀಡಿ, ಸಣ್ಣ- ಸಣ್ಣ ಸಭೆಗಳನ್ನು ನಡೆಸಿ ಅರಣ್ಯ ಒತ್ತುವರಿ ತೆರವು ಮತ್ತು ಕಸ್ತೂರಿ ರಂಗನ್ ವರದಿ ಜಾರಿಯ ವಿಷಯದ ಕುರಿತು ಚರ್ಚೆ ನಡೆಸಿದೆ. ಮಲೆನಾಡಿಗರ ಬದುಕಿನ ಅಳಿವು- ಉಳಿವಿನ ಪ್ರಶ್ನೆಯಾಗಿರುವ ಈ ಎರಡು ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರ ಬೆಂಬಲ ಗಳಿಸಿ ಮತ್ತೆ ನಕ್ಸಲ್ ಚಟುವಟಿಕೆಯನ್ನು ಮಲೆನಾಡಿನಲ್ಲಿ ಪುನರುಜ್ಜೀವನಗೊಳಿಸುವ ಪ್ರಯತ್ನ ಈ ತಂಡದ್ದು ಎಂಬುದು ಎಎನ್ಎಫ್ ಮತ್ತು ಚಿಕ್ಕಮಗಳೂರು ಪೊಲೀಸರ ಶಂಕೆ.
ಆ ಹಿನ್ನೆಲೆಯಲ್ಲಿಯೇ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ, ನಕ್ಸಲ್ ನಿಗ್ರಹ ಪಡೆ ಎಸ್ಪಿ ಜಿತೇಂದ್ರ ನೇತೃತ್ವದಲ್ಲಿ ಕೊಪ್ಪ ತಾಲೂಕಿನ ಯಡಗುಂದ, ಕಡೆಗುಂಡಿ ಗ್ರಾಮದ ಮನೆಗಳಲ್ಲಿ ಶೋಧ ನಡೆಸಲಾಗಿದೆ.
ಆ ವೇಳೆ, ಕಡೆಗುಂಡಿ ಗ್ರಾಮದ ಸುಬ್ಬೇಗೌಡ ಎಂಬುವರ ಮನೆಯಲ್ಲಿ ಮೂರು ಅಕ್ರಮ ಬಂದೂಕುಗಳು ಪತ್ತೆಯಾಗಿವೆ. ಜೊತೆಗೆ ಮದ್ದುಗುಂಡು, ಗುರುತು ಮಾಡಿರುವ ಕ್ಯಾಲೆಂಡರ್ ಕೂಡ ಪತ್ತೆಯಾಗಿವೆ. ಆ ಸಂಬಂಧ, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಲೆನಾಡಿನಲ್ಲಿ ಮತ್ತೆ ಬೂಟಿನ ಸದ್ದು
ಕಳೆದ ಎರಡು ದಿನಗಳಿಂದಲೇ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ, ಕೊಪ್ಪ ಶೃಂಗೇರಿ, ಕೆರೆಕಟ್ಟೆ ಭಾಗದಲ್ಲಿ ಕೂಂಬಿಂಗ್ ಕಾರ್ಯಚರಣೆ ತೀವ್ರಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಕಳೆದ ಒಂದೂವರೆ ದಶಕದ ಬಳಿಕ ಮತ್ತೆ ಮಲೆನಾಡಿನಲ್ಲಿ ಎಎನ್ಎಫ್ ಪಡೆಯ ಬೂಟುಗಳ ಸದ್ದು ಮಾರ್ದನಿಸತೊಡಗಿದೆ.
ಶೃಂಗೇರಿ, ಕೊಪ್ಪ, ಆಗುಂಬೆ ಭಾಗದಲ್ಲಿ ಎಎನ್ಎಫ್ ಕ್ಯಾಂಪುಗಳಿದ್ದರೂ ನಕ್ಸಲರಿಗಾಗಿ ಕಾರ್ಯಾಚರಣೆ ನಡೆಸದೇ ದಶಕವೇ ಕಳೆದಿತ್ತು. ಇದೀಗ ಮಂಡಗಾರು ಲತಾ ತಂಡದ ಭೇಟಿಯ ಮಾಹಿತಿಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗದ ದಟ್ಟ ಮಲೆನಾಡು ಭಾಗಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿರುವ ಎಎನ್ಎಫ್ ಪಡೆಗಳ ಬೂಟಿನ ಸದ್ದು ಮೊಳಗತೊಡಗಿದೆ.
ನಕ್ಸಲ್ ಚಟುವಟಿಕೆ ಹೆಜ್ಜೆಗುರುತು
ಎರಡು ದಶಕದ ಹಿಂದೆ; 2003ರ ನವೆಂಬರ್ 17ರಂದು ಕಾರ್ಕಳದ ಈದು ಬಳಿ ನಡೆದ ಪಾರ್ವತಿ ಮತ್ತು ಹಾಜಿಮಾ ಎನ್ಕೌಂಟರ್ ಮೂಲಕ ಮೊಟ್ಟಮೊದಲ ಬಾರಿಗೆ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಜಗಜ್ಜಾಹೀರಾಗಿತ್ತು. ಆ ಘಟನೆ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಸಾರಿ ಹೇಳಿತ್ತು. ಆ ಬಳಿಕ ಬರೋಬ್ಬರಿ ಒಂದು ದಶಕದ ಕಾಲ ಹಾಸನ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆಗಳು ವ್ಯಾಪಕವಾಗಿದ್ದವು.
1995-96ರ ಸುಮಾರಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಸ್ಥಳೀಯ ಮೂಲ ನಿವಾಸಿಗಳಾದ ಆದಿವಾಸಿಗಳು, ಬುಡಕಟ್ಟು ಜನರು, ಕಾಡಂಚಿನ ಕೃಷಿಕರನ್ನು ಹೊರ ಹಾಕುವ ನೋಟಿಫಿಕೇಷನ್ ವಿರುದ್ಧ ಜನರನ್ನು ಸಂಘಟಿಸುವ ಮೂಲಕ ಮಲೆನಾಡಿನಲ್ಲಿ ಬೇರೂರಿದ್ದ ನಕ್ಸಲ್ ಚಳವಳಿ ಒಂದು ದಶಕದ ಕಾಲ ಸದ್ದು ಮಾಡಿತ್ತು. ಆ ಅವಧಿಯಲ್ಲಿ ಸುಮಾರು 12 ಮಂದಿ ನಕ್ಸಲರು, 9 ಮಂದಿ ಸ್ಥಳೀಯರು ಹಾಗೂ ಇಬ್ಬರು ಪೊಲೀಸರ ಜೀವ ಪಡೆದುಕೊಂಡಿತ್ತು.
2005ರ ಮೆಣಸಿನಹಾಡ್ಯ ಎನ್ಕೌಂಟರ್ ನಲ್ಲಿ ಮಲೆನಾಡು ನಕ್ಸಲ್ ಚಳವಳಿಯ ನೇತೃತ್ವ ವಹಿಸಿದ್ದ ಸಾಕೇತ್ ರಾಜನ್ ಸಾವು ಕಂಡ ಬಳಿಕ ದೊಡ್ಡ ಹಿನ್ನಡೆ ಅನುಭವಿಸಿದ್ದ ನಕ್ಸಲ್ ಹೋರಾಟ, 2007ರ ಒಡೆಯರ ಮಠ ಎನ್ಕೌಂಟರ್ ಬಳಿಕ ಬಹುತೇಕ ಸೋತಿತ್ತು. ಆ ಬಳಿಕ ಜಾರಿಗೆ ಬಂದ ನಕ್ಸಲ್ ಶರಣಾಗತಿ ಪ್ಯಾಕೇಜ್ನಲ್ಲಿ ಹಲವು ಪ್ರಮುಖ ನಕ್ಸಲರು ಶರಣಾಗಿ ಕಾಡಿನಿಂದ ಹೊರಬಂದು ಪುನರ್ವಸತಿ ಹೊಂದಿದ್ದರು. ಇತ್ತೀಚೆಗೆ ಪ್ರಮುಖ ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿ ಹಾಗೂ ಹೊಸಗದ್ದೆ ಪ್ರಭಾ ಕೂಡ ಶರಣಾಗಿದ್ದರು.
ಆ ಮೂಲಕ ಮಲೆನಾಡಿನಲ್ಲಿ ಬಹುತೇಕ ನಕ್ಸಲ್ ಸಂಘಟನೆ ಮೂಲೋತ್ಪಾಟನೆಯಾಗಿದೆ ಎಂದೇ ಭಾವಿಸಲಾಗಿತ್ತು.
ಮತ್ತೆ ಮಲೆನಾಡಿನಲ್ಲಿ ಭೂಮಿ ಬಿಕ್ಕಟ್ಟು
20 ವರ್ಷದ ಹಿಂದೆ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಭಾಗದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸ್ಥಳೀಯರನ್ನು ಒಕ್ಕಲೆಬ್ಬಿಸುವ ಆತಂಕ ಜನರ ಮುಂದಿತ್ತು. ಆಗ ಪ್ರಮುಖವಾಗಿ ಜನರ ಆ ಆತಂಕವನ್ನೇ ನಕ್ಸಲ್ ಚಳವಳಿ ಸಂಘಟನೆಗೆ ಬಳಸಿಕೊಂಡು ಸಂಘಟನೆ ಕಟ್ಟಲಾಗಿತ್ತು.
ಆದರೆ, ಈಗ ಅಂತಹ ಹತ್ತಾರು ಎತ್ತಂಗಡಿ ಕಾರ್ಯಾಚರಣೆಗಳು ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ಚಾಮರಾಜನಗರದಿಂದ ಬೆಳಗಾವಿಯವರೆಗೆ ಇಡೀ ಪಶ್ಚಿಮಘಟ್ಟದ ಉದ್ದಕ್ಕೂ ಸದ್ದು ಮಾಡುತ್ತಿವೆ. ಅರಣ್ಯ ಭೂಮಿ ಒತ್ತುವರಿ ತೆರವು, ಸರ್ಕಾರಿ ಭೂಮಿ ಒತ್ತುವರಿ ತೆರವು, ವಿವಿಧ ಅಭಯಾರಣ್ಯಗಳ ವಿಸ್ತರಣೆ ಮತ್ತು ಬಫರ್ ಝೋನ್ ತೆರವು, ಹೊಸ ಮೀಸಲು ಅರಣ್ಯ ಘೋಷಣೆ, ಬಿಗಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳ ಜಾರಿ, ಕಸ್ತೂರಿ ರಂಗನ್ ವರದಿ ಜಾರಿ, ಸೇರಿದಂತೆ ಇಂದು ಇಡೀ ಮಲೆನಾಡಿನ ಉದ್ದಗಲಕ್ಕೆ ಜನರ ಎತ್ತಂಗಡಿಯ ಸರಣಿ ಕಾರ್ಯಾಚರಣೆಗಳು ಜನರನ್ನು ನಿಂತ ನೆಲವೇ ಕುಸಿಯುತ್ತಿರುವ ಅಸಹಾಯಕ ಸ್ಥಿತಿಗೆ ದೂಡಿವೆ.
ಇಂತಹ ಹೊತ್ತಲ್ಲಿ ಮತ್ತೊಮ್ಮೆ ನಕ್ಸಲ್ ಚಟುವಟಿಕೆ ಗರಿಗೆದರಿದ ಮಾಹಿತಿಗಳು ಹೊರಬಿದ್ದಿವೆ.