
ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕೆ 'ನೋ ಎಂಟ್ರಿ'; ಪ್ರವಾಸಿಗರಿಗೆ ಶಾಕ್!
2026ರ ಹೊಸ ವರ್ಷದ ಸಂಭ್ರಮಕ್ಕೆ ನಂದಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಕೋರಮಂಗಲದಲ್ಲಿ ಪೊಲೀಸರು ಕೈಗೊಂಡಿರುವ ಭದ್ರತಾ ಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ.
ಹೊಸ ವರ್ಷಕ್ಕೆ ಇನ್ನುಳಿದಿರುವುದು ಕೇವಲ ಐದೇ ದಿನ. ಈಗಾಗಲೇ ಹೊಸ ವರ್ಷ ಸಂಭ್ರಮಾಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಒಂದೆಡೆ ಎಲ್ಲಿ ಹೊಸವರ್ಷ ಪಾರ್ಟಿ ಮಾಡುವುದು, ಯಾವ ರೀತಿ ಹೊಸವರ್ಷವನ್ನು ಸ್ವಾಗತಿಸುವುದು ಎಂಬೆಲ್ಲಾ ಪ್ಲ್ಯಾನ್‌ನಲ್ಲಿ ನಾಗರಿಕರಿದ್ದರೆ, ಮತ್ತೊಂದೆಡೆ ಸಂಭ್ರಮಾಚರಣೆ ನಡುವೆ ಯಾವುದೇ ರೀತಿಯ ಅಹಿತಕರ ಘಟನೆ, ಕಾನೂನು ಉಲ್ಲಂಘನೆ ಆಗುವುದನ್ನು ತಡೆಯಲು ಖಾಕಿ ಕಾನೂನು ನಿಯಮಗಳನ್ನು ಬಿಗಿಗೊಳಿಸಿದೆ. ಈ ಬಾರಿ ಯಾರಾದರೂ 2026ರ ಹೊಸ ವರ್ಷವನ್ನು ನಂದಿ ಬೆಟ್ಟದ ಮೇಲೆ ಸೂರ್ಯೋದಯ ನೋಡುವ ಮೂಲಕ ಸ್ವಾಗತಿಸಬೇಕೆಂದು ಯೋಜನೆ ಹಾಕಿಕೊಂಡಿದ್ದರೆ ಅದನ್ನು ಮರೆತು ಬಿಡುವುದು ಒಲಿತು. ಏಕೆಂದರೆ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಡೆಯಲು ಮತ್ತು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಡಿಸೆಂಬರ್ 31 ಮತ್ತು ಜನವರಿ 1ರಂದು ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ರವೇಶ ನಿಷೇಧದ ಸಮಯ ಮತ್ತು ವಿವರ
ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಅವರು ಈಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹೊಸವರ್ಷದಂದು ನಂದಿ ಬೆಟ್ಟಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಡಿಸೆಂಬರ್ 31, 2025ರ ಮಧ್ಯಾಹ್ನದಿಂದ. ಜನವರಿ 01, 2026ರ ಮಧ್ಯಾಹ್ನದವರೆಗೆ ನಂದಿ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ ಎಂದಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ನಂದಿ ಬೆಟ್ಟದ ಸುತ್ತಮುತ್ತಲಿರುವ ಹೋಟೆಲ್, ರೆಸಾರ್ಟ್ ಮತ್ತು ಹೋಮ್‌ಸ್ಟೇಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಮೋಜು-ಮಸ್ತಿಯ ಹೆಸರಲ್ಲಿ ಕಾನೂನು ಮೀರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇಶಾ ಫೌಂಡೇಶನ್‌ಗೆ ಹೆಚ್ಚಿನ ಭದ್ರತೆ
ಹೊಸ ವರ್ಷದ ದಿನದಂದು ಚಿಕ್ಕಬಳ್ಳಾಪುರದ ಇಶಾ ಫೌಂಡೇಶನ್‌ಗೆ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಮತ್ತು ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ಕಮಿಷನರ್ 'ಬೈಕ್ ರೈಡ್'
ಮತ್ತೊಂದೆಡೆ, ಬೆಂಗಳೂರಿನ ಪಾರ್ಟಿ ಹಬ್ ಎಂದೇ ಕರೆಯಲ್ಪಡುವ ಕೋರಮಂಗಲದಲ್ಲಿ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಸ್ವತಃ ಬೈಕ್ ರೈಡ್ ಮಾಡುವ ಮೂಲಕ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಕೋರಮಂಗಲದಲ್ಲಿ ತಾತ್ಕಾಲಿಕ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಸಿಸಿಟಿವಿ ಮೂಲಕ ಪ್ರತಿಯೊಬ್ಬರ ಮೇಲೆ ಕಣ್ಣಿಡಲಾಗುವುದು. ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಸಾರ್ವಜನಿಕರಲ್ಲಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದೆ.

