
ಹೊಸವರ್ಷಕ್ಕೆ ರಾಜ್ಯ ರಾಜಧಾನಿ ಸಜ್ಜು; ಮಹಿಳಾ ಸುರಕ್ಷತೆಗಾಗಿ 'ರಾಣಿ ಚೆನ್ನಮ್ಮ ಪಡೆ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆ ಕಳೆದ ವಾರವೇ 19 ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪಟಾಕಿ ನಿಷೇಧ, ಮಹಿಳಾ ಸುರಕ್ಷತೆ ಮತ್ತು ಡ್ರಗ್ಸ್ ತಡೆಗೆ ವಿಶೇಷ ಪಡೆಗಳ ನಿಯೋಜನೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಿಲಿಕಾನ್ ಸಿಟಿ ಬೆಂಗಳೂರು 2026ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ. ನಗರದ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳು ಈಗಾಗಲೇ ಹೌಸ್ ಫುಲ್ ಆಗಿದ್ದು, ಸಂಭ್ರಮಾಚರಣೆಗೆ ಜನರು ತಯಾರಿ ನಡೆಸಿದ್ದಾರೆ. ಆದರೆ, ಈ ಬಾರಿ ಪಾರ್ಟಿ ಮಾಡುವವರಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ದೃಷ್ಟಿಯಿಂದ ಈಗಾಗಲೇ 19 ಅಂಶಗಳ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಮಹಿಳಾ ಸುರಕ್ಷತೆಗಾಗಿ ಪ್ರತ್ಯೇಕ ಗಮನಹರಿಸಿರುವ ಪೊಲೀಸ ಬೆಂಗಳೂರು ನಗರದಲ್ಲಿ 'ರಾಣಿ ಚೆನ್ನಮ್ಮ ಪಡೆ'ಯನ್ನು ಕಣ್ಗಾವಲಿಗಾಗಿ ನೇಮಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ 'ರಾಣಿ ಚೆನ್ನಮ್ಮ ಪಡೆ' ಕಣ್ಗಾವಲು
ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಡಿಸಿಪಿ ನಾರಾಯಣ್ ನೇತೃತ್ವದಲ್ಲಿ ಪೊಲೀಸರು ಗುರುವಾರ ವಿಶೇಷ ರೌಂಡ್ಸ್ ನಡೆಸಿದ್ದಾರೆ. ಹೆಚ್ಚು ಜನರು ಸೇರುವ ನೀಲಾದ್ರಿ ನಗರದಂತಹ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲು ಹೆಚ್ಚಿಸಲಾಗಿದೆ. ವಿಶೇಷವಾಗಿ ಪಿಜಿಗಳಲ್ಲಿರುವ ಹೆಣ್ಣುಮಕ್ಕಳ ರಕ್ಷಣೆಗಾಗಿ 'ರಾಣಿ ಚೆನ್ನಮ್ಮ ಪಡೆ'ಯನ್ನು ನಿಯೋಜಿಸಲಾಗಿದೆ.
ಪಟಾಕಿ ಸಂಪೂರ್ಣ ನಿಷೇಧ
ಗೋವಾ ರೆಸ್ಟೋರೆಂಟ್‌ನಲ್ಲಿ ನಡೆದ ಅಗ್ನಿ ಅವಘಡದಿಂದ ಎಚ್ಚೆತ್ತಿರುವ ಪೊಲೀಸರು, ಈ ಬಾರಿ ಪಾರ್ಟಿಗಳಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಪಬ್ ಅಥವಾ ರೆಸ್ಟೋರೆಂಟ್ ಒಳಗೆ ಪಟಾಕಿ ಬಳಸಿದರೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಪೊಲೀಸ್ ಇಲಾಖೆಯ ಪ್ರಮುಖ ಮಾರ್ಗಸೂಚಿಗಳು
1. ಅನುಮತಿ ಕಡ್ಡಾಯ: ಪ್ರತಿ ಕಾರ್ಯಕ್ರಮಕ್ಕೂ ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಗಿ ಪಡೆಯಬೇಕು.
2. ಸಮಯ ಪಾಲನೆ: ನಿಗದಿಪಡಿಸಿದ ಸಮಯಕ್ಕೆ ಪಾರ್ಟಿ ಮುಕ್ತಾಯಗೊಳಿಸಬೇಕು.
3. ಶಬ್ದ ಮಾಲಿನ್ಯ: ಧ್ವನಿವರ್ಧಕ ಬಳಸಲು ಅನುಮತಿ ಅಗತ್ಯ ಹಾಗೂ ನಿಗದಿತ ಶಬ್ದಮಿತಿಯೊಳಗೆ ಇರಬೇಕು.
4. ಸ್ಥಳ ಮಿತಿ: ಪಾರ್ಕಿಂಗ್, ಟೆರೆಸ್ ಅಥವಾ ನೆಲಮಹಡಿಗಳಲ್ಲಿ ಕಾರ್ಯಕ್ರಮ ಆಯೋಜಿಸುವಂತಿಲ್ಲ.
5. ಸಿಸಿಟಿವಿ ಕಡ್ಡಾಯ: ಪ್ರತಿ ಜಾಗದಲ್ಲೂ ಸಿಸಿ ಕ್ಯಾಮರಾ ಇರಬೇಕು ಮತ್ತು 30 ದಿನಗಳ ಸ್ಟೋರೇಜ್ ಇರಬೇಕು.
6. ಮಾದಕ ವಸ್ತು ನಿಷೇಧ: ಡ್ರಗ್ಸ್ ಬಳಕೆ ಕಂಡುಬಂದರೆ ತಕ್ಷಣ ಮಾಹಿತಿ ನೀಡಬೇಕು, ತಪ್ಪಿದಲ್ಲಿ ಕಟ್ಟಡ ಮಾಲೀಕರು/ಮ್ಯಾನೇಜರ್ ವಿರುದ್ಧ ಕೇಸ್ ದಾಖಲಾಗುತ್ತದೆ.
7. ಮಹಿಳಾ ಸುರಕ್ಷತೆ: ಮಹಿಳೆಯರಿರುವ ಜಾಗದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು.
8. ಬೌನ್ಸರ್ಸ್ ನಿಯಮ: ಬೌನ್ಸರ್‌ಗಳನ್ನು ನೇಮಿಸುವ ಏಜೆನ್ಸಿಗಳು ಖಾಸಗಿ ಭದ್ರತಾ ಏಜೆನ್ಸಿಗಳ (ನಿಯಂತ್ರಣ) ಕಾಯ್ದೆ('PSARA' ನಲ್ಲಿ ನೊಂದಣಿ ಮಾಡಿರಬೇಕು.
9. ಪಟಾಕಿ ಬ್ಯಾನ್: ಕಾರ್ಯಕ್ರಮದ ವೇಳೆ ಪಟಾಕಿ ಸಿಡಿಸುವಂತಿಲ್ಲ.
10. ಸೆಲೆಬ್ರಿಟಿಗಳ ಮಾಹಿತಿ: ನಟ-ನಟಿಯರು ಅಥವಾ ಡಿಜೆಗಳನ್ನು ಆಹ್ವಾನಿಸಿದ್ದರೆ ಅವರ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು.

