
ಮೆಟ್ರೋ ಪ್ರಯಾಣಿಕರಿಗೆ ಬಂಪರ್: ಮೊಬೈಲ್‌ನಲ್ಲೇ ಸಿಗಲಿದೆ 'ಅನ್‌ಲಿಮಿಟೆಡ್ ಪಾಸ್'; ಸ್ಮಾರ್ಟ್ ಕಾರ್ಡ್‌ಗಿಂತ ಅಗ್ಗ!
ಪ್ರಯಾಣಿಕರು 'ನಮ್ಮ ಮೆಟ್ರೋ' (Namma Metro App) ಅಧಿಕೃತ ಮೊಬೈಲ್ ಆ್ಯಪ್ ಮೂಲಕ ಈ ಪಾಸ್‌ಗಳನ್ನು ಖರೀದಿಸಬಹುದು. ವಿವಿಧ ಮಾದರಿಯ ದರಗಳನ್ನು ನಿಗದಿ ಮಾಡಲಾಗಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರತಿನಿತ್ಯ ಟಿಕೆಟ್ ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ರಗಳೆಗೆ ಬ್ರೇಕ್ ಹಾಕಲು, ಇದೇ ಜನವರಿ 15 ರಿಂದ ಜಾರಿಗೆ ಬರುವಂತೆ 'ಕ್ಯೂಆರ್ ಕೋಡ್ ಆಧಾರಿತ ಅನಿಯಮಿತ ಪ್ರಯಾಣದ ಪಾಸ್' (Mobile QR-based Unlimited Travel Pass) ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಹೊಸ ವ್ಯವಸ್ಥೆಯಡಿ ಪ್ರಯಾಣಿಕರು 1, 3 ಮತ್ತು 5 ದಿನಗಳ ಅವಧಿಯ ಪಾಸುಗಳನ್ನು ನೇರವಾಗಿ ತಮ್ಮ ಮೊಬೈಲ್ ಮೂಲಕವೇ ಖರೀದಿಸಬಹುದು. ವಿಶೇಷವೆಂದರೆ, ಭೌತಿಕ ಸ್ಮಾರ್ಟ್ ಕಾರ್ಡ್‌ಗಳಿಗೆ ಹೋಲಿಸಿದರೆ ಈ ಡಿಜಿಟಲ್ ಪಾಸ್‌ಗಳ ದರ 50 ರೂಪಾಯಿ ಕಡಿಮೆಯಿದೆ. ಸ್ಮಾರ್ಟ್ ಕಾರ್ಡ್ ಖರೀದಿಸುವಾಗ ನೀಡಬೇಕಿದ್ದ 50 ರೂ. ಭದ್ರತಾ ಠೇವಣಿಯನ್ನು (Security Deposit) ಈ ಡಿಜಿಟಲ್ ಪಾಸ್‌ಗಳಲ್ಲಿ ರದ್ದುಪಡಿಸಲಾಗಿದೆ.
ವಿವಿಧ ಅವಧಿಯ ಪಾಸ್‌ಗಳು ಲಭ್ಯವಿದ್ದು, ಒಂದು ದಿನದ ಪಾಸ್‌ಗೆ 250 ರೂಪಾಯಿ, ಮೂರು ದಿನಗಳ ಪಾಸ್‌ಗೆ 550 ರೂಪಾಯಿ ಹಾಗೂ ಐದು ದಿನಗಳ ಪಾಸ್‌ಗೆ 850 ರೂಪಾಯಿ ದರ ನಿಗದಿಪಡಿಸಲಾಗಿದೆ.
ಖರೀದಿ ಮತ್ತು ಬಳಕೆ ಹೇಗೆ?
ಪ್ರಯಾಣಿಕರು 'ನಮ್ಮ ಮೆಟ್ರೋ' (Namma Metro App) ಅಧಿಕೃತ ಮೊಬೈಲ್ ಆ್ಯಪ್ ಮೂಲಕ ಈ ಪಾಸ್‌ಗಳನ್ನು ಖರೀದಿಸಬಹುದು. ಖರೀದಿಸಿದ ನಂತರ ಮೊಬೈಲ್‌ನಲ್ಲಿ ಬರುವ ಕ್ಯೂಆರ್ ಕೋಡ್ ಅನ್ನು ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ಸಂಪರ್ಕ ರಹಿತವಾಗಿ ಪ್ರಯಾಣ ಮಾಡಬಹುದು.
ದಟ್ಟಣೆ ಇಳಿಕೆ ಮತ್ತು ಪರಿಸರ ಸ್ನೇಹಿ ಕ್ರಮ
ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪ್ರಸ್ತುತ ಪ್ರತಿನಿತ್ಯ 7 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ. ಈ ಹೊಸ ಡಿಜಿಟಲ್ ಪಾಸ್ ವ್ಯವಸ್ಥೆಯಿಂದ ಕೌಂಟರ್‌ಗಳಲ್ಲಿ ಟೋಕನ್ ಅಥವಾ ಕಾರ್ಡ್‌ಗಾಗಿ ಕಾಯುವ ಸಮಯ ಉಳಿಯಲಿದೆ. ಈಗಾಗಲೇ ಯುಪಿಐ ಪಾವತಿ ವ್ಯವಸ್ಥೆ ಜಾರಿಯಾದ ಬಳಿಕ 2023ರಿಂದ ಕಾಗದದ ಟಿಕೆಟ್ ಬಳಕೆಯಲ್ಲಿ ಶೇ.40 ರಷ್ಟು ಇಳಿಕೆಯಾಗಿದೆ. ಇದೀಗ ಕ್ಯೂಆರ್ ಪಾಸ್‌ಗಳ ಮೂಲಕ ಕಾಗದ ರಹಿತ ಹಾಗೂ ಪರಿಸರ ಸ್ನೇಹಿ ಪ್ರಯಾಣಕ್ಕೆ ಬಿಎಂಆರ್‌ಸಿಎಲ್ ಮತ್ತಷ್ಟು ಒತ್ತು ನೀಡಿದೆ.

