
ಮೆಟ್ರೋದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿ
ಮೆಟ್ರೋದಲ್ಲಿ ಅಸಭ್ಯ ವರ್ತನೆ: ಕಾಮುಕನಿಗೆ ಕಪಾಳಮೋಕ್ಷ ಮಾಡಿ ಪಾಠ ಕಲಿಸಿದ ಯುವತಿ
ಕೈಗಳಿಂದ ಸ್ಪರ್ಶಿಸುವ ಜೊತೆಗೆ ತನ್ನ ಕಾಲನ್ನು ಯುವತಿಯ ಕಾಲಿಗೆ ತಾಗಿಸಿ ಬಲವಾಗಿ ಒತ್ತಲು ಶುರುಮಾಡಿದ್ದಾನೆ. "ಕಾಲು ಪಕ್ಕಕ್ಕೆ ಸರಿಸಿ" ಎಂದು ಎಚ್ಚರಿಸಿದರೂ ಆತ ತನ್ನ ವಿಕೃತ ಚೇಷ್ಟೆಯನ್ನು ಮುಂದುವರಿಸಿದ್ದನು ಎಂದು ಯುವತಿ ಆರೋಪಿಸಿದ್ದಾರೆ.
ನಮ್ಮ ಮೆಟ್ರೋ ರೈಲಿನಲ್ಲಿ ಸಹಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿದಾಗ, ಧೈರ್ಯಗೆಡದ ಯುವತಿಯೊಬ್ಬರು ಆತನಿಗೆ ಕಪಾಳಮೋಕ್ಷ ಮಾಡಿ, ವಿಡಿಯೋ ಚಿತ್ರೀಕರಿಸಿ ತಕ್ಕ ಪಾಠ ಕಲಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಡಿಸೆಂಬರ್ 23 ರಂದು ಈ ಘಟನೆ ನಡೆದಿದ್ದು, 45 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಯುವತಿ ಆರೋಪ ಮಾಡಿದ್ದಾರೆ. "ಮೆಟ್ರೋದಲ್ಲಿ ಆತ ಉದ್ದೇಶಪೂರ್ವಕವಾಗಿಯೇ ನನ್ನ ಮೈ ಮುಟ್ಟಲು ಯತ್ನಿಸಿದಾಗ ನಾನು ಸುಮ್ಮನಿರಲಿಲ್ಲ, ಆತನ ವಿರುದ್ಧ ತಿರುಗಿಬಿದ್ದೆ," ಎಂದು ಸಂತ್ರಸ್ತೆ ಘಟನೆಯನ್ನು ವಿವರಿಸಿದ್ದಾರೆ.
ಘಟನೆಯ ವಿವರ
ಯುವತಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ, ಪಕ್ಕದ ಸೀಟು ಖಾಲಿಯಾದ ತಕ್ಷಣ ಆರೋಪಿ ಬಂದು ಕುಳಿತಿದ್ದಾನೆ. ಆರಂಭದಲ್ಲಿ ಆತ ಮೈಗೆ ತೀರಾ ಹತ್ತಿರವಾಗಿ ಕುಳಿತಾಗ, ರೈಲಿನಲ್ಲಿ ನೂಕುನುಗ್ಗಲು ಇರಬಹುದು ಎಂದು ಭಾವಿಸಿ ಯುವತಿ ಸರಿದು ಕುಳಿತಿದ್ದಾರೆ. ಆದರೆ, ಆತ ಉದ್ದೇಶಪೂರ್ವಕವಾಗಿಯೇ ಅಸಭ್ಯವಾಗಿ ಸ್ಪರ್ಶಿಸಲು ಆರಂಭಿಸಿದ್ದಾನೆ.
ಕೈಗಳಿಂದ ಸ್ಪರ್ಶಿಸುವ ಜೊತೆಗೆ ತನ್ನ ಕಾಲನ್ನು ಯುವತಿಯ ಕಾಲಿಗೆ ತಾಗಿಸಿ ಬಲವಾಗಿ ಒತ್ತಲು ಶುರುಮಾಡಿದ್ದಾನೆ. "ಕಾಲು ಪಕ್ಕಕ್ಕೆ ಸರಿಸಿ" ಎಂದು ಎಚ್ಚರಿಸಿದರೂ ಆತ ತನ್ನ ವಿಕೃತ ಚೇಷ್ಟೆಯನ್ನು ಮುಂದುವರಿಸಿದ್ದನು ಎಂದು ಯುವತಿ ಆರೋಪಿಸಿದ್ದಾರೆ.
ಸ್ಥಳದಲ್ಲೇ ಧರ್ಮದೇಟು
"ಆರಂಭದಲ್ಲಿ ನಾನು ಭಯದಿಂದ ಸ್ತಬ್ಧಳಾದೆ. ಆದರೆ, ನಾನು ಸುಮ್ಮನೆ ಇಲ್ಲಿಳಿದು ಹೋದರೆ, ಈತ ನಾಳೆ ಬೇರೆ ಮಹಿಳೆಯರಿಗೂ ಇದೇ ರೀತಿ ಮಾಡುತ್ತಾನೆ ಎಂಬ ಆಲೋಚನೆ ಬಂತು," ಎಂದು ಯುವತಿ ಹೇಳಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಅವರು, ಚಲಿಸುತ್ತಿದ್ದ ಮೆಟ್ರೋ ಬೋಗಿಯಲ್ಲೇ ಆತನ ಕೆನ್ನೆಗೆ ಬಾರಿಸಿದ್ದಾರೆ.
ನಿಲ್ದಾಣದಲ್ಲಿ ಇಳಿದಾಗಲೂ ಯುವತಿ ಆತನನ್ನು ತರಾಟೆಗೆ ತೆಗೆದುಕೊಂಡು ಮತ್ತೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ತಮ್ಮ ಮೊಬೈಲ್‌ನಲ್ಲಿ ಆತನ ವಿಡಿಯೋ ಚಿತ್ರೀಕರಿಸಿದ್ದಾರೆ. "ನಾನು ವಿಡಿಯೋ ಮಾಡುವಾಗಲೂ ಆತ ನಾಚಿಕೆಯಿಲ್ಲದೆ ನಗುತ್ತಿದ್ದ. 'ನಗು, ನಿನ್ನನ್ನು ಫೇಮಸ್ ಮಾಡುತ್ತೇನೆ' ಎಂದು ನಾನು ಆತನಿಗೆ ಹೇಳಿದೆ," ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಮೆಟ್ರೋ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಂತ್ರಸ್ತೆ ಠಾಣೆಯಲ್ಲಿ ಲಿಖಿತ ದೂರು ನೀಡದ ಕಾರಣ, ಪೊಲೀಸರು ಸದ್ಯ ಎನ್‌ಸಿಆರ್ (Non-Cognisable Report) ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

