
ಸಿಎಂ ಸಿದ್ದರಾಮಯ್ಯ
ಮುಡಾ ಹಗರಣ: ಆದೇಶ ಕಾಯ್ದಿರಿಸಿದ ನ್ಯಾಯಾಲಯ
ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಅಂತಿಮ ವರದಿಯನ್ನು ಆಕ್ಷೇಪಿಸಿ ದೂರುದಾರ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದರು.
ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಲೋಕಾಯುಕ್ತ ಪೊಲೀಸರು ನೀಡಿದ್ದ 'ಬಿ-ರಿಪೋರ್ಟ್' ಕುರಿತಾದ ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜನೆವರಿ 22ಕ್ಕೆ ಕಾಯ್ದಿರಿಸಿದೆ.
ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಅಂತಿಮ ವರದಿಯನ್ನು ಆಕ್ಷೇಪಿಸಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಪೂರ್ಣಗೊಂಡಿದೆ.
ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುದೀರ್ಘ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಮುಖ್ಯಮಂತ್ರಿಗಳು ಅಥವಾ ಅವರ ಕುಟುಂಬದ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂಬ ಕಾರಣ ನೀಡಿ ಕ್ಲೀನ್ ಚಿಟ್ ನೀಡಿದ್ದರು. ಲೋಕಾಯುಕ್ತ ಪೊಲೀಸರ ಈ ಕ್ರಮವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯದಲ್ಲಿ ಪ್ರತಿಭಟನಾ ಅರ್ಜಿ (Protest Petition) ದಾಖಲಿಸಿದ್ದರು. ಈ ಅರ್ಜಿಯ ಕುರಿತು ಇಂದು ನಡೆದ ವಿಚಾರಣೆಯಲ್ಲಿ ಲೋಕಾಯುಕ್ತ ಪರ ವಿಶೇಷ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಅವರು ಪ್ರಬಲ ವಾದ ಮಂಡಿಸಿದರು.
ತನಿಖಾ ಸಂಸ್ಥೆಯ ಪರವಾಗಿ ವಾದಿಸಿದ ವೆಂಕಟೇಶ್ ಅರಬಟ್ಟಿ ಅವರು, ಲೋಕಾಯುಕ್ತ ಪೊಲೀಸರು ಒಟ್ಟು 70 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಪೈಕಿ ಯಾರೊಬ್ಬರೂ ಕೂಡ ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಅಥವಾ ತನಿಖೆಯ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಹೇಳಿಕೆ ನೀಡಿಲ್ಲ. ತನಿಖಾಧಿಕಾರಿಗಳು ಎಲ್ಲಾ ಆಯಾಮಗಳಿಂದ ಪ್ರಕರಣವನ್ನು ಪರಿಶೀಲಿಸಿಯೇ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ. ಈ ವರದಿಯನ್ನು ತಿರಸ್ಕರಿಸುವಂತಹ ಯಾವುದೇ ಕಾನೂನಾತ್ಮಕ ಲೋಪಗಳು ಇದರಲ್ಲಿ ಕಂಡುಬಂದಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ಜನವರಿ 22ರಂದು ತನ್ನ ಅಂತಿಮ ಆದೇಶವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ನ್ಯಾಯಾಲಯವು ಬಿ-ರಿಪೋರ್ಟ್ ಅನ್ನು ಅಂಗೀಕರಿಸಿದರೆ ಸಿದ್ದರಾಮಯ್ಯ ದಂಪತಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಮಟ್ಟದ ಗೆಲುವು ಸಿಗಲಿದೆ. ಒಂದು ವೇಳೆ ನ್ಯಾಯಾಲಯವು ದೂರುದಾರರ ಆಕ್ಷೇಪಣೆಯನ್ನು ಮಾನ್ಯ ಮಾಡಿ ಮರು ತನಿಖೆಗೆ ಆದೇಶಿಸಿದರೆ ಅಥವಾ ಬಿ-ರಿಪೋರ್ಟ್ ತಿರಸ್ಕರಿಸಿದರೆ ಪ್ರಕರಣವು ಮತ್ತೊಂದು ತಿರುವು ಪಡೆಯುವ ಸಾಧ್ಯತೆಯಿದೆ. ಇಡೀ ರಾಜ್ಯದ ಕಣ್ಣು ಈಗ ಜನೆವರಿ 22ರ ನ್ಯಾಯಾಲಯದ ಆದೇಶದತ್ತ ನೆಟ್ಟಿದೆ.

