ಮೈಸೂರಿನಲ್ಲಿ ರಾಹುಲ್ ಗಾಂಧಿಗೆ ಸ್ವಾಗತ: ನಾಯಕತ್ವ ಬದಲಾವಣೆ ಚರ್ಚೆಯಿಲ್ಲ; ಡಿಕೆಶಿಗೆ ನಿರಾಸೆ
x

ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಮೈಸೂರಿನಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಿದರು.

ಮೈಸೂರಿನಲ್ಲಿ ರಾಹುಲ್ ಗಾಂಧಿಗೆ ಸ್ವಾಗತ: ನಾಯಕತ್ವ ಬದಲಾವಣೆ ಚರ್ಚೆಯಿಲ್ಲ; ಡಿಕೆಶಿಗೆ ನಿರಾಸೆ

ರಾಹುಲ್ ಗಾಂಧಿ ಅವರು ಕೇವಲ ಟ್ರಾನ್ಸಿಟ್ (ಮಾರ್ಗಮಧ್ಯದ) ಭೇಟಿಯಾಗಿದ್ದರಿಂದ ಮತ್ತು ಸಮಯದ ಅಭಾವವಿದ್ದರಿಂದ ಅವರು ರಾಜಕೀಯ ವಿಷಯಗಳನ್ನು ಚರ್ಚಿಸಲು ಇಷ್ಟಪಡಲಿಲ್ಲ ಎನ್ನಲಾಗಿದೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಅಧಿಕಾರ ಹಂಚಿಕೆಯ ಚರ್ಚೆಗಳು ತಾರಕಕ್ಕೇರಿರುವ ಹೊತ್ತಿನಲ್ಲೇ, ಮೈಸೂರಿಗೆ ಆಗಮಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭೇಟಿ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ, ಕುತೂಹಲಕ್ಕೆ ತಣ್ಣೀರೆರಚಿರುವ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆಸದೆ ನಿರ್ಗಮಿಸಿದ್ದಾರೆ.

ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಮಂಗಳವಾರ ಬಂದಿಳಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು ರಾಹುಲ್ ಗಾಂಧಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ರಾಜಕೀಯ ಚರ್ಚೆಗೆ ಸಿಗದ ವೇದಿಕೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಪರ-ವಿರೋಧ ಹೇಳಿಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ, ರಾಹುಲ್ ಗಾಂಧಿ ಅವರ ಈ ಭೇಟಿ ಮಹತ್ವ ಪಡೆದುಕೊಂಡಿತ್ತು. ದೀರ್ಘ ಕಾಲದ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಟ್ಟಾಗಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುತ್ತಿರುವುದರಿಂದ, ವಿಮಾನ ನಿಲ್ದಾಣದ ವಿರಾಮದ ವೇಳೆಯಲ್ಲಿ ಹೈಕಮಾಂಡ್ ಮಟ್ಟದ ಸಂಧಾನವೋ ಅಥವಾ ಸಂದೇಶವೋ ರವಾನೆಯಾಗಬಹುದು ಎಂದು ವಿಶ್ಲೇಷಿಸಲಾಗಿತ್ತು.

ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ನಡೆದ ಭೇಟಿ ಕೇವಲ ಸೌಹಾರ್ದಯುತ ಮಾತುಕತೆಗೆ ಸೀಮಿತವಾಯಿತು. ರಾಹುಲ್ ಗಾಂಧಿ ಅವರು ಉಭಯ ನಾಯಕರನ್ನು ಆತ್ಮೀಯವಾಗಿ ಮಾತನಾಡಿಸಿ, ಕುಶಲೋಪರಿ ವಿಚಾರಿಸಿದರೇ ಹೊರತು, ರಾಜ್ಯ ರಾಜಕೀಯದ ಯಾವುದೇ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಡಿಕೆಶಿಗೆ ಭಾರಿ ನಿರಾಸೆ

ಪ್ರಮುಖವಾಗಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಈ ಭೇಟಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು ಎನ್ನಲಾಗಿದೆ. ನಾಯಕತ್ವ ಬದಲಾವಣೆ ಅಥವಾ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ರಾಹುಲ್ ಗಾಂಧಿ ಬಳಿ ಪ್ರಸ್ತಾಪಿಸಲು ಅಥವಾ ಅವರ ಮನದ ಇಂಗಿತವನ್ನು ಅರಿಯಲು ಡಿಕೆಶಿ ಉತ್ಸುಕರಾಗಿದ್ದರು. ಆದರೆ, ರಾಹುಲ್ ಗಾಂಧಿ ಅವರು ರಾಜಕೀಯ ಚರ್ಚೆಗೆ ಯಾವುದೇ ಅವಕಾಶ ನೀಡದ ಕಾರಣ, ಡಿಕೆಶಿ ಅವರಿಗೆ ಭಾರಿ ನಿರಾಸೆಯಾಗಿದೆ ಎಂದು ಅವರ ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದೆ.

ರಾಹುಲ್ ಗಾಂಧಿ ಅವರು ಕೇವಲ ಟ್ರಾನ್ಸಿಟ್ (ಮಾರ್ಗಮಧ್ಯದ) ಭೇಟಿಯಾಗಿದ್ದರಿಂದ ಮತ್ತು ಸಮಯದ ಅಭಾವವಿದ್ದರಿಂದ ಅವರು ರಾಜಕೀಯ ವಿಷಯಗಳನ್ನು ಚರ್ಚಿಸಲು ಇಷ್ಟಪಡಲಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಬಹುದೆಂದು ನಿರೀಕ್ಷಿಸಲಾಗಿದ್ದ ಈ 'ಹೈವೋಲ್ಟೇಜ್ ಭೇಟಿ' ಯಾವುದೇ ನಿರ್ಣಾಯಕ ಚರ್ಚೆಗಳಿಲ್ಲದೆ ಮುಕ್ತಾಯಗೊಂಡಿದೆ.

Read More
Next Story